ಬೆಳಗಾವಿಯಲ್ಲಿ ನಕಲಿ ಪತ್ರಕರ್ತರ ಹಾವಳಿ; ಅಧಿಕೃತ ಪತ್ರಕರ್ತರಿಗೆ ಗುರುತಿನ ಚೀಟಿ

author img

By

Published : Aug 4, 2022, 10:37 PM IST

KN_BGM_01_04_DC_Meeting_KA10029

ಬೆಳಗಾವಿಯಲ್ಲಿ ನಕಲಿ ಪತ್ರಕರ್ತರ ಹಾವಳಿ ಹೆಚ್ಚಾಗಿದೆ. ಈ ಕುರಿತು ಪತ್ರಕರ್ತರೊಂದಿಗೆ ಜಿಲ್ಲಾಧಿಕಾರಿಗಳು ಸಭೆ ನಡೆಸಿ ಅಧಿಕೃತ ಪತ್ರಕರ್ತರಿಗೆ ಗುರುತಿನ ಚೀಟಿ ನೀಡುವುದಾಗಿ ತಿಳಿಸಿದ್ದಾರೆ.

ಬೆಳಗಾವಿ: ಜಿಲ್ಲೆಯ ಹಲವು ಕಡೆಗಳಲ್ಲಿ ಇತ್ತೀಚಿಗೆ ಯೂಟ್ಯೂಬ್ ಚಾನೆಲ್ ಮತ್ತು ಅನಧಿಕೃತ ಪತ್ರಕರ್ತರ ಹಾವಳಿ ಹೆಚ್ಚಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿವೆ. ವಾರ್ತಾ ಇಲಾಖೆಯ ಪಟ್ಟಿಯಲ್ಲಿರುವ ಮಾಧ್ಯಮ ಸಂಸ್ಥೆಗಳ ವತಿಯಿಂದ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರಿಗೆ ಮಾತ್ರ ಜಿಲ್ಲಾಡಳಿತದ ವತಿಯಿಂದ ಗುರುತಿನಚೀಟಿಗಳನ್ನು ನೀಡಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

ಅನಧಿಕೃತ ಪತ್ರಕರ್ತರ ಹಾವಳಿ ಹಾಗೂ "ಪ್ರೆಸ್" ಹೆಸರು ದುರ್ಬಳಕೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮಾಧ್ಯಮ ಪ್ರತಿನಿಧಿಗಳ ಜತೆ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಾಧ್ಯಮ ಸಂಸ್ಥೆಗಳು ನೀಡುವ ಶಿಫಾರಸು ಪತ್ರವನ್ನು ಆಧರಿಸಿ ಆ ಸಂಸ್ಥೆಯ ವರದಿಗಾರರಿಗೆ ಜಿಲ್ಲಾಡಳಿತದಿಂದ ಗುರುತಿನ ಚೀಟಿಯನ್ನು ನೀಡಲಾಗುವುದು ಎಂದರು.

ಯೂಟ್ಯೂಬ್ ಚಾನೆಲ್‌ಗಳಿಗೆ ಅವಕಾಶವಿಲ್ಲ: ಯೂಟ್ಯೂಬ್ ಚಾನೆಲ್​ಗಳಿಗೆ ಹಾಗೂ ಸಾಮಾಜಿಕ ಜಾಲತಾಣಗಳಿಗೆ ಯಾವುದೇ ಕಾರಣಕ್ಕೂ ಗುರುತಿನ ಚೀಟಿ ನೀಡುವುದಿಲ್ಲ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸ್ಪಷ್ಟಪಡಿಸಿದರು. ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಯಾವುದೇ ಸರಕಾರಿ ಕಾರ್ಯಕ್ರಮಗಳಿಗೆ ಅಧಿಕೃತ ಮಾಧ್ಯಮ ಸಂಸ್ಥೆಗಳ ವರದಿಗಾರರಿಗೆ ಮಾತ್ರವೇ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.

ಗುರುತಿನಚೀಟಿ ಯಾರಿಗೆ?: ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ ಮಾತನಾಡಿ, "ಸುದ್ದಿ ಸಂಗ್ರಹಕ್ಕಾಗಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಮಾತ್ರ ಜಿಲ್ಲಾಡಳಿತದಿಂದ ಗುರುತಿನ ಚೀಟಿ ನೀಡಲಾಗುವುದು. ಆಯಾ ಸಂಸ್ಥೆಯ ಒಳಗಡೆ ಕೆಲಸ ಮಾಡುವವರಿಗೆ ಇದರ ಅಗತ್ಯವಿರುವುದಿಲ್ಲ" ಎಂದು ತಿಳಿಸಿದರು.

ಇದನ್ನೂ ಓದಿ: ರಾಹುಲ್, ಸೋನಿಯಾ ಬಳಿಕ ಖರ್ಗೆಗೆ ಇಡಿ ಡ್ರಿಲ್: 4.30 ಗಂಟೆ ವಿಚಾರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.