ಉತ್ತರ ಕರ್ನಾಟಕದಲ್ಲಿ ಕುಮಾರ ಪರ್ವ: ಮಾಜಿ ಸಿಎಂಗೆ ಹಳ್ಳಿ - ಹಳ್ಳಿಯಲ್ಲಿ ಅದ್ಧೂರಿ ಸ್ವಾಗತ

author img

By

Published : Aug 23, 2021, 9:41 PM IST

Updated : Aug 23, 2021, 10:53 PM IST

HD Kumaraswamy

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಸಿಎಂ ಗದ್ದುಗೆ ಏರುವ ಹಂಬಲದಲ್ಲಿರುವ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಇಂದು ಗದಗ ಜಿಲ್ಲೆಗೆ ಭೇಟಿ ನೀಡಿದ್ದರು. ಈ ವೇಳೆ, ಜಿಲ್ಲೆಯ ಜನತೆ ಅವರಿಗೆ ಅದ್ಧೂರಿ ಸ್ವಾಗತ ಕೋರಿದರು.

ಗದಗ : ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಗೆ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯುವ ಆಸೆ ಇಮ್ಮಡಿಯಾಗಿದೆ. ಅದೇ ಕಾರಣಕ್ಕೆ ಉತ್ತರ ಕರ್ನಾಟಕದಲ್ಲಿ ಕುಮಾರ ಪರ್ವ ಆರಂಭಿಸಿದ್ದಾರೆ.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಸಿಎಂ ಗದ್ದುಗೆ ಏರುವ ಹಂಬಲದಲ್ಲಿ ಕುಮಾರಸ್ವಾಮಿ ಇದ್ದು, ಕಳೆದ ಸಮ್ಮಿಶ್ರ ಸರ್ಕಾರದಲ್ಲಿ ತಾವು ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಜನರ ಮುಂದಿಟ್ಟು ಮತದಾರರ ಮನ ಗೆಲ್ಲುವ ಯತ್ನದ ಫಲವಾಗಿ ಇಂದು ಗದಗದ ಹಲವು ಹಳ್ಳಿಗಳಿಗೆ ಭೇಟಿ ನೀಡಿದ್ದರು.

ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ

ಮಾಜಿ ಸಿಎಂಗೆ ಅದ್ಧೂರಿ ಸ್ವಾಗತ:

ಕುಮಾರಸ್ವಾಮಿ ಅವರ ಸ್ವಾಗತಕ್ಕೆ ಹಳ್ಳಿ - ಹಳ್ಳಿಗಳಲ್ಲಿ ಹಾರ ಹಿಡಿದು ಸ್ವಾಗತ ಮಾಡಲು ಜನಸಾಗರವೇ ಹರಿದುಬಂದಿತ್ತು. ಎತ್ತಿನ ಬಂಡೆಯಲ್ಲಿ ಕುಮಾರಸ್ವಾಮಿ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿದರು.

ಅಧಿಕಾರ ನೀಡುವಂತೆ ಮನವಿ ಮಾಡಿದ ಕುಮಾರಣ್ಣ:

ಬಸ್ ನಿಲ್ದಾಣದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಕುಮಾರಸ್ವಾಮಿ ಮಾತನಾಡಿ, ಜಾತಿ ನೋಡ್ಬೇಡಿ, ದುಡ್ಡು ನೋಡ್ಬೇಡಿ, ಕಳೆದ 75 ವರ್ಷದಿಂದ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಎಲ್ಲಾ ಪಕ್ಷಗಳ ಆಡಳಿತ ನೋಡಿದ್ದೀರಿ, 20 ವರ್ಷ ಕೊಡಿ ಅಂತ ಕೇಳಲ್ಲ, ಕೇವಲ ಐದೇ ವರ್ಷ ಕೊಡಿ ಅಂತ ಮನವಿ ಮಾಡಿಕೊಂಡರು.

ರೈತರ ಸಾಲಮನ್ನಾ ವಿಚಾರದಲ್ಲಿ ನಾನು ಯಾವು ರೀತಿ‌ ನಡೆದುಕೊಂಡಿದ್ದೇನೆ ಎನ್ನುವುದನ್ನು ನಿಮಗೆ ಗೊತ್ತು. ಒಂದು ಚುನಾವಣೆ ಪರೀಕ್ಷೆ ಮಾಡಿ, ನಿಮ್ಮ ಬದುಕನ್ನು ಒಳ್ಳೆಯ ರೀತಿ ಮಾಡುವೆ. ಇನ್ನೊಬ್ಬರ ಜೊತೆ ಸರ್ಕಾರ ಮಾಡೋದಕ್ಕೆ ಆಗಲ್ಲ. ಸ್ವತಂತ್ರ ಸರ್ಕಾರ ಕೊಡಿ ಯಾವ ಸರ್ಕಾರಕ್ಕೂ ಅರ್ಜಿ ಕೊಡದ ರೀತಿಯಲ್ಲಿ ಯೋಜನೆಗಳನ್ನು ಸಿದ್ಧ ಮಾಡಿದ್ದೇನೆ ಎಂದರು.

