ಪುತ್ತೂರಿನ ಬಡ ವಿದ್ಯಾರ್ಥಿನಿಗೆ ಸೂರು ಭಾಗ್ಯ ಕಲ್ಪಿಸಿದ ಶಿಕ್ಷಣ ಇಲಾಖೆ.. ಕುಟುಂಬಕ್ಕೆ ಹೊಸಬೆಳಕು

author img

By

Published : Jun 23, 2022, 3:51 PM IST

ರೋಟರಿ ಕ್ಲಬ್ ಸಹಾಯದಿಂದ ನಿರ್ಮಾಣಗೊಂಡ ಮನೆ

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಕಡುಬಡತನದಿಂದ ಜೀವನ ಸಾಗಿಸುತ್ತಿದ್ದ ಸುನಂದಾ ಎನ್ನುವ ದಲಿತ ವಿಧವೆಯ ಮನೆ ನಿರ್ಮಾಣಕ್ಕೆ ತಾಲೂಕಿನ ಶಿಕ್ಷಣ ಇಲಾಖೆ ಮುಂದಾಗಿದೆ.

ಮಂಗಳೂರು: ಶಿಕ್ಷಕ ಮತ್ತು ಶಿಕ್ಷಣ ಇಲಾಖೆ ಓರ್ವ ವಿದ್ಯಾರ್ಥಿನಿಯ ಬೌದ್ಧಿಕ ಮಟ್ಟದ ಜೊತೆಗೆ ಆಕೆಯ ಮನೆಯನ್ನೂ ಸಹ ಬೆಳಗಿಸುತ್ತದೆ ಎನ್ನುವ ಮಾತಿದೆ. ವಿದ್ಯಾರ್ಥಿನಿಯ ಬೌದ್ಧಿಕ ಮಟ್ಟವನ್ನೇನೋ ಶಿಕ್ಷಕ, ಶಿಕ್ಷಣ ಇಲಾಖೆ ಬೆಳೆಸುತ್ತೆ. ಆದರೆ, ಆ ವಿದ್ಯಾರ್ಥಿಯ ಮನೆಯನ್ನು ಹೇಗೆ ಬೆಳೆಸುತ್ತದೆ ಎನ್ನುವ ಪ್ರಶ್ನೆಗೆ ಉತ್ತರವೊಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಇದೀಗ ದೊರೆತಿದೆ.

ವಸತಿ ಸೌಲಭ್ಯ ಕಲ್ಪಿಸಿಕೊಟ್ಟ ಶಿಕ್ಷಣ ಇಲಾಖೆ ಬಗ್ಗೆ ದಲಿತ ಮಹಿಳೆ ಸುನಂದಾ ಮಾತನಾಡಿರುವುದು

ಇದು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ನಗರಸಭೆಯ ವ್ಯಾಪ್ತಿಗೆ ಬರುವ ಪೆರ್ವತ್ತೋಡಿಯ ಸುನಂದಾ ಎನ್ನುವ ದಲಿತ ವಿಧವೆಯ ನಿರ್ಮಾಣ ಹಂತದಲ್ಲಿರುವ ಮನೆಯ ಕಥೆ. ಕಳೆದ ವರ್ಷದ ಎಸ್.ಎಸ್.ಎಲ್.ಸಿ ಪರೀಕ್ಷೆ ಎದುರಿಸಲು ಸಿದ್ಧಳಾಗಿದ್ದ ಸುನಂದಾ ಅವರ ಎರಡನೇ ಮಗಳಾದ ಅನಿತಾ ಮನೆಗೆ ಎಸ್. ಎಸ್.ಎಲ್.ಸಿ ಪರೀಕ್ಷೆಯ ಸಿದ್ಧತೆಯನ್ನು ಪರಿಶೀಲಿಸಲೆಂದು ಪುತ್ತೂರು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಹಾಗೂ ಪುತ್ತೂರಿನ ಕೊಂಬೆಟ್ಟು ಶಾಲೆಯ ಶಿಕ್ಷಕಿಯಾದ ಗೀತಾಮಣಿ ತಂಡ ಭೇಟಿ ನೀಡಿತ್ತು. ಈ ವೇಳೆ ಅವರ ಮನೆಯ ಪರಿಸ್ಥಿತಿ ಕಂಡು ಮರುಗಿದ್ದರು.

ಬಡ ವಿದ್ಯಾರ್ಥಿನಿಯ ಮನೆ
ಬಡ ವಿದ್ಯಾರ್ಥಿನಿಯ ಮನೆ

ಜಮೀನಿಗೆ ಹಕ್ಕುಪತ್ರ: ಸುನಂದ ಕುಟುಂಬ ಅತ್ಯಂತ ಬಡತನದಿಂದ ಜೀವನ ಸಾಗಿಸುತ್ತಿದ್ದರೂ, ಮಕ್ಕಳ ಶಿಕ್ಷಣಕ್ಕಾಗಿ ಹೆಚ್ಚು ಒತ್ತು ನೀಡಿದ್ದ ಅವರು, ಊರಲ್ಲಿ ಕೂಲಿ-ನಾಲಿ ಮಾಡಿ ಮಕ್ಕಳನ್ನು ಓದಿಸುತ್ತಿದ್ದರು. ಇವರ ಪರಿಸ್ಥಿತಿಯನ್ನು ಕಣ್ಣಾರೆ ಕಂಡ ಶಿಕ್ಷಣಾಧಿಕಾರಿ ಮತ್ತು ಕೊಂಬೆಟ್ಟು ಶಾಲೆಯ ಶಿಕ್ಷಕಿ ಗೀತಾಮಣಿ ಅವರು ಜಮೀನಿಗೆ ಹಕ್ಕುಪತ್ರವನ್ನು ಒದಗಿಸುವ ಕೆಲಸವನ್ನು ಮಾಡಿದ್ದಾರೆ. ಆ ಬಳಿಕ ರೋಟರಿ ಕ್ಲಬ್ ಸಹಾಯದೊಂದಿಗೆ ಇದೀಗ ಸುನಂದಾ ಕುಟುಂಬಕ್ಕೆ ಹೊಸ ಮನೆಯನ್ನೂ ನಿರ್ಮಿಸುತ್ತಿದ್ದು, ಮುಂದಿನ ತಿಂಗಳು ಈ ಮನೆಯ ಗೃಹಪ್ರವೇಶವೂ ನಡೆಯಲಿದೆ.

