ನಾಲ್ಕು ವರ್ಷದಲ್ಲಿ ಬಿಜೆಪಿ ಶಾಸಕ ತಿಪ್ಪಾರೆಡ್ಡಿಗೆ 90 ಲಕ್ಷ ಕಮಿಷನ್ ಕೊಟ್ಟಿದ್ದೇನೆ: ಗುತ್ತಿಗೆದಾರರ ಸಂಘದ ಕಾರ್ಯಾಧ್ಯಕ್ಷ ಆರ್ ಮಂಜುನಾಥ್​ ಆರೋಪ

author img

By

Published : Jan 16, 2023, 4:15 PM IST

Updated : Jan 16, 2023, 6:26 PM IST

ಗುತ್ತಿಗೆದಾರರ ಸಂಘದ ಕಾರ್ಯಾಧ್ಯಕ್ಷ ಆರ್ ಮಂಜುನಾಥ್​

ಲೋಕೋಪಯೋಗಿ ಇಲಾಖೆ ಕಟ್ಟಡ ಕಟ್ಟಿ ಮೂರು ವರ್ಷವಾದರೂ ಬಿಲ್ ಆಗಿಲ್ಲ. ಈ ಬಗ್ಗೆ ಸಚಿವ ಸಿ. ಸಿ ಪಾಟೀಲ್ ಅವರನ್ನು ಕೇಳಿದರೆ ನೀತಿ ಪಾಠ ಮಾಡಿದರು ಎಂದು ಗುತ್ತಿಗೆದಾರರ ಸಂಘದ ಕಾರ್ಯಾಧ್ಯಕ್ಷ ಆರ್ ಮಂಜುನಾಥ್ ಅಸಮಾಧಾನ ವ್ಯಕ್ತಪಡಿಸಿದರು.

ಗುತ್ತಿಗೆದಾರರ ಸಂಘದ ಕಾರ್ಯಾಧ್ಯಕ್ಷ ಆರ್ ಮಂಜುನಾಥ್​

ಬೆಂಗಳೂರು: ರಾಜ್ಯ ಸರ್ಕಾರದಲ್ಲಿ ಕಮಿಷನ್ ಇರುವುದು ಸತ್ಯ. 4 ಮಂದಿ ಸಚಿವರು ಹಾಗೂ 13 ರಿಂದ 14 ಮಂದಿ ಶಾಸಕರು ಕಮಿಷನ್ ಪಡೆದಿರುವ ದಾಖಲೆಗಳು ಇವೆ. ಆದರೆ, ಅವರ ಹೆಸರುಗಳನ್ನು ಈಗ ಬಹಿರಂಗಪಡಿಸುವುದಿಲ್ಲ. ದಾಖಲೆ ಬಿಡುಗಡೆ ಮಾಡಿದರೆ ಗುತ್ತಿಗೆದಾರರ ಕುಟುಂಬಸ್ಥರಿಗೆ ತೊಂದರೆ ಆಗುತ್ತದೆ. ಸಂತೋಷ್ ಪಾಟೀಲ್ ಪ್ರಕರಣ ಆದ ನಂತರ ಕೆಲ ಗುತ್ತಿಗೆದಾರರು ಹಿಂದೇಟು ಹಾಕುತ್ತಿದ್ದಾರೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಕಾರ್ಯಾಧ್ಯಕ್ಷ, ಚಿತ್ರದುರ್ಗ ಜಿಲ್ಲೆಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್. ಮಂಜುನಾಥ್ ಹೊಸ ಬಾಂಬ್ ಸಿಡಿಸಿದ್ದಾರೆ.

ಚಾಮರಾಜಪೇಟೆಯಲ್ಲಿರುವ ಗುತ್ತಿಗೆದಾರರ ಸಂಘದ ಕಚೇರಿಯಲ್ಲಿ ಇಂದು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಶಾಸಕ ತಿಪ್ಪಾರೆಡ್ಡಿ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ ಅವರು, ’’ಕಮಿಷನ್ ಕುರಿತಂತೆ ಆಡಿಯೋ, ವಿಡಿಯೋ ಇದೆ. ಜಿಲ್ಲೆಯಲ್ಲಿ ಭ್ರಷ್ಟಾಚಾರ ಆರಂಭವಾಗಿದ್ದೇ ಶಾಸಕ ತಿಪ್ಪಾರೆಡ್ಡಿ ಅವರಿಂದ ಎಂದು ಆರೋಪಿಸಿದರು. ಗುತ್ತಿಗೆದಾರರಿಂದ ಕಮಿಷನ್ ಕೇಳುತ್ತಿರುವ ಬಗ್ಗೆ ದೂರು ನೀಡಲಾಗಿದೆ. ಕಮಿಷನ್ ಕುರಿತಂತೆ ಆಡಿಯೋ, ವಿಡಿಯೋ ಇದೆ ಎಂದ ಮಂಜುನಾಥ್, ತಿಪ್ಪಾರೆಡ್ಡಿ ಜೊತೆ ಸಂಭಾಷಣೆ ಮಾಡಿರುವ ಆಡಿಯೋವನ್ನು ಕೇಳಿಸಿದರು. ತಿಪ್ಪಾರೆಡ್ಡಿ ಕ್ಷೇತ್ರದಲ್ಲಿ ಸುಮಾರು 700 ರಿಂದ 800 ಕೋಟಿ ರೂ. ಕಾಮಗಾರಿ ನಡೆದಿದೆ. ಕೈ ಬೆರಳುಗಳ ಮೂಲಕ ಕಮಿಷನ್ ಅನ್ನು ಶಾಸಕರು ಕೇಳುತ್ತಿದ್ದರು‘‘ ಎಂದರು.

’’ಮೊದಲ ಕೋವಿಡ್ ಸಮಯದಲ್ಲಿ ತಿಪ್ಪಾರೆಡ್ಡಿ ಅವರು, ಶೇ.10 ರಷ್ಟು ಕಮಿಷನ್ ಪಡೆದಿದ್ದಾರೆ. ಎರಡನೇ ಕೋವಿಡ್ ಅಲೆಯಲ್ಲೂ ಶೇ.10 ರಷ್ಟು ಕಮಿಷನ್ ಪಡೆದುಕೊಂಡಿದ್ದಾರೆ. ಮೆಡಿಕಲ್ ಗ್ಯಾಸ್ ರೂಂ ನಿರ್ಮಾಣಕ್ಕೆ 4 ಲಕ್ಷ, ಲೇಔಟ್ ನಿರ್ಮಾಣಕ್ಕೆ 4 ಲಕ್ಷ, ಲೇಔಟ್ ಅನುಮತಿಗಾಗಿ 18 ಲಕ್ಷ, ಆಸ್ಪತ್ರೆ ರಿಪೇರಿಗೆ 12.5 ಲಕ್ಷ ಹೀಗೆ, 2019 ರಿಂದ ಇಲ್ಲಿಯವರೆಗೂ 90 ಲಕ್ಷ ರೂ.ಗಳನ್ನು ಕಮಿಷನ್ ಹಣದ ರೂಪದಲ್ಲಿ ತಿಪ್ಪಾರೆಡ್ಡಿ ಅವರಿಗೆ ನೀಡಲಾಗಿದೆ‘‘ ಎಂದು ನೇರವಾಗಿ ಆರೋಪ ಮಾಡಿದರು.

ನಾನು ಎದುರಿಸುವುದಕ್ಕೆ ಸಿದ್ದ: ’’ಲೋಕೋಪಯೋಗಿ ಇಲಾಖೆ ಕಟ್ಟಡ ಕಟ್ಟಿ ಮೂರು ವರ್ಷವಾದರೂ ಬಿಲ್ ಆಗಿಲ್ಲ. ಈ ಬಗ್ಗೆ ಸಚಿವ ಸಿ. ಸಿ ಪಾಟೀಲ್ ಅವರನ್ನು ಕೇಳಿದರೆ ನೀತಿ ಪಾಠ ಮಾಡಿದರು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಲೋಕೋಪಯೋಗಿ ಇಲಾಖೆಯ ಕಾಮಗಾರಿಗೆ ತಿಪ್ಪಾರೆಡ್ಡಿ ಅವರು ಕಮಿಷನ್ ಕೇಳಿರುವ ಬಗ್ಗೆ ಆಡಿಯೋ ಇದೆ. ವಾಟ್ಸ್​​​ಆ್ಯಪ್ ರೆಕಾರ್ಡ್ ಕೂಡಾ ಇದೆ. ಮಾನನಷ್ಟ ಮೊಕದ್ದಮೆ ಹೂಡಿದರೂ ನಾನು ಎದುರಿಸುವುದಕ್ಕೆ ಸಿದ್ದ‘‘ ಎಂದು ಮಂಜುನಾಥ ಹೇಳಿದ್ದಾರೆ.

’’ಕಾಮಗಾರಿ ಕುರಿತಂತೆ ಅಡ್ವಾನ್ಸ್ ಹಣ ಕೇಳುತ್ತಿದ್ದಾರೆ. ಭ್ರಷ್ಟಚಾರದ ಕುರಿತಂತೆ ಧ್ವನಿ ಎತ್ತಿದ್ರೆ ಕಿರುಕುಳ ನೀಡ್ತಿದ್ದಾರೆ ಎಂದು ಆರೋಪ. ಅಲ್ಲದೇ, ಕಮಿಷನ್ ಕೊಡಲಿಲ್ಲ ಎಂಬ ಕಾರಣಕ್ಕೆ ಹಣ ಬಿಡುಗಡೆಗೆ ತಡೆವೊಡ್ಡಿದರು. ಹಣ ಬಿಡುಗಡೆ ಆಗಬೇಕು ಅಂದರೆ ಕಮಿಷನ್ ನೀಡಬೇಕು. ಇಂಜಿನಿಯರ್ ಮೂಲಕ ಕಮಿಷನ್ ಕೇಳಿದ್ದರು. ಗುತ್ತಿಗೆದಾರ ಯಾವುದೇ ಕಾಮಗಾರಿ ಪಡೆಯೋಕೂ ಮುನ್ನ ಗಮನಕ್ಕೆ ತರಬೇಕು. ಸೆಟಲ್ ಆಗಿಲ್ಲ ಯಾಕೆ ಎಂದು ಇಂಜಿನಿಯರ್​ನ ಕೇಳ್ತೀ‌ನಿ ಎಂದು ಶಾಸಕರು ಆಡಿಯೋದಲ್ಲಿ ