ಈ ನದಿಗಳ ನೀರು ಸಂಸ್ಕರಿಸಿ ಕುಡಿಯಲಷ್ಟೇ ಅಲ್ಲ ಸ್ನಾನಕ್ಕೂ ಯೋಗ್ಯವಿಲ್ಲ: ಮಾಲಿನ್ಯ ನಿಯಂತ್ರಣ ಮಂಡಳಿ ವರದಿಯಲ್ಲಿ ಕಳವಳ

author img

By

Published : Jan 25, 2023, 1:37 PM IST

Kaveri river

ತಿಂಗಳುಗಳ ಹಿಂದೆ ಕನಿಷ್ಠ ಸ್ನಾನಕ್ಕಾದರೂ ಯೋಗ್ಯವಾಗಿದ್ದ ನದಿಗಳ ನೀರು ಇದೀಗ ಕಲುಷಿತಗೊಂಡು ಸ್ನಾನಕ್ಕೂ ಯೋಗ್ಯವಲ್ಲದ ಪರಿಸ್ಥಿತಿಗೆ ತಲುಪಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಆಘಾತಕಾರಿ ವರದಿ ನೀಡಿದೆ.

ಬೆಂಗಳೂರು: ಗಂಗಾ ಸ್ನಾನಂ ತುಂಗಾ ಪಾನಂ ಎನ್ನುವ ಗಾದೆ ಮಾತಿನಂತೆ ಕುಡಿಯಲು ಉತ್ಕೃಷವಾದ ಸ್ವಾದ ಹೊಂದಿದ್ದ ತುಂಗಾ ನದಿ, ರಾಜ್ಯದ ಜೀವನದಿಯಾದ ಕಾವೇರಿ, ಕೃಷ್ಣಾ ಸೇರಿದಂತೆ ಜೀವನದಿಗಳ ನೀರು ಇದೀಗ ಶುದ್ಧೀಕರಣ ಮಾಡದೇ ಕುಡಿಯಲೂ ಯೋಗ್ಯವಿಲ್ಲದ ಸ್ಥಿತಿಗೆ ತಲುಪಿದೆ. ಕೆಲವು ನದಿಗಳ ನೀರು ಕಾಮನ್​ ಆಗಿ ಸಂಸ್ಕರಣೆ ಮಾಡಿ ಕುಡಿಯಲು ಮಾತ್ರವಲ್ಲ, ಸ್ನಾನಕ್ಕೂ ಯೋಗ್ಯವಲ್ಲದಂತಾಗಿದೆ. ನೇತ್ರಾವತಿ ನದಿಯೂ ಈಗ ಸ್ನಾನಯೋಗ್ಯವಲ್ಲ ಎನ್ನುವ ಆತಂಕಕಾರಿ ಅಂಶವನ್ನೊಳಗೊಂಡ ವರದಿಯನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಟಿಸಿದೆ.

ರಾಷ್ಟ್ರೀಯ ನೀರಿನ ಗುಣಮಟ್ಟ ಯೋಜನೆಯಡಿ ನದಿ ಮತ್ತು ಕೆರೆಗಳ ನೀರಿನ ಗುಣಮಟ್ಟದ 2022ರ ಏಪ್ರಿಲ್‌ನಿಂದ - ನವೆಂಬರ್‌ವರೆಗಿನ ವಿಸ್ತೃತ ‌ವರದಿಯನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಟಿಸಿದ್ದು, ಅದರಲ್ಲಿ ರಾಜ್ಯದ ಜೀವನದಿಗಳೆನಿಸಿರುವ ಕೃಷ್ಣಾ, ಕಾವೇರಿ, ತುಂಗಾ, ಭದ್ರಾ, ಕಬಿನಿ, ಶಿಂಷಾ, ಮಲಪ್ರಭಾ, ಘಟಪ್ರಭಾ, ಭೀಮಾ, ಹೇಮಾವತಿ, ನೇತ್ರಾವತಿ, ಯಗಚಿ, ಕಾರಂಜಾ ಸೇರಿದಂತೆ ಯಾವುದೇ ನದಿಗಳ ನೀರನ್ನು ಸಂಸ್ಕರಿಸದೇ ಕುಡಿಯುವಂತಿಲ್ಲ.

