ರೈತರಿಗಾಗಿ ಇರುವ ಸಬ್ಸಿಡಿ ಯೋಜನೆಗಳೆಷ್ಟು?

author img

By

Published : Dec 2, 2022, 6:33 PM IST

ಕೃಷಿ

ತೋಟಗಾರಿಕೆ ಇಲಾಖೆಯಲ್ಲಿ ಹಲವು ಯೋಜನೆಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತಿದ್ದು, ರೈತರಿಗಾಗಿ ಹಲವು ಸಬ್ಸಿಡಿ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ. ರೈತರು ತಮ್ಮ ಹತ್ತಿರದ ತೋಟಗಾರಿಕೆ ಇಲಾಖೆ ಕಚೇರಿಯ ಅಧಿಕಾರಿಗಳನ್ನು ಸಂಪರ್ಕಿಸಿ ಯೋಜನೆಗಳ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.

ಬೆಂಗಳೂರು: ರೈತರಿಗೆ ಸರ್ಕಾರದಿಂದ ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಆದರೆ, ಬಹುತೇಕ ರೈತರು ಮಾಹಿತಿ ಕೊರತೆಯಿಂದ ಸರಿಯಾಗಿ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ತೋಟಗಾರಿಕೆ ಇಲಾಖೆಯಲ್ಲಿ ಹಲವು ಯೋಜನೆಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತಿದ್ದು, ರೈತರಿಗಾಗಿ ಹಲವು ಸಬ್ಸಿಡಿ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ. ರೈತರು ತಮ್ಮ ಹತ್ತಿರದ ತೋಟಗಾರಿಕೆ ಇಲಾಖೆ ಕಚೇರಿಯ ಅಧಿಕಾರಿಗಳನ್ನು ಸಂಪರ್ಕಿಸಿ ಯೋಜನೆಗಳ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.

ಯಾವ ಯೋಜನೆಗಳಿಗೆ ಸಬ್ಸಿಡಿ : ಅಣಬೆ ಕೃಷಿ ಉತ್ತೇಜಿಸಲು ಅಣಬೆ ಉತ್ಪಾದನಾ ಘಟಕಗಳನ್ನು ಖಾಸಗಿ ವಲಯದಲ್ಲಿ ಸ್ಥಾಪಿಸಲು ಒಟ್ಟು ವೆಚ್ಚದಲ್ಲಿ ಶೇ. 40 ರಷ್ಟು ಅಂದರೆ, ಗರಿಷ್ಠ 8 ಲಕ್ಷ ರೂ.ವರೆಗೆ ಸಹಾಯಧನ ನೀಡಲು ಅವಕಾಶವಿದೆ.

ಇನ್ನು ಕ್ಲಿಷ್ಟಕರ ಪರಿಸ್ಥಿತಿಗಳಲ್ಲಿ ತೋಟಗಾರಿಕೆ ಬೆಳೆಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಸಲುವಾಗಿ ವೈಯಕ್ತಿಕ ಫಲಾನುಭವಿಗಳಿಗೆ ಕೃಷಿ ಹೊಂಡಗಳ ನಿರ್ಮಾಣಕ್ಕೆ ಒಟ್ಟು ವೆಚ್ಚದ ಶೇ 50 ಗರಿಷ್ಠ 75 ಸಾವಿರ ರೂ.ವರೆಗೆ ಸಹಾಯಧನ ನೀಡಲು ಅವಕಾಶವಿದೆ. ಅದೇ ರೀತಿ ಸಂರಕ್ಷಿತ ಬೇಸಾರ ಪದ್ಧತಿಗಳನ್ನು ಅಳವಡಿಸಿ ಉತ್ಕೃಷ್ಠ ಗುಣಮಟ್ಟದ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ವಿವಿಧ ವಿನ್ಯಾಸಗಳ ಗರಿಷ್ಠ 4 ಸಾವಿರ ಚ.ಮೀ. ಹಸಿರುಮನೆ ಘಟಕಗಳ ನಿರ್ಮಾಣಕ್ಕಾಗಿ ಶೇ. 50 ರಂತೆ ಗರಿಷ್ಠ 447 ರೂ. ಪ್ರತಿ ಚ.ಮೀ ವರೆಗೆ ಸಹಾಯಧನ ಸಿಗಲಿದೆ.

ತೋಟಗಾರಿಕೆ ಬೆಳೆಗಳಿಗಾಗಿ ಸಮಗ್ರ ಪೋಷಕಾಂಶ ಹಾಗೂ ಕೀಟ/ ರೋಗಗಳ ನಿರ್ವಹಣೆಗೆ ಅಗತ್ಯವಾದ ಪರಿಕರಗಳನ್ನು ಖರೀದಿಸಿದ ರೈತರಿಗೆ ಶೇ. 30 ರಂತೆ ಪ್ರತಿ ಹೆಕ್ಟೇರ್ ಗೆ 1,200 ರೂ. ರಂತೆ ಗರಿಷ್ಠ 4 ಹೆಕ್ಟೇರ್ ಪ್ರದೇಶಕ್ಕೆ 4,800 ರೂ. ವರೆಗೆ ಸಹಾಯಧನ ಪಡೆಯಬಹುದು.

