ಕಿಮ್ಸ್​ನಿಂದ ಮತ್ತೊಂದು ಸಾಧನೆ: ಅಪರೂಪದ ಶಸ್ತ್ರ ಚಿಕಿತ್ಸೆ ಮೂಲಕ ಬಡರೋಗಿಯ ಜೀವ ಉಳಿಸಿದ ಸಂಜೀವಿನಿ

author img

By

Published : Sep 22, 2022, 7:24 PM IST

ಶಸ್ತ್ರ ಚಿಕಿತ್ಸೆಗೆ ಒಳಗಾದವರು

ಕರಡಿ ದಾಳಿಗೆ ಒಳಗಾಗಿ ಮೆದುಳು, ಕಣ್ಣು ಮತ್ತು ಮುಖದ ಮೇಲ್ಭಾಗ ಶೇ. 90 ರಷ್ಟು ಗಾಯಗೊಂಡಿದ್ದ ವ್ಯಕ್ತಿಗೆ ಕಿಮ್ಸ್​ ಆಸ್ಪತ್ರೆ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿಸಿದ್ದಾರೆ. ಈ ಮೂಲಕ ಜೀವ ಉಳಿಸಿದ್ದಾರೆ.

ಹುಬ್ಬಳ್ಳಿ: ಹುಬ್ಬಳ್ಳಿಯ ಕಿಮ್ಸ್ ಉತ್ತರ ಕರ್ನಾಟಕದ ಬಡ ರೋಗಿಗಳ ಆಶಾ ಕಿರಣ. ಕೋವಿಡ್ ಬಂದಾಗಲಂತೂ ಸಹಸ್ರಾರು ಜನರಿಗೆ ಚಿಕಿತ್ಸೆ ನೀಡಿ, ಜೀವದಾನ ಮಾಡಿತ್ತು. ಮೊನ್ನೆಯಷ್ಟೇ ಓಪನ್ ಹಾರ್ಟ್ ಸರ್ಜರಿ ಮಾಡೋ ಪ್ರಯೋಗದಲ್ಲಿಯೂ ಯಶಸ್ವಿಯಾಗಿತ್ತು. ಇದೀಗ ಕರಡಿ ದಾಳಿಗೆ ತುತ್ತಾದ ವ್ಯಕ್ತಿಯೊಬ್ಬನ ಜೀವವನ್ನು ಉಳಿಸಿದ್ದಷ್ಟೇ ಅಲ್ಲದೇ ಮತ್ತೊಂದು ಚಮತ್ಕಾರಿ ಚಿಕಿತ್ಸೆ ಮಾಡುವ ಮೂಲಕ ಸರ್ಕಾರಿ ಆಸ್ಪತ್ರೆ ಯಾವ ಖಾಸಗಿ ಆಸ್ಪತ್ರೆಗೂ ಕಡಿಮೆಯಿಲ್ಲ ಎನ್ನುವುದು ಸಾಬೀತು ಮಾಡಿದೆ.

ಹೌದು, ಹೀಗೆ ದೃಶ್ಯದಲ್ಲಿ ನಿಂತಿರುವ ಫಕ್ಕಿರಪ್ಪ, ಕಾರವಾರ ಜಿಲ್ಲೆಯ ಮುಂಡಗೋಡ ತಾಲೂಕಿನವರು. ಕಳೆದ ಜುಲೈ 30 ರಂದು ತಮ್ಮ ಹೊಲಕ್ಕೆ ತೆರಳುತ್ತಿದ್ದ ವೇಳೆಯಲ್ಲಿ ಮಕ್ಕಳ ಜೊತೆಗಿದ್ದ ಕರಡಿಯೊಂದು ಏಕಾಏಕಿ ಮೈಮೇಲೆ ಎರಗಿ ಮಾರಣಾಂತಿಕವಾಗಿ ದಾಳಿ ನಡೆಸಿತ್ತು. ಪರಿಣಾಮ ಫಕ್ಕಿರಪ್ಪನ ಮೆದುಳು, ಕಣ್ಣು, ಮತ್ತು ಮುಖದ ಮೇಲ್ಭಾಗ ಶೇ. 90 ರಷ್ಟು ಚರ್ಮ ಕಿತ್ತು ವಿರೂಪಗೊಂಡಿತ್ತು.

ತಕ್ಷಣವೇ ಮುಂಡಗೋಡ ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಜುಲೈ 30 ರಂದು ದಾಖಲು ಮಾಡಲಾಗಿತ್ತು. ಇದೀಗ ಕಿಮ್ಸ್ ಆಸ್ಪತ್ರೆಯ ಬಾಯಿ ಮತ್ತು ಮುಖ ಶಸ್ತ್ರಚಿಕಿತ್ಸೆ ತಜ್ಞ ವೈದ್ಯರು ಹಾಗೂ ಕಣ್ಣಿನ ಶಸ್ತ್ರಚಿಕಿತ್ಸಕರ ಸಹಯೋಗದಲ್ಲಿ ಸೆಪ್ಟೆಂಬರ್ 16 ರಂದು ಸುದೀರ್ಘ 6 ಗಂಟೆಗಳ ಗಂಭೀರ ಶಸ್ತ್ರಚಿಕಿತ್ಸೆ ಕೈಗೊಳ್ಳಲಾಗಿದೆ. ಇದರಿಂದ ಫಕ್ಕಿರಪ್ಪ ಜೀವಾಪಾಯದಿಂದ ಪಾರಾಗಿದ್ದಾರೆ.

1.50 ಲಕ್ಷದ ಶಸ್ತ್ರಚಿಕಿತ್ಸೆ ಉಚಿತವಾಗಿ ಮಾಡಿದ ವೈದ್ಯರು: ಸದ್ಯ ಕಣ್ಣಿನ ಪ್ರಮುಖ ಭಾಗಗಳಿಗೆ ಯಾವುದೇ ರೀತಿಯ ಅಪಾಯವಾಗದಂತೆ ಪುನರ್ ರಚನೆ ಮಾಡಲು ಶಸ್ತ್ರಚಿಕಿತ್ಸೆಯನ್ನು ಕಿಮ್ಸ್ ಆಸ್ಪತ್ರೆಯ ತಜ್ಞ ಡಾ. ಮಂಜುನಾಥ, ವಸಂತ ಕಟ್ಟಿಮನಿ, ಅನುರಾಧ ಹಾಗೂ ವಿವೇಕಾನಂದ ಜೇವರ್ಗಿ ನೇತೃತ್ವದ ತಂಡ ಯಶಸ್ವಿಯಾಗಿದೆ. ಈ ರೋಗಿಯ ತೊಡೆಯ ಚರ್ಮವನ್ನು ತೆಗೆದು ಮುಖಕ್ಕೆ ಜೋಡಿಸುವ ಶಸ್ತ್ರಚಿಕಿತ್ಸೆ ಕೈಗೊಳ್ಳಲಾಗಿದೆ. ಇದೀಗ ಫಕ್ಕಿರಪ್ಪ ಯಥಾಸ್ಥಿತಿಗೆ ಮರಳಿದ್ದಾರೆ. ಈ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಯಲ್ಲಿ 1.50 ಲಕ್ಷ ರೂ ವೆಚ್ಚವಾಗಬಹುದಾದ ಗಂಭೀರ ಸ್ವರೂಪದ ಈ ಶಸ್ತ್ರಚಿಕಿತ್ಸೆಯನ್ನು ಕಿಮ್ಸ್ ಉಚಿತವಾಗಿ ನಡೆಸಿ ಅನುಕೂಲ ಮಾಡಿಕೊಟ್ಟಿದೆ.

ಒಟ್ಟಿನಲ್ಲಿ ಸರ್ಕಾರಿ ಆಸ್ಪತ್ರೆಗಳು ಎಂದರೆ ಮೂಗು ಮುರಿಯುವ ಜನರ ಮಧ್ಯೆ ಕಿಮ್ಸ್ ಆಸ್ಪತ್ರೆ ಅಪರೂಪದ ಶಸ್ತ್ರ ಚಿಕಿತ್ಸೆ ನಡೆಸಿ ಬಡ ರೋಗಿಯ ಜೀವ ಉಳಿಸುವುದರ ಮೂಲಕ ಸರ್ಕಾರಿ ಆಸ್ಪತ್ರೆಗಳು ಕೂಡ ಖಾಸಗಿ ಆಸ್ಪತ್ರೆಗಳಿಗೇನು ಕಡಿಮೆ ಇಲ್ಲ ಎಂಬುದನ್ನು ಸಾಬೀತು ಮಾಡಿದೆ.

ಓದಿ: ಮಹಿಳೆಯ ಕಣ್ಣೊಳಗೆ ಮುರಿದ ಟೂತ್‌ ಬ್ರಷ್ ಚೂರು:​ ಹುಬ್ಬಳ್ಳಿ ವೈದ್ಯರಿಂದ ಯಶಸ್ವಿ ಶಸ್ತ್ರಚಿಕಿತ್ಸೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.