ಕೆಲವು ನದಿಗಳ ನೀರು ಸ್ನಾನಕ್ಕೂ ಬಳಸಲಾಗದ ಸ್ಥಿತಿ ತಲುಪಿವೆ ಎನ್ನುವ ಅಂಶಗಳನ್ನು ಉಲ್ಲೇಖಿಸಿದೆ. ರಾಜ್ಯದ 17 ನದಿಗಳ ಹರಿವಿನಲ್ಲಿ ವಿವಿಧ ಜಿಲ್ಲೆಗಳಲ್ಲಿ 103 ತಪಾಸಣೆ ಕೇಂದ್ರಗಳನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಸ್ಥಾಪಿಸಿದೆ. ಅಲ್ಲಿಂದ ನೀರಿನ ಮಾದರಿ ಸಂಗ್ರಹಿಸಿ, ಅಧ್ಯಯನ ನಡೆಸಿ ಗುಣಮಟ್ಟವನ್ನು ದಾಖಲಿಸಿದ್ದು, ಐದು ವರ್ಗಗಳಲ್ಲಿ ನೀರಿನ ಮಟ್ಟವನ್ನು ಗುರುತಿಸಲಾಗಿದೆ.

ತಿಂಗಳುಗಳ ಹಿಂದೆ ಸ್ನಾನಕ್ಕೆ ಯೋಗ್ಯವಾಗಿದ್ದ ನದಿಗಳು: ಕುಮಾರಧಾರಾ ಮತ್ತು ನೇತ್ರಾವತಿ ನದಿಗಳು ಈವರೆಗೂ ಬಿ ವರ್ಗಕ್ಕೆ ಸೇರಿದ್ದು, ಉಳಿದ ನದಿಗಳಿಗಿಂತ ಉತ್ತಮ ಸ್ಥಿತಿಯಲ್ಲಿದ್ದವು. ಆದರೆ, ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರವಾದ ಧರ್ಮಸ್ಥಳದಲ್ಲಿ ಹರಿಯುವ ಪವಿತ್ರ ನೇತ್ರಾವತಿ ನದಿ ನೀರು ಅಕ್ಟೋಬರ್​ನಲ್ಲಿ ಸ್ನಾನಕ್ಕೆ ಯೋಗ್ಯವಾಗಿತ್ತು ಎನ್ನುವ ಅಂಶವನ್ನು ಉಲ್ಲೇಖಿಸಿ ನವೆಂಬರ್‌ ವರದಿಯಲ್ಲಿ ಕಲ್ಮಶ ಹೆಚ್ಚಾಗಿದ್ದು, ಬಿ ವರ್ಗದಿಂದ ಸಿ ವರ್ಗಕ್ಕೆ ಕುಸಿದಿದೆ ಎಂದು ತಿಳಿಸಿದೆ. ಇದರಿಂದಾಗಿ ಹೊರಾಂಗಣದಲ್ಲಿ ಈ ನೀರು ಸ್ನಾನಕ್ಕೂ ಯೋಗ್ಯವಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕಲ್ಮಶ ಹೆಚ್ಚಿಸಿಕೊಂಡು ಸಿ ವರ್ಗಕ್ಕೆ ಇಳಿದ ನದಿಗಳು: ಮಂಗಳೂರು ಸಮೀಪದ ಉಪ್ಪಿನಂಗಡಿಯಲ್ಲಿ ನೇತ್ರಾವತಿಗೆ ಸೇರುವ ಮುನ್ನ ಕುಮಾರಧಾರಾ ನದಿ, ಕಲಬುರಗಿಯಲ್ಲಿ ಕಾಗಿಣಾ ನದಿ, ಸುವರ್ಣವತಿ ಜಲಾಶಯದ ನೀರು, ಚಾಮರಾಜನಗರದ ಅಟ್ಟಿಗುಲ್ಲಿಪುರ, ಭದ್ರಾವತಿ ಎಂಪಿಎಂ ಬಳಿ ಭದ್ರಾ ನದಿಯ ನೀರು ಹೆಚ್ಚು ಕಲ್ಮಶವಾಗಿ ಬಿ ವರ್ಗದಿಂದ ಸಿ ವರ್ಗಕ್ಕೆ ಕುಸಿದಿವೆ. ಅದೇ ರೀತಿ ಕನಕಪುರದಲ್ಲಿ ಅರ್ಕಾವತಿ, ಸಂಗಮದಲ್ಲಿ ಕಾವೇರಿ, ಕಲಬುರಗಿಯ ಸೇಡಂ, ಶಹಾಬಾದ್‌ ಸೇತುವೆ ಹಾಗೂ ಬೆಣ್ಣೆತೊರಾ ಜಲಾಶಯ ಸೇರುವ ಕಾಗಿಣಾ ನದಿ, ಜೇವರ್ಗಿ, ಫಿರೋಜಾಬಾದ್‌, ಗಾಣಗಾಪುರದಲ್ಲಿ ಭೀಮಾ ನದಿ, ಮೈಸೂರಿನ ಕಟ್ಟೆಮಳಲವಾಡಿ ಹಾಗೂ ಹುಣಸೂರು ನಗರದಲ್ಲಿ ಲಕ್ಷ್ಮಣತೀರ್ಥ ನದಿ, ದಾವಣಗೆರೆಯ ಹರಿಹರದಲ್ಲಿ ತುಂಗಭದ್ರಾ ನದಿ, ತುಮಕೂರಿನ ಎಡೆಯೂರು ಬಳಿ ಶಿಂಷಾ ನದಿ ನೀರು ವನ್ಯಜೀವಿಗಳು ಕುಡಿಯಲು ಹಾಗೂ ಮೀನುಗಾರಿಕೆಗೆ ಮಾತ್ರ ಯೋಗ್ಯವಾಗಿವೆ. ಬೆಂಗಳೂರು ಹೊರವಲಯದ ಸರ್ಜಾಪುರದಲ್ಲಿ ಹರಿಯುವ ದಕ್ಷಿಣ ಪಿನಾಕಿನಿ ನದಿ ಇ ವರ್ಗದಲ್ಲಿದ್ದು, ಲೋಹಯುಕ್ತ, ಕಲ್ಮಶಕಾರಕವಾಗಿದೆ ಎನ್ನುವ ಅಂಶವನ್ನು ವರದಿಯಲ್ಲಿ ಪ್ರಕಟಿಸಲಾಗಿದೆ.

