ಬೆಂಗಳೂರು, ತಮಿಳುನಾಡಿನಲ್ಲಿ ಬಂಧಿತರಾಗಿದ್ದ ಶಂಕಿತ ಉಗ್ರರ ಪ್ರಕರಣ: ಎನ್‌ಐಎಗೆ ವರ್ಗಾವಣೆ!

author img

By

Published : Sep 7, 2022, 11:01 PM IST

Kn_bng_05_terroris

ಅಲ್‌ಖೈದಾ ಉಗ್ರ ಸಂಘಟನೆ ಜತೆ ಸಂಪರ್ಕ ಹೊಂದಿದ ಅಸ್ಸೋಂ ಮೂಲದ ಅಖ್ತರ್ ಹುಸೇನ್ ಲಷ್ಕರ್ ಮತ್ತು ತಮಿಳುನಾಡಿನ ಜುಬಾನಾ ಪ್ರಕರಣವನ್ನು ಎನ್‌ಐಎಗೆ ವರ್ಗಾವಣೆ ಮಾಡಲಾಗಿದೆ

ಬೆಂಗಳೂರು: ನಿಷೇಧಿತ ಅಲ್‌ಖೈದಾ ಉಗ್ರ ಸಂಘಟನೆ ಜತೆ ಸಂಪರ್ಕ ಹೊಂದಿದಲ್ಲದೆ, ಕಾಶ್ಮೀರದ ಮೂಲಕ ಆಫ್ಘಾನಿಸ್ತಾನಕ್ಕೆ ಹೊರಡಲು ಸಿದ್ದವಾಗಿ, ನಗರ ಪೊಲೀಸರು ಮತ್ತು ಕೇಂದ್ರದ ತನಿಖಾ ಸಂಸ್ಥೆಗಳ ಬಲೆಗೆ ಬಿದ್ದಿದ್ದ ಅಸ್ಸೋಂ ಮೂಲದ ಅಖ್ತರ್ ಹುಸೇನ್ ಲಷ್ಕರ್ ಮತ್ತು ತಮಿಳುನಾಡಿನ ಜುಬಾನಾ ಪ್ರಕರಣವನ್ನು ಎನ್‌ಐಎಗೆ ವರ್ಗಾವಣೆ ಮಾಡಲಾಗಿದೆ.

ಈ ಬೆನ್ನಲ್ಲೇ ದೆಹಲಿ ಎನ್‌ಐಎ ಅಧಿಕಾರಿಗಳು ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ (ಯುಎಪಿಎ) ಅಡಿಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. ಆರೋಪಿ ಜತೆ ಅಸ್ಸಾಂ ಮತ್ತು ಕರ್ನಾಟಕದಲ್ಲಿ ಯಾರೆಲ್ಲ ಸಂಪರ್ಕದಲ್ಲಿದ್ದರು? ಅವರ ಉದ್ದೇಶವೇನು? ಎಂಬ ಬಗ್ಗೆ ತನಿಖೆ ನಡೆಸಬೇಕಿದೆ ಎಂದು ಎನ್‌ಐಎ ಮೂಲಗಳು ತಿಳಿಸಿವೆ. ಮತ್ತೊಂದೆಡೆ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಸ್ತರಿಸಲಾಗಿದೆ.

ಎರಡು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದ ಅಖ್ತರ್: ಅಸ್ಸೋಂ ಮೂಲದ ಅಖ್ತರ್ ಎರಡು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದು, ತಿಲಕನಗರದ ಬಿಟಿಬಿ ಲೇಔಟ್‌ನ 3ನೇ ಕ್ರಾಸ್‌ನ ಫನಿ ಮಸೀದಿ ಸಮೀಪದ ಬಾಡಿಗೆ ಮನೆಯಲ್ಲಿ ಸಹೋದರ ಮತ್ತು ಸ್ನೇಹಿತರು ಸೇರಿ ಮೂವರ ಜತೆ ವಾಸವಾಗಿದ್ದ. ಫುಡ್‌ಡೆಲಿವರಿ ಬಾಯ್ ಆಗಿದ್ದ ಶಂಕಿತ, ಸಾಮಾಜಿಕ ಜಾಲತಾಣ ಫೇಸ್‌ಬುಕ್, ಇನ್‌ಸ್ಟ್ರಾಗ್ರಾಂ ಹಾಗೂ ಟೆಲಿಗ್ರಾಂಗಳಲ್ಲಿ ಸಕ್ರಿಯವಾಗಿದ್ದ. ಟೆಲಿಗ್ರಾಂನಲ್ಲಿ ‘ದಿ ಈಗಲ್ ಆಫ್ ಕೊರಸನ್ ಆ್ಯಂಡ್ ಹಿಂಡರ್-ಈಗಲ್’ ಎಂಬ ಗ್ರೂಪ್‌ಗಳನ್ನು ರಚಿಸಿಕೊಂಡಿದ್ದ.

