ಚಿತ್ರದುರ್ಗದಲ್ಲಿ ಭಾರಿ ಮಳೆ..ಉಕ್ಕಿ ಹರಿದ ವೇದಾವತಿ ನದಿ..ಗ್ರಾಮಗಳು ಜಲಾವೃತ

author img

By

Published : Sep 7, 2022, 8:44 PM IST

heavy-rain-in-chitradurga

ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುತ್ತಿರುವುದರಿಂದ ಹಲವೆಡೆ ಅವಾಂತರಗಳು ಸೃಷ್ಟಿಯಾಗಿದೆ. ಇಲ್ಲಿನ ವೇದಾವತಿ ನದಿ ಸೇತುವೆ ಮುಳುಗಿ ಸಂಚಾರ ವ್ಯತ್ಯಯವಾಗಿದೆ. ಹಲವೆಡೆ ಕೆರೆಕೋಡಿ ಬಿದ್ದು ಪ್ರದೇಶಗಳು ಜಲಾವೃತವಾಗಿದೆ.

ಚಿತ್ರದುರ್ಗ: ಜಿಲ್ಲಾದ್ಯಂತ ಸುರಿದ ಭಾರಿ ಮಳೆಗೆ ಜಿಲ್ಲೆಯ ಬಹುತೇಕ ದೊಡ್ಡ ಕೆರೆ, ಸಣ್ಣಕೆರೆ, ಗೋಕಟ್ಟೆ, ಚೆಕ್ ಡ್ಯಾಂ, ಬ್ಯಾರೇಜ್ ಗಳು ಭರ್ತಿಯಾಗಿವೆ. ಇಲ್ಲಿನ ಚಳ್ಳಕೆರೆ ತಾಲೂಕಿನ ಕೊನಿಗರಹಳ್ಳಿ - ತೋರೆಬಿರನಹಳ್ಳಿ ನಡುವಿನ ಸೇತುವೆ ವೇದಾವತಿ ನದಿಯಲ್ಲಿನ ಪ್ರವಾಹದಿಂದಾಗಿ ಮುಳುಗಡೆಯಾಗಿದೆ. ಜೊತೆಗೆ ಮೈಲನಹಳ್ಳಿ ರೇಣುಕಾಪುರ ರಸ್ತೆ ಸಂಚಾರ ಸ್ಥಗಿತಗೊಂಡಿದೆ.

ವೇದಾವತಿ ನದಿ ತೀರದ ಪ್ರದೇಶಗಳು ಜಲಾವೃತ: ಹಿರಿಯೂರು ಚಳ್ಳಕೆರೆ ಅವಳಿ ತಾಲೂಕುಗಳಲ್ಲಿನ ವೇದಾವತಿ ನದಿ ಪಾತ್ರದ ಗ್ರಾಮಗಳೂ ಜಲಾವೃತಗೊಂಡಿದೆ. ವೇದಾವತಿ ನದಿಯು ಚೌಳೂರು, ಜುಂಜರಗುಂಟೆ, ಚಟ್ಪೇಕಂಬ, ಕೊರ್ರಲಕುಂಟೆ ಗ್ರಾಮಗಳಲ್ಲಿ ಅಪಾಯದ ಮಟ್ಟ ಮೀರಿ ಆಂಧ್ರ ಗಡಿಭಾಗದ ಭೈರವತಿಪ್ಪ(ಬಿಟಿಪಿ) ಜಲಾಶಯಕ್ಕೆ ಹೋಗುತ್ತದೆ.

ಅಲ್ಲಿಂದ ಆಂಧ್ರದ ಕಣೆಕಲ್ಲು, ಸಿಂಗನಪಲ್ಲಿ ಬಳಿ ಉಪನದಿ ಚಿನ್ನಹಗರಿಯೊಂದಿಗೆ ಸಂಗಮವಾಗುತ್ತದೆ. ಬಳಿಕ ಮತ್ತೆ ಕರ್ನಾಟಕ ಪ್ರವೇಶ ಮಾಡಿ ಬಳ್ಳಾರಿಯ ಕಮ್ಮರ ಛೇಡುವಿನ ಬಳಿ ವೇದಾವತಿಯ ಉಪನದಿ ಹೀರೇಹಳ್ಳದೊಂದಿಗೆ ಸೇರಿ ಗೋದಾವರಿ ಕ್ಯಾಂಪ್, ಮೋಕಾ , ಮೋಟಸುಗುರು, ಸಿರಗುಪ್ಪ ತಾಲೂಕಿನ ಹಳೇಕೋಟ ಉಪ್ಪಾಳದ ಸಮೀಪ ತುಂಗಭದ್ರೆಯೊಂದಿಗೆ ಸಂಗಮವಾಗುತ್ತಿದೆ. ವೇದಾವತಿ ನದಿ ತೀರದ ಪ್ರದೇಶಗಳು, ರಸ್ತೆಗಳು ಜಲಾವೃತಗೊಂಡಿದೆ.

