ಕೇಂದ್ರ ಸಚಿವ ಭಗವಂತ ಖೂಬಾ ಜೊತೆ ವಾಗ್ವಾದ; ಶಿಕ್ಷಕ ಅಮಾನತು

author img

By

Published : Jun 23, 2022, 3:01 PM IST

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಭಗವಂತ ಖುಬಾ

ಔರಾದ ತಾಲೂಕಿನ ಜೀರ್ಗಾ ಕೆ. ಸರ್ಕಾರಿ ಶಾಲಾ ಶಿಕ್ಷಕ ಕುಶಾಲ್ ಪಾಟೀಲ್ ಎಂಬವರು ಸ್ವಗ್ರಾಮ ಹೆಡಗಾಪೂರದಲ್ಲಿ ರಸಗೊಬ್ಬರ ಕೊರತೆಯಾಗಿದೆ ಎಂದು ಮೊಬೈಲ್ ಕರೆಯಲ್ಲಿ ಸಚಿವರೊಂದಿಗೆ ವಾಗ್ವಾದ ಮಾಡಿರುವ ಆಡಿಯೋ ತುಣುಕು ವೈರಲ್ ಆಗಿತ್ತು.

ಬೀದರ್​: ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಭಗವಂತ ಖೂಬಾ ಅವರಿಗೆ ನಡುರಾತ್ರಿ ಕರೆಮಾಡಿ, ರಸಗೊಬ್ಬರ ಕೊರತೆ ನೀಗಿಸಲು ಆಗ್ರಹಿಸಿ, ಅನುಚಿತವಾಗಿ ವರ್ತಿಸಿದ ಆರೋಪದ ಹಿನ್ನೆಲೆಯಲ್ಲಿ ಸರ್ಕಾರಿ ಶಾಲಾ ಶಿಕ್ಷಕ ಕುಶಾಲ ಪಾಟೀಲ್ ಎಂಬುವರನ್ನು ಅಮಾನತುಗೊಳಿಸಿ ಡಿಡಿಪಿಐ ಗಣಪತಿ ಬಾರಾಟಕೆ ಆದೇಶಿಸಿದ್ದಾರೆ.

ಜೂನ್ 10ರ ರಾತ್ರಿ ಔರಾದ ತಾಲೂಕಿನ ಜೀರ್ಗಾ ಕೆ. ಸರ್ಕಾರಿ ಶಾಲಾ ಶಿಕ್ಷಕ ಕುಶಾಲ್ ಪಾಟೀಲ್ ಸ್ವಗ್ರಾಮ ಹೆಡಗಾಪೂರದಲ್ಲಿ ರಸಗೊಬ್ಬರ ಕೊರತೆಯಾಗಿದೆ ಎಂದು ಮೊಬೈಲ್ ಕರೆಯಲ್ಲಿ ವಾಗ್ವಾದ ಮಾಡಿ ಏಕವಚನದಲ್ಲಿ ಮಾತನಾಡಿದ್ದ ಆಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ವಿಷಯ ರೈತರನ್ನೂ ಕೆರಳಿಸಿತ್ತಲ್ಲದೆ ವಿರೋಧ ಪಕ್ಷ ಕಾಂಗ್ರೆಸ್​ಗೆ ದಾಳವಾಗಿ ಪರಿಣಮಿಸಿ, ರಸಗೊಬ್ಬರ ಕೊರತೆ ಹೇಳಿಕೊಂಡ ರೈತನಿಗೆ ಸಚಿವರು ಅನುಚಿತವಾಗಿ ವರ್ತಿಸಿದ್ದು, ಸರಿಯಲ್ಲ ಎಂದು ಸುದ್ದಿಗೋಷ್ಠಿ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು.

ಇದರ ಬೆನ್ನಲ್ಲೇ ರೈತ ಸಂಘದವರು ಸಚಿವರ ವಿರುದ್ಧ ಪ್ರಧಾನಿಗೆ ಬರೆದ ಮನವಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದ್ದರು. ಇದೇ ಸಂದರ್ಭದಲ್ಲಿ ಸಚಿವ ಖೂಬಾ ಪರವಾಗಿಯೂ ಹಲವರು ವಾದಕ್ಕಿಳಿದು ಖೂಬಾಗೆ ಮಾತನ್ನು ಸಮರ್ಥಿಸಿಕೊಂಡಿದ್ದರು. ಒಟ್ಟಾರೆ ಘಟನೆಗೆ ಸಂಬಂಧಿಸಿದಂತೆ ಔರಾದ ಬಿಇಒ ಎಚ್.ಎಸ್ ನಗನೂರು ಅವರು ನೀಡಿದ ವರದಿಯನ್ವಯ ಶಿಕ್ಷಕನನ್ನು ಅಮಾನತು ಮಾಡಲಾಗಿದೆ.

ಕೇಂದ್ರ ಸಚಿವರೊಂದಿಗೆ ಶಿಕ್ಷಕ ಕುಶಾಲ್ ಪಾಟೀಲ್ ಸರ್ಕಾರಿ ನೌಕರರಲ್ಲದ ರೀತಿಯಲ್ಲಿ ವರ್ತಿಸಿದ್ದಲ್ಲದೆ ಸಚಿವರೊಂದಿಗೆ ಮಾತನಾಡಿದ್ದ ಆಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ವೈರಲ್ ಮಾಡಿದ್ದಕ್ಕೆ ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಡಿಡಿಪಿಐ ಮಾಧ್ಯಮದವರಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: 21ವರ್ಷದ ಅರ್ಚಕನ ಜೊತೆ 35ರ ವಿವಾಹಿತೆ ಪರಾರಿ: ನಂಬಿಸಿ ಕರೆದೊಯ್ದವನು ಕಾಡಲ್ಲೇ ಕೈಕೊಟ್ಟ!

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.