ಜೇನು ಸಾಕಾಣಿಕೆ: ತೋಟಗಾರಿಕೆ ಬೆಳೆಗಳಲ್ಲಿ ಪರಾಗಸ್ಪರ್ಶವನ್ನು ಹೆಚ್ಚಿಸಲು ಜೇನು ಕಾಲೋನಿ, ಜೇನು ಪೆಟ್ಟಿಗೆ ಹಾಗೂ ಜೇನುಗಾರಿಕೆಗೆ ಅಗತ್ಯವಿರುವ ಜೇನು ಸಲಕರಣೆಗಳನ್ನು ಖರೀದಿಸಲು ರೈತರಿಗೆ ಶೇ 40 ರಂತೆ 1,600 ರೂ. ಜೇನು ಕಾಲೋನಿ ಮತ್ತು ಜೇನು ಪೆಟ್ಟಿಗೆ ಹಾಗೂ ಜೇನು ಸಲಕರಣೆಗೆ 8 ಸಾವಿರ ರೂ. ವರೆಗೆ ಸಹಾಯಧನ ನೀಡಲಾಗುತ್ತದೆ.

ತೋಟಗಾರಿಕೆ ಕ್ಷೇತ್ರದಲ್ಲಿ ಕೂಲಿ ಕಾರ್ಮಿಕರ ಕೊರತೆ ನಿವಾರಿಸಿ, ಕಡಿಮೆ ಸಮಯದಲ್ಲಿ ಹೆಚ್ಚಿನ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಅಗತ್ಯವಾದ ಕೃಷಿ ಉಪಕರಣಗಳು, ಸ್ವಯಂ ಚಾಲಿತ ಯಂತ್ರೋಪಕರಣಗಳು, 20 ಹೆಚ್.ಪಿಗಿಂತ ಕಡಿಮೆ ಸಾಮರ್ಥ್ಯದ ಟ್ರ್ಯಾಕ್ಟರ್ ಹಾಗೂ ಪವರ್ ಟಿಲ್ಲರ್ ಅನ್ನು ಖರೀದಿಸಲು ರೈತರಿಗೆ ಗರಿಷ್ಠ 75 ಸಾವಿರ ರೂ. ವರೆಗೆ ಸಹಾಯಧನ ನೀಡಲು ಅವಕಾಶವಿದೆ.

ಜಮೀನಿನಲ್ಲಿ ಪ್ಯಾಕ್‍ ಹೌಸ್ ನಿರ್ಮಾಣ: ಇನ್ನು ಹಣ್ಣು, ತರಕಾರಿ ಹಾಗೂ ಹೂವಿನ ಬೆಳೆಗಳು ಬಹುಬೇಗನೆ ಹಾಳಾಗುವ ಉತ್ಪನ್ನಗಳಾಗಿದ್ದು, ಇವುಗಳ ಸಮರ್ಪಕ ನಿರ್ವಹಣೆಗಾಗಿ ವಿವಿಧ ಮೂಲ ಸೌಕರ್ಯಗಳನ್ನು ಸ್ಥಾಪಿಸಿ ತೋಟಗಾರಿಕೆ ಉತ್ಪನ್ನಗಳ ನಿರ್ವಹಣೆ, ವಿಂಗಡಣೆ, ಶೇಖರಣೆ ಮತ್ತು ಮೌಲ್ಯವರ್ಧನೆ ಮಾಡುವುದರೊಂದಿಗೆ ಉತ್ತಮ ಮಾರುಕಟ್ಟೆಯನ್ನು ಒದಗಿಸಲು ರೈತರು ತಮ್ಮ ಜಮೀನಿನಲ್ಲಿ ಪ್ಯಾಕ್‍ ಹೌಸ್ ನಿರ್ಮಾಣ ಮಾಡಲು ಪ್ರತಿ ಘಟಕಕ್ಕೆ ಗರಿಷ್ಠ 2 ಲಕ್ಷ ರೂ. ವರೆಗೆ ಸಹಾಯಧನ ಪಡೆದುಕೊಳ್ಳಬಹುದು.

ರೈತರು ಬೆಳೆದ ತೋಟಗಾರಿಕೆ ಉತ್ಪನ್ನಗಳಿಗೆ ಸೂಕ್ತ ರೀತಿಯ ಮಾರಾಟದ ವ್ಯವಸ್ಥೆ ಕಲ್ಪಿಸಿ, ಉತ್ತಮ ಬೆಲೆ ದೊರಕಿಸಿಕೊಡಲು ಅಗತ್ಯವಾದ ವಿವಿಧ ಮಾದರಿಯ ಗ್ರಾಮೀಣ ಮಾರುಕಟ್ಟೆ ನಿರ್ಮಾಣಕ್ಕಾಗಿ ಶೇ. 40 ರಂತೆ ಗರಿಷ್ಠ 10 ಲಕ್ಷ ರೂ.ಗಳ ಸಹಾಯಧನ ನೀಡಲಾಗುತ್ತದೆ. ತೋಟಗಾರಿಕೆ ಉತ್ಪನ್ನಗಳನ್ನು ಮಾರಾಟ ಮಾಡಲು ಉಪಯುಕ್ತವಾದ ಸ್ಥಿರ ಅಥವಾ ಚರ ತಳ್ಳು ಮಾರಾಟ ಗಾಡಿಗಳ ಖರೀದಿಗೆ ಶೇ. 50 ರಂತೆ ಗರಿಷ್ಠ 15 ಸಾವಿರ ರೂ. ವರೆಗೆ ಸಹಾಯಧನ ನೀಡಲಾಗುತ್ತದೆ.

