ಗಣರಾಜ್ಯೋತ್ಸವಕ್ಕೆ ಎರಡು ದಿನ ಬಾಕಿ; ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ಭರದ ಸಿದ್ಧತೆ
Updated on: Jan 24, 2023, 4:29 PM IST

ಗಣರಾಜ್ಯೋತ್ಸವಕ್ಕೆ ಎರಡು ದಿನ ಬಾಕಿ; ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ಭರದ ಸಿದ್ಧತೆ
Updated on: Jan 24, 2023, 4:29 PM IST
ಗಣರಾಜ್ಯೋತ್ಸವಕ್ಕೆ ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ಸಿದ್ಧತೆಗಳು ಆರಂಭ - ಮೈದಾನ ಸುತ್ತಲೂ ಪೊಲೀಸರಿಂದ ಬಿಗಿ ಬಂದೋಬಸ್ತ್ - ಕಾರ್ಯಕ್ರಮಕ್ಕೆ ಬರುವವರಿಗೆ ಪರ್ಸ್, ಮೊಬೈಲ್ ನಿಷೇಧ
ಬೆಂಗಳೂರು: ಗಣರಾಜ್ಯೋತ್ಸವಕ್ಕೆ ಇನ್ನೆರಡು ದಿನ ಬಾಕಿಯಿರುವ ಹಿನ್ನೆಲೆಯಲ್ಲಿ ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ಸಿದ್ಧತೆಗಳು ಆರಂಭವಾಗಿವೆ. ಶಾಲಾ ವಿದ್ಯಾರ್ಥಿಗಳು, ಅರೆ ಸೇನಾ ಪಡೆಗಳಿಂದ ಇಂದು ಪೂರ್ವ ತಾಲೀಮು ನಡೆಸಲಾಗಿದ್ದು, ಪೊಲೀಸರಿಂದ ಮುನ್ನೆಚ್ಚರಿಕೆಯ ತಯಾರಿ ಭರದಿಂದ ಸಾಗಿದೆ.
ಜನವರಿ 26ರಂದು ಬೆಳಗ್ಗೆ 9 ಗಂಟೆಗೆ ಮಾನ್ಯ ರಾಜ್ಯಪಾಲ ಥಾವತ್ ಚಂದ್ ಗೆಹ್ಲೋಟ್ ಅವರಿಂದ ಧ್ವಜಾರೋಹಣ ನೆರವೇರಲಿದ್ದು, ನಂತರ ರಾಜ್ಯಪಾಲರು ಗಣರಾಜೋತ್ಸವದ ಸಂದೇಶ ನೀಡಲಿದ್ದಾರೆ. ಬಳಿಕ ಪೊಲೀಸ್, ಸ್ಕೌಟ್ಸ್, ಗೈಡ್ಸ್, ಎನ್ಸಿಸಿ, ಸೇವಾದಳ ಹಾಗೂ ವಿವಿಧ ಶಾಲೆಯ ಮಕ್ಕಳೊಂದಿಗೆ ಪಥಸಂಚಲನ ನಡೆಯಲಿದೆ. ಕವಾಯತು ಮತ್ತು ಬ್ಯಾಂಡ್ನ 38 ತುಕಡಿಗಳಲ್ಲಿ 1520 ಜನರು ಭಾಗವಹಿಸಲಿದ್ದಾರೆ. ತದನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಇನ್ನೂ ಪರೇಡ್ ನಡೆಯಲಿರುವ ಮಾಣಿಕ್ ಶಾ ಪರೇಡ್ ಮೈದಾನಕ್ಕೆ ಪೊಲೀಸರು ಬಿಗಿ ಬಂದೋಬಸ್ತ್ ವಹಿಸಿದ್ದು, 100 ಸಿಸಿಟಿವಿ ಕ್ಯಾಮರಾ, 2 ಬ್ಯಾಗೇಜ್ ಸ್ಕ್ಯಾನರ್, ಮೆಟಲ್ ಡಿಟೆಕ್ಟರ್ ಅಳವಡಿಸಲಾಗಿದೆ. ಸ್ಥಳದಲ್ಲಿ ಅಗ್ನಿಶಾಮಕ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. G-2 ಪ್ರವೇಶ ದ್ವಾರದಲ್ಲಿ ಅತಿಗಣ್ಯ ವ್ಯಕ್ತಿಗಳಿಗೆ ಪ್ರವೇಶಕ್ಕೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಎರಡು ಸಾವಿರ ಆಸನಗಳ ವ್ಯವಸ್ಥೆ ಕಲ್ಪಿಸಲಾಗಿದೆ.
