ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೇಳಿಕೆ: ಬಿಜೆಪಿ ಕಾನೂನು ತರುತ್ತಿದೆ ಎಂದ ಜಾರಕಿಹೊಳಿ‌

author img

By

Published : Jun 23, 2022, 11:33 AM IST

Satish Jarkiholi reaction over North Karnataka Separate state, Satish Jarkiholi news, North Karnataka Separate state news, Satish Patil murder case, Belagavi news, ಸತೀಶ್ ಜಾರಕಿಹೊಳಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಕುರಿತು ಪ್ರತಿಕ್ರಿಯೆ, ಸತೀಶ್ ಜಾರಕಿಹೊಳಿ ಸುದ್ದಿ, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಸುದ್ದಿ, ಸತೀಶ್ ಪಾಟೀಲ್ ಹತ್ಯೆ ಪ್ರಕರಣ, ಬೆಳಗಾವಿ ಸುದ್ದಿ,

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬಗ್ಗೆ ಸಚಿವ ಉಮೇಶ್ ಕತ್ತಿ ಪುನರುಚ್ಚಾರ ವಿಚಾರ ಹೇಳಿಕೆಯಿಂದ ಸತೀಶ್​ ಜಾರಕಿಹೊಳಿ ಜಾರಿಕೊಂಡಿದ್ದಾರೆ.

ಬೆಳಗಾವಿ: ಪಾರ್ಕಿಂಗ್ ಮತ್ತು ದೇವಸ್ಥಾನದ ಜಾಗೆ ಪ್ರಕರಣದಲ್ಲಿ ಹತ್ಯೆಯಾದ ಸತೀಶ್​ ಪಾಟೀಲ್ ಮನೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಈ ವೇಳೆ ಜಾರಕಿಹೊಳಿ ಬಳಿ ನೋವು ತೋಡಿಕೊಂಡ ಸತೀಶ್​ ಪೋಷಕರು, ನನ್ನ ಮಗ ಅಮಾಯಕನಾಗಿದ್ದ. ಗ್ರಾಮಸ್ಥರ ಒತ್ತಾಯದ ಮೇರೆಗೆ ದೇವಸ್ಥಾನದ ಜಮೀನಿಗಾಗಿ ಹೋರಾಟ ಮಾಡುತ್ತಿದ್ದ. ಇದೇ ವಿಚಾರಕ್ಕೆ ಮೂರು ಬಾರಿ ಮಗನ ಕೊಲೆಗೆ ಯತ್ನಿಸಿದ್ದರೂ ಪೊಲೀಸರು ಸೂಕ್ತ ಕ್ರಮಕೈಗೊಂಡಿಲ್ಲ. ಕೊಲೆ ಮಾಡಿದವರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಕಣ್ಣೀರು ಹಾಕಿದರು. ಬಳಿಕ ಪೊಲೀಸರು ಆರೋಪಿಗಳನ್ನು ಬಿಟ್ಟು ಹೆಸರಿಗೆ ಮಾತ್ರ ಹೊರಗಿನವರನ್ನು ಬಂಧಿಸುತ್ತಿದ್ದಾರೆ. ಈ ಮೂಲಕ ಪ್ರಕರಣವನ್ನು ಮುಚ್ಚಿ ಹಾಕಲು ಪೊಲೀಸರು ಯತ್ನಿಸಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸತೀಶ ಜಾರಕಿಹೊಳಿ‌, ಪೊಲೀಸರ ವೈಫಲ್ಯವೇ ಘಟನೆಗೆ ಕಾರಣ. ಈ ಮುಂಚೆ ಕೂಡ ಸತೀಶ್‌ ಪಾಟೀಲ್‌ ಮೇಲೆ‌ ಮೂರು ಬಾರಿ ದಾಳಿ ನಡೆದಿತ್ತು. ಈ ವೇಳೆ ಪೊಲೀಸರು ಸೂಕ್ತ ಕ್ರಮಗೊಂಡಿದ್ದರೆ ಇಂತಹ ಘಟನೆ ಆಗುತ್ತಿರಲಿಲ್ಲ. ಕಾಕತಿ ಪೊಲೀಸ್‌ ಠಾಣೆಯಲ್ಲಿ ಬಹಳ ವರ್ಷಗಳಿಂದ ಪೊಲೀಸರು ಅಲ್ಲಿಯೇ ಠಿಕಾಣಿ ಹೂಡಿದ್ದಾರೆ. ಹೀಗಾಗಿ ಜನರಿಗೆ ಸರಿಯಾದ ನ್ಯಾಯ ಸಿಗುತ್ತಿಲ್ಲ. ಈ ಕುರಿತು ಪೊಲೀಸ್‌ ಕಮಿಷನರ್‌ ಅವರೊಂದಿಗೆ ಮಾತನಾಡುತ್ತೇನೆ ಎಂದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೇವಲ 12 ಜನರನ್ನು ಬಂಧಿಸಿದ್ದಾರೆ. ಸೂಕ್ತ ತ‌ನಿಖೆ ನಡೆಸಿ ಘಟನೆಗೆ ಕಾರಣರಾದವರನ್ನು ಬಂಧಿಸಬೇಕು. ಗ್ರಾಮದಲ್ಲಿ ಅಮಾಯಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಗೌಂಡವಾಡ ಗ್ರಾಮಸ್ಥರು ಭಯಪಡುವ ಅವಶಕತೆಯೇ ಇಲ್ಲ. ತೊಂದರೆ ಆಗದಂತೆ ನೋಡಿಕೊಳ್ಳಲು ಪೊಲೀಸ್‌ ಕಮಿಷನರ್‌ ಅವರೊಂದಿಗೆ ಮಾತನಾಡುತ್ತೇನೆ. ಸತೀಶ್‌ ಪಾಟೀಲ್‌ ಕುಟುಂಬಸ್ಥರಿಗೆ ನ್ಯಾಯ ಕೊಡಿಸಲಾಗುವುದು ಎಂದು ಭರವಸೆ ನೀಡಿದರು.

