ಪರಿಷತ್ ಚುನಾವಣೆಗೆ ಟಿಕೆಟ್ ಕಸರತ್ತು: ಹುಕ್ಕೇರಿ, ಹೆಬ್ಬಾಳ್ಕರ್ ಸೇರಿ ಘಟಾನುಘಟಿಗಳ ಲಾಬಿ

author img

By

Published : Oct 19, 2021, 8:34 AM IST

ticket-aspirants-now-lobbying-for-legislative-council-election

ವಿಧಾನ ಪರಿಷತ್​ ಚುನಾವಣೆ ದಿನಾಂಕ ಘೋಷಣೆಗೂ ಮುನ್ನವೇ ಟಿಕೆಟ್ ಆಕಾಂಕ್ಷಿಗಳು ತಮ್ಮ ಪ್ರಭಾವ ಬಳಸಿಕೊಂಡು ಟಿಕೆಟ್ ಗಿಟ್ಟಿಸಿಕೊಳ್ಳಲು ಓಡಾಡುತ್ತಿದ್ದಾರೆ. ಡಿಸೆಂಬರ್​​ನಲ್ಲಿ ಸದಸ್ಯರ ಅಧಿಕಾರವಧಿ ಅಂತ್ಯವಾಗುತ್ತಿದ್ದು, ಚುನಾವಣೆಗೆ ಈಗಿನಿಂದಲೇ ನಾಯಕರು ಲಾಬಿಗೆ ಮುಂದಾಗಿದ್ದಾರೆ.

ಚಿಕ್ಕೋಡಿ (ಚಿಕ್ಕೋಡಿ): ವಿಧಾನ ಪರಿಷತ್ ಚುನಾವಣೆ ಘೋಷಣೆಗೂ ಮುನ್ನವೇ ಚಿಕ್ಕೋಡಿಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಟಿಕೆಟ್‌ಗಾಗಿ ಪ್ರಭಾವಿ ನಾಯಕರಲ್ಲೇ ಫೈಟ್ ಶುರುವಾಗಿದ್ದು ಮತ್ತೊಂದು ರೋಚಕ ಕದನಕ್ಕೆ ರಾಜ್ಯ ಸಾಕ್ಷಿಯಾಗುತ್ತಿದೆ.

ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಈಗಿನಿಂದಲೇ ತಯಾರಿ ನಡೆಸುತ್ತಿದ್ದು, ಲೋಕಸಭೆ ಉಪಚುನಾವಣೆಗಿಂತಲೂ ಪರಿಷತ್ ಚುನಾವಣೆ ರಂಗೇರುವ ಮೂನ್ಸೂಚನೆ ಕಂಡುಬಂದಿದೆ.

ಈ ಹಿಂದೆ ನಡೆದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಗೆದ್ದು ಬೀಗಿದ್ದ ಬಿಜೆಪಿ ಇದೀಗ ಮತ್ತೆ ಎಂಎಎಲ್‌ಸಿ ಚುನಾವಣೆಗೆ ತಯಾರಿ ನಡೆಸುತ್ತಿದೆ. ಇತ್ತ ಲೋಕಸಭಾ ಉಪಚುನಾವಣೆಯಲ್ಲಿ ಕಡಿಮೆ ಅಂತರದಿಂದ ಸೋತಿದ್ದ ಕಾಂಗ್ರೆಸ್ ಈ ಬಾರಿ ಗೆಲ್ಲಲು ನಾನಾ ತಂತ್ರಗಳನ್ನು ರೂಪಿಸುತ್ತಿದೆ. ಡಿಸೆಂಬರ್‌ ವೇಳೆಗೆ ಹಾಲಿ ವಿಧಾನ ಪರಿಷತ್ ಸದಸ್ಯರ ಅವಧಿ ಮುಕ್ತಾಯ ಆಗುತ್ತಿದ್ದು ಕೆಲವೇ ದಿನಗಳಲ್ಲಿ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದೆ.

ಹೀಗಾಗಿ ಈಗಲೇ ಟಿಕೆಟ್ ಆಕಾಂಕ್ಷಿಗಳು ಲಾಬಿ ನಡೆಸುತ್ತಿದ್ದು ಅದ್ರಲ್ಲೂ ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ಪ್ರಮುಖ ನಾಯಕರು ಸ್ಪರ್ಧೆಗಿಳಿದಿದ್ದಾರೆ. ಚಿಕ್ಕೋಡಿ ಹಾಗೂ ಬೆಳಗಾವಿ ಲೋಕಸಭಾ ವ್ಯಾಪ್ತಿಯಲ್ಲಿ ತಲಾ ನಾಲ್ವರು ಈಗಾಗಲೇ ಟಿಕೆಟ್‌ಗಾಗಿ ಅರ್ಜಿ ಸಲ್ಲಿದ್ದಾರೆ. ಮಾಜಿ ಸಂಸದ ಪ್ರಕಾಶ್ ಹುಕ್ಕೇರಿ, ಮಾಜಿ ಎಂಎಲ್‌ಸಿ ವೀರಕುಮಾರ ಪಾಟೀಲ್, ಮಾಜಿ ಶಾಸಕ ಕಾಕಾಸಾಹೇಬ್ ಪಾಟೀಲ್, ಮಗದುಮ್ ಅವರು ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ.

