ಪ್ಯಾಸೆಂಜರ್ ಆಟೋ-ಬೈಕ್ ನಡುವೆ ಡಿಕ್ಕಿ: ಇಬ್ಬರು ಸ್ಥಳದಲ್ಲೇ ಸಾವು

author img

By

Published : Jan 18, 2023, 2:19 PM IST

Auto Bike Accident

ಬೀದರ್​ನ ನೀಲಮನಳ್ಳಿ ತಾಂಡಾದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ತಾಯಿ ಹಾಗೂ ಮಲಗಿರುವ ಸ್ಥಿತಿಯಲ್ಲಿ ಇಬ್ಬರು ಪುಟ್ಟ ಕಂದಮ್ಮಗಳ ಶವ ಪತ್ತೆಯಾಗಿದೆ. ಇನ್ನೊಂದೆಡೆ, ಪ್ಯಾಸೆಂಜರ್ ಆಟೋ-ಬೈಕ್ ನಡುವೆ ಡಿಕ್ಕಿಯಾಗಿ ಇಬ್ಬರು ಸಾವಿಗೀಡಾಗಿದ್ದಾರೆ.

ಗದಗ: ಪ್ಯಾಸೆಂಜರ್ ಆಟೋ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಗದಗ ಜಿಲ್ಲೆಯ ರೋಣ ಪಟ್ಟಣದ ಹೊರವಲಯದಲ್ಲಿ ಮಂಗಳವಾರ ರಾತ್ರಿ ನಡೆದಿದೆ. ರೋಣ ತಾಲೂಕಿನ ಹಿರೇಹಾಳದ ಅಮರಗೌಡ (30) ಹಾಗೂ ಶಾಂತಗೇರಿ ಗ್ರಾಮದ ಮುತ್ತಪ್ಪ (27) ಮೃತರು. ಪ್ಯಾಸೆಂಜರ್ ಆಟೋ ರೋಣದಿಂದ ಬದಾಮಿಗೆ ಹೊರಟಿತ್ತು. ಬೈಕ್ ಸವಾರರು ಹಿರೇಹಾಳ ಗ್ರಾಮದಿಂದ ರೋಣ ಕಡೆಗೆ ಹೊರಟಿದ್ದರು. ಈ ವೇಳೆ ಮುಖಾಮುಖಿ ಡಿಕ್ಕಿ ಆಗಿದ್ದರಿಂದ ಬೈಕ್ ಸವಾರ ಅಮರಗೌಡ ಮತ್ತು ಪ್ಯಾಸೆಂಜರ್ ಆಟೋದಲ್ಲಿದ್ದ ಯುವಕ ಮುತ್ತಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ರೋಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

ತಾಯಿ, ಇಬ್ಬರು ಮಕ್ಕಳ ಶವ ಪತ್ತೆ: ಬೀದರ್​ನ ಭಾಲ್ಕಿ ತಾಲೂಕಿನಲ್ಲಿ ಮನೆಯೊಂದರ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ತಾಯಿಯ ಶವ ಹಾಗೂ ಮಲಗಿದ ಸ್ಥಿತಿಯಲ್ಲಿ ಇಬ್ಬರು ಮಕ್ಕಳ ಶವ ಪತ್ತೆಯಾಗಿದೆ. ಭಾಲ್ಕಿ ತಾಲೂಕಿನ ನೀಲಮನಳ್ಳಿ ತಾಂಡಾದಲ್ಲಿ ಘಟನೆ ನಡೆದಿದೆ.

