ಮಹಾರಾಷ್ಟ್ರ ಸಚಿವರಿಗೆ ಬೆಳಗಾವಿ ಗಡಿ ಪ್ರವೇಶಕ್ಕೆ ಅವಕಾಶ ಇಲ್ಲ: ಬೆಳಗಾವಿ ಡಿಸಿ ನಿತೇಶ್​ ​

author img

By

Published : Dec 5, 2022, 3:15 PM IST

Updated : Dec 5, 2022, 4:47 PM IST

maharashtra-ministers-are-not-allowed-to-enter-the-belagavi-says-belagavi-dc

ನಾಳೆ ಬೆಳಗಾವಿಗೆ ಮಹಾರಾಷ್ಟ್ರ ಸಚಿವರು ಆಗಮಿಸುತ್ತಿರುವ ಹಿನ್ನೆಲೆ, ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಈ ಸಂಬಂಧ ಪ್ರತಿಕ್ರಿಯಿಸಿರುವ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮಹಾ ಸಚಿವರ ಭೇಟಿಗೆ ಅವಕಾಶ ಇಲ್ಲ ಎಂದು ಹೇಳಿದ್ದಾರೆ.

ಬೆಳಗಾವಿ: ಮಹಾರಾಷ್ಟ್ರದ ಸಚಿವರಿಗೆ, ಸಂಸದರಿಗೆ ಬೆಳಗಾವಿ ಗಡಿ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ ಎಂದು ಬೆಳಗಾವಿ ಡಿಸಿ ನಿತೇಶ್ ಪಾಟೀಲ ಮಾಹಿತಿ ನೀಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದ ಇಬ್ಬರು ಸಚಿವರು ಮತ್ತು ಓರ್ವ ಸಂಸದರ ಪ್ರವಾಸ ಪಟ್ಟಿ ಬಂದಿದೆ. ಈ ಮುಂಚೆ ಡಿ.3ಕ್ಕೆ ಬರುವುದಾಗಿ ಹೇಳಿದ್ದರು. ಇದೀಗ ಡಿ.6ಕ್ಕೆ ಬರುವುದಾಗಿ ಹೇಳಿದ್ದಾರೆ.

ಇದರಿಂದ ಜಿಲ್ಲೆಯಲ್ಲಿ ಪರಿಸ್ಥಿತಿ ತುಂಬಾ ಬಿಗಡಾಯಿಸಿದೆ. ಅವರು ಜಿಲ್ಲೆಗೆ ಬಂದರೆ ಕಾನೂನು ಸುವ್ಯವಸ್ಥೆ ಹಾಳಾಗುತ್ತದೆ. ಅವರ ಸುರಕ್ಷತೆಗೂ ಸಮಸ್ಯೆ ಇದೆ. ಅವರಾಗೇ ಪ್ರವಾಸ ರದ್ದು ಪಡಿಸುವ ನಿರೀಕ್ಷೆ ಇದೆ. ಇಲ್ಲವಾದರೆ ನಾವೇ ಕ್ರಮ ಜರುಗಿಸಬೇಕಾಗುತ್ತದೆ ಎಂದು ಹೇಳಿದರು.

