ಕೆಲಸವಿಲ್ಲದೆ ವಿನಾಕಾರಣ ಕೋರ್ಟ್​ಗೆ ಬಂದರೆ ಜೈಲಿಗೆ ಕಳುಹಿಸಲಾಗುವುದು : ಹೈಕೋರ್ಟ್ ಎಚ್ಚರಿಕೆ

author img

By

Published : Jan 21, 2023, 10:40 PM IST

will-sent-to-jail-those-coming-to-court-unnecessarily-high-court

ವಿನಾಕಾರಣ ಮತ್ತು ಸಂಬಂಧವಿಲ್ಲದಿದ್ದರೂ ಕೋರ್ಟ್​ಗಳಿಗೆ ಪ್ರವೇಶಿಸುವವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗುವುದು ಹೈಕೋರ್ಟ್ ಎಚ್ಚರಿಕೆ ನೀಡಿದೆ.

ಬೆಂಗಳೂರು : ಯಾವುದೇ ಕೆಲಸ ಇಲ್ಲದಿದ್ದರೂ ವಿನಾಕಾರಣ ಮತ್ತು ಸಂಬಂಧವಿಲ್ಲದ ವ್ಯಕ್ತಿಗಳು ಹೈಕೋರ್ಟ್‌ನಲ್ಲಿನ ಕೋರ್ಟ್​​ಗಳಿಗೆ ಪ್ರವೇಶ ಮಾಡಿದಲ್ಲಿ ಅಂತಹವರನ್ನು ಬಂಧಿಸಿ ನೇರವಾಗಿ ಜೈಲಿಗೆ ಕಳುಹಿಸಲಾಗುವುದು ಹೈಕೋರ್ಟ್ ನ್ಯಾಯಮೂರ್ತಿಗಳು ಎಚ್ಚರಿಕೆ ನೀಡಿದ್ದಾರೆ. ವಕೀಲರು, ಕಾನೂನು ವಿದ್ಯಾರ್ಥಿಗಳು, ಕೇಸ್​​ಗೆ ಸಂಬಂಧಿಸಿದ ಕಕ್ಷಿದಾರರು, ಅಧಿಕಾರಿಗಳು ಹಾಗೂ ಸಕಾರಣ ಹೊಂದಿದ ವ್ಯಕ್ತಿಗಳಿಗೆ ಮಾತ್ರವೇ ನ್ಯಾಯಾಲಯ ಸಭಾಂಗಣ ಪ್ರವೇಶಕ್ಕೆ ಅವಕಾಶವಿರಲಿದೆ. ಆದರೆ, ಯಾವುದೇ ಕೆಲಸವಿಲ್ಲದಿದ್ದರೂ, ನ್ಯಾಯಾಲಯಕ್ಕೆ ಬಂದು ಹಾಜರಾದವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗುವುದಾಗಿ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠವು ಪ್ರಕರಣವೊಂದರ ವಿಚಾರಣೆ ವೇಳೆ ಎಚ್ಚರಿಕೆ ನೀಡಿದೆ.

ಸಚಿವ ಮುನಿರತ್ನ ವಿರುದ್ಧ ವಿಧಾನಪರಿಷತ್ ಸದಸ್ಯ ತುಳಸಿ ಮುನಿರಾಜು ಗೌಡ ದಾಖಲಿಸಿರುವ ಚುನಾವಣಾ ಅಕ್ರಮ ಆರೋಪದ ತಕರಾರು ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ಮತ್ತು ಪಾಟಿ ಸವಾಲು ನಡೆಸುತ್ತಿತ್ತು. ಈ ಸಂರ್ಭದಲ್ಲಿ ಹಿರಿಯ ವಕೀಲ ಜಿ.ಕೃಷ್ಣಮೂರ್ತಿ ಅವರು ಮುನಿರತ್ನ ಪರ ಹಾಜರಾಗಿದ್ದು, ತುಳಸಿ ಮುನಿರಾಜು ಗೌಡ ಅವರನ್ನು ಪಾಟಿ ಸವಾಲಿಗೆ ಒಳಪಡಿಸುತ್ತಿದ್ದರು. ಸುದೀರ್ಘ ಕಲಾಪದ ಅವಧಿಯುದ್ದಕ್ಕೂ ಹಾಜರಿದ್ದ ಕೆಲವು ವ್ಯಕ್ತಿಗಳನ್ನು ಗಮನಿಸಿದ ನ್ಯಾಯಪೀಠವು, ಕಲಾಪ ಪೂರ್ಣಗೊಳ್ಳುತ್ತಿದ್ದಂತೆಯೇ ಕಳವಳ ವ್ಯಕ್ತಪಡಿಸಿತು.

