ಪ್ರಾಣಕ್ಕೆ ಮಾರಕವಾಗ್ತಿವೆ ಕರಾವಳಿಯ ಅವೈಜ್ಞಾನಿಕ ಭೂ ಅಗೆತಗಳು: ಅಧಿಕಾರಿಗಳಿಂದಲೇ ಸಾಥ್​?

author img

By

Published : Aug 5, 2022, 10:39 PM IST

ಸುಬ್ರಹ್ಮಣ್ಯ

ಸುಬ್ರಹ್ಮಣ್ಯ ಗ್ರಾಮ ಪಂಚಾಯತ್​ನ ನೂಚಿಲ ಎಂಬಲ್ಲಿ ಖಾಸಗಿ ವ್ಯಕ್ತಿಗಳು ವರ್ಗ ಭೂಮಿಯನ್ನು ಹಾಗೂ ಅದಕ್ಕೆ ಸೇರಿದ ಕುಮ್ಕಿ ಜಾಗವನ್ನು ಸೈಟ್ ರೂಪದಲ್ಲಿ ಮಾರ್ಪಾಡು ಮಾಡಿ ಅನೇಕರಿಗೆ ಮಾರಾಟ ಮಾಡಿದ್ದಾರೆ ಎಂಬ ಗಂಭೀರ ಆರೋಪವಿದೆ.

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಹಲವೆಡೆಗಳಲ್ಲಿ ಅವೈಜ್ಞಾನಿಕ ಭೂಮಿ ಅಗೆತ ಕಾಮಗಾರಿ ಹಾಗೂ ಬೃಹತ್ ಭೂಮಾಫಿಯಾವು ಬಡವರ ಪಾಲಿಗೆ ಮಾರಕವಾಗಿ ಪರಿಣಮಿಸುತ್ತಿದೆ.

ಕುಕ್ಕೆಯಲ್ಲಿ ಅಪಾಯದ ಅಂಚಿನಲ್ಲಿ ಏಳು ಮನೆಗಳು: ಸುಬ್ರಹ್ಮಣ್ಯ ಗ್ರಾಮ ಪಂಚಾಯತ್​ನ ನೂಚಿಲ ಎಂಬಲ್ಲಿ ಖಾಸಗಿ ವ್ಯಕ್ತಿಗಳು ವರ್ಗ ಭೂಮಿಯನ್ನು ಹಾಗೂ ಅದಕ್ಕೆ ಸೇರಿದ ಕುಮ್ಕಿ ಜಾಗವನ್ನು ಸೈಟ್ ರೂಪದಲ್ಲಿ ಮಾರ್ಪಾಡು ಮಾಡಿ ಅನೇಕ ಜನರಿಗೆ ಮಾರಾಟ ಮಾಡಿದ್ದಾರೆ ಎನ್ನಲಾಗಿದ್ದು, ಈ ಭೂಮಿಯಲ್ಲಿ ನೂಚಿಲ ದುಗ್ಗಪ್ಪ ಮಲೇಕುಡಿಯ, ಭಾಸ್ಕರ, ದಿನೇಶ್, ಪದ್ಮಯ್ಯ ಮಲೇಕುಡಿಯ, ಪ್ರಮೋದ್, ದೇವಕಿ, ಗೀತಾ ಮಲೇಕುಡಿಯ ಎಂಬವರು 94c ಮೂಲಕ ಸರ್ಕಾರದಿಂದ ಹಕ್ಕುಪತ್ರ ಪಡೆದು ಮನೆ ನಿರ್ಮಾಣ ಮಾಡಿದ್ದಾರೆ. ಇದೀಗ ಈ ಏಳು ಮನೆಗಳೂ ಅಪಾಯದ ಅಂಚಿನಲ್ಲಿದೆ. ಮೂರು ದಿನಗಳ ಹಿಂದೆ ಈ ಪ್ರದೇಶದಲ್ಲಿ ಭೂಕುಸಿತವಾಗಿದ್ದು, ಬಹುತೇಕ ಎಲ್ಲಾ ಮನೆಗಳಿಗೆ ಕೆಸರು, ಮಣ್ಣು, ನೀರು ತುಂಬಿಕೊಂಡಿದೆ. ಪ್ರಸ್ತುತ ಅದರ ತೆರವು ಕಾರ್ಯಗಳು ಈಗ ನಡೆಯುತ್ತಿದೆ.