ರಾಜ್ಯದ 17 ನದಿಗಳ ನೀರು ನೇರವಾಗಿ ಕುಡಿಯಲು ಯೋಗ್ಯವಲ್ಲ. ಅಷ್ಟೇ ಅಲ್ಲ, ಸಾಮಾನ್ಯ ಸಂಸ್ಕರಣೆ ಮಾಡಿಯೂ ಕುಡಿಯಬಹುದಾದ ಜಲಮೂಲ ಈಗ ಇಲ್ಲವಾಗಿದೆ. ಎಲ್ಲ ನದಿಗಳೂ ಕಂದು ಬಣ್ಣದಿಂದ ಕೂಡಿದ್ದು ಸ್ನಾನಕ್ಕೂ ಯೋಗ್ಯವಾಗಿ ಉಳಿದಿಲ್ಲ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವರದಿಯಲ್ಲಿ ಉಲ್ಲೇಖಿಸಿದೆ.

ಕೆರೆ ಕಲ್ಮಶ: ಬೆಂಗಳೂರು ಹೊರತುಪಡಿಸಿ ಇತರ ಜಿಲ್ಲೆಗಳ 69 ಕೆರೆಗಳ ನೀರಿನ ಗುಣಮಟ್ಟ ಪರೀಕ್ಷಿಸಿದ್ದು, ಇದರಲ್ಲೂ ಎ ವರ್ಗ ಕೆರೆಗಳು ಯಾವುದೂ ಇಲ್ಲ. ರಾಮನಗರದ ಬೈರಮಂಗಲ ಹಾಗೂ ರಾಮಮ್ಮನ ಕೆರೆ, ತುಮಕೂರಿನ ಮೇಳೆಕೋಟೆ, ಭೀಮಸಂದ್ರ ಕೆರೆ, ಮೈಸೂರಿನ ದಳವಾಯಿ, ಎಣ್ಣೆಹೊಳೆ ಕೆರೆ, ಹಾಸನ ಮಾಕನ, ಹಾವಲಿ ಕೆರೆಗಳು ಇ ವರ್ಗದಲ್ಲಿವೆ. ಬಿ ವರ್ಗದಲ್ಲಿ 5, ಸಿ ವರ್ಗದಲ್ಲಿ 18 ಮತ್ತು ಡಿ ವರ್ಗದಲ್ಲಿ 32 ಕೆರೆಗಳಿವೆ ಎಂದು ವರದಿಯಲ್ಲಿ ಹೇಳಲಾಗಿದೆ.

