ಯೋಗೇಶ್ ಗೌಡ ಕೊಲೆ ಪ್ರಕರಣ: ವಿನಯ್ ಕುಲಕರ್ಣಿಗೆ ಸುಪ್ರೀಂನಿಂದ ಷರತ್ತುಬದ್ಧ ಜಾಮೀನು

author img

By

Published : Aug 11, 2021, 1:28 PM IST

Vinay Kulkarni

ಜಿಲ್ಲಾ ಪಂಚಾಯತ್​ ಸದಸ್ಯ ಯೋಗೇಶ್​ ಗೌಡ ಹತ್ಯೆ ಪ್ರಕರಣದ ಪ್ರಮುಖ ಆರೋಪಿ, ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಸುಪ್ರೀಂಕೋರ್ಟ್ ಇಂದು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಬೆಂಗಳೂರು: ಧಾರವಾಡದ ಜಿಲ್ಲಾ ಪಂ‌ಚಾಯತ್​ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದ ಆರೋಪಿ, ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಸುಪ್ರೀಂಕೋರ್ಟ್​ ಇಂದು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದು, ಧಾರವಾಡಕ್ಕೆ ತೆರಳದಂತೆ ಸೂಚನೆ ನೀಡಿದೆ.

ಒಂದು ವೇಳೆ ವಿನಯ್ ಕುಲಕರ್ಣಿ ನೀಡಿರುವ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಂಡರೆ ಅಥವಾ ಸಾಕ್ಷಿ ಅಳಿಸಿ ಹಾಕಲು ಯತ್ನಿಸಿದರೆ ಜಾಮೀನು ಅರ್ಜಿಯನ್ನು ರದ್ದು ಮಾಡುವುದಾಗಿಯೂ ಸುಪ್ರೀಂಕೋರ್ಟ್ ಎಚ್ಚರಿಕೆ ನೀಡಿದೆ.

ಪ್ರಕರಣದ ಹಿನ್ನೆಲೆ: ಧಾರವಾಡ ಜಿಲ್ಲಾ ಪಂಚಾಯತ್​ ಸದಸ್ಯ ಹಾಗೂ ಸ್ಥಳೀಯ ಬಿಜೆಪಿ ನಾಯಕರಾಗಿದ್ದ ಯೋಗೇಶ್ ಗೌಡ ಗೌಡರ್​ ಅವರನ್ನು 2016ರ ಜೂನ್ 15ರಂದು ಸಪ್ತಾಪುರದಲ್ಲಿ ಹತ್ಯೆ ಮಾಡಲಾಗಿತ್ತು. ಅವರ ಜಿಮ್​ನ ಹೊರಗೆ ಸುಪಾರಿ ಹಂತಕರು ಮೊದಲಿಗೆ ಕಣ್ಣಿಗೆ ಖಾರದ ಪುಡಿ ಎರಚಿದ್ದರು. ಬಳಿಕ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಬರ್ಬರವಾಗಿ ಕೊಲೆ ಮಾಡಿ ಬೈಕ್​ನಲ್ಲಿ ಪರಾರಿಯಾಗಿದ್ದರು.

ಪ್ರಕರಣದ ತನಿಖೆ ನಡೆಸಿದ ಪೊಲೀಸರು ಧಾರವಾಡದ 6 ಮಂದಿಯ ವಿರುದ್ಧ ಚಾರ್ಜ್​ಶೀಟ್ ಸಲ್ಲಿಸಿದ್ದರು. ಬಳಿಕ 2019ರ ಸೆಪ್ಟೆಂಬರ್​ನಲ್ಲಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು. 2020ರ ನವೆಂಬರ್​ 5ರಂದು ಮಾಜಿ ಸಚಿವ, ಕಾಂಗ್ರೆಸ್​ ಮುಖಂಡ ವಿನಯ್​ ಕುಲಕರ್ಣಿ ಅವರನ್ನು ಬಂಧಿಸಲಾಗಿತ್ತು. ಜಾಮೀನು ಕೋರಿ ವಿನಯ್ ಕುಲಕರ್ಣಿ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಇಂದು ವಿಚಾರಣೆ ನಡೆಸಿದ ಪೀಠ, ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.