ದಿಂಗಾಲೇಶ್ವರ ಶ್ರೀ ಭೇಟಿಯಾದ ಮಾಜಿ ಸಿಎಂ ಕುಮಾರಸ್ವಾಮಿ

ಮಾಜಿ ಸಿಎಂಗೆ ಅಪಮಾನ:

ಸಮ್ಮಿಶ್ರ ಸರ್ಕಾರ ಅವಧಿಯಲ್ಲಿ ಸುಮಾರು 24 ಕೋಟಿ ರೂ. ಬಿಡುಗಡೆ ಮಾಡಿ ಆಲದಮ್ಮನ ಕೆರೆ ಮತ್ತು ಬೇವಿನಕೊಪ್ಪ ಕೆರೆಗಳ ಅಭಿವೃದ್ಧಿಗೆ ಕುಮಾರಸ್ವಾಮಿ ಅನುದಾನ ಬಿಡುಗಡೆಗೊಳಿಸಿದ್ದರು. ಹೀಗಾಗಿ ಭೂಮಿ ಪೂಜೆ ಕಾರ್ಯಕ್ಕೆ ಆಗಮಿಸಿದ್ದರು. ಆದರೆ, ಕೆರೆ ಕಾಮಗಾರಿಯ ಭೂಮಿ ಪೂಜೆಗೆ ಆಹ್ವಾನ ಮಾಡಿದ್ದ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ರಾಮಣ್ಣ ಲಮಾಣಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಿಸಿ ಪಾಟೀಲ್ ಕಾರ್ಯಕ್ರಮಕ್ಕೆ ಬರದೇ ಎಸ್ಕೇಪ್ ಆಗಿದ್ದರು. ಹೀಗಾಗಿ ಕುಮಾರಸ್ವಾಮಿ ಭೂಮಿ ಪೂಜೆ ನೆರವೇರಿಸಲಿಲ್ಲ.

ಶಿಷ್ಟಾಚಾರದ ಪ್ರಕಾರ ಸ್ಥಳೀಯ ಶಾಸಕರು ಮತ್ತು ಅಧಿಕಾರಿಗಳು ಇರದೇ ಕುಮಾರಸ್ವಾಮಿಗೆ ಭೂಮಿ ಪೂಜೆ ನೆರವೇರಿಸಲು ಆಗಲಿಲ್ಲ. ಇದರಿಂದ ಭೇಸರ ವ್ಯಕ್ತಪಡಿಸಿ, ಸಚಿವರ ಮತ್ತು ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸ್ವತಃ ಶಾಸಕ ರಾಮಣ್ಣ ಲಮಾಣಿ ಅವರೇ ಫೋನ್ ಮಾಡಿ ನೀವೇ ಬರಬೇಕು. ಜನ ನಿಮ್ಮನ್ನು ಬಯಸ್ತಾರೆ‌ ಅಂತ ಹೇಳಿದ್ರು, ಹಠಾತ್ತಾಗಿ ಈ ಕಾರ್ಯಕ್ರಮದಿಂದ ಇಬ್ಬರೂ ದೂರ ಉಳಿದಿದ್ದಾರೆ ಎಂದರು.

Former CM HD Kumaraswamy
ದಿಂಗಾಲೇಶ್ವರ ಶ್ರೀ ಭೇಟಿಯಾದ ಮಾಜಿ ಸಿಎಂ ಕುಮಾರಸ್ವಾಮಿ

ದಿಂಗಾಲೇಶ್ವರ ಶ್ರೀ ಭೇಟಿ:

ಇದೇ ವೇಳೆ ಕುಮಾರಸ್ವಾಮಿಯವರು ಬಾಳೆಹೊಸೂರಿನ ದಿಂಗಾಲೇಶ್ವರ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಈ ಮೂಲಕ ಬಹುದಿನಗಳ ಆಸೆಯನ್ನು ಈಡೇರಿಸಿಕೊಂಡಿದ್ದಾರೆ. ಇನ್ನು ಕುಮಾರಸ್ವಾಮಿಯವರಿಗೆ ಆಗಿರುವ ಅವಮಾನದ ಬಗ್ಗೆ ಸ್ವಾಮೀಜಿಗಳು ಸಹ ಇದರಲ್ಲಿ ಯಾರೂ ಕೂಡ ರಾಜಕೀಯ ಮಾಡಬಾರದಿತ್ತು. ಪಕ್ಷ ಬೇದ ಮರೆತು ಅಭಿವೃದ್ಧಿ ಕಾರ್ಯಕ್ಕೆ ಒತ್ತುಕೊಡಬೇಕಿತ್ತು ಎಂದರು.

Last Updated :Aug 23, 2021, 10:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.