24 ವರ್ಷದ ಮೀರಾಬಾಯಿ ದಯಾನಂದ ಮೃತ ಮಹಿಳೆ. ಮನೆಯ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಅದೇ ಕೋಣೆಯಲ್ಲಿ ನಾಲ್ಕು ವರ್ಷದ ಹಾಗೂ ಎರಡೂವರೆ ವರ್ಷದ ಇಬ್ಬರು ಮಕ್ಕಳ ಶವ ಕೂಡ ದೊರೆತಿದೆ. ಇಬ್ಬರು ಮಕ್ಕಳ ಶವ ಮಲಗಿದ ಸ್ಥಿತಿಯಲ್ಲಿತ್ತು. ಮೀರಾಬಾಯಿ ಪತಿ ಹಾಗೂ ಕುಟುಂಬಸ್ಥರು ಸ್ಥಳದಿಂದ ಪರಾರಿಯಾಗಿದ್ದಾರೆ ಎಂಬುದು ತಿಳಿದು ಬಂದಿದೆ.

ಶವವಾಗಿ ಪತ್ತೆಯಾಗಿರುವ ಮೀರಾಬಾಯಿ ಅವರ ಕುಟುಂಬಸ್ಥರಿಂದ ಮೀರಾಬಾಯಿ ಹಾಗೂ ಇಬ್ಬರು ಮಕ್ಕಳನ್ನು ಕೊಲೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಇಬ್ಬರು ಚಿಕ್ಕ ಮಕ್ಕಳಿಗೆ ವಿಷ ನೀಡಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಮತ್ತೊಂದೆಡೆ ಗಂಡನ ಮನೆಯವರ ದೈಹಿಕ ಹಾಗೂ ಮಾನಸಿಕ ಹಿಂಸೆ ತಾಳಲಾರದೆ ಮೀರಬಾಯಿ ಈ ರೀತಿ ಮಾಡಿಕೊಂಡಿದ್ದಾರೆ ಎಂಬ ಮಾತುಗಳು ತಾಂಡದಲ್ಲಿ ಕೇಳಿಬರುತ್ತಿದೆ. ಘಟನಾ ಸ್ಥಳಕ್ಕೆ ಧನ್ನೂರು ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

ತಾಯಿ ಇಬ್ಬರು ಮಕ್ಕಳು ಆತ್ಮಹತ್ಯೆ: ಬಾಗಲಕೋಟೆಯ ಕಮತಗಿ ಗ್ರಾಮದಲ್ಲಿ ಮದುವೆ ವಯಸ್ಸಿಗೆ ಬಂದಿದ್ದ ಇಬ್ಬರು ಹೆಣ್ಣು ಮಕ್ಕಳೊಂದಿಗೆ ತಾಯಿ ಮಲಪ್ರಭಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಿನ್ನೆ ಬೆಳಕಿಗೆ ಬಂದಿತ್ತು. ಮೂವರ ಶವ ನದಿಯಲ್ಲಿ ಪತ್ತೆಯಾಗಿತ್ತು. ಮೃತರನ್ನು ಹುನಗುಂದ ತಾಲೂಕಿನ ಸೂಳೇಭಾವಿ ಗ್ರಾಮದ ಸಂಗಮ್ಮ ಸುರೇಶ ಮಾಸರೆಡ್ಡಿ (45), ಐಶ್ವರ್ಯ (23) ಸೌಂದರ್ಯ (19) ಎಂದು ಗುರುತಿಸಲಾಗಿತ್ತು. ಮನೆಯ ಯಜಮಾನ ಸಂಗಮ್ಮ ಅವರ ಪತಿ ಕುಡಿದು ಬಂದು ಪ್ರತಿದಿನ ಗಲಾಟೆ ಮಾಡುತ್ತಿದ್ದನು. ಇದರಿಂದ ಬೇಸತ್ತ ತಾಯಿ ಮತ್ತು ಮಕ್ಕಳು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಮೂವರ ಸಾವಿಗೆ ಕಾರಣವಾಗಿರುವ ಪತಿ ಸುರೇಶ್​ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿತ್ತು.

ಇದನ್ನೂ ಓದಿ: ಮದುವೆ ವಯಸ್ಸಿಗೆ ಬಂದಿದ್ದ ಹೆಣ್ಮಕ್ಕಳಿಬ್ಬರ ಜೊತೆ ತಾಯಿ ಆತ್ಮಹತ್ಯೆಗೆ ಶರಣು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.