ರೇವಪ್ಪಯ್ಯ ಮುತ್ತ್ಯಾನ ಅದ್ದೂರಿ ಜಾತ್ರೆ: ಹೋಳಿಗೆ, ತುಪ್ಪದ ಪ್ರಸಾದ ಸವಿದ ಭಕ್ತವೃಂದ

author img

By

Published : Jun 23, 2022, 10:36 PM IST

ಬೀದರ್‌ನಲ್ಲಿ ರೇವಪ್ಪಯ್ಯ ಮುತ್ತ್ಯಾನ ಅದ್ದೂರಿ ಜಾತ್ರೆ

ಬೀದರ್‌ ಜಿಲ್ಲೆಯ ಔರಾದ್‌ ತಾಲೂಕಿನ ಖೇಡ್‌ ಗ್ರಾಮದಲ್ಲಿ ಪವಾಡ ಪುರುಷ ರೇವಪ್ಪಯ್ಯ ಮುತ್ತ್ಯಾನ ಜಾತ್ರೆ ಪ್ರಸಿದ್ಧಿ ಪಡೆದಿದೆ.

ಬೀದರ್​: ಸಾಲ ಮಾಡಿಯಾದ್ರೂ ತುಪ್ಪ ತಿನ್ನಿ ಅಂತ ಹಿರಿಯರು ಹೇಳ್ತಾರೆ. ಆದ್ರೆ ಇಲ್ಲಿ ನೀವು ತುಪ್ಪ ತಿನ್ಬೇಕು ಅಂದ್ರೆ ಸಾಲ ಮಾಡ್ಬೇಕಾಗಿಲ್ಲ. ನಿಮ್ಮ ತಟ್ಟೆ ತುಂಬ ತುಪ್ಪದ ಜತೆ ಹೋಳಿಗೆನೂ ತಿನ್ಬಹುದು.


ಬೀದರ್‌ ಜಿಲ್ಲೆಯ ಔರಾದ್‌ ತಾಲೂಕಿನ ಖೇಡ್‌ ಗ್ರಾಮದ ಪವಾಡ ಪುರುಷ ರೇವಪ್ಪಯ್ಯ ಮುತ್ತ್ಯಾನ ಜಾತ್ರೆ ಪ್ರಸಿದ್ಧಿ ಪಡೆದಿದೆ. ಮಾಂಜ್ರಾ ನದಿ ದಂಡೆಯಲ್ಲಿರುವ ಶ್ರೀ ರೇವಪ್ಪಯ್ಯ ಮುತ್ಯಾರ ಗದ್ದುಗೆ ದರ್ಶನಕ್ಕೆ ಲಕ್ಷಾಂತರ ಜನರು ಆಗಮಿಸುತ್ತಾರೆ. ಕಳೆದೆರಡು ವರ್ಷ ಕೊರೊನಾ ಮಹಾಮಾರಿಯಿಂದಾಗಿ ಜಾತ್ರೆ ಅದ್ದೂರಿಯಾಗಿ ನಡೆದಿರಲಿಲ್ಲ.

ಕೋವಿಡ್‌ ಕಡಿಮೆ ಆದ ಹಿನ್ನೆಲೆಯಲ್ಲಿ ಈ ಬಾರಿ ಅದ್ದೂರಿಯಾಗಿ ಜಾತ್ರೆ ನಡೆಯಿತು. ಜಾತ್ರೆಯ ನಿಮಿತ್ತ ಮಾಡಲಾಗುವ ಹೋಳಿಗೆ, ತುಪ್ಪದ ಪ್ರಸಾದವೇ ಈ ಭಾಗದಲ್ಲಿ ಪ್ರಸಿದ್ಧಿ ಪಡೆದಿದೆ. ವಿಶೇಷವೆಂದರೆ ನೀವು ಇಲ್ಲಿ ಎಷ್ಟು ಬೇಕೋ ಅದಕ್ಕಿಂತ ಜಾಸ್ತಿನೇ ತುಪ್ಪ ತಿನ್ನಬಹುದು. ಈ ಜಾತ್ರೆ ತುಪ್ಪ ಹೋಳಿಗೆಯಿಂದಲೇ ಹೆಸರುವಾಸಿಯಾಗಿದೆ.