ಅದರಲ್ಲಿ ಅಸ್ಸೋಂ ಮತ್ತು ನಗರದ ಕೆಲವರನ್ನು ಸೇರಿಸಿಕೊಂಡು ಉಗ್ರ ಪ್ರೇರಿತ ಪೋಸ್ಟ್​ಗಳನ್ನು ಮಾಡುತ್ತಾ ಯುವಕರನ್ನು ‘ಮೂಲಭೂತವಾದಿಗಳಾಗಿ ಪರಿವರ್ತಿಸುತ್ತಿದ್ದ. ಈತನ ಪ್ರಚೋದನಕಾರಿ ಪೋಸ್ಟ್‌ ಹಾಗೂ ವಿಚಾರಗಳಿಗೆ ಉಗ್ರ ಚಟುವಟಿಕೆಗಳ ಬಗ್ಗೆ ಆಸಕ್ತಿ ಹೊಂದಿದ್ದ ಯುವಕರಿಗೆ ಕಾಶ್ಮೀರ ಮತ್ತು ಅಫ್ಗಾನಿಸ್ತಾನದ ಖುರಾಸನ್ ಪ್ರಾಂತ್ಯಕ್ಕೆ ಕಳುಹಿಸಿ, ಭಯೋತ್ಫಾದನಾ ತರಬೇತಿ ನೀಡಲು ಸಂಚು ರೂಪಿಸಿದ್ದ.

ಅದಕ್ಕಾಗಿಯೇ ಹಗಲು ವೇಳೆ ಅಲ್‌ಖೈದಾ ಸಂಘಟನೆ ಸದಸ್ಯರ ಜತೆ ಆನ್‌ಲೈನ್ ಮೂಲಕ ಸಂಪರ್ಕಿಸಿ ಸಂಘಟನೆ ಬಗ್ಗೆ ಚರ್ಚಿಸುತ್ತಿದ್ದರೆ, ಸಂಜೆ ನಾಲ್ಕು ಗಂಟೆ ನಂತರ ಫುಡ್‌ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ.

ಧರ್ಮಯದ್ದಕ್ಕೆ ಪ್ರಚೋದನೆ: ಅಖ್ತರ್​ ಹುಸೇನ್ ಲಷ್ಕರ್, ಯುವಕರ ಮೂಲಕ ಧರ್ಮಯುದ್ಧ (ಹೋಲಿವಾರ್)ಗಳನ್ನು ಮಾಡಿಸಲು ಪ್ರಚೋದನೆ ನೀಡಿದ್ದ. ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಸಿಎಎ ಮತ್ತು ಎನ್‌ಆರ್‌ಸಿ ವಿರೋಧಿಸಿ, ಜಮ್ಮು- ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸಿದ್ದರಿಂದ ಆಕ್ರೋಶಗೊಂಡು ಸಾಮಾಜಿಕ ಜಾಲತಾಣಗಳಲ್ಲಿ ದೇಶ ವಿರೋಧಿ ಪೋಸ್‌ಟ್‌‌ಗಳನ್ನು ಹಾಕುತ್ತಿದ್ದ. ಅದನ್ನು ಗಮನಿಸಿದ್ದ ಅಲ್‌ಖೈದಾ ಸಂಘಟನೆ ಸದಸ್ಯರು ಅಖ್ತರ್‌ನನ್ನು ಸಂಪರ್ಕಿಸಿದ್ದರು.

ಅವರ ಸೂಚನೆ ಮೇರೆಗೆ ಬೆಂಗಳೂರಿಗೆ ಬಂದು ಇಲ್ಲಿನ ಕೆಲ ಮಾಹಿತಿ ಪಡೆದುಕೊಂಡು, ತಮಿಳುನಾಡಿನ ಜುಬಾನಾ ಮೂಲಕ ಕಾಶ್ಮೀರದಿಂದ ಅಫ್ಘಾನಿಸ್ತಾನಕ್ಕೆ ಹೋಗಲು ಸಿದ್ದತೆ ನಡೆಸಿದ್ದ. ಅಲ್ಲದೆ, ಅಫ್ಘಾನಿಸ್ತಾನಕ್ಕೆ ಹೋಗಿ ಉಗ್ರ ತರಬೇತಿ ಪಡೆದುಕೊಂಡು, ಮತ್ತೆೆ ಭಾರತಕ್ಕೆೆ ಬಂದು ವಿಧ್ವಂಸಕ ಕೃತ್ಯ ನಡೆಸಲು ನಿರ್ಧರಿಸಿದ್ದ ಎಂದು ತಿಳಿದು ಬಂದಿದೆ.

ಸದ್ಯ ಪ್ರಕರಣವನ್ನು ಎನ್‌ಐಎಗೆ ವರ್ಗಾವಣೆ ಮಾಡಲಾಗಿದ್ದು, ಆರೋಪಿಗಳ ವಿರುದ್ಧ ದೆಹಲಿಯ ಎನ್‌ಐಎ ಅಧಿಕಾರಿಗಳು ಯುಎಪಿಎ ಅಡಿಯಲ್ಲಿಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ: ಹರ್ಷ - ಪ್ರವೀಣ್​ ಕೇಸ್​ನಂತೆ ಮಸೂದ್ - ಫಾಜಿಲ್ ಕೇಸ್ ಯಾಕೆ ಎನ್ಐಎಗೆ ವಹಿಸಿಲ್ಲ: ಪಿಎಫ್ಐ ಮುಖಂಡನ ಪ್ರಶ್ನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.