ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕಾಶಿ ಕಾರಿಡಾರ್ ಮಾದರಿ ರಥಬೀದಿ ನಿರ್ಮಾಣ: ಮಾಸ್ಟರ್ ಪ್ಲಾನ್‌ ಹೀಗಿದೆ..

author img

By

Published : Jan 13, 2022, 8:08 PM IST

Kashi corridor type of Model to come up in Kukke Subrahmanya temple

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಾಶಿ ಕಾರಿಡಾರ್ ಮಾದರಿ ಬರಲಿದೆ. ರಾಜ್ಯ ಸರ್ಕಾರಕ್ಕೆ ಈಗಾಗಲೇ 300 ಕೋಟಿ ರೂ.ಗಳ ಮಾಸ್ಟರ್ ಪ್ಲಾನ್​ ಸಹಿತ ಯೋಜನೆಯ ವಿವರಣೆಯನ್ನು ಸಲ್ಲಿಸಲಾಗಿದೆ. ಸಿಎಂ ಸದ್ಯದಲ್ಲೇ ಕುಕ್ಕೆಯಲ್ಲಿ ಈ ಬೃಹತ್ ಯೋಜನೆಗೆ ಚಾಲನೆ ನೀಡಲಿದ್ದಾರೆ.

ಸುಬ್ರಹ್ಮಣ್ಯ: ದೇಶದ ಪ್ರಸಿದ್ಧ ನಾಗಾರಾಧನಾ ಕ್ಷೇತ್ರವಾಗಿರುವ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಇತ್ತೀಚೆಗೆ ವಾರಾಣಸಿಯಲ್ಲಿ ಉದ್ಘಾಟನೆಗೊಂಡ ಕಾಶಿ ಕಾರಿಡಾರ್ ಮಾದರಿಯ ರಥಬೀದಿ ರೂಪುಗೊಳ್ಳಲಿದೆ. ಇದಕ್ಕಾಗಿ ಮಾಸ್ಟರ್ ಪ್ಲಾನ್‌ ಸಿದ್ಧಗೊಂಡಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಅಂದಾಜು 300 ಕೋಟಿ ರೂಪಾಯಿ ವೆಚ್ಚದಲ್ಲಿ ಭವ್ಯ ರಥಬೀದಿ ನಿರ್ಮಿಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಅಂಗಾರ ಮುತುವರ್ಜಿಯಲ್ಲಿ ದೇವಾಲಯದ ವ್ಯವಸ್ಥಾಪನಾ ಸಮಿತಿಯಲ್ಲಿ ಅಂಗೀಕಾರಗೊಂಡ ಯೋಜನೆಯು ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಶೀಘ್ರವೇ ಈ ಪ್ರಸ್ತಾವನೆ ಸಂಪುಟದ ಮುಂದೆ ಬರಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಈ ಬೃಹತ್ ಯೋಜನೆಗೆ ಚಾಲನೆ ನೀಡಲಿದ್ದಾರೆ.

10 ವರ್ಷಗಳ ಅವಧಿಯಲ್ಲಿ 180 ಕೋಟಿ ರೂಪಾಯಿ ವೆಚ್ಚದಲ್ಲಿ ಮೊದಲ ಮತ್ತು 2ನೇ ಹಂತದ ಮಾಸ್ಟರ್ ಪ್ಲಾನ್ ಕುಕ್ಕೆಯಲ್ಲಿ ಅನುಷ್ಠಾನಗೊಂಡಿದೆ. ವಸತಿಗೃಹ, ವಿಶಾಲ ರಸ್ತೆಗಳು, ಒಳಚರಂಡಿ ಕಾಮಗಾರಿಗಳು ಈಗಾಗಲೇ ಬಹುತೇಕ ಮುಕ್ತಾಯಗೊಂಡಿವೆ. 3ನೇ ಹಂತಕ್ಕೆ 300 ಕೋಟಿ ರೂ.ಗಳ ಡಿಪಿಆರ್ ಸಿದ್ಧಪಡಿಸಲಾಗಿದೆ.

ಸುಮಾರು 2 ಸಾವಿರ ವರ್ಷಕ್ಕೂ ಮಿಕ್ಕಿ ಬಾಳಿಕೆ ಬರುವ ರೀತಿಯಲ್ಲಿ ಸಂಪೂರ್ಣ ಶಿಲಾಸ್ತಂಭಗಳ ಮೂಲಕ ರಥಬೀದಿಯ ಎರಡೂ ಪಾರ್ಶ್ವದಲ್ಲಿ ಪಾರಂಪರಿಕ ಶೈಲಿಯ ಕಟ್ಟಡಗಳು ತಲೆ ಎತ್ತಲಿವೆ. ದೇವಾಲಯದ ಎದುರಿನ ವೃತ್ತದಿಂದ ಪ್ರಧಾನ ಗೋಪುರದವರೆಗೆ ಸುಮಾರು 175 ಮೀ ಉದ್ದದ ರಥಬೀದಿಯಲ್ಲಿ ಪ್ರಾಚೀನ ವಿಜಯನಗರ ಶೈಲಿಯ ಕಲ್ಲಿನ ಕಂಬಗಳು, ಮೈಸೂರು ಶೈಲಿಯ ಒಳಾಂಗಣ ಮತ್ತು ತುಳುನಾಡಿನ ವಿಶೇಷ ಶೈಲಿಯ ಮರದ ಕೆತ್ತನೆಯ ಮೇಲ್ಛಾವಣಿಗಳು ನಿರ್ಮಾಣವಾಗಲಿದೆ ಎನ್ನಲಾಗಿದೆ.

ಇದರಲ್ಲಿ ವಸ್ತುಸಂಗ್ರಹಾಲಯ, ಲೈಬ್ರೆರಿಗಳು, ಸೇವಾ ಮಳಿಗೆಗಳು, ಸೇವಾ ಕೌಂಟರ್, ಹಿರಿಯರ ವಿಶ್ರಾಂತಿಧಾಮ, ತುಳುನಾಡಿನ ಪುಣ್ಯ ಕ್ಷೇತ್ರಗಳ ಮಾಹಿತಿ ನೀಡುವ ದೃಶ್ಯ- ಶ್ರಾವ್ಯ ಗ್ಯಾಲರಿಗಳು ಮೂಡಿಬರಲಿದೆ. ಸುಮಾರು 24 ಮೀ ಅಗಲವಿರುವ ರಥಬೀದಿಯನ್ನು ಅದೇ ರೀತಿ ಉಳಿಸಿಕೊಳ್ಳಲಾಗುತ್ತದೆ ಎನ್ನಲಾಗಿದೆ.

ಇದನ್ನೂ ಓದಿ: ಕಾಶಿ ವಿಶ್ವನಾಥ ಧಾಮದ ಕೆಲಸಗಾರರಿಗೆ ಸೆಣಬಿನ 100 ಜೋಡಿ ಪಾದರಕ್ಷೆಗಳನ್ನು ಕಳುಹಿಸಿದ ಪ್ರಧಾನಿ ಮೋದಿ

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.