ಮಹಾರಾಷ್ಟ್ರ ಸಚಿವರಿಗೆ ಬೆಳಗಾವಿ ಗಡಿ ಪ್ರವೇಶಕ್ಕೆ ಅವಕಾಶ ಇಲ್ಲ: ಬೆಳಗಾವಿ ಡಿಸಿ ನಿತೇಶ್​ ​

ಸಚಿವರು ಮತ್ತು ಸಂಸದರ ಭೇಟಿ ಸಂಬಂಧ ಈ ಹಿಂದೆ ಹೇಗೆ ಆದೇಶ ಹೊರಡಿಸಿ ತಡೆಯಲಾಗಿತ್ತೋ ಅದೇ ರೀತಿ ಬೆಳಗಾವಿ ನಿಷೇಧ ಆದೇಶ ಹೊರಡಿಸಲಾಗುವುದು. ಐಪಿಸಿ ಸೆಕ್ಷನ್ 143 ಪ್ರಕಾರ ಪ್ರತಿಬಂಧಕ ಕಾಯ್ದೆ ಹೊರಡಿಸುತ್ತೇವೆ. ಮಹಾ ಸಚಿವರು ಬೆಳಗಾವಿಗೆ ಬಂದರೆ ಕಾನೂನು ಸುವ್ಯವಸ್ಥೆ ಹಾಳಾಗುತ್ತದೆ ಎಂದು ಮಹಾರಾಷ್ಟ್ರ ಸರ್ಕಾರಕ್ಕೆ ಕರ್ನಾಟಕದ ಸಿಎಸ್ ಸಂದೇಶ ಕಳುಹಿಸಿದ್ದಾರೆ. ಬೆಳಗಾವಿಯ ಎಲ್ಲ ಗಡಿಭಾಗದಲ್ಲಿಯೂ ಸೂಕ್ತ ಭದ್ರತೆ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಮಹಾ ಸಚಿವರ ಭೇಟಿ ವಿರುದ್ಧ ಕನ್ನಡಪರ ಸಂಘಟನೆಗಳ ಪ್ರತಿಭಟನೆ : ನಾಳೆ ಮಹಾರಾಷ್ಟ್ರ ಸಚಿವರಾದ ಚಂದ್ರಕಾಂತ ಪಾಟೀಲ್ ಹಾಗೂ ಶಂಭುರಾಜ್ ದೇಸಾಯಿ ಅವರು ಬೆಳಗಾವಿ ನಗರಕ್ಕೆ ಆಗಮಿಸುತ್ತಿದ್ದು, ಬೆಳಗಾವಿಗೆ ಪ್ರವೇಶ ನೀಡದಂತೆ ಆಗ್ರಹಿಸಿ ಕನ್ನಡಪರ ಹೋರಾಟಗಾರರು ಚನ್ನಮ್ಮ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಕರ್ನಾಟಕ ಏಕೀಕರಣ ಸಮಿತಿ ರಾಜ್ಯಾಧ್ಯಕ್ಷ ನರಸಿಂಹ ಮೂರ್ತಿ ನೇತೃತ್ವದಲ್ಲಿ ಚೆನ್ನಮ್ಮ ವೃತ್ತದಲ್ಲಿ ಉರುಳು ಸೇವೆ ನಡೆಸಿ ಪ್ರತಿಭಟನೆ ನಡೆಸಲಾಯಿತು. ಎಂಇಎಸ್ ಸಂಘಟನೆಯನ್ನು ಕರ್ನಾಟಕದಲ್ಲಿ ನಿಷೇಧ ಮಾಡಬೇಕು. ನಾಳೆ ಬೆಳಗಾವಿಗೆ ಬರುತ್ತಿರುವ ಮಹಾರಾಷ್ಟ್ರ ಸಚಿವರನ್ನು ಕರ್ನಾಟಕ ನೆಲಕ್ಕೆ ಪ್ರವೇಶ ನೀಡದಂತೆ ಆಗ್ರಹಿಸಿದರು.

ಉಭಯ ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಅವರ ಜೊತೆ ಮಾತನಾಡಿ, ಮಹಾ ಸಚಿವರನ್ನು ಬಾರದಂತೆ ತಡೆಯಲು ಆಗ್ರಹಿಸಿದರು. ಒಂದು ವೇಳೆ, ಮಹಾರಾಷ್ಟ್ರ ಸಚಿವರು ಕರುನಾಡಿಗೆ ಪ್ರವೇಶ ಮಾಡಿದರೆ ಆಗುವ ಅನಾಹುತಕ್ಕೆ ಬಸವರಾಜ್ ಬೊಮ್ಮಾಯಿ ಅವರು ಕಾರಣವಾಗುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ : ಮಹಾರಾಷ್ಟ್ರದ ಸಚಿವರು ಬೆಳಗಾವಿಗೆ ಬರೋದು ಬೇಡ, ಬಂದ್ರೆ ಕಾನೂನು ಕ್ರಮ: ಸಿಎಂ‌ ಬೊಮ್ಮಾಯಿ

Last Updated :Dec 5, 2022, 4:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.