ಪೊಲೀಸರ ವಿರುದ್ಧ ಜಾರಕಿಹೊಳಿ ಗರಂ: ಬೆಳಗಾವಿ ತಾಲೂಕಿನ ಗೌಂಡವಾಡದಲ್ಲಿ ಅಮಾಯಕರನ್ನು ಬಂಧಿಸಲಾಗುತ್ತಿದೆ. ಪೊಲೀಸರು ಮತ್ತು ಆರೋಪಿಗಳಿಂದ ನಮಗೆ ಜೀವ ಭಯ ಇದೆ ಎಂದು ಗೌಂಡವಾಡ ಗ್ರಾಮಸ್ಥರು ಸತೀಶ‌ ಜಾರಕಿಹೊಳಿ‌ಗೆ ದೂರು ನೀಡಿದರು. ಈ ವೇಳೆ ಗ್ರಾಮದಿಂದ ನೇರವಾಗಿ ಕಮಿಷನರ್ ಕಚೇರಿಗೆ ತೆರಳಿದ ಸತೀಶ್​ ಜಾರಕಿಹೊಳಿ‌ ಅಮಾಯಕರನ್ನ ಮುಟ್ಟದಂತೆ ಪೊಲೀಸರಿಗೆ ವಾರ್ನಿಂಗ್ ಕೊಟ್ಟಿದ್ದಾರೆ.

ಈ ವೇಳೆ ಬೆಳಗಾವಿ ನಗರ ಪೊಲೀಸ್ ಆಯುಕ್ತ ಎಂ.ಬಿ.ಬೋರಲಿಂಗಯ್ಯ, ಡಿಸಿಪಿ ರವೀಂದ್ರ ಗಡಾದಿ ಅವರೊಂದಿಗೆ ಅರ್ಧ ಗಂಟೆಗೂ ಅಧಿಕ ಕಾಲ ಚರ್ಚೆ ನಡೆಸಿದರು‌. ಅಮಾಯಕರನ್ನು ಯಾವುದೇ ಕಾರಣಕ್ಕೂ ಬಂಧಿಸಬೇಡಿ. ಉಳಿದ ಕೊಲೆ ಆರೋಪಿಗಳನ್ನ ಅರೆಸ್ಟ್ ಮಾಡಿ ಎಂದು ಎಚ್ಚರಿಕೆ ನೀಡಿದ್ದಾರೆ.

