80 ಗ್ರಾಂ ಚಿನ್ನವಿದ್ದ ಬ್ಯಾಗ್​ ಮರಳಿ ಮಾಲೀಕರಿಗೆ ತಲುಪಿಸಿದ ಆಟೋ ಚಾಲಕ 'ವೀರ'ಣ್ಣ

author img

By

Published : Aug 26, 2021, 7:01 AM IST

gadag

ಪ್ರಯಾಣಿಕರೊಬ್ಬರು ತಮ್ಮ ವಾಹನದಲ್ಲಿ ಮರೆತು ಬಿಟ್ಟು ಹೋಗಿದ್ದ ಚಿನ್ನವಿದ್ದ ಬ್ಯಾಗ್ ಅ​ನ್ನು ಮರಳಿ ಮಾಲೀಕರಿಗೆ ಒಪ್ಪಿಸುವ ಮೂಲಕ ಆಟೋ ಚಾಲಕರೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ.

ಗದಗ: ನಗರದ ಆಟೋ ಚಾಲಕರೊಬ್ಬರು ತಮ್ಮ ವಾಹನದಲ್ಲಿ ಮರೆತು ಬಿಟ್ಟು ಹೋಗಿದ್ದ ಸುಮಾರು 80 ಗ್ರಾಂ ಚಿನ್ನ ಒಳಗೊಂಡ ಬ್ಯಾಗ್​ ಅನ್ನು ಮರಳಿ ಮಾಲೀಕರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

ಘಟನೆಯ ವಿವರ:

ದಾವಣಗೆರೆ ಮೂಲದ ವೀಣಾ ಕೊಣ್ಣೂರ ಎಂಬವರು ನಿನ್ನೆ ಮಧ್ಯಾಹ್ನದ ವೇಳೆಗೆ ಗದಗ್​ಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ನಗರದ ಹಳೆ ಬಸ್ ನಿಲ್ದಾಣದಿಂದ ಬೆಟಗೇರಿಗೆ ವೀರಣ್ಣ ಯಾವಗಲ್​ ಎಂಬವರ ಆಟೋ ಹತ್ತಿ ಹೊರಟಿದ್ದಾರೆ. ಬೆಟಗೇರಿಗೆ ಬಂದ ನಂತರ ತಾವು ತಂದಿದ್ದ ಬ್ಯಾಗ್ ಮರೆತು ಹಾಗೇ ಇಳಿದು ಹೋಗಿದ್ದರು. ಇನ್ನೊಂದೆಡೆ, ಆಟೋ ಚಾಲಕನೂ ಗಮನಿಸದೇ ಬೇರೆ ಪ್ರಯಾಣಿಕರನ್ನು ಹತ್ತಿಸಿಕೊಂಡು ಮುಂದೆ ಸಾಗಿದ್ದಾನೆ.

ಇದಾದ ಕೆಲವು ಹೊತ್ತಿಗೆ ಮಹಿಳೆಗೆ ತನ್ನ ಬ್ಯಾಗ್​ ಆಟೋದಲ್ಲಿ ಉಳಿದಿರುವುದು ನೆನಪಾಗಿದೆ. ಆ ಆಟೋಗಾಗಿ ಅನೇಕ ಕಡೆ ಹುಡುಕಾಡಿದರೂ ಸಿಗಲಿಲ್ಲ. ಇದೇ ಹೊತ್ತಿಗೆ ಶಹರಾ ಪೊಲೀಸ್ ಠಾಣೆಯಿಂದ ಕರೆ ಬಂದಿದ್ದು, ನಿಮ್ಮ ಬ್ಯಾಗ್​ ಸಿಕ್ಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಿನ್ನವಿದ್ದ ಬ್ಯಾಗ್​ ಮರಳಿ ಮಾಲೀಕರಿಗೆ ತಲುಪಿಸಿದ ಆಟೋ ಚಾಲಕ ವೀರಣ್ಣ

ಆಟೋ ಚಾಲಕ ವೀರಣ್ಣ ಬ್ಯಾಗನ್ನು ನೇರವಾಗಿ ಪೊಲೀಸ್​ ಠಾಣೆಗೆ ತೆಗೆದುಕೊಂಡು ಹೋಗಿ ಮಾಲೀಕರಿಗೆ ಒಪ್ಪಿಸುವ ಕೆಲಸ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ವೀರಣ್ಣ, "ಇದು ನಾನು ನನ್ನ ತಂಗಿಗೆ ಕೊಟ್ಟ ರಕ್ಷಾಬಂಧನದ ಉಡುಗೊರೆ" ಎಂದು ಸಂತಸ ವ್ಯಕ್ತಪಡಿಸಿದರು.

ಆಟೋ ಚಾಲಕನ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ ಪೊಲೀಸರು, ಶಾಲು ಹೊದಿಸಿ ಸನ್ಮಾನ ಮಾಡಿದ್ದಾರೆ. ಈ ಹಿಂದೆಯೂ ವೀರಣ್ಣ ಇಂತಹ ಪ್ರಾಮಾಣಿಕ ಕೆಲಸ ಮಾಡಿ ಎಲ್ಲರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.