'6 ಸಾವಿರ ಕೊಟ್ರೆ ನಮಗೆ ವೋಟ್ ಹಾಕಿ'.. ಜಾರಕಿಹೊಳಿ ಹೇಳಿಕೆಗೆ 'ಕಾಲಾಯ ತಸ್ಮೈ ನಮಃ' ಎಂದ ಲಕ್ಷ್ಮಿ ಹೆಬ್ಬಾಳ್ಕರ್
Published: Jan 22, 2023, 12:55 PM


'6 ಸಾವಿರ ಕೊಟ್ರೆ ನಮಗೆ ವೋಟ್ ಹಾಕಿ'.. ಜಾರಕಿಹೊಳಿ ಹೇಳಿಕೆಗೆ 'ಕಾಲಾಯ ತಸ್ಮೈ ನಮಃ' ಎಂದ ಲಕ್ಷ್ಮಿ ಹೆಬ್ಬಾಳ್ಕರ್
Published: Jan 22, 2023, 12:55 PM
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಇತ್ತೀಚಿನ ಹೇಳಿಕೆಯ ವಿರುದ್ಧ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಾಗ್ದಾಳಿ ನಡೆಸಿದರು.
ಬೆಳಗಾವಿ: ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕ್ಷೇತ್ರದ ಸುಳೇಭಾವಿಯಲ್ಲಿ ಇತ್ತೀಚೆಗೆ ನಡೆದ ಬಿಜೆಪಿ ಸಮಾವೇಶದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಪರೋಕ್ಷವಾಗಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅವರು ಕೊಡುವ ವಸ್ತುಗಳೆಲ್ಲ ಸೇರಿ ಮೂರು ಸಾವಿರ ರೂಪಾಯಿ ಆಗಬಹುದು. ಆದರೆ ನಾವು ಆರು ಸಾವಿರ ಕೊಟ್ಟರೆ ವೋಟ್ ಹಾಕಿ ಎಂದು ಜಾರಕಿಹೊಳಿ ಹೇಳಿದ್ದರು. ಜಾರಕಿಹೊಳಿಯವರ ಈ ಹೇಳಿಕೆಗೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ತಿರುಗೇಟು ನೀಡಿದ್ದಾರೆ.
ಬೆಳಗಾವಿ ನಗರದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್, "ಮತದಾರರಿಗೆ ಒಂದು ಮತಕ್ಕೆ ಆರು ಸಾವಿರ ರೂಪಾಯಿ ಹಂಚಿಕೆ ಮಾಡುತ್ತೇವೆ ಎಂದು ನನ್ನ ಕ್ಷೇತ್ರದಲ್ಲಿ ಬಿಜೆಪಿ ಶಾಸಕರು ಹೇಳುತ್ತಾರೆ. ಅದರಷ್ಟು ಮೂರ್ಖತನದ ಕೆಲಸ ಮತ್ತೊಂದಿಲ್ಲ. ರಾಜ್ಯದಲ್ಲಿ ಚುನಾವಣೆ ಅಧಿಕಾರಿಗಳು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಇದೆಲ್ಲವನ್ನೂ ಗಮನಿಸುತ್ತಿದ್ದಲ್ಲಿ ಈ ವಿಚಾರ ಅವರಿಗೆ ಬಿಟ್ಟಿದ್ದು" ಎಂದು ಹೇಳಿದರು.
"ಕೆಲವರು ನನ್ನ ಕ್ಷೇತ್ರದಲ್ಲಿ ಬಂದು ಹಣ ಹಂಚುತ್ತೇನೆಂದು ಬಹಿರಂಗವಾಗಿ ಆಮಿಷ ಒಡ್ಡುತ್ತಿದ್ದಾರೆ. ಆದರೆ ನನ್ನ ಕ್ಷೇತ್ರದ ಮತದಾರರು ಸ್ವಾಭಿಮಾನಿಗಳು. ನನ್ನನ್ನು ಮನೆಮಗಳೆಂದು ಒಪ್ಪಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಹಾಗಾಗಿ ಇಂಥ ಯಾವುದೇ ಅಮಿಷಗಳಿಗೆ ಅವರು ಗಮನಕೊಡುವುದಿಲ್ಲ. 6 ಸಾವಿರ ರೂಪಾಯಿ ಕೊಟ್ಟು ಮತ ಪಡೆಯುತ್ತೇವೆ ಎಂದರೆ ಅದು ಅವರ ಮೂರ್ಖತನದ ಪರಮಾವಧಿ" ಎಂದು ಪರೋಕ್ಷವಾಗಿ ರಮೇಶ್ ಜಾರಕಿಹೊಳಿ ವಿರುದ್ಧ ಟೀಕಾ ಸಮರ ನಡೆಸಿದರು.
