ಚೆಕ್ ಬೌನ್ಸ್ ಪ್ರಕರಣ: ಉತ್ತರಪ್ರದೇಶದಲ್ಲಿ ಆರೋಪಿ ಬಂಧಿಸಿದ ಬೆಳ್ತಂಗಡಿ ಪೊಲೀಸರು

author img

By

Published : Sep 30, 2022, 9:56 AM IST

Updated : Sep 30, 2022, 11:47 AM IST

ಆರೋಪಿ ಅರೆಸ್ಟ್​

ಚೆಕ್ ಬೌನ್ಸ್ ಪ್ರಕರಣದ ಆರೋಪಿಯೊಬ್ಬ ಕಳೆದ ಒಂದು ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆ ಮರೆಸಿಕೊಂಡಿದ್ದ. ಈ ಕುರಿತು ತನಿಖೆ ಚುರುಕುಗೊಳಿಸಿದ ಬೆಳ್ತಂಗಡಿ ಪೊಲೀಸರು ಉತ್ತರಪ್ರದೇಶದಲ್ಲಿದ್ದ ಆರೋಪಿ ಮನೆ ಮೇಲೆ ದಾಳಿ ನಡೆಸಿ ಖದೀಮನನ್ನು ಬಂಧಿಸಿದ್ದಾರೆ.

ಬೆಳ್ತಂಗಡಿ: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬೆಳ್ತಂಗಡಿ ಪೊಲೀಸರು ಉತ್ತರ ಪ್ರದೇಶದಲ್ಲಿ ಬಂಧಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ನಿವಾಸಿಯೊಬ್ಬರ ಒಂದು ಕೋಟಿ ಹತ್ತು ಲಕ್ಷ ರೂ. ಮೊತ್ತದ ಚೆಕ್ ಬ್ಯಾಂಕ್​ನಲ್ಲಿ ಬೌನ್ಸ್ ಅಗಿದ್ದು, ನಂತರ ಈ ಬಗ್ಗೆ ಬೆಳ್ತಂಗಡಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಆರೋಪಿ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಗರದ ನಿವಾಸಿ ದೀಪಕ್ ಮೌರ್ಯ(33) ಕಳೆದ ಒಂದು ವರ್ಷಗಳಿಂದ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ. ಈ ಬಗ್ಗೆ ನ್ಯಾಯಾಲಯ ವಾರೆಂಟ್ ಜಾರಿ ಮಾಡಿ ಬಂಧಿಸಲು ಆದೇಶ ಹೊರಡಿಸಿತ್ತು. ಬೆಳ್ತಂಗಡಿ ಪೊಲೀಸರು ಹಲವು ಭಾರಿ ಆರೋಪಿಯ ಬಂಧನಕ್ಕೆ ಹೋದಾಗ ತಪ್ಪಿಸಿಕೊಳ್ಳುತ್ತಿದ್ದ. ಆದರೆ, ಈ ಬಾರಿ ಮಾತ್ರ ಖದೀಮ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ಜೈಲುಪಾಲಾಗಿದ್ದಾನೆ.

ಬೆಳ್ತಂಗಡಿ ಪೊಲೀಸ್ ಠಾಣೆಯ ಸಬ್ ಇನ್ಸ್​ಪೆಕ್ಟರ್ ನಂದಕುಮಾರ್ ಮತ್ತು ಅರ್ಜುನ್ ಅವರ ಸೂಚನೆಯಂತೆ ಎಎಸ್ಐ ರಾಮಯ್ಯ ಹೆಗ್ಡೆ ಮತ್ತು ಹೆಡ್​ ಕಾನ್ಸ್​ಟೇಬಲ್ ಗಂಗಾಧರ್ ಪೂಜಾರಿಯವರು ಮಂಗಳೂರಿನಿಂದ ವಿಮಾನದ ಮೂಲಕ ದೆಹಲಿಗೆ ಹೋಗಿ ಅಲ್ಲಿಂದ ಉತ್ತರ ಪ್ರದೇಶಕ್ಕೆ ತೆರಳಿದ್ದಾರೆ. ಬಳಿಕ ಪ್ರಯಾಗ್ ರಾಜ್ ನಗರದ ಪೊಲೀಸ್ ಠಾಣೆಗೆ ಹೋಗಿ ಹಿರಿಯ ಪೊಲೀಸರ ಬಳಿ ಆರೋಪಿಯ ದಸ್ತಗಿರಿ ಮಾಡುವ ವಾರೆಂಟ್ ಬಗ್ಗೆ ಮಾಹಿತಿ ನೀಡಿದ್ದಾರೆ. ನಂತರ ಅವರದ್ದೇ ಪೊಲೀಸ್ ವಾಹನದಲ್ಲಿ ಶಸ್ತ್ರಾಸ್ತ್ರ ಜೊತೆ ಆರೋಪಿ ಮನೆಗೆ ದಾಳಿ ಮಾಡಿ, ದೀಪಕ್ ಮೌರ್ಯನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಕೊಳ್ಳೇಗಾಲ: ನಕಲಿ ಚಿನ್ನ‌ ಕೊಟ್ಟು ವಂಚಿಸುತ್ತಿದ್ದ ಮಹಿಳೆಯರ ಬಂಧನ, 3 ಪ್ರಕರಣ ಬೆಳಕಿಗೆ

ಆರೋಪಿಯನ್ನ ಉತ್ತರ ಪ್ರದೇಶ ವಿಮಾನ ನಿಲ್ದಾಣದವರೆಗೆ ಭದ್ರತೆಯಲ್ಲಿ ಪ್ರಯಾಗ್ ರಾಜ್ ನಗರ ಪೊಲೀಸರು ತಲುಪಿಸಿದರು. ಅಲ್ಲಿಂದ ದೆಹಲಿ ಮೂಲಕ‌ ವಿಮಾನದಲ್ಲಿ ಮಂಗಳೂರಿಗೆ ಕರೆ ತರಲಾಗಿದ್ದು, 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Last Updated :Sep 30, 2022, 11:47 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.