ಬುಡಕಟ್ಟು ಜನರಿಗೆ ತಲುಪದ ಮಳೆಗಾಲದ ಆಹಾರ ಸಾಮಗ್ರಿ: ಚಿಕ್ಕಮಗಳೂರು ಜಿಲ್ಲಾಡಳಿತದ ನಿರ್ಲಕ್ಷ್ಯವೇಕೆ?

ಬುಡಕಟ್ಟು ಜನರಿಗೆ ತಲುಪದ ಮಳೆಗಾಲದ ಆಹಾರ ಸಾಮಗ್ರಿ: ಚಿಕ್ಕಮಗಳೂರು ಜಿಲ್ಲಾಡಳಿತದ ನಿರ್ಲಕ್ಷ್ಯವೇಕೆ?
ಬುಡಕಟ್ಟು ಜನಾಂಗದವರಿಗೆ ಮಳೆಗಾಲದಲ್ಲಿ ಕೊಡಬೇಕಾದ ಆಹಾರ ಸಾಮಗ್ರಿಗಳನ್ನು ಚಿಕ್ಕಮಗಳೂರು ಜಿಲ್ಲಾಡಳಿತ ಇನ್ನೂ ನೀಡಿಲ್ಲ. ಈ ಯೋಜನೆಗಾಗಿ ಬಂದ ಹಣ ಹಾಗೇ ಜಿಲ್ಲಾಧಿಕಾರಿಗಳ ಖಾತೆಯಲ್ಲಿದ್ದು ಟೆಂಡರ್ ಕೂಡಾ ಆಗದೇ ಇರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.
ಚಿಕ್ಕಮಗಳೂರು: ಮಳೆಗಾಲ ಕಳೆದು ಚಳಿ ಆರಂಭವಾದರೂ ಜಿಲ್ಲೆಯ ಬುಡಕಟ್ಟು ಜನರಿಗೆ ಮಳೆಗಾಲದಲ್ಲಿ ನೀಡುವ ಅಗತ್ಯ ಆಹಾರ ಸಾಮಗ್ರಿ ಸಿಕ್ಕಿಲ್ಲ. ಈ ಯೋಜನೆಗಾಗಿ ಬಂದ ಹಣ ಜಿಲ್ಲಾಧಿಕಾರಿ ಖಾತೆಯಲ್ಲೇ ಉಳಿದಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಈಗಾಗಲೇ ಪೂರೈಕೆ ಮುಗಿದು ಹೋದರೂ ಆಹಾರ ಸಾಮಗ್ರಿಗಾಗಿ ಟೆಂಡರ್ ಕೂಡ ಕರೆದಿಲ್ಲ ಎಂದು ತಿಳಿದುಬಂದಿದೆ.
ಜಿಲ್ಲೆಯಲ್ಲಿ 6 ಸಾವಿರಕ್ಕೂ ಅಧಿಕ ಬುಡಕಟ್ಟು ಫಲಾನುಭವಿ ಕುಟುಂಬಗಳು ವಾಸಿಸುತ್ತಿವೆ. ಸರ್ಕಾರ ಪ್ರತಿ ವರ್ಷ ಮಳೆಗಾಲದಲ್ಲಿ ಮಲೆನಾಡಿನ ಕುಗ್ರಾಮಗಳು ಹಾಗೂ ಬುಡಕಟ್ಟು ಜನಾಂಗದವರಿಗೆ ಅನುಕೂಲವಾಗಲೆಂದು ಜೂನ್ನಿಂದ ನವೆಂಬರ್ ವರೆಗೂ ಆಹಾರ ಸಾಮಗ್ರಿಯನ್ನು ಉಚಿತವಾಗಿ ನೀಡುತ್ತದೆ. ಆದರೆ, ಡಿಸೆಂಬರ್ ಬಂದರೂ ಜಿಲ್ಲಾಡಳಿತ ಈ ಬಗ್ಗೆ ಕ್ರಮ ಕೈಗೊಂಡಿಲ್ಲ.
ಈ ಬಗ್ಗೆ ಬುಡಕಟ್ಟು ಜನರು ಮಾತನಾಡಿ, ನಮಗೆ ಮಳೆಗಾಲದಲ್ಲಿ ಬೇಕಾದ ಆಹಾರ ವಸ್ತುಗಳನ್ನು ಇನ್ನೂ ಕೊಟ್ಟಿಲ್ಲ. ನಮ್ಮ ಜನಾಂಗದವರ ಮೇಲೆ ಏಕಿಂಥ ಬೇಜವಾಬ್ದಾರಿ? ಎಂದು ಸರ್ಕಾರದ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ಇಲಾಖೆಯ ಅಧಿಕಾರಿಗಳು ಕೂಡ ಪರ್ಸಂಟೇಜ್ ರೀತಿ ವ್ಯವಹಾರ ಮಾಡುತ್ತಿದ್ದಾರೆ ಎಂಬ ಸಂದೇಹ ಉಂಟಾಗಿದೆ. ಡಿಸೆಂಬರ್ 20ರೊಳಗೆ ನಮ್ಮ ಹಕ್ಕನ್ನು ನಮಗೆ ನೀಡದಿದ್ದರೆ 6 ಸಾವಿರ ಕುಟುಂಬಗಳು ಡಿಸಿ ಕಚೇರಿ ಬಾಗಿಲಲ್ಲಿಯೇ ಧರಣಿ ಕೂರುವುದಾಗಿ ಎಚ್ಚರಿಕೆ ಕೊಟ್ಟಿದ್ದಾರೆ.
ಗಿರಿಜನರಿಗೆ ಪೌಷ್ಟಿಕಾಹಾರ ಪದಾರ್ಥಗಳನ್ನು ನೀಡುವ ಯೋಜನೆ ಅಡಿಯಲ್ಲಿ ಜಿಲ್ಲಾಡಳಿತ ಇದುವರೆಗೂ ವಿತರಣೆ ಮಾಡಿಲ್ಲ. ಈ ಹಣ ಜಿಲ್ಲಾಧಿಕಾರಿ ಖಾತೆಯಲ್ಲಿದ್ದರೂ ಸಂಬಂಧಿಸಿದ ಇಲಾಖಾಧಿಕಾರಿಗಳು ಟೆಂಡರ್ ಆಗಿಲ್ಲ ಎಂಬ ನೆಪ ಹೇಳುತ್ತಾ ಸೌಲಭ್ಯ ನೀಡುತ್ತಿಲ್ಲ ಎಂದು ಬುಡಕಟ್ಟು ಜನಾಂಗದ ಮುಖಂಡರು ಆರೋಪಿಸಿದ್ದಾರೆ.
ಇದನ್ನೂ ಓದಿ: ರೈತರಿಗಾಗಿ ಇರುವ ಸಬ್ಸಿಡಿ ಯೋಜನೆಗಳೆಷ್ಟು?