ಈ ಬಾರಿಯ ಜಾತ್ರೆಯಲ್ಲಿ ಸುಮಾರು 8 ಕ್ವಿಂಟಲ್ ಕಡಲೆ ಬೇಳೆ ಬೇಯಿಸಿ ಹೋಳಿಗೆ ಮಾಡಲಾಗಿತ್ತು. 10 ಕ್ವಿಂಟಲ್‌ನಷ್ಟು ತುಪ್ಪ ಬಳಸಲಾಗಿದೆ. ಇದರೊಟ್ಟಿಗೆ ಅನ್ನ, ಸಾಂಬಾರ್‌ ಕೂಡ ಭಕ್ತರಿಗೆ ಉಣಬಡಿಸಲಾಯಿತು. ಭಕ್ತರು ಕೂಡ ಅಜ್ಜನವರ ಗದ್ದುಗೆ ದರ್ಶನ ಪಡೆದು ಹೋಳಿಗೆ, ತುಪ್ಪದೂಟದಲ್ಲಿ ಮಿಂದೆದ್ದರು.

ಇತಿಹಾಸ: ಶ್ರೀ ರೇವಪ್ಪಯ್ಯ ಮುತ್ಯಾ ಮಹಾ ತಪಸ್ವಿ. ದೇಶವ್ಯಾಪಿ ಸಂಚರಿಸಿ ಅಲ್ಲಲ್ಲಿ ತಪಸ್ಸು ಮಾಡಿ ಸಿದ್ಧಿ ಸಾಧಕರಾದವರು. 1831ರಲ್ಲಿ ನಾವದಗಿಯಲ್ಲಿ ಜನಿಸಿದ್ದರು. ಸುಮಾರು 105 ವರ್ಷದ ಸಾರ್ಥಕ ಜೀವನ ನಡೆಸಿ 1936ರಲ್ಲಿ ಜಹೀರಾಬಾದ್ ತಾಲೂಕಿನ ಸತಿವಾರದಲ್ಲಿ ಶಿವಾಧೀನರಾದರು. ಆದ್ರೆ ಅವರಿಗೆ ಭಕ್ತರಿಗೆ ಹೋಳಿಗೆ ತುಪ್ಪ ಬಡಿಸುವುದೆಂದರೆ ಇವರಿಗೆ ಎಲ್ಲಿಲ್ಲದ ಪ್ರೀತಿಯಂತೆ. ಹೀಗಾಗಿ ಅದೇ ಪರಂಪರೆಯನ್ನು ಈಗಲೂ ಇಲ್ಲಿನ ಜನ ಮುಂದುವರೆಸಿಕೊಂಡು ಬರುತ್ತಿದ್ದಾರೆ.

ಜಾತ್ರೆಯ ವಿಶೇಷ ದಿನದಂದು ಸೋಮಲಿಂಗೇಶ್ವರ ಕಳಸಾರೋಹಣ ಕಾರ್ಯಕ್ರಮ ಕೂಡ ವಿಜೃಂಭಣೆಯಿಂದ ನಡೆಯಿತು. ಸಂಗಮ್‌ ಹೆದ್ದಾರಿಯಿಂದ ಖೇಡ್‌ ಗ್ರಾಮದವರೆಗೆ ಕೇಧಾರ್‌ ಶ್ರೀಗಳನ್ನು ಬೈಕ್‌ ರ‍್ಯಾಲಿ ಮುಖಾಂತರ ಸ್ವಾಗತಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಾಜೇಶ್ವರ ಶಿವಾಚಾರ್ಯರು ಮಾತನಾಡಿ, ವರ್ಷಾನು ವರ್ಷಗಳಿಂದ ನಡೆದು ಬರುತ್ತಿರುವ ಜಾತ್ರೆ ಅಚ್ಚುಕಟ್ಟಾಗಿ ಏರ್ಪಡಿಸಲಾಗುತ್ತದೆ. ಇಲ್ಲಿನ ಗ್ರಾಮದ ಹಿರಿಯರು, ಯುವಕರು ಸೇರಿ ಸಾಮರಸ್ಯದಿಂದ ಅಜ್ಜನವರ ಜಾತ್ರೆ ಮಾಡುತ್ತಿದ್ದಾರೆ ಎಂದರು.

ಇದನ್ನೂ ಓದಿ: ಉತ್ತರ ಕರ್ನಾಟಕ ಪ್ರತ್ಯೇಕತೆ ಮಾತು: ಸಚಿವ ಕತ್ತಿ ಹೇಳಿಕೆಗೆ ಕಾರಜೋಳ ಹೀಗಂದ್ರು

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.