ಬೆಂಗಳೂರಿನ 66 ಕೆರೆಗಳ ನೀರು ಮಾತ್ರ ವನ್ಯಜೀವಿಗಳು ಕುಡಿಯಲು ಯೋಗ್ಯ: ಬೆಂಗಳೂರು ನಗರದ 106 ಕೆರೆಗಳಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ನೀರಿನ ಗುಣಮಟ್ಟವನ್ನು ಪರೀಕ್ಷಿಸುತ್ತಿದೆ. ಇದರಲ್ಲಿ ಎ, ಬಿ, ಸಿ ವರ್ಗದಲ್ಲಿ ಯಾವುದೇ ಕೆರೆಗಳಿಲ್ಲ. ಡಿ ವರ್ಗದಲ್ಲಿ 66 ಹಾಗೂ ಇ ವರ್ಗದಲ್ಲಿ 40 ಕೆರೆಗಳಿವೆ. ಇದರಲ್ಲಿ 66 ಕೆರೆಗಳ ನೀರು ಮಾತ್ರ ವನ್ಯಜೀವಿಗಳು ಕುಡಿಯಲು ಮತ್ತು ಮೀನುಗಾರಿಕೆಗೆ ಯೋಗ್ಯವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಇನ್ನು ಉಳಿದ ಕೆರೆಗಳಲ್ಲಿ ಲೋಹ, ಒಳಚರಂಡಿ ತ್ಯಾಜ್ಯ ಸೇರಿಕೊಂಡು ಕಲ್ಮಶದ ತಾಣಗಳಾಗಿ ಪರಿವರ್ತನೆ ಆಗಿವೆ ಎಂದು ವರದಿಯಲ್ಲಿ ಸಷ್ಟವಾಗಿ ಉಲ್ಲೇಖ ಮಾಡಲಾಗಿದೆ.

ರಾಜರಾಜೇಶ್ವರಿನಗರ ವ್ಯಾಪ್ತಿಯ ಸುಬ್ರಮಣ್ಯಪುರ, ಮಲ್ಲತ್ತಹಳ್ಳಿ, ದೊರೆಕೆರೆ, ಹೊಸಕೆರೆಹಳ್ಳಿ, ಶಿವಪುರ, ಕರಿಹೋಬನಹಳ್ಳಿ, ದಾಸರಹಳ್ಳಿ ವ್ಯಾಪ್ತಿಯ ಗಂಗೊಂಡನಹಳ್ಳಿ, ಅಂದ್ರಹಳ್ಳಿ, ಕಾಚೋಹಳ್ಳಿ, ವಿಶ್ವನೀಡಂ, ಮಾಚೋಹಳ್ಳಿ, ದೊಡ್ಡಬಿದರಕಲ್ಲು, ಬೊಮ್ಮನಹಳ್ಳಿ ವ್ಯಾಪ್ತಿಯ ಮಡಿವಾಳ, ಹುಳಿಮಾವು, ಸಿಂಗಸಂದ್ರ, ಪರಪ್ಪನ ಅಗ್ರಹಾರ, ಹರಳೂರು, ಮಹದೇವಪುರ ವ್ಯಾಪ್ತಿಯ ಕಲ್ಕೆರೆ, ಸಾದರಮಂಗಲ, ಗರುಡಾಚಾರ್ ಪಾಳ್ಯ, ರಾಂಪುರ, ವಿಭೂತಿಪುರ, ಯಲಹಂಕ ವ್ಯಾಪ್ತಿಯ ಚೆಲ್ಲಕೆರೆ, ಸಿಂಗಾಪುರ, ನರಸೀಪುರ, ರಾಚೇನಹಳ್ಳಿ, ಕೋಗಿಲು, ಪೂರ್ವ ಭಾಗದ ಹಲಸೂರು, ಬೈರಸಂದ್ರ ಕೆರೆಗಳು ಲೋಹಯುಕ್ತ ಕಲ್ಮಶದ ತಾಣಗಳಾಗಿವೆ. ಎ, ಬಿ, ಸಿ ವರ್ಗದಲ್ಲಿ ಯಾವುದೇ ಕೆರೆಗಳಿಲ್ಲ. ಡಿ ವರ್ಗದಲ್ಲಿ 66 ಹಾಗೂ ಇ ವರ್ಗದಲ್ಲಿ 40 ಕೆರೆಗಳಿವೆ. ಅಕ್ಟೋಬರ್‌ಗೆ ಹೋಲಿಸಿದರೆ ನವೆಂಬರ್‌ನಲ್ಲಿ ಇ ವರ್ಗದಲ್ಲಿ ಕೆರೆಗಳ ಸಂಖ್ಯೆ ಹೆಚ್ಚಾಗಿದೆ ಎಂದು ವರದಿಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಶುಗರ್ ಫ್ಯಾಕ್ಟರಿ ಚಿಮಣಿಯಿಂದ ನಿತ್ಯ ಗೋಳಾಟ: ಹಳ್ಳಿಯ ಜನರ ಆರೋಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.