ಹೈಕೋರ್ಟ್ ಎಂಬುದು ಸಾಮಾನ್ಯವಲ್ಲ. ಈ ಕೋರ್ಟ್ ಹಾಲ್‌ನಲ್ಲಿ ಸಂಬಂಧವಿಲ್ಲದ ಅನೇಕ ಮುಖಗಳು ಕಾಣುತ್ತಿವೆ. ಇದು ವೈ ಕೆಟಗರಿಯ ಭದ್ರತೆ ಹೊಂದಿರುವ ನ್ಯಾಯಾಲಯ ಸಭಾಂಗಣ. ಕಲಾಪದಲ್ಲಿ ಸಂಬಂಧವಿಲ್ಲದ ವ್ಯಕ್ತಿಗಳು ಯಾವ ಕಾರಣಕ್ಕಾಗಿ ಪ್ರವೇಶ ಇಲ್ಲಿಗೆ ಬಂದಿದ್ದಾರೆ ಎಂದು ಪ್ರಕರಣದ ಪರ ವಕೀಲರನ್ನು ಪ್ರಶ್ನಿಸಿತು. ಅಂತೆಯೇ, ಇವತ್ತು ಹಾಜರಿದ್ದ ಸಂಬಂಧವಿಲ್ಲದ ವ್ಯಕ್ತಿಗಳ ಇತ್ಯೋಪರಿಗಳನ್ನು ಸಂಗ್ರಹಿಸಿ ಎಂದು ಕೋರ್ಟ್ ಅಧಿಕಾರಿಗೆ ಸೂಚನೆ ನೀಡಿತು.

ಇದನ್ನೂ ಓದಿ: ಮಗುವನ್ನು ಸುಪರ್ದಿಗೆ ನೀಡದ ತಂದೆಗೆ 25 ಸಾವಿರ ದಂಡ; ತಾಯಿ ಮಡಿಲಿಗೆ ಮಗು ಸೇರಿಸಿದ ಹೈಕೋರ್ಟ್​

ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಜನ ಸಾಮಾನ್ಯರು ಹೈಕೋರ್ಟ್ ಪ್ರವೇಶಿಸುವುದಕ್ಕೆ ಹೇರಲಾಗಿದ್ದ ನಿರ್ಬಂಧಗಳನ್ನು ಸದ್ಯ ಕೊಂಚ ಪ್ರಮಾಣದಲ್ಲಿ ಮಾತ್ರವೇ ಸಡಿಲಿಕೆ ಮಾಡಲಾಗಿದೆ. ಆದರೂ, ಎಲ್ಲ ಪ್ರವೇಶ ದ್ವಾರಗಳಲ್ಲಿ ರಾಜ್ಯ ಪೊಲೀಸ್, ಕೈಗಾರಿಕಾ ಭದ್ರತಾ ಪಡೆ ಶಸ್ತ್ರಾಸ್ತ್ರಗಳನ್ನು ಹಿಡಿದು ನಿಂತಿದ್ದಾರೆ. ಆದರೂ, ಪ್ರಕರಣಕ್ಕೆ ಸಂಬಂಧವಿಲ್ಲದ ವ್ಯಕ್ತಿಗಳು ನ್ಯಾಯಾಲಯಕ್ಕೆ ಹಾಜರಾಗುತ್ತಿದ್ದರು.

ಹಿಜಾಬ್ ಪ್ರಕರಣದ ತೀರ್ಪು ನೀಡಿದ ತ್ರಿಸದಸ್ಯ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿಗಳಾದ ಕೃಷ್ಣ ಎಸ್. ದೀಕ್ಷಿತ್ ಹಾಗೂ ಖಾಜಿ ಜೈಬುನ್ನೀಸಾ ಮೊಹಿದ್ದೀನ್ ಅವರುಗಳಿಗೆ 'ವೈ' ಕೆಟಗರಿಯ ಭದ್ರತೆ ಒದಗಿಸಲಾಗಿದೆ. ಅಲ್ಲದೆ, ಹಾಸನ ಕ್ಷೇತ್ರದ ಸಂಸದ ಜೆಡಿಎಸ್‌ನ ಪ್ರಜ್ವಲ್ ರೇವಣ್ಣ, ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಡಿ ಸಿ ಗೌರಿಶಂಕರ್ ಹಾಗೂ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಹಾಗೂ ಸಚಿವ ಮುನಿರತ್ನ ಅವರ ವಿರುದ್ಧದ ಚುನಾವಣಾ ತಕರಾರು ಅರ್ಜಿಗಳ ವಿಚಾರಣೆಗಳು ಸದ್ಯ ವಿಚಾರಣಾ ಹಂತದಲ್ಲಿವೆ.

ಇದನ್ನೂ ಓದಿ: ಭಾವಿ ವರನಿಂದ ಯುವತಿಗೆ ವಂಚನೆ: ಮ್ಯಾಟ್ರಿಮೋನಿ ಸಿಬ್ಬಂದಿ ವಿರುದ್ಧದ ಪ್ರಕರಣ ರದ್ದು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.