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬಗ್ಗೆ ಪ್ರತಿಕ್ರಿಯೆ: ಇದೇ ವೇಳೆ, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಬಗ್ಗೆ ಸಚಿವ ಉಮೇಶ್ ಕತ್ತಿ ಪುನರುಚ್ಚಾರ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮೂರು ಕೋಟಿ ಜನಸಂಖ್ಯೆ ಇದ್ದಲ್ಲಿ ಎರಡು ರಾಜ್ಯ ಮಾಡಲು ಮಸೂದೆ ತರಲು ಬಿಜೆಪಿ ಪ್ಲ್ಯಾನ್ ಇದೆ. ಅದರ ಚಿಂತನೆ‌ ಕೂಡ ನಡೀತಿದೆ. ಒಂದು ವೇಳೆ ಆ ಕಾನೂನು ಜಾರಿಗೆ ಬಂದರೆ ಆಟೋಮೇಟಿಕ್ ಆಗಿ ಎರಡು ರಾಜ್ಯಗಳಾಗುತ್ತೇವೆ. ಹಿಂದೆ ಪ್ರಧಾನಿ ಮೋದಿ ಈ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ ಎಂದರು.

ಚಿಕ್ಕ ರಾಜ್ಯಗಳಾದರೆ ಅಭಿವೃದ್ಧಿ ಆಗುತ್ತಾ ಎಂದು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಚಿಕ್ಕ ರಾಜ್ಯಗಳಾದರೆ ಅಭಿವೃದ್ಧಿ ದೃಷ್ಟಿಯಿಂದ ಒಳ್ಳೆಯದಾಗುತ್ತದೆ. ಇಲ್ಲಿ ಪ್ರತ್ಯೇಕ ಅನ್ನೋ ಪ್ರಶ್ನೆಯೇ ಬರೊದಿಲ್ಲ. ಬಿಜೆಪಿಯವರು ಕಾನೂನು ತರುತ್ತಿದ್ದಾರೆ. ಪ್ರತ್ಯೇಕ ರಾಜ್ಯ ಎನ್ನುವ ಪ್ರಶ್ನೆ ಬೇರೆ ಹೋರಾಟ ಮಾಡಿ ಪಡೆಯೋದು ಬೇರೆಬೇರೆ.

ತೆಲಂಗಾಣ ಹೇಗೆ ಹೋರಾಟ ಮಾಡಿ ಪಡೆದ್ರು, ಹಾಗೇ ಇದು ಹೋರಾಟ ಅಲ್ಲ. ಕಾನೂನನ್ನೇ ತರುತ್ತಿದ್ದಾರೆ. ಪ್ರತ್ಯೇಕ ರಾಜ್ಯ ಮಾಡಬೇಕೆಂಬುದು ಬಿಜೆಪಿ ಅಜೆಂಡಾದಲ್ಲಿದೆ. ಆ ಕಾನೂನು ಬಂದಾಗ ಚರ್ಚೆ ಮಾಡೋಣ ಎನ್ನುವ ಮೂಲಕ ಉಮೇಶ ಕತ್ತಿ ಹೇಳಿಕೆಗೆ ಜಾರಕಿಹೊಳಿ ಜಾಣ್ಮೆಯ ಉತ್ತರ ನೀಡಿ ಜಾರಿಕೊಂಡಿದ್ದಾರೆ.

ಇದನ್ನು ಓದಿ:ಜೆಡಿಎಸ್​ನಿಂದ ಉಚ್ಚಾಟನೆ ಮಾಡಿರೋದು ನನಗೆ ಸಂತಸ ತಂದಿದೆ: ಗುಬ್ಬಿ ಶಾಸಕ ಶ್ರೀನಿವಾಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.