ಚಿಕ್ಕಮಗಳೂರು: ರಂಭಾಪುರಿ ಮಠಕ್ಕೆ ತಲುಪಿತು 100 ಟನ್ ತೂಕದ ಶಿಲೆ

author img

By

Published : Sep 19, 2021, 12:57 PM IST

100 ton rock reached to rambapuri mata

ರಂಭಾಪುರಿ ಮಠದ ಆವರಣದಲ್ಲಿ 8 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ 51 ಅಡಿ ಎತ್ತರದ ಜಗದ್ಗುರು ರೇಣುಕಾಚಾರ್ಯರ ಮೂರ್ತಿ ನಿರ್ಮಾಣಗೊಳ್ಳುತ್ತಿದೆ. ಆಂಧ್ರಪ್ರದೇಶದ ಮಡಕಶಿರಾದಿಂದ 100 ಟನ್ ತೂಕದ 20 ಅಡಿ ಉದ್ದದ ಶಿಲೆ ರಂಭಾಪುರಿ ಮಠಕ್ಕೆ ತಲುಪಿದೆ.

ಚಿಕ್ಕಮಗಳೂರು: ಪಂಚಪೀಠಗಳಲ್ಲೇ ಮೊದಲ ಪೀಠವಾಗಿರೋ ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ 51 ಅಡಿ ಎತ್ತರದ ಜಗದ್ಗುರು ರೇಣುಕಾಚಾರ್ಯರ 51 ಅಡಿ ಎತ್ತರದ ಪ್ರತಿಮೆ ನಿರ್ಮಾಣಗೊಳ್ಳುತ್ತಿದೆ. ಈ ಪ್ರತಿಮೆ ನಿರ್ಮಾಣಕ್ಕೆ ಆಂಧ್ರಪ್ರದೇಶದ ಮಡಕಶಿರಾ ಕಲ್ಲು ಕ್ವಾರಿಯಿಂದ ಬೃಹತ್​ ಶಿಲೆ ಆಗಮಿಸಿದೆ. ಹೌದು,100 ಟನ್ ತೂಕವುಳ್ಳ 20 ಅಡಿ ಉದ್ದವಿರುವ ಬೃಹತ್ ಶಿಲೆ ಮಠದ ಆವರಣ ತಲುಪಿದೆ.

ಸೆಪ್ಟೆಂಬರ್ 10 ರಂದು ಆಂಧ್ರಪ್ರದೇಶದ ಮಡಕಶಿರಾದಿಂದ 100 ಚಕ್ರದ ಟ್ರಕ್​ನಲ್ಲಿ ಹೊರಟ ಈ ಶಿಲೆ ಐದು ದಿನಗಳ ಬಳಿಕ ಮಠಕ್ಕೆ ಆಗಮಿಸಿದೆ. ಇದರ ತೂಕ ಸುಮಾರು 100 ಟನ್ ಇದ್ದು, 20 ಅಡಿ ಉದ್ದವಿದೆ. ಸಾಗಣೆ ಕಾರ್ಯದಲ್ಲಿ 12 ಕಾರ್ಮಿಕರು ತೊಡಗಿದ್ದಾರೆ ಎಂದು ಕಲ್ಲು ಸಾಗಣೆಯ ಜಾವಾಬ್ದಾರಿ ಹೊತ್ತಿದ್ದ ಬೆಂಗಳೂರು ಮೂಲದ ಶ್ರೀಧರಬಾಬು ತಿಳಿಸಿದ್ದಾರೆ.

ಆಂಧ್ರದ ಮಡಕಶಿರಾದಿಂದ ಹೊರಟ ಲಾರಿ ಐದು ದಿನಗಳ ನಿರಂತರ ಪ್ರಯಾಣದ ವೇಳೆ ಪಾವಗಡ, ಮಧುಗಿರಿ, ತುಮಕೂರು, ತಿಪಟೂರು, ಶಿವಮೊಗ್ಗ, ಎನ್.ಆರ್.ಪುರ ಮಾರ್ಗವಾಗಿ ಬಂದು ಬಾಳೆಹೊನ್ನೂರು ತಲುಪಿದೆ. ಶಿಲಾಮೂರ್ತಿ ನಿರ್ಮಾಣಕ್ಕೆ ಬೇಕಾಗಿರುವ ಇನ್ನೂ ಎರಡೂ ಶಿಲೆಗಳು ಶೀಘ್ರವೇ ಮಠಕ್ಕೆ ಬರಲಿವೆ. ಯಂತ್ರಗಳ ಬಳಕೆಯಿಂದ ಕಲ್ಲನ್ನು ಅನ್ ಲೋಡ್ ಮಾಡಲು ಮುಂದಾಗುವುದರಿಂದ ಕಲ್ಲಿಗೆ ಹಾನಿಯಾಗುವ ಸಾಧ್ಯತೆ ಇದೆ. ಹಾಗಾಗಿ, 16 ಕಾರ್ಮಿಕರಿಂದ ಸುರಕ್ಷಿತವಾಗಿ ಲಾರಿಯಿಂದ ಅನ್ ಲೋಡ್ ಮಾಡಲಾಗುವುದು ಎಂದು ಶ್ರೀಧರಬಾಬು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಪ್ರಧಾನಮಂತ್ರಿ ಫಸಲ ಭೀಮಾ ಯೋಜನೆ ದುರುಪಯೋಗ : ಧಾರವಾಡದಲ್ಲಿ 9 ಜನರ ವಿರುದ್ಧ ದೂರು

ಈ ಶಿಲೆಯನ್ನು ನೋಡಲು ಸುತ್ತಮುತ್ತಲಿನ ಜನರು ಕೂಡ ದೇವಾಲಯದ ಆವರಣದಲ್ಲಿ ಜಮಾಯಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.