ಪ್ರತಿಕ್ರಿಯೆ

ಗ್ರಾಮ ಪಂಚಾಯತ್ ಸದಸ್ಯರಾದ ಹರೀಶ್ ಇಂಜಾಡಿ ಹೇಳುವ ಪ್ರಕಾರ, "ಕುಕ್ಕೆ ಸುಬ್ರಹ್ಮಣ್ಯ ಗ್ರಾಮದಲ್ಲಿ ಕೆಲವು ಉದ್ಯಮಿಗಳು ಅಧಿಕಾರಿಗಳ ಸಹಕಾರದೊಂದಿಗೆ ಸರ್ಕಾರಿ ಜಾಗವನ್ನು ಅತಿಕ್ರಮಣ ಮಾಡಿಕೊಂಡು ಭೂಮಿಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದ ನಿವೇಶನ ರಹಿತರಿಗೆ ಲಕ್ಷಾಂತರ ರೂಪಾಯಿಗೆ ಮಾರಾಟ ಮಾಡುವ ದಂಧೆ ಅತ್ಯಂತ ವ್ಯವಸ್ಥಿತವಾಗಿ ಈ ಕಡೆಗಳಲ್ಲಿ ನಡೆಯುತ್ತಿದೆ. ಮಾತ್ರವಲ್ಲದೇ, ಅವೈಜ್ಞಾನಿಕ ಭೂಮಿ ಅಗೆತ ಕಾಮಗಾರಿಗಳು ಯಾರ ಭಯವೂ ಇಲ್ಲದೇ ನಡೆಯುತ್ತಿದೆ. ಇದರಿಂದ ಗುಡ್ಡ ಪ್ರದೇಶವಾಗಿರುವ ಜಾಗಗಳನ್ನು ಅಗೆಯುತ್ತಿದ್ದು, ದೊಡ್ಡ ದೊಡ್ಡ ಬರೆಗಳು ನಿರ್ಮಾಣವಾಗುತ್ತಿದೆ. ಇತ್ತೀಚಿಗೆ ಕುಮಾರಧಾರ ಸಮೀಪ ಪರ್ವತಮುಖಿ ಎಂಬಲ್ಲಿ ಮನೆಯ ಮೇಲೆ ಭೂಕುಸಿತವಾಗಿ ಪುಟ್ಟ ಮಕ್ಕಳಿಬ್ಬರು ಸಾವನ್ನಪ್ಪಿದ ಘಟನೆ ನಡೆದಿತ್ತು. ಇಲ್ಲಿ ಈ ದುರಂತ ನಡೆಯಲು ಇಲ್ಲೇ ಪಕ್ಕದ ಜಾಗದ ಅವೈಜ್ಞಾನಿಕ ಭೂಮಿ ಅಗೆತ ಕಾಮಗಾರಿ ಕಾರಣವಾಗಿದೆ" ಎಂದು ಅವರು ಹೇಳಿದ್ದಾರೆ.

ಭೂಮಾಫಿಯ ಬಗ್ಗೆ ಯಾವುದೇ ದೂರುಗಳು ಬಂದಿಲ್ಲ: ಈ ಬಗ್ಗೆ ಈಟಿವಿ ಭಾರತದೊಂದಿಗೆ ಮಾತನಾಡಿದ ಕಡಬ ತಹಶೀಲ್ದಾರ್ ಅನಂತಶಂಕರ್, "ಸುಬ್ರಮಣ್ಯದಲ್ಲಾಗಲೀ, ಇತರ ಕಡೆಗಳಲ್ಲಿ ಆಗಲಿ ಭೂಮಾಫಿಯಾ ಬಗ್ಗೆ ನಮಗೆ ಯಾವುದೇ ದೂರುಗಳು ಬಂದಿಲ್ಲ. ಗ್ರಾಮ ವಾಸ್ತವ್ಯದಂತಹ ಕಾರ್ಯಕ್ರಮಗಳಲ್ಲೂ ಯಾರೂ ಈ ಬಗ್ಗೆ ಪ್ರಸ್ತಾಪ ಮಾಡುವುದು ಹಾಗೂ ದೂರು ನೀಡುವುದು ಮಾಡಿಲ್ಲ. ಮನೆಗಳ ನಿರ್ಮಾಣಕ್ಕೆ ಅನುಮತಿ ನೀಡುವಾಗ ಆಯಾ ಪಂಚಾಯತ್​ಗಳು ಸ್ಥಳಕ್ಕೆ ಭೇಟಿ ಕೊಟ್ಟು ಅಲ್ಲಿನ ಪರಿಸ್ಥಿತಿ ಅವಲೋಕಿಸಿ ಅನುಮತಿ ನೀಡಬೇಕಿತ್ತು. ಈ ಬಗ್ಗೆ ಪರಿಶೀಲನೆ ಮಾಡಲಾಗುವುದು. ಈ ಬಗ್ಗೆ ದೂರುಗಳು ಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು" ಎಂದರು.

ಇದನ್ನೂ ಓದಿ: 'ಸಿದ್ದರಾಮಯ್ಯ ಮೇಲಿನ ಗೌರವಕ್ಕೆ ಅಭಿಮಾನಿಗಳು ಬಂದಿದ್ದಾರೆ, ಅವು ಕಾಂಗ್ರೆಸ್ ಮತಗಳಲ್ಲ'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.