ಪರಿಷತ್ ಚುನಾವಣೆಗೆ ಟಿಕೆಟ್ ಕಸರತ್ತು

ಬೆಳಗಾವಿ ಲೋಕಸಭಾ ವ್ಯಾಪ್ತಿಯಲ್ಲೂ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ಚನ್ನರಾಜ್ ಹಟ್ಟಿಹೋಳಿ ಟಿಕೆಟ್ ಆಕಾಂಕ್ಷಿಯಾಗಿದ್ದು ಈಗಾಗಲೇ 1 ಲಕ್ಷ ರೂಪಾಯಿ ಡೆಪಾಸಿಟ್ ಮಾಡಿ ಅರ್ಜಿ ಕೂಡ ಸಲ್ಲಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೇಳಿ ಕಡೆ ಘಳಿಗೆಯಲ್ಲಿ ಟಿಕೆಟ್ ತಪ್ಪಿತ್ತು. ಆದ್ರೆ ಈ ಬಾರಿ ಟಿಕೆಟ್ ನೀಡಲೇಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಬಳಿ ಲಕ್ಷ್ಮಿ ಹೆಬ್ಬಾಳ್ಕರ್ ಲಾಬಿ ನಡೆಸಿದ್ದಾರಂತೆ.

Chennaraj hottiholi
ಚನ್ನರಾಜ್ ಹೊಟ್ಟಿಹೊಳಿ

ಪಟ್ಟು ಹಿಡಿದಿರುವ ಪ್ರಕಾಶ್ ಹುಕ್ಕೇರಿ

ಮಾಜಿ ಸಂಸದ ಪ್ರಕಾಶ್ ಹುಕ್ಕೇರಿ ಕೂಡ ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಟಿಕೆಟ್ ಬಯಸಿದ್ದು, ಈಗಾಗಲೇ ವರಿಷ್ಠರ ಭೇಟಿಯಾಗಿ ವಿಧಾನ ಪರಿಷತ್ ಟಿಕೆಟ್ ನೀಡಿ ಅಂತಾ ಮನವಿ ಮಾಡಿಕೊಂಡಿದ್ದಾರೆ. ಇನ್ನು, ಮಾಜಿ ಎಂಎಲ್​ಸಿ ವೀರಕುಮಾರ್ ಪಾಟೀಲ್, ಜಿಲ್ಲಾಧ್ಯಕ್ಷ ವಿನಯ್ ನಾವಲಗಟ್ಟಿ, ಕೈ ಮುಖಂಡ ವಿ.ಎಸ್ ಸಾಧುನವರ್ ಟಿಕೆಟ್‌ಗಾಗಿ ಲಾಬಿ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.

Prakash Hukkeri
ಪ್ರಕಾಶ್ ಹುಕ್ಕೇರಿ

ಈ ಕುರಿತು ಪ್ರತಿಕ್ರಿಯೆ ನೀಡಿದ ಪ್ರಕಾಶ್ ಹುಕ್ಕೇರಿ, 'ಈಗಾಗಲೇ ಟಿಕೆಟ್ ನೀಡುವಂತೆ ಹೈಕಮಾಂಡ್ ಹಾಗೂ ಬೆಳಗಾವಿ ಕಾಂಗ್ರೆಸ್ ನಾಯಕರಿಗೆ ಕೇಳಿದ್ದೇನೆ. ಅವಕಾಶ ಕೊಟ್ಟರೆ ಈ ಬಾರಿ ಸ್ಥಳೀಯ ಸಂಸ್ಥೆಯ ಚುನಾವಣೆಗೆ ನಾನು ಸ್ಪರ್ಧಿಸುತ್ತೇನೆ' ಎಂದಿದ್ದಾರೆ.

