ಮೆದುಳು ನಿಷ್ಕ್ರಿಯಗೊಂಡಿದ್ದ ಯುವತಿಯ ಅಂಗಾಂಗಗಳ ಕಸಿ ಪ್ರಕ್ರಿಯೆ ಆರಂಭ.. ಹೆಲಿಕಾಪ್ಟರ್​ನಲ್ಲಿ ಬೆಂಗಳೂರಿಗೆ ಹೃದಯ ರವಾನೆ

author img

By

Published : Sep 22, 2022, 2:04 PM IST

Updated : Sep 22, 2022, 3:19 PM IST

young woman heart sent from Chikkamagaluru

ಸಾರಿಗೆ ಬಸ್​ನಿಂದ ಕೆಳಗೆ ಬಿದ್ದು ಮೆದುಳು ನಿಷ್ಕ್ರಿಯಗೊಂಡಿದ್ದ ಯುವತಿಯ ಅಂಗಾಂಗಗಳ ಕಸಿ ಪ್ರಕ್ರಿಯೆ ನಡೆಯುತ್ತಿದ್ದು, ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯ ಮೂಲಕ ಬೆಂಗಳೂರು ಮತ್ತು ಮಂಗಳೂರಿಗೆ ಅಂಗಾಂಗಳು ರವಾನೆಯಾಗುತ್ತಿವೆ.

ಚಿಕ್ಕಮಗಳೂರು : ಸಾರಿಗೆ ಬಸ್ ನಿರ್ವಾಹಕನ ಬೇಜವಾಬ್ದಾರಿತನಕ್ಕೆ ಯುವತಿ ಬಲಿಯಾಗಿರುವ ಘಟನೆ ಗೊತ್ತೇ ಇದೆ. ಬಸ್​ನಿಂದ ಕೆಳಗೆ ಬಿದ್ದು ರಕ್ಷಿತಾ ಎಂಬ ಯುವತಿಯ ಮೆದುಳು ಸಂಪೂರ್ಣ ನಿಷ್ಕ್ರಿಯಗೊಂಡಿದ್ದು, ಪೋಷಕರು ತಮ್ಮ ಮಗಳ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಮಗಳ ಸಾವಿನ ನೋವಲ್ಲೂ ಉದಾರತೆ ಮೆರೆದಿದ್ದಾರೆ.

ಕಡೂರು ತಾಲೂಕಿನ ಸೋಮನಹಳ್ಳಿಯ ತಾಂಡಾದ ರಕ್ಷಿತಾ ಬಸವನಹಳ್ಳಿ ಸರ್ಕಾರಿ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಬಸ್​ನಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ರಕ್ಷಿತಾ ಅವರ ಮೆದುಳು ನಿಷ್ಕ್ರಿಯಗೊಂಡಿತ್ತು. ಈಗ ರಕ್ಷಿತಾ ಪೋಷಕರು ತಮ್ಮ ಮಗಳ ಒಂಬತ್ತು ಅಂಗಾಂಗಳನ್ನು ದಾನ ಮಾಡಿದ್ದಾರೆ.

ಹೆಲಿಕಾಪ್ಟರ್​ ಮೂಲಕ ಬೆಂಗಳೂರಿಗೆ ಹೃದಯ ರವಾನೆ: ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಯಲ್ಲಿ ಯುವತಿಯ ಅಂಗಾಂಗ ಕಸಿ ಪ್ರಕ್ರಿಯೆ ನಡೆಯುತ್ತಿದೆ. ಈಗಾಗಲೇ ನುರಿತ ವೈದ್ಯರ ತಂಡ ಆಪರೇಷನ್ ಆರಂಭ ಮಾಡಿದ್ದು, ಹೃದಯ, ಶ್ವಾಸಕೋಶ, ಕಿಡ್ನಿ, ಯಕೃತ್ತು, ಕಣ್ಣುಗಳನ್ನು ವೈದ್ಯರು ತೆಗೆಯುತ್ತಿದ್ದಾರೆ. ಜೀವಂತ ಹೃದಯವನ್ನು ಹೊರತೆಗೆದ ವೈದ್ಯರ ತಂಡ ಕೆಲ ಕ್ಷಣಗಳಲ್ಲೇ ಹೆಲಿಕಾಪ್ಟರ್​ ಇದ್ದ ಸ್ಥಳಕ್ಕೆ ಯುವತಿಯ ಜೀವಂತ ಹೃದಯ ತಲುಪಿಸಿದ್ದರು. ಹೃದಯವನ್ನು ಹೊತ್ತ ಹೆಲಿಕಾಪ್ಟರ್​ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಸಾಗಿತು.

ಯುವತಿಯ ಅಂಗಾಂಗಗಳ ಕಸಿ ಪ್ರಕ್ರಿಯೆ ಆರಂಭ

ಹೃದಯವನ್ನು ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ಏರ್ ಲಿಫ್ಟ್ ಮಾಡಲಾಗಿದ್ದು, ಕಿಡ್ನಿಗಳನ್ನು ಆಂಬ್ಯುಲೆನ್ಸ್ ಮೂಲಕ ಮಂಗಳೂರಿಗೆ ರವಾನೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಅದರಂತೆ ರಕ್ಷಿತಾ ಅವರ ಅಂಗಾಂಗಳನ್ನು ಹೊತ್ತ ಆಂಬ್ಯುಲೆನ್ಸ್​ ಮಂಗಳೂರಿನತ್ತ ಪಯಣ ಬೆಳೆಸಿದೆ. ಚಿಕ್ಕಮಗಳೂರಿನಿಂದ ಮೂಡಿಗೆರೆ, ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್, ಉಜಿರೆ, ಬೆಳ್ತಂಗಡಿ ಮಾರ್ಗವಾಗಿ ಮಂಗಳೂರು ತಲುಪಲಿದೆ.

