ಅಪ್ತಾಪ್ತೆಯ ಮೇಲೆ ಅತ್ಯಾಚಾರ: ಆರೋಪಿಯ ಖುಲಾಸೆಗೊಳಿಸಿದ ಆದೇಶ ರದ್ದುಪಡಿಸಿದ ಹೈಕೋರ್ಟ್

author img

By

Published : Oct 13, 2021, 4:02 AM IST

high-court-quashed-acquittal-order-of-minor-rape-case-accused

ಅಪ್ತಾಪ್ತೆಯ ಮೇಲೆ ಅತ್ಯಾಚಾರ ಎಸಗಿದ ಯುವಕನೊಬ್ಬನ್ನು ಪ್ರಕರಣದಿಂದ ಖುಲಾಸೆಗೊಳಿಸಿದ್ದ ಜಿಲ್ಲಾ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿ, ಪ್ರಕರಣದ ಮರು ವಿಚಾರಣೆಗೆ ನಿರ್ದೇಶಿಸಿದೆ.

ಬೆಂಗಳೂರು/ಚಿಕ್ಕಮಗಳೂರು: ಚಿಕ್ಕಮಗಳೂರು ತಾಲೂಕಿನ ಗ್ರಾಮವೊಂದರಲ್ಲಿ ಅಪ್ತಾಪ್ತೆಯ ಮೇಲೆ ಅತ್ಯಾಚಾರ ಎಸಗಿದ ಯುವಕನೊಬ್ಬನನ್ನು ಪ್ರಕರಣದಿಂದ ಖುಲಾಸೆಗೊಳಿಸಿ ಜಿಲ್ಲಾ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿರುವ ಹೈಕೋರ್ಟ್, ಪ್ರಕರಣದ ಮರು ವಿಚಾರಣೆ ನಡೆಸುವಂತೆ ನಿರ್ದೇಶಿಸಿದೆ.

ಚಿಕ್ಕಮಗಳೂರು ಜಿಲ್ಲಾ ಹೆಚ್ಚುವರಿ ಸೆಷನ್ಸ್ ಮತ್ತು ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ.ನರೇಂದರ್ ಅವರಿದ್ದ ವಿಭಾಗೀಯಪೀಠವು ಈ ಆದೇಶ ಮಾಡಿದೆ.

ಪ್ರಕರಣದಲ್ಲಿ ಆರೋಪಿ ಎಸಗಿರುವ ಅಪರಾಧ ಕೃತ್ಯಗಳನ್ನು ಸಾಬೀತುಪಡಿಸಲು ಅಗತ್ಯ ಸಾಕ್ಷ್ಯಾಧಾರ ಪ್ರಸ್ತುತಪಡಿಸುವುದಕ್ಕೆ ವಿಚಾರಣಾ ನ್ಯಾಯಾಲಯವು ಪ್ರಾಸಿಕ್ಯೂಷನ್‌ಗೆ (ಸರ್ಕಾರಕ್ಕೆ) ಸೂಕ್ತ ಅವಕಾಶ ನೀಡಿಲ್ಲ. ಆರೋಪಿಯ ಡಿಎನ್‌ಎ ಪರೀಕ್ಷೆ ನಡೆಸಿಲ್ಲ. ಸಂತ್ರಸ್ತೆ ತಪಾಸಣೆ ನಡೆಸಿದ್ದ ವೈದ್ಯರು ಸೇರಿದಂತೆ ಇತರೆ ಸಾಕ್ಷಿಗಳನ್ನು ಪರಿಶೀಲಿಸಲು ಅವಕಾಶ ಮಾಡಿಕೊಟ್ಟಿಲ್ಲ. ಸಂತ್ರಸ್ತೆಯ ಕುಟುಂಬದವರೇ ಪ್ರತಿಕೂಲ ಸಾಕ್ಷಿ ನುಡಿದಿದ್ದಾರೆ ಎಂಬ ಕಾರಣಕ್ಕೆ ಉಳಿದ ಸಾಕ್ಷಿಗಳ ಪರಿಶೀಲನೆಗೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿಲ್ಲ. ಇದು ವಿಚಾರಣಾ ನ್ಯಾಯಾಲಯ ಎಸಗಿದ ಗಂಭೀರ ತಪ್ಪು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಅಲ್ಲದೇ, ಆರೋಪಿಯನ್ನು ಪ್ರಕರಣದಿಂದ ಖುಲಾಸೆಗೊಳಿಸಿ ಚಿಕ್ಕಮಗಳೂರು ಜಿಲ್ಲಾ ಹೆಚ್ಚುವರಿ ಸೆಷನ್ಸ್ ಮತ್ತು ಪೋಕ್ಸೋ ವಿಶೇಷ ನ್ಯಾಯಾಲಯ 2020ರ ಫೆ.1ರಂದು ನೀಡಿದ್ದ ತೀರ್ಪನ್ನು ರದ್ದುಪಡಿಸಿ, ಕಾನೂನು ಪ್ರಕಾರ ಹೊಸದಾಗಿ ಪ್ರಕರಣದ ಮರು ವಿಚಾರಣೆ ನಡೆಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ಸೂಚಿಸಿದೆ.

