ಚಿತ್ರದುರ್ಗ ಡಿಸಿ ಕಚೇರಿ ನಿರ್ಮಾಣ ನೆಪದಲ್ಲಿ ಖಾಸಗಿ ಕಂಪನಿಯಿಂದ ಲೂಟಿ ಆರೋಪ

author img

By

Published : Aug 29, 2021, 7:33 PM IST

chitradurga

ಖಾಸಗಿ ಕಂಪನಿಯೊಂದು ಚಿತ್ರದುರ್ಗ ಜಿಲ್ಲಾಡಳಿತ ಕಚೇರಿ ನಿರ್ಮಾಣದ ನೆಪದಲ್ಲಿ ನೈಸರ್ಗಿಕ ಸಂಪತ್ತನ್ನು ಲೂಟಿ ಹೊಡೆದಿರುವ ಆರೋಪ ಕೇಳಿ ಬಂದಿದೆ.

ಚಿತ್ರದುರ್ಗ: ಸರ್ಕಾರದ ಕಟ್ಟಡ ಕಾಮಗಾರಿ ಕೆಲಸ‌ ಬೇಗ ಮುಗಿಸಲಿ ಅಂತ ಖಾಸಗಿ ಕಂಪನಿಗೆ ಕಾಮಗಾರಿ ನೀಡೋದು ಸಹಜ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡಿರುವ ಖಾಸಗಿ ಕಂಪನಿಯೊಂದು ಕೋಟೆನಾಡು ಚಿತ್ರದುರ್ಗದ ನೈಸರ್ಗಿಕ ಸಂಪತ್ತನ್ನು ಅಕ್ರಮವಾಗಿ ಲೂಟಿ ಹೊಡೆದಿರೋ ಆರೋಪ ಕೇಳಿ ಬಂದಿದೆ.

ಚಿತ್ರದುರ್ಗ ಡಿಸಿ ಕಚೇರಿ ನಿರ್ಮಾಣ ನೆಪದಲ್ಲಿ ಖಾಸಗಿ ಕಂಪನಿಯಿಂದ ಲೂಟಿ ಆರೋಪ

ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿರುವ ಕುಂಚಿಗನಾಳ್ ಗ್ರಾಮದ ಗುಡ್ಡದಲ್ಲಿ ಡಿಸಿ ಕಚೇರಿ ನಿರ್ಮಾಣ ಮಾಡಲು ಜಿಲ್ಲಾಡಳಿತ ಮುಂದಾಗಿದೆ. ಸತತ ಒಂದು ವರ್ಷದಿಂದ ಈ ಕಾಮಗಾರಿ ನಡೆಸುತ್ತಿದೆ. ಆದ್ರೆ ಕಾಮಗಾರಿ ವೇಳೆ ಬೃಹತ್ ಕಲ್ಲುಬಂಡೆಗಳು ಸಿಕ್ಕಿವೆ ಎಂದು ಕಾಮಗಾರಿಯನ್ನು ಪಿಎನ್​ಸಿ ಕಂಪನಿಗೆ ನೀಡಲಾಗಿತ್ತು.

ಹೀಗಾಗಿ ಇದನ್ನೇ ಬಂಡವಾಳ ಮಾಡಿಕೊಂಡಿರೋ ಕಂಪನಿ, ಕೇವಲ ಹತ್ತು ಎಕರೆಗೆ ಅನುಮತಿ ಪಡೆದು, ನಲವತ್ತು ಎಕರೆಯಲ್ಲಿ ಕಲ್ಲು ಮಣ್ಣನ್ನು ಮಾರಾಟ ಮಾಡಿದೆ. ಅಲ್ಲದೇ ನಿಯಮಾವಳಿಗಳನ್ನು ಗಾಳಿಗೆ ತೂರಿ, ಗುಡ್ಡದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಕೂಡ ನಡೆಸ್ತಿರೋ ಆರೋಪ ಕೇಳಿಬಂದಿದೆ.

ಅಲ್ಲದೇ ಇಂಗಳದಾಳು ಗ್ರಾಮ ಪಂಚಾಯಿತಿಯಿಂದಲೂ ಅನುಮತಿ ಪಡೆಯದೆ ನಿರ್ಭಯವಾಗಿ ಕ್ರಷರ್ ಕೂಡ ಅಳವಡಿಸಿ, ಸಾವಿರಾರು ಲೋಡ್​ ಜಲ್ಲಿ ಹಾಗು ಮಣ್ಣನ್ನು ಹೆದ್ದಾರಿ ನಿರ್ಮಾಣಕ್ಕೆ ಮಾರಾಟ ಮಾಡಿದೆ. ಹೀಗಾಗಿ ಆಕ್ರೋಶಗೊಂಡ ಸ್ಥಳೀಯ ಹೋರಾಟಗಾರರು‌ ಹಾಗು ಜನಪ್ರತಿನಿಧಿಗಳು ಹೈಕೋರ್ಟ್​​ ಮೊರೆ ಹೋಗಿದ್ದಾರೆ. ಹೀಗಾಗಿ, ಈ ಕಾಮಗಾರಿ ಕುರಿತು ಸ್ಥಳ ಪರೀಶೀಲನೆ ನಡೆಸಿ, ಪಿಎನ್​ಸಿ ವಿರುದ್ಧ ಸೂಕ್ತ ತನಿಖೆ ನಡೆಸುವಂತೆ ಉಚ್ಚ ನ್ಯಾಯಾಲಯ ಆದೇಶಿಸಿದೆ‌.

ನ್ಯಾಯಾಲಯದ ಆದೇಶದಂತೆ ಜಿಲ್ಲಾಧಿಕಾರಿಗಳು ಸ್ಥಳ ಪರೀಶೀಲನೆ ನಡೆಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಬಾಲಕೃಷ್ಣ ತಿಳಿಸಿದ್ದಾರೆ. ಆದ್ರೆ ಸ್ಥಳ ಪರಿಶೀಲನೆ ನಡೆಸುವ ಮುನ್ನವೇ ಅಲ್ಲಿ ಗಣಿಗಾರಿಕೆ ನಡೆಯುತ್ತಿಲ್ಲ ಅಂತ ಖಾಸಗಿ ಕಂಪನಿ ಪರ ಅಧಿಕಾರಿಗಳು ಬ್ಯಾಟ್ ಬೀಸಿದ್ದು ಬಾರಿ ಅನುಮಾನ ಸೃಷ್ಟಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.