ಆಂಬ್ಯುಲೆನ್ಸ್​ನಲ್ಲಿ ಅಂಗಾಂಗಗಳ ಸಾಗಣೆಗಾಗಿ ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರು ಸಹಕರಿಸುವಂತೆ ಚಿಕ್ಕಮಗಳೂರು ಜಿಲ್ಲಾಡಳಿತ ಮನವಿ ಮಾಡಿದೆ. ರಕ್ಷಿತಾ ಕಣ್ಣುಗಳನ್ನು ಚಿಕ್ಕಮಗಳೂರು ಆಸ್ಪತ್ರೆಯಲ್ಲೇ ವೈದ್ಯರು ಇರಿಸಿಕೊಳ್ಳಲಿದ್ದು, ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.

ದುರ್ಘಟನೆ ಸಂಭವಿಸಿದ್ದು ಹೀಗೆ.. ನಾಲ್ಕು ದಿನಗಳ ಹಿಂದೆ ರಕ್ಷಿತಾ ಕಾಲೇಜಿನಿಂದ ತಮ್ಮ ಊರಿಗೆ ಬಸ್​ನಲ್ಲಿ ಬರುತ್ತಿದ್ದರು. ತಮ್ಮ ಗ್ರಾಮ ಬಂದ ತಕ್ಷಣ ಬಸ್​ನಿಂದ ಇಳಿಯಲು ಮುಂದಾಗಿದ್ದರು. ಆಗ ಬಸ್​ನ ವೇಗ ಕಡಿಮೆ ಮಾಡಿದ್ದ ಚಾಲಕ ಯುವತಿ ರಕ್ಷಿತಾ ಕೆಳಗೆ ಇಳಿಯುತ್ತಿರುವ ಸಂದರ್ಭದಲ್ಲಿ ತನ್ನ ಅರಿವಿಗೆ ಬರದೇ ದಿಢೀರ್​ ವೇಗವನ್ನು ಹೆಚ್ಚಿಸಿದ್ದಾರೆ. ಈ ಸಂದರ್ಭದಲ್ಲಿ ಯುವತಿ ರಕ್ಷಿತಾ ಫೋನ್​ನಲ್ಲಿ ಮಾತನಾಡುತ್ತಿದ್ದರು. ಇಳಿಯುವ ವೇಳೆ ಬಸ್​ ಮುಂದಕ್ಕೆ ಚಲಿಸಿದ್ದರಿಂದ ಆಯತಪ್ಪಿ ರಸ್ತೆಗೆ ಬಿದ್ದಿದ್ದಾರೆ. ಆಗ ತಲೆಗೆ ಬಲವಾದ ಪೆಟ್ಟು ಬಿದ್ದಿದೆ.

ಕಂಡಕ್ಟರ್​ ನಿರ್ಲಕ್ಷ್ಯವೇನು.. ರಕ್ಷಿತಾ ಅವರ ಗ್ರಾಮ ಬಂದಾಗ ಕಂಡಕ್ಟರ್​ ಚಾಲಕನಿಗೆ ನಿಲ್ಲಿಸುವಂತೆ ಸೂಚನೆ ಕೊಟ್ಟಿಲ್ಲವಂತೆ. ಹೀಗಾಗಿ ಯುವತಿ ಬಸ್​ನಿಂದ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದಳು. ತಕ್ಷಣ ಅವರನ್ನು ಶಿವಮೊಗ್ಗಕ್ಕೆ ಕರೆದೊಯ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಸ್​ ನಿರ್ವಾಕನ ಬೇಜವಾಬ್ದಾರಿಯಿಂದ ತಮ್ಮ ಮಗಳು ಪ್ರಾಣ ಕಳೆದುಕೊಳ್ಳುವಂತಾಯಿತು ಎಂದು ಪೋಷಕರು ಕಣ್ಣೀರು ಹಾಕಿದ್ದರು.

ಶಿವಮೊಗ್ಗದ ಖಾಸಗಿ ಆಸ್ಪತ್ರೆ ವೈದ್ಯರು ರಕ್ಷಿತಾರ ಮೆದುಳು ನಿಷ್ಕ್ರಿಯವಾಗಿರುವುದಾಗಿ ಆಕೆಯ ಪೋಷಕರಿಗೆ ಹೇಳಿದ್ದರು. ಬಳಿಕ ದುಃಖದಲ್ಲೂ ಪೋಷಕರು ತಮ್ಮ ಮಗಳ ಅಂಗಾಂಗ ದಾನಕ್ಕೆ ನಿರ್ಧರಿಸಿದರು.

ಓದಿ: ನನ್ನ ಮಗಳು ಇನ್ನೂ ನಾಲ್ಕು ದಿನ ನಮ್ಮೊಂದಿಗೆ ಜೀವಿಸಬೇಕು.. ಮಗಳ ಅಂಗಾಂಗ ದಾನಕ್ಕೆ ಪೋಷಕರ ನಿರ್ಧಾರ

Last Updated :Sep 22, 2022, 3:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.