ಹಾವೇರಿ: ಡ್ರ್ಯಾಗನ್ ಫ್ರೂಟ್​ಗೂ ಬಂತು ಕೊಳೆ ರೋಗ, ರೈತನಿಗೆ ಚಿಂತೆ

author img

By

Published : Sep 11, 2022, 8:25 AM IST

dragon-fruit-plant-disease-is-a-loss-for-farmers

ಐದು ವರ್ಷದಿಂದ ಲಾಭದಾಯಕವಾಗಿದ್ದ ಡ್ರ್ಯಾಗನ್ ಫ್ರೂಟ್ ಬೆಳೆ ಈ ಬಾರಿಯ ಧಾರಾಕಾರ ಮಳೆಗೆ ತೊಂದರೆಗೀಡಾಗಿದೆ. ಎಡೆಬಿಡದೆ ಸುರಿಯುತ್ತಿರುವ ಕಾರಣ ಕೊಳೆರೋಗ ಬಂದಿದೆ.

ಹಾವೇರಿ: ಜಿಲ್ಲೆಯಾದ್ಯಂತ ಕಳೆದ ಹಲವು ದಿನಗಳಿಂದ ಮಳೆರಾಯ ಅಬ್ಬರಿಸುತ್ತಿದ್ದಾನೆ. ಯಥೇಚ್ಛ ವರ್ಷಧಾರೆಯಿಂದಾಗಿ ನದಿ, ಹಳ್ಳ-ಕೊಳ್ಳಗಳು ಮೈದುಂಬಿ ಹರಿಯುತ್ತಿವೆ. ಕೆಲವೆಡೆ ಕೆರೆಗಳು ಕೋಡಿ ಬಿದ್ದಿವೆ. ಸಾವಿರಾರು ಎಕರೆ ಬೆಳೆ ನೀರುಪಾಲಾಗಿದೆ. ಸಾಂಪ್ರದಾಯಿಕ ಬೆಳೆಗಳಾದ ಹತ್ತಿ, ಸೋಯಾಬಿನ್, ಮೆಕ್ಕೆಜೋಳ, ಶೇಂಗಾ ಸೇರಿದಂತೆ ವಿವಿಧ ಬೆಳೆಗಳು ನೀರಿನಲ್ಲಿ ಕೊಳೆತು ಹೋಗಲಾರಂಭಿಸಿವೆ.

ಜಿಲ್ಲೆಯಲ್ಲಿ ಹೊಸದಾಗಿ ಬೆಳೆದಿದ್ದ ಡ್ರ್ಯಾಗನ್ ಹಣ್ಣಿನ ಬೆಳೆಗೂ ಮಳೆ ತೊಂದರೆ ಕೊಟ್ಟಿದೆ. ಹಾವೇರಿ ತಾಲೂಕು ಬಸಾಪುರದಲ್ಲಿ ಯಲ್ಲಪ್ಪ ಬಳ್ಳಾರಿ ಎಂಬ ರೈತ ಸುಮಾರು ಐದು ವರ್ಷಗಳಿಂದ ತನ್ನ ಅರ್ಧ ಎಕರೆ ಜಾಗದಲ್ಲಿ ಈ ಹಣ್ಣು ಬೆಳೆದು ಸಾಕಷ್ಟು ಆದಾಯ ಪಡೆದುಕೊಂಡಿದ್ದರು. ಆದರೆ ಈ ವರ್ಷ ಸುರಿದ ಭಾರಿ ಮಳೆಯಿಂದಾಗಿ ಹಣ್ಣಿನ ಗಿಡಗಳ ಕುಡಿಗಳು ಹಳದಿಯಾಗುತ್ತಿವೆ.

ಡ್ರ್ಯಾಗನ್ ಫ್ರೂಟ್​ಗೆ ಕೊಳೆ ರೋಗ

ಹಳದಿಯಾದ ಕುಡಿಯನ್ನು ಕಟಾವ್ ಮಾಡದಿದ್ದರೆ ಸುತ್ತಮುತ್ತಲಿನ ಗಿಡಗಳಿಗೂ ಇದು ಹರಡುತ್ತದೆ. ಗಿಡದ ಯಾವುದೇ ಭಾಗದಲ್ಲಿ ಕೊಳೆ ಕಂಡುಬಂದರೆ ಅದನ್ನು ಗಿಡದಿಂದ ಬೇರ್ಪಡಿಸಬೇಕು. ಹೂಗಳು ಉದುರಲಾರಂಭಿಸಿವೆ. ಕಾಯಿಗಳು ಸಣ್ಣದಿರುವಾಗಲೇ ಹಣ್ಣುಗಳಂತಾಗಿ ಉದುರುತ್ತಿವೆ. ಈ ಹಣ್ಣುಗಳ ಗಾತ್ರವೂ ಸಹ ಕಿರಿದಾಗಿದ್ದು ಕಡಿಮೆ ಬೆಲೆಗೆ ಮಾರಾಟವಾಗುತ್ತಿವೆ.

"ಕಳೆದ ವರ್ಷ ಡ್ರ್ಯಾಗನ್ ಫ್ರೂಟ್ ಸಸಿಗಳನ್ನು ಮಾಡಿ 8 ಲಕ್ಷ ರೂಪಾಯಿ ಆದಾಯ ಬಂದಿತ್ತು. ಈ ವರ್ಷ ಸಸಿ ಮಾಡದಂತಹ ಪರಿಸ್ಥಿತಿ ಇದೆ. ಮಾರುಕಟ್ಟೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬೇಡಿಕೆ ಇದೆ. ದರವೂ ಸಹ ಉತ್ತಮವಾಗಿದೆ. ಆದರೆ ಬೇಡಿಕೆಗೆ ತಕ್ಕಂತೆ ಬೆಳೆ ಇಲ್ಲ. ಮಳೆ ಇದೇ ರೀತಿ ಮುಂದುವರೆದರೆ ನಮ್ಮ ಪರಿಸ್ಥಿತಿ ಏನಾಗುತ್ತೋ" ಎಂಬ ಆತಂಕ ರೈತ ಯಲ್ಲಪ್ಪ ಅವರದ್ದು.

ಇದನ್ನೂ ಓದಿ : ಕೃಷಿ ಕಾಯ್ದೆ ಜಾರಿ ವಿರುದ್ಧ ಸೆಪ್ಟೆಂಬರ್ 12 ರಂದು ವಿಧಾನಸೌಧ ಮುತ್ತಿಗೆ: ಕೋಡಿಹಳ್ಳಿ ಚಂದ್ರಶೇಖರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.