ಚಿತ್ರದುರ್ಗದಲ್ಲಿ ಭಾರಿ ಮಳೆ..ಉಕ್ಕಿ ಹರಿದ ವೇದಾವತಿ ನದಿ..ಗ್ರಾಮಗಳು ಜಲಾವೃತ

ಭಾರಿ ಮಳೆಗೆ ಹಲವೆಡೆ ಕೆರೆಕೋಡಿ ಬಿದ್ದಿದೆ : ಹಿರಿಯೂರು ತಾಲೂಕಿನ ಬೇತೂರು ಗ್ರಾಮದ ಕೆರೆ ಕೋಡಿ 75 ವರ್ಷಗಳ ನಂತರ ಬಿದ್ದಿದೆ. ಈಶ್ವರಗೆರೆ ಕೆರೆ ಕೋಡಿ ಬಿದ್ದಿದೆ. 25 ವರ್ಷಗಳ ನಂತರ ಇಕ್ಕನೂರು ಕೆರೆ ಕೋಡಿ ಬಿದ್ದಿದ್ದು ಅಪಾರ ಪ್ರಮಾಣ ನೀರು ಹರಿಯುತ್ತಿದೆ. ಅಬ್ಬಿನಹೊಳೆ, ಕೋಡಿಹಳ್ಳಿ, ಹೊಸಕೆರೆ, ವೇಣುಕಲ್ಲುಗುಡ್ಡದ ಕೆರೆಗಳೂ ಭರ್ತಿಯಾಗಿವೆ. ಶಿರಾ ತಾಲೂಕಿನ ತಡಕಲೂರು ಕೆರೆ ಕೋಡಿ ಸೇರಿದಂತೆ ಇತರ ಕೆರೆಗಳ ಕೋಡಿಗಳು ಬಿದ್ದು, ಧರ್ಮಪುರ ಕೆರೆಗೆ ನೀರು ಹರಿದು ಬರುತ್ತಿದೆ.

ಇಲ್ಲಿನ ಕುರುಮರಡಿ ಕೆರೆ ಕೋಡಿ ಬಿದ್ದಿದ್ದು ರೈತರು ಸಂಭ್ರಮಿಸಿದ್ದಾರೆ. ಚಿತ್ರದುರ್ಗ ತಾಲೂಕಿನ ದೊಡ್ಡ ಕೆರೆ ಎನಿಸಿಕೊಂಡಿರುವ ಕಾತ್ರಾಳ್ ಕೆರೆ ಕೋಡಿ ಬೀಲುವ ಸಾಧ್ಯತೆ ಇದೆ. ಹೊಳಲ್ಕೆರೆ ತಾಲೂಕಿನ ಹನುಮನಕಟ್ಟೆ ಕೆರೆ ಏರಿ ಒಡೆಯುವ ಭೀತಿ ಎದುರಾಗಿದೆ. ಹೊಸದುರ್ಗ ತಾಲೂಕಿನ ಶ್ರೀರಾಂಪುರ ಸಮೀಪದ ಹಿರೇಕೆರೆ ಕೋಡಿ ಬಿದ್ದಿದೆ. ಪೂಜಾರಹಳ್ಳಿ, ಹಿಂಡಿದೇವರಹಟ್ಟಿ ಸೇರಿದಂತೆ ವೇದಾವತಿ ನದಿ ತೀರದ ಹಲವು ಹಳ್ಳಿಗಳು ಜಲಾವೃತವಾಗಿವೆ.

ಪ್ರವಾಹ ಸಂತ್ರಸ್ತರಿಗೆ ಮಾಜಿ ಸಚಿವ ಡಿ ಸುಧಾಕರ್ ನೆರವು : ಹಿರಿಯೂರು ತಾಲೂಕಿನ ಮಸ್ಕಲ್ ಮಟ್ಟಿ ಗ್ರಾಮದಲ್ಲಿ ಪ್ರವಾಹಕ್ಕೆ ತುತ್ತಾಗಿರುವ ಸಂತ್ರಸ್ತರ ನೆರವಿಗೆ ಮಾಜಿ ಸಚಿವ ಡಿ.ಸುಧಾಕರ್ ಆಗಮಿಸಿದ್ದು, ಸಂತ್ರಸ್ತರಿಗಾಗಿ ಗಂಜಿ ಕೇಂದ್ರ ತೆರೆಯಲಾಗಿದೆ. ಇದಲ್ಲದೇ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು, ಸದಸ್ಯರುಗಳು ಗಂಜಿ ಕೇಂದ್ರದಲ್ಲಿ ನಿರಾಶ್ರಿತರಿಗೆ ನೆರವು ನೀಡಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವೈ ನಾಗರಾಜ್, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಕುಮಾರ್ ನಾಯಕ್, ಸುಧಾಕರ್ ಅಭಿಮಾನಿ ಬಳಗದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್, ಎನ್ ಪಿ ಕುಶಲ್ ಸಾಗರ್ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ : ದಾವಣಗೆರೆಯಲ್ಲಿ ಒಂದೆಡೆ ಭಾರೀ ಮಳೆ.. 30 ಮೀಟರ್​ ಅಂತರದಲ್ಲಿ ಹನಿ ನೀರು ಬೀಳದೆ ಒಣಗಿದ ರಸ್ತೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.