ನಾವು ಯಾರ ಜೊತೆಗೂ ಒಳ ಒಪ್ಪಂದ ಮಾಡಿಕೊಂಡಿಲ್ಲ: ಹೆಚ್‌.ಡಿ.ಕುಮಾರಸ್ವಾಮಿ

author img

By

Published : Nov 26, 2021, 7:24 PM IST

hd kumaraswamy

ಉತ್ತರ ಕರ್ನಾಟಕ ಭಾಗದಲ್ಲಿ ಅಭ್ಯರ್ಥಿಗಳ ಗೆಲುವಿಗೆ ಜೆಡಿಎಸ್ ನಿರ್ಣಾಯಕವಾಗುತ್ತದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಬಹಿರಂಗವಾಗಿ ಜೆಡಿಎಸ್ ಬೆಂಬಲ ಕೋರಿ ಮನವಿ ಮಾಡಿದ್ದಾರೆ, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಥವಾ ಬಿಜೆಪಿಗೆ ಬೆಂಬಲ ನೀಡುವ ಬಗ್ಗೆ ನಿರ್ಣಯ ತೆಗೆದುಕೊಳ್ಳುತ್ತೇವೆಂದು ಹೆಚ್‌.ಡಿ.ಕುಮಾರಸ್ವಾಮಿ ತಿಳಿಸಿದರು.

ಚಿಕ್ಕಬಳ್ಳಾಪುರ: ಜೆಡಿಎಸ್ ಪಕ್ಷದಿಂದ 6 ವಿಧಾನ ಪರಿಷತ್ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ನಿಲ್ಲಿಸಿದ್ದು, ಯಾರ ಜೊತೆಯೂ ಒಳ ಒಪ್ಪಂದ ಮಾಡಿಕೊಂಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.

ಕೋಲಾರ, ಚಿಕ್ಕಬಳ್ಳಾಪುರ ಎಂಎಲ್‌ಸಿ ಅಭ್ಯರ್ಥಿ ವಕ್ಕಲೇರಿ ರಾಮು ಪರ ಪ್ರಚಾರಕ್ಕಿಳಿದ ಹೆಚ್ಡಿಕೆ, ಕಾಂಗ್ರೆಸ್ ಪಕ್ಷದ ವಿರುದ್ಧ ಮತ್ತೆ ಗುಡುಗಿದ್ದಾರೆ. ಈ ಬಾರಿ ವಿಧಾನ ಪರಿಷತ್ ಚುನಾವಣೆಯಲ್ಲಿ ಕೊಡಗು ವಾಪಸ್ ಪಡೆದಿದ್ದೇವೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಹಾಸನ, ತುಮಕೂರು, ರಾಮನಗರ, ಮಂಡ್ಯ ಸೇರಿದಂತೆ ಆರು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಹಾಕಿದ್ದೇವೆ. ಈ ಚುನಾವಣೆಯಲ್ಲಿ ಬಿಜೆಪಿ ಜೊತೆ ಒಳ ಒಪ್ಪಂದ ಎಂದು ಕೆಲವು ಕಾಂಗ್ರೆಸ್ ನಾಯಕರು ಆರೋಪಿಸಿರುವುದು ಸುಳ್ಳು ಎಂದರು.


ಕಾಂಗ್ರೆಸ್ ನಾಯಕರಿಗೆ ಚುನಾವಣೆ ಬಂತೆಂದರೆ ಜ್ವರ ಶುರುವಾಗುತ್ತೆ. ಬಿಜೆಪಿ ಜೊತೆ ಒಳ ಒಪ್ಪಂದ ಮಾಡಿಕೊಂಡಿದರೆಂದು ಆರೋಪಿಸಿದ್ದಾರೆ. ನಾವು ಒಪ್ಪಂದ ಮಾಡಿಕೊಂಡಿದ್ದರೆ ಬಿಜೆಪಿ 6 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಏಕೆ ಹಾಕಿದ್ದಾರೆ ಎಂದು ಪ್ರಶ್ನಿಸಿದರು. ಕೋಲಾರ ಲೋಕಸಭೆ ಚುನಾವಣೆಯಲ್ಲಿ ಆರು ಬಾರಿ ಗೆದ್ದಿದ್ದ ಕಾಂಗ್ರೆಸ್​​ ಅಭ್ಯರ್ಥಿ ಸೋಲಲು ಯಾರು ಕಾರಣ ಎಂಬುದು ಜಗಜ್ಜಾಹೀರಾಗಿದೆ ಎಂದು ವಾಗ್ದಾಳಿ ನಡೆಸಿದರು.