ಬಿಜೆಪಿಯಲ್ಲೂ ಟಿಕೆಟ್​​​​ ಆಕಾಂಕ್ಷಿಗಳ ದಂಡು

ಕಾಂಗ್ರೆಸ್‌ನಲ್ಲಿ ಮುಂಚೂಣಿಯ ನಾಯಕರು ಟಿಕೆಟ್‌ಗಾಗಿ ಲಾಬಿ ನಡೆಸುತ್ತಿದ್ದರೆ ಬಿಜೆಪಿಯಲ್ಲೂ ಕೂಡ ಹಾಲಿ ಎಂಎಲ್​ಸಿ ಮಹಾಂತೇಶ್ ಕವಟಗಿಮಠ ಮತ್ತೊಮ್ಮೆ ತಮಗೆ ಟಿಕೆಟ್ ಸಿಕ್ಕೇ ಸಿಗುತ್ತೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ ಕ್ಷೇತ್ರದಲ್ಲಿ ಓಡಾಡುವುದರ ಮೂಲಕ ತಮ್ಮ ಪರ ಜನರ ಒಲವಿದೆ ಎನ್ನುವ ಸಂದೇಶ ವರಿಷ್ಠರಿಗೆ ರವಾನಿಸುವ ಕೆಲಸ ಮಾಡುತ್ತಿದ್ದಾರೆ.

ಇದರ ನಡುವೆ ಸಚಿವ ಸ್ಥಾನ ಸಿಗದಿದ್ದಕ್ಕೆ ಅಸಮಾಧಾನಗೊಂಡಿರುವ ರಮೇಶ್ ಜಾರಕಿಹೊಳಿ ಇದೀಗ ಸಹೋದರ ಲಖನ್‌ಗೆ ಟಿಕೆಟ್ ಕೊಡಿಸಲು ಲಾಬಿ ನಡೆಸುತ್ತಿದ್ದಾರೆ ಎಂಬ ಗುಸುಗುಸು ಸುದ್ದಿ ಕೂಡ ಹರಿದಾಡುತ್ತಿದೆ. ಸದ್ಯಕ್ಕೆ ಸಚಿವ ಸ್ಥಾನ ಕೊಡದಿದ್ರೂ ಲಖನ್‌ಗೆ ಟಿಕೆಟ್ ನೀಡಿ ಅಂತಾ ಕೇಳಿದ್ದಾರಂತೆ. ಒಂದು ವೇಳೆ ಬಿಜೆಪಿಯಿಂದ ಟಿಕೆಟ್ ಸಿಗದಿದ್ರೆ ಪಕ್ಷೇತರ ಅಭ್ಯರ್ಥಿಯಾಗಿ ಲಖನ್ ಜಾರಕಿಹೊಳಿ ಕಣಕ್ಕಿಳಿಯುವ ತಯಾರಿಯನ್ನು ನಡೆಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

Lakhan jarkiholi
ಲಖನ್‌ ಜಾರಕಿಹೊಳಿ

ಇನ್ನುಳಿದಂತೆ ಮಾಜಿ ಶಾಸಕ ವಿ.ಆರ್.ಪಾಟೀಲ್, ಮಾಜಿ ಸಂಸದ ಅಮರಸಿಂಹ ಪಾಟೀಲ್ ಸೇರಿದಂತೆ ಐದಕ್ಕೂ ಹೆಚ್ಚು ಟಿಕೆಟ್ ಆಕಾಂಕ್ಷಿಗಳಿದ್ದು ಈಗಾಗಲೇ ಬಿಜೆಪಿ ವರಿಷ್ಠರ ಮುಂದೆ ಟಿಕೆಟ್ ನೀಡುವಂತೆ ಡಿಮ್ಯಾಂಡ್ ಕೂಡ ಮಾಡಿದ್ದಾರಂತೆ.

ಚುನಾವಣೆ ದಿನಾಂಕ ಘೋಷಣೆಗೂ ಮುನ್ನವೇ ಟಿಕೆಟ್ ಆಕಾಂಕ್ಷಿಗಳು ತಮ್ಮ ಪ್ರಭಾವ ಬಳಸಿಕೊಂಡು ಟಿಕೆಟ್ ಗಿಟ್ಟಿಸಿಕೊಳ್ಳಲು ಓಡಾಡುತ್ತಿದ್ದಾರೆ. ಚುನಾವಣೆ ಘೋಷಣೆ ಆದರೆ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಇನ್ನೂ ದೊಡ್ಡದಾದ್ರೂ ಅಚ್ಚರಿಪಡಬೇಕಿಲ್ಲ. ಆದ್ರೆ ಈ ಬಾರಿ ಪ್ರಬಲ ನಾಯಕರೇ ಟಿಕೆಟ್ ಕೇಳುತ್ತಿದ್ದು ಬಿಜೆಪಿ ಹಾಗೂ ಕಾಂಗ್ರೆಸ್ ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಲಿದೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.