G-3 ಪ್ರವೇಶ ದ್ವಾರದಲ್ಲಿ ನಿವೃತ್ತ ಸೇನಾಧಿಕಾರಿಗಳು, ಬಿಎಎಸ್ಎಫ್ ಅಧಿಕಾರಿಗಳಿಗೆ ಪ್ರವೇಶ ಕಲ್ಪಿಸಲಾಗಿದೆ. ಸಾರ್ವಜನಿಕರಿಗೆ G-4 ಪ್ರವೇಶ ದ್ವಾರದಲ್ಲಿ ಮೂರು ಸಾವಿರ ಆಸನಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಕೋವಿಡ್ ಸೋಂಕಿನ ಪ್ರಭಾವದಿಂದ ಆಹ್ವಾನಿತರು ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಸೂಚಿಸಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸುವವರು ಕಡ್ಡಾಯವಾಗಿ ಪಾಸ್ ಹಾಗೂ ಗುರುತಿನ ಚೀಟಿ ಹೊಂದಿರುವುದು ಕಡ್ಡಾಯವಾಗಿದೆ. ಕಾರ್ಯಕ್ರಮಕ್ಕೆ ಬರುವವರಿಗೆ ಪರ್ಸ್, ಮೊಬೈಲ್ ತರುವುದನ್ನು ನಿಷೇಧಿಸಲಾಗಿದೆ.
ಇನ್ನುಳಿದಂತೆ 12 ಡಿಸಿಪಿ, 22 ಎಸಿಪಿ, 65 ಇನ್ಸ್‌ಪೆಕ್ಟರ್ಸ್, 101 ಪಿಎಸ್ಐ, 194 ಎಎಸ್ಐ, 1005 ಕಾನ್ಸ್‌ಟೇಬಲ್ಸ್, 127 ಮಹಿಳಾ ಸಿಬ್ಬಂದಿಗಳನ್ನು ಹೆಚ್ಚಿನ ಭದ್ರತೆಗೆ ನಿಯೋಜಿಸಲಾಗಿದೆ. ಇದಲ್ಲದೇ ಮೈದನಾದ ಸುತ್ತಲೂ 10 ಕೆಎಸ್ಆರ್ಪಿ ಹಾಗೂ ಸಿಎಆರ್ ತುಕಡಿ ನಿಯೋಜಿಸಲಾಗಿದೆ.
ಈದ್ಗಾ ಮೈದಾನದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮದ ಬಗ್ಗೆ ನಿರ್ಧಾರ ಆಗಿಲ್ಲ: ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಗಣರಾಜ್ಯೋತ್ಸವ ಆಚರಣೆ ಬಗ್ಗೆ ಮಾತನಾಡಿದ ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ.ದಯಾನಂದ್, 'ಮೂರ್ನಾಲ್ಕು ಸಂಘಟನೆಗಳು ಗಣರಾಜ್ಯೋತ್ಸವ ಆಚರಣೆಗೆ ಅನುಮತಿ ಕೇಳಿವೆ. ಕಂದಾಯ ಸಚಿವರು ಈ ಹಿಂದೆ ಹೇಗಿತ್ತು ಹಾಗೆಯೇ ಪರಿಸ್ಥಿತಿ ಕಾಪಾಡಲು ತಿಳಿಸಿದ್ದಾರೆ. ಕಾರ್ಯಕ್ರಮ ಆಯೋಜನೆ ಬಗ್ಗೆ ಕಾನೂನು ಸಲಹೆ ಪಡೆಯಲಾಗಿದ್ದು, ಜೊತೆಗೆ ಸರ್ಕಾರದ ಮಟ್ಟದಲ್ಲಿ ಮಾತನಾಡಲಾಗುತ್ತಿದ್ದು ಸಂಜೆಯೊಳಗೆ ಕಾರ್ಯಕ್ರಮ ಆಯೋಜನೆ ಬಗ್ಗೆ ತೀರ್ಮಾನ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಸಿಎಂ ಗೆ ಪತ್ರ ಬರೆದ ಜಮೀರ್ : ಈಗಾಗಲೇ ಬೆಂಗಳೂರಿನ ಮೈಸೂರು ವೃತ್ತದ ಸಮೀಪವಿರುವ ಈದ್ಗಾ ಮೈದಾನ ಹಲವು ವಿವಾದಗಳನ್ನು ಎದುರಿಸುತ್ತ ಹೈಕೋರ್ಟ್ನಲ್ಲಿ ಈ ಕುರಿತು ವಿಚಾರಣೆ ನಡೆಯುತ್ತಿದೆ. ಹೀಗಿದ್ದರೂ ಈ ವರ್ಷದ ಗಣರಾಜ್ಯೋತ್ಸವವನ್ನು ಈದ್ಗಾ ಮೈದಾನದಲ್ಲಿ ಆಚರಿಸುವಂತೆ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಸಚಿವರಿಗೆ ಪತ್ರ ಬರೆದಿರುವ ಅವರು, ಗಣರಾಜ್ಯೋತ್ಸವವನ್ನು ಈ ವರ್ಷ ಇದೇ ಮೈದಾನದಲ್ಲಿ ಅದ್ಧೂರಿಯಾಗಿ ಆಚರಿಸಬೇಕು. ಕೂಡಲೇ ಸರ್ಕಾರ ಇದಕ್ಕೆ ನಿರ್ದೇಶನ ನೀಡಿ ಸರ್ಕಾರದ ವತಿಯಿಂದಲೇ ಸಾಂಸ್ಕೃತಿ ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ಕೋರಿದ್ದಾರೆ.
ಇದನ್ನೂ ಓದಿ :ಈದ್ಗಾ ಮೈದಾನದಲ್ಲಿ ಗಣರಾಜ್ಯೋತ್ಸವ ಆಚರಿಸುವಂತೆ ಸಿಎಂಗೆ ಶಾಸಕ ಜಮೀರ್ ಪತ್ರ