ಉತ್ತರ ಕರ್ನಾಟಕ ಭಾಗದಲ್ಲಿ ಅಭ್ಯರ್ಥಿಗಳ ಗೆಲುವಿಗೆ ಜೆಡಿಎಸ್ ನಿರ್ಣಾಯಕವಾಗುತ್ತದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಬಹಿರಂಗವಾಗಿ ಜೆಡಿಎಸ್ ಬೆಂಬಲ ಕೋರಿ ಮನವಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಥವಾ ಬಿಜೆಪಿಗೆ ಬೆಂಬಲ ನೀಡುವ ಬಗ್ಗೆ ನಿರ್ಣಯ ತೆಗೆದುಕೊಳ್ಳುತ್ತೇವೆಂದು ತಿಳಿಸಿದರು.

ಕಳೆದ ದಿನ ಶಿಢ್ಲಘಟ್ಟದ ಮೇಲೂರಿನ ರವಿಕುಮಾರ್ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಲು ಬಂದಾಗ ರಸ್ತೆ ಬದಿ ಬೆಳೆ ನೆಲಕ್ಕಚ್ಚಿರುವುದನ್ನು ನೋಡಿದ್ದೇನೆ. ರಾಜ್ಯದಲ್ಲಿ ವಾಣಿಜ್ಯ, ತೋಟಗಾರಿಕೆ, ಹೂ, ದ್ರಾಕ್ಷಿ, ಕಾಫಿ, ಟೀ ಮತ್ತಿತರ ಬೆಳೆಗಳು ನಾಶವಾಗಿ ಅನ್ನದಾತ ಸಂಕಷ್ಟದಲ್ಲಿದ್ದಾನೆ‌. ಜೊತೆಗೆ, ರಸ್ತೆ ಬದಿ ವ್ಯಾಪಾರಿಗಳು ಸಹಾ ಬೀದಿಗೆ ಬಿದ್ದಿದ್ದಾರೆ. ಸರ್ಕಾರ ಕೋಡಲೆ ರೂಲ್ಸ್ ಬದಿಗಿಟ್ಟು ರೈತ ಖರ್ಚು ಮಾಡಿರುವ ಹಣ ನೀಡಬೇಕೆಂದು ಒತ್ತಾಯ ಮಾಡಿದರು. ನಾನು ಮುಖ್ಯಮಂತ್ರಿಯಾಗಿದ್ದಾಗ ಕಬ್ಬು ಬೆಳೆಗಾರರಿಗೆ ಹೆಕ್ಟೇರ್‌ಗೆ 25,000ದಂತೆ 240 ಕೋಟಿ ನೀಡಿದ್ದೆ ಎಂದರು.

ಬೆಂಗಳೂರಿನ‌ ಕೊಳಚೆ ನೀರನ್ನು ಶುದ್ದೀಕರಿಸದೆ ಬಿಡಬೇಡಿ ಎಂದು ಹೇಳಿದ್ದೆ, ಆದ್ರೆ ಕೊಳಚೆ ನೀರನ್ನು ಬಿಟ್ಟು ವಿಷಮಯ ಮಾಡುತ್ತಿದ್ದಾರೆ. ಸದ್ಯ ಕೋಲಾರ, ಚಿಕ್ಕಬಳ್ಳಾಪುರ ತರಕಾರಿಗಳನ್ನು ಕೊಳ್ಳಲು ಜನರು ಹಿಂದೆ ಮುಂದೆ ನೋಡುತ್ತಿದ್ದಾರೆ ಎಂದರು. ಎತ್ತಿನಹೊಳೆ ಯೋಜನೆ ಜಾರಿಗೆ ತರುವುದಾಗಿ ಎಂಟು ವರ್ಷಗಳಿಂದ ಹೇಳಿದ್ರೂ, ಇನ್ನೂ ಯೋಜನೆ ಜಾರಿಗೊಂಡಿಲ್ಲ. ಇದು ಕೂಡಾ ಮರೀಚಿಕೆಯಾಗಿ ಹಣ ಪೋಲಾಗುತ್ತಿದ್ದು ಜನರ ಜೊತೆ ಸರ್ಕಾರ ಚೆಲ್ಲಾಟವಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.