ಪ್ರಕರಣವೇನು?

ಚಿಕ್ಕಮಗಳೂರು ತಾಲೂಕಿನ ಗ್ರಾಮವೊಂದರ ಕಾಫಿ ತೋಟದಲ್ಲಿ ಕೂಲಿ ಕಾರ್ಮಿಕರಾಗಿ ಸಂತ್ರಸ್ತೆಯ ಕುಟುಂಬ ಕೆಲಸ ಮಾಡುತ್ತಿತ್ತು. ತೋಟದಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಸಂತೋಷ್ ಎಂಬಾತ ತಮ್ಮ ಅಪ್ರಾಪ್ತ ಮಗಳನ್ನು ಮದುವೆಯಾಗುವುದಾಗಿ ನಂಬಿಸಿ ಆಕೆಯೊಂದಿಗೆ ಒತ್ತಾಯಪೂರ್ವಕ ಸಂಭೋಗ ನಡೆಸಿ ಪರಾರಿಯಾಗಿದ್ದಾನೆ ಎಂದು ಆರೋಪಿಸಿ ಸಂತ್ರಸ್ತೆಯ ತಂದೆ 2019ರ ಏ.29ರಂದು ಆಲ್ದೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ನಂತರ ಪೊಲೀಸರು ಸಂತೋಷನನ್ನು ಬಂಧಿಸಿದ್ದರು. ತನಿಖೆ ಪೂರ್ಣಗೊಳಿಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ತಂದೆ ದೂರಿನಲ್ಲಿ ಹೇಳಿದ್ದನ್ನೇ ಸಂತ್ರಸ್ತೆಯು ಪೊಲೀಸರ ಮುಂದೆಯೂ ಹೇಳಿಕೆ ನೀಡಿದ್ದಳು. ಸಂತ್ರಸ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ಆಕೆಯು 32 ವಾರಗಳ ಗರ್ಭವತಿಯಾಗಿದ್ದಾಳೆ ಎಂದು ವೈದ್ಯಕೀಯ ಪರೀಕ್ಷಾ ವರದಿಯಲ್ಲಿ ದೃಢಪಟ್ಟಿತ್ತು. ಆದರೆ, ಸಂತ್ರಸ್ತೆಯ ತಂದೆ ಹಾಗೂ ಕುಟುಂದವರು ಪ್ರತಿಕೂಲ ಸಾಕ್ಷ್ಯ ಹೇಳಿದ್ದನ್ನು ಪರಿಗಣಿಸಿದ್ದ ವಿಚಾರಣಾ ನ್ಯಾಯಾಲಯ ಸಾಕ್ಷ್ಯಾಧಾರ ಕೊರತೆ ಕಾರಣ ನೀಡಿ ಆರೋಪಿಯನ್ನು ಖುಲಾಸೆಗೊಳಿಸಿತ್ತು. ಈ ಆದೇಶವನ್ನು ಪ್ರಾಸಿಕ್ಯೂಷನ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.