ಸುನಂದಾ ಪತಿ ಪ್ರತಿದಿನವೂ ಕುಡಿದು ಗಲಾಟೆ ಮಾಡುತ್ತಿದ್ದು, ಮನೆಯ ಹಾಗು ಮಕ್ಕಳ ಎಲ್ಲಾ ಜವಾಬ್ದಾರಿಯೂ ಸುನಂದಾ ಅವರ ಮೇಲಿತ್ತು. ಈ ನಡುವೆ ವರ್ಷದ ಹಿಂದೆ ಪತಿ ಕೂಡಾ ಮದ್ಯದ ಚಟಕ್ಕೆ ದಾಸನಾಗಿ ಸಾವನ್ನಪ್ಪಿದ ಬಳಿಕ ಇಬ್ಬರು ಹೆಣ್ಣು ಮಕ್ಕಳ ಜೊತೆ ಸುನಂದಾ ಭದ್ರತೆಯಿಲ್ಲದ ಜೋಪಡಿಯಲ್ಲಿ ವಾಸಿಸುವ ಸ್ಥಿತಿಯಿತ್ತು. ಈ ಸಂದರ್ಭದಲ್ಲಿ ಆಕೆಗೆ ಸಹಾಯ ಮಾಡುವುದಾಗಿ ಹಲವರು ಭರವಸೆಗಳನ್ನೇನೋ ನೀಡಿದ್ದರು. ಆದ್ರೆ ಅದು ಕೇವಲ ಭರವಸೆಯಾಗಿ ಮಾತ್ರ ಉಳಿದಿತ್ತು.

ಭವಿಷ್ಯದ ದಾರಿಯನ್ನೂ ಸುಭದ್ರಗೊಳಿಸಿದೆ: ಈ ನಡುವೆ ವಿದ್ಯಾರ್ಥಿನಿಯ ಶಿಕ್ಷಣದ ತಯಾರಿಯನ್ನು ವೀಕ್ಷಿಸಲು ಬಂದ ಶಿಕ್ಷಣ ಅಧಿಕಾರಿ ಮತ್ತು ಶಿಕ್ಷಕರ ತಂಡ ಸುನಂದಾರ ಸಂಕಷ್ಟಕ್ಕೆ ಸ್ಪಂದಿಸಿದೆ. ಸುನಂದಾರ ಮಕ್ಕಳ ಶಿಕ್ಷಣದ ಇಂಗಿತದ ಜೊತೆಗೆ ಭವಿಷ್ಯದ ದಾರಿಯನ್ನೂ ಸುಭದ್ರಗೊಳಿಸಿದೆ.

ಮನೆಯಲ್ಲಿ ವಿದ್ಯುತ್ ಸಂಪರ್ಕವಿಲ್ಲದಿದ್ದರೂ ಚಿಮಣಿ ದೀಪದ ಸಹಾಯದಿಂದ ಮಕ್ಕಳನ್ನು ಓದಿಸಿದ್ದ ಸುನಂದಾರ ಹಿರಿಮಗಳು ಲಾವಣ್ಯ ಪದವಿ ಮುಗಿಸಿ, ಬಿಇಡಿ ಮಾಡಿ ಇದೀಗ ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ಅಧ್ಯಾಪಕಿಯಾಗಿ ದುಡಿಯುತ್ತಿದ್ದಾರೆ. ಎಸ್. ಎಸ್. ಎಲ್. ಸಿ ಯಲ್ಲಿ ಡಿಸ್ಟಿಂಕ್ಷನ್​ನಲ್ಲಿ ಪಾಸಾಗಿರುವ ಕಿರಿಮಗಳು ಅನಿತಾ ಇದೀಗ ಕೊಂಬೆಟ್ಟು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪಿಯುಸಿ ಮೊದಲ ವರ್ಷದಲ್ಲಿ ಅಭ್ಯಾಸ ಮಾಡುತ್ತಿದ್ದಾಳೆ.

ಬಡ ವಿದ್ಯಾರ್ಥಿನಿಯ ಕುಟುಂಬಕ್ಕೆ ಆಸರೆಯಾಗಿರುವ ಶಿಕ್ಷಣ ಇಲಾಖೆ ಮತ್ತು ಶಿಕ್ಷಕಿ ಗೀತಾಮಣಿ ಅವರ ಸಾಮಾಜಿಕ ಕಾಳಜಿ ಮತ್ತು ಮಾನವೀಯ ಗುಣಕ್ಕೆ ಸಲಾಂ ಹೇಳಲೇಬೇಕು.

ಓದಿ: ಮಂಡ್ಯ, ಮೈಸೂರಿನ ಕೆಲ ಗ್ರಾಮಗಳಲ್ಲಿ ಕಂಪಿಸಿದ ಭೂಮಿ: ಆತಂಕದಲ್ಲಿ ಜನತೆ

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.