ಕೆಟ್ಟ ಹುಳವನ್ನು ಈ ಬಾರಿ ತೆಗೆಯಬೇಕೆಂಬ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿ, "ನಾನು ಇಡೀ ಬಿಜೆಪಿ ಪಕ್ಷವನ್ನು ಹೇಳುವುದಿಲ್ಲ. ಈ ಹಿಂದೆ ಜಾರಕಿಹೊಳಿ ಇದೇ ರೀತಿ ಹಗುರವಾಗಿ ಮಾತನಾಡಿದ್ದರು. ಅವರು ಒಬ್ಬ ಹೆಣ್ಣು ಮಗಳಿಗೆ ಈ ರೀತಿಯಾಗಿ ಮಾತಾಡಿರುವುದು ಅವರ ಸಂಸ್ಕೃತಿಯನ್ನು ತೋರಿಸುತ್ತಿದೆ. ಅಲ್ಲದೇ ಗ್ರಾಮೀಣ ಕ್ಷೇತ್ರದಲ್ಲಿ ಬಾರ್ಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಹೇಳಿಕೆಯನ್ನು ನೀಡಿದ್ದಾರೆ. ಹಾಗಿದ್ದಲ್ಲಿ ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಅವರದೇ ಸರ್ಕಾರವಿದೆ. ಅಧಿಕಾರಿಗಳು ಅವರ ಮಾತುಗಳನ್ನೇ ಕೇಳುತ್ತಾರೆ. ವರದಿ ತೆಗೆದುಕೊಂಡು ಹೋಗಿ ಮಾತನಾಡಲಿ" ಎಂದು ತಿರುಗೇಟು ಕೊಟ್ಟರು.
ಇದನ್ನೂ ಓದಿ: ‘ಡಿ’ ಕಾಂಗ್ರೆಸ್ ಸೋಲಿಸಲು ‘ಎಸ್‘ ಕಾಂಗ್ರೆಸ್ 500 ಕೋಟಿ ರೂ ಡೀಲ್ ಮಾಡಿದೆ: ಆರ್.ಆಶೋಕ್
"ಕ್ಷೇತ್ರ ಅಭಿವೃದ್ಧಿಯಾಗಿದ್ದರೆ ಕಾಂಗ್ರೆಸ್ ಶಾಸಕಿ ಯಾಕೆ ಗಿಫ್ಟ್ ನೀಡುತ್ತಿದ್ದರು? ಎಂದು ಜಾರಕಿಹೊಳಿ ಹೇಳಿದ್ದಾರೆ. ನಾನು ಯಾರಿಗೂ ಗಿಫ್ಟ್ ಕೊಟ್ಟಿಲ್ಲ. ಗ್ರಾಮೀಣ ಕ್ಷೇತ್ರದಲ್ಲಿ ರಂಗೋಲಿ ಸ್ಪರ್ಧೆ ಮತ್ತು ಹಳದಿ ಕುಂಕುಮ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಹಿಳೆಯರಿಗೆ ಉಡುಗೊರೆಯಾಗಿ ಗಿಫ್ಟ್ ಕೊಡಲಾಗಿದೆ. ಇವರು ಹೇಳುವಂತಿದ್ದರೆ ನಾನು ಪುರುಷರಿಗೂ ಕೊಡಬೇಕಾಗಿತ್ತು. ಅದು ಕಾರ್ಯಕ್ರಮಕ್ಕೆ ನೀಡಿದ ಬಹುಮಾನವಷ್ಟೇ. ಮಹಿಳೆಯರು ಮಾತ್ರ ಮತ ಹಾಕುವುದಲ್ಲ" ಎಂದರು.
"ನನ್ನ ಕ್ಷೇತ್ರದಲ್ಲಿ ಆದಂತಹ ಅಭಿವೃದ್ಧಿ ಕಾರ್ಯಗಳು ಯಾಕೆ ಇವರಿಗೆ ಕಾಣುವುದಿಲ್ಲ?, ಕೋವಿಡ್ ಟೈಮಲ್ಲಿ ಯಾರಿಗೂ ತೊಂದರೆ ಆಗದಂತೆ ಕೆಲಸ ನಿರ್ವಹಿಸಿದ್ದೇನೆ. ಆಕ್ಸಿಜನ್, ಆಹಾರ ಪದಾರ್ಥ, ಚಿಕಿತ್ಸೆಗೆ ಬೇಕಾದ ಔಷಧೋಪಚಾರ ಮಾಡಿದ್ದೇನೆ. ಪ್ರವಾಹ ಬಂದಾಗ ಎಲ್ಲಾ ರೀತಿಯ ಸಹಾಯ ಮಾಡಲಾಗಿದೆ. ಕ್ಷೇತ್ರದಲ್ಲಿ ರಸ್ತೆ, ದೇವಸ್ಥಾನ, ಸಮುದಾಯ ಭವನ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಜನರು ನನ್ನ ಅಭಿವೃದ್ಧಿಗೆ ಮೆಚ್ಚಿ ಮನೆಮಗಳು ಎಂದು ಗುರುತಿಸಿದ್ದಾರೆ. ಈ ಸಮಯದಲ್ಲಿ ನನ್ನ ಬಗ್ಗೆ ಫ್ಲೆಕ್ಸ್ ಹಾಕಿ ಮಾತನಾಡುವವರು ಆ ಸಮಯದಲ್ಲಿ ಎಲ್ಲಿ ಹೋಗಿದ್ದರು?" ಎಂದು ಹೆಬ್ಬಾಳ್ಕರ್ ಪ್ರಶ್ನಿಸಿದರು.
ಕಾಂಗ್ರೆಸ್ನವರು 10 ಕೋಟಿ ಖರ್ಚು ಮಾಡಿದರೆ ನಾವು ಅದಕ್ಕಿಂತಲೂ ಹೆಚ್ಚುವರಿ 10 ಕೋಟಿಯನ್ನು ಖರ್ಚು ಮಾಡುತ್ತೇವೆ ಎಂಬ ಜಾರಕಿಹೊಳಿ ಹೇಳಿಕೆಗೆ ಉತ್ತರಿಸಲು ನಿರಾಕರಿಸಿದ ಅವರು, "ಕಾಲಾಯ ತಸ್ಮೈ ನಮಃ" ಎಂದಷ್ಟೇ ಪ್ರತಿಕ್ರಿಯಿಸಿದರು.
ಜಾರಕಿಹೊಳಿ ಹೇಳಿದ್ದೇನು?: ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕ್ಷೇತ್ರದ ಸುಳೇಭಾವಿಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ರಮೇಶ್ ಜಾರಕಿಹೊಳಿ ಮಾತನಾಡಿ, 'ಪಕ್ಕದಲ್ಲೇ ಮೊದಗಾ ಗ್ರಾಮದಲ್ಲಿ ಒಂದು ಪೆಂಡಾಲ್ ಹಾಕಿ ಕುಕ್ಕರ್ ಕೊಡುತ್ತಿದ್ದಾರೆ. ಮಿಕ್ಸರ್ ಒಂದು ಆರು ಏಳೂ ನೂರು ರೂಪಾಯಿ ಇರಬಹುದು. ಇನ್ನೊಂದು ಐಟಂ ಏನಾದರೂ ಕೊಡಬಹುದು, ಅವೆಲ್ಲ ಸೇರಿ ಮೂರು ಸಾವಿರ ರೂಪಾಯಿ ಆಗಬಹುದು. ಆದರೆ ನಾವು ಆರು ಸಾವಿರ ಕೊಟ್ಟರೆ ವೋಟ್ ಹಾಕಿ ಎಂದು ಹೇಳಿದ್ದರು. ಅಲ್ಲದೆ, ನಾನು ಆರು ಚುನಾವಣೆ ಗೆದ್ದಿದ್ದೇನೆ, ಆದರೆ ಯಾವಾಗಲೂ ಹಣ ಕೊಟ್ಟಿಲ್ಲ. ಆದರೆ ನನಗೇ ದುಡ್ಡು ಕೊಟ್ಟು ನಮ್ಮ ಕ್ಷೇತ್ರದ ಜನ ಗೆಲ್ಲಿಸಿದ್ದಾರೆ' ಎಂದು ಹೇಳಿದ್ದರು.
ಇದನ್ನೂ ಓದಿ: 'ಹಣ ಹಂಚಿ ರಮೇಶ್ ಜಾರಕಿಹೊಳಿ ಚುನಾವಣೆ ಗೆದ್ದಿದ್ದಾರೆ': ದಾಖಲೆ ಬಿಡುಗಡೆ ಮಾಡಿದ ಅಶೋಕ್ ಪೂಜಾರಿ