ರೈತರಿಗಾಗಿ ಪರಿಹಾರದ ಯೋಜನೆಗಳೇನು?: ಪ್ರಕೃತಿ ವಿಕೋಪ ಮತ್ತು ಕೃಷಿ ಉತ್ಪನ್ನಗಳಿಗೆ ಸರಿಯಾದ ಬೆಲೆ ಸಿಗದಂತಹ ಪರಿಸ್ಥಿತಿಯಲ್ಲಿ ನಷ್ಟ ಅನುಭವಿಸಿ ಸರ್ಕಾರಿ ಸ್ವಾಮ್ಯದ ಅಥವಾ ಮಾನ್ಯತೆ ಪಡೆದ ಸಾಲ ನೀಡಿದ ಸಂಸ್ಥೆಗಳಿಂದ ಪಡೆದ ಸಾಲ ತೀರಿಸಲಾಗದೆ ರೈತ ಆತ್ಮಹತ್ಯೆ ಮಾಡಿಕೊಂಡರೆ ಮೃತನ ಕುಟುಂಬಕ್ಕೆ 1 ಲಕ್ಷ ರೂ. ವರೆಗೆ ಸಹಾಯ ಧನ ಒದಗಿಸಲಾಗುತ್ತದೆ.

ಕೃಷಿ ಸಂಬಂಧಿತ ಕೆಲಸ ಮಾಡುವಾಗ ಆಕಸ್ಮಿಕಗಳಿಂದ ಮರಣ ಹೊಂದಿದ ರೈತರು ಹಾಗೂ ಕೃಷಿ ಕಾರ್ಮಿಕರ ಕುಟುಂಬಕ್ಕೆ 1 ಲಕ್ಷ ರೂ. ಬೆಂಕಿ ಆಕಸ್ಮಿಕಗಳಿಂದ ಹುಲ್ಲು ಮೆದೆ/ಬಣವೆಗಳ ನಷ್ಠದಲ್ಲಿ ಹತ್ತು ಸಾವಿರ ರೂ. ಪರಿಹಾರ ದೊರೆಯುತ್ತದೆ.

ಅದೇ ರೀತಿ ರೈತರಿಗೆ ಇತರ ಸೌಲಭ್ಯಗಳು ಇವೆ. ಬಡ್ಡಿರಹಿತ ಬೆಳೆ ಸಾಲ ಯೋಜನೆ, ರಾಷ್ಟ್ರೀಯ ಕೃಷಿ ವಿಮಾ ಯೋಜನೆ, ಜಿಲ್ಲಾ ವಲಯ ಸಾವಯವ ಗೊಬ್ಬರಗಳ ಯೋಜನೆ. ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯಮಟ್ಟದ ಯೋಜನೆಗಳು. ಭೂ ಚೇತನ ಯೋಜನೆ ಅಡಿ ಮಣ್ಣು ಪರೀಕ್ಷೆ ಮತ್ತು ಪೋಷಕಾಂಶ, ಮಳೆ ನೀರು ನಿರ್ವಹಣೆ, ಸುಧಾರಿತ ತಳಿಗಳು, ತಾಂತ್ರಿಕತೆ ಮತ್ತಿತರ ಮಾಹಿತಿ ಮತ್ತು ತರಬೇತಿ ನೀಡಲಾಗುತ್ತದೆ.

ತೋಟಗಾರಿಕೆ ಬೆಳೆಗಳಿಗೆ ಪ್ರೋತ್ಸಾಹ ಧನ ದೊರೆಯುತ್ತದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬೇಕಾದರೆ ರೈತ ಸಂಪರ್ಕ ಕೇಂದ್ರ ಹಾಗೂ ಕೃಷಿ ಇಲಾಖೆಯ ತಾಲೂಕು ಮತ್ತು ಜಿಲ್ಲಾ ಕಚೇರಿಗಳಿಗೆ ಸಂಪರ್ಕಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಓದಿ: ಅಲ್ಪಾವಧಿ ಕೃಷಿ ಸಾಲದ ಮೇಲೆ ಶೇ.1.5ರಷ್ಟು ಬಡ್ಡಿ ಸಬ್ಸಿಡಿ ಮರುಸ್ಥಾಪನೆ: ಕೇಂದ್ರ ಸಂಪುಟ ಅನುಮೋದನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.