65ರ ಇಳಿವಯಸ್ಸಿನಲ್ಲೂ ಹುಡುಗಿಯರು ನಾಚುವಂತೆ ನೃತ್ಯ.. ಹುಬ್ಬಳ್ಳಿ ಕಲಾವಿದೆಯ ಭರ್ಜರಿ ಡ್ಯಾನ್ಸ್​

author img

By

Published : Oct 14, 2021, 12:25 PM IST

Updated : Oct 14, 2021, 1:17 PM IST

Artist Vidushi Urmila paatra

ಹುಬ್ಬಳ್ಳಿಯ ನೃತ್ಯಗಾರ್ತಿ ಊರ್ಮಿಳಾ ಪಾತ್ರ ಅವರು 65ನೇ ವಯಸ್ಸಿನಲ್ಲಿ ಸಹ ಹುಡುಗಿಯರಂತೆ ದಣಿವಿಲ್ಲದೆ ನೃತ್ಯ ಮಾಡುವ ಮೂಲಕ ಭಾರತೀಯ ಸಂಸ್ಕೃತಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ.

ಹುಬ್ಬಳ್ಳಿ: ಐವತ್ತು, ಅರವತ್ತು ವರ್ಷ ಆದ್ರೆ ಸಾಕು, ಮೊಣಕಾಲು ನೋವು ಎಂದು ಎದ್ದು ಓಡಾಡಲು ಹಿಂಜರಿಯುವ ವ್ಯಕ್ತಿಗಳ ಮಧ್ಯೆ 65 ವರ್ಷಗಳಾದ್ರೂ ಸಹ ಹರೆಯದ ಹುಡುಗಿಯರಂತೆ ನೃತ್ಯ ಮಾಡುವ ಮೂಲಕ ನಗರದ ಕಲಾವಿದೆವೋರ್ವರು ಸಾಧನೆ ಮಾಡಿದ್ದಾರೆ.

ವಾಣಿಜ್ಯ ನಗರಿಯ ಕಲಾವಿದೆ ಊರ್ಮಿಳಾ ಪಾತ್ರ ಅವರು 65ನೇ ವಯಸ್ಸಿನಲ್ಲಿ ಹುಡುಗಿಯರಂತೆ ದಣಿವಿಲ್ಲದ ರೀತಿ ನೃತ್ಯ ಮಾಡುವ ಮೂಲಕ ಭಾರತೀಯ ಸಂಸ್ಕೃತಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಮೂಲತಃ ಒಡಿಶಾ ರಾಜ್ಯದವರಾಗಿರುವ ಊರ್ಮಿಳಾ, ಬಸುದೇಬ್ ಪಾತ್ರ ಎಂಬುವರನ್ನು ಮದುವೆ ಆಗಿ ಹುಬ್ಬಳ್ಳಿಗೆ ಆಗಮಿಸಿದ್ದರು. ಅಂದಿನಿಂದ ಇಂದಿನವರೆಗೂ ಹುಬ್ಬಳ್ಳಿಯಲ್ಲಿಯೇ ತಮ್ಮ ನೃತ್ಯದ ಮೂಲಕ ಸಾಕಷ್ಟು ವಿದ್ಯಾರ್ಥಿ ಬಳಗ ಹಾಗೂ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ.

65ನೇ ವಯಸ್ಸಿನಲ್ಲಿ ನೃತ್ಯ ಮಾಡುತ್ತಿರುವ ಕಲಾವಿದೆ ವಿದುಷಿ ಊರ್ಮಿಳಾ ಪಾತ್ರ

6ನೇ ವಯಸ್ಸಿನಲ್ಲಿ ಡ್ಯಾನ್ಸ್​ ಪ್ರಾರಂಭಿಸಿದ ಇವರು, ಪ್ರಸ್ತುತ 65 ನೇ ವಯಸ್ಸಿನಲ್ಲಿ ಸಹ ಅದ್ಭುತವಾಗಿ ನೃತ್ಯ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಜೊತೆಗೆ ಕೂಚಿಪುಡಿ, ಓಡಿಶಿ, ಭರತನಾಟ್ಯ ಸೇರಿದಂತೆ ಸಾಕಷ್ಟು ನೃತ್ಯ ಕಲೆಯ ಮೂಲಕ ಹೆಸರುವಾಸಿಯಾಗಿದ್ದಾರೆ.

ಶಿವಲೀಲಾ ಅಮೃತ, ಪ್ರಹ್ಲಾದ ಚರಿತ, ಅಹಲ್ಯ ಮೋಕ್ಷಂ, ಸೀತಾ ಸ್ವಯಂವರ, ಶ್ರೀಕೃಷ್ಣ ಲೀಲೆ, ದಕ್ಷ ಯಜ್ಞ ಅಂತಹ ಸಾಕಷ್ಟು ನೃತ್ಯಗಳಿಗೆ ಜೀವ ತುಂಬಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಮೂವರು ಮಕ್ಕಳನ್ನು ಪಾಲನೆ, ಪೋಷಣೆ ಮಾಡುವ ಸಂದರ್ಭದಲ್ಲಿ ಕೂಡ ನೃತ್ಯದಿಂದ ಹಿಂದೆ ಸರಿಯದೆ ಕುಟುಂಬದವರ ಸಹಕಾರದಿಂದ ಸಾಕಷ್ಟು ಸಾಧನೆ ಮಾಡಿದ್ದಾರೆ.

ಊರ್ಮಿಳಾ ಅವರು ಇಳಿವಯಸ್ಸಿನಲ್ಲೂ ಉತ್ಸಾಹದಿಂದ ನೃತ್ಯದಲ್ಲಿ ಸಾಧನೆ ಮಾಡುವ ಮೂಲಕ ಕಲೆಯನ್ನು ಪ್ರೋತ್ಸಾಹಿಸಿ, ವಿದ್ಯಾರ್ಥಿಗಳಿಗೆ ಕಲೆ ಕುರಿತು ಆಸಕ್ತಿ ಬೆಳೆಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಇವರ ಕಲೆಗೆ ಹೆಚ್ಚಿನ ಮನ್ನಣೆ ಸಿಗಲಿ ಎಂಬುದು ನಮ್ಮ ಆಶಯ.

Last Updated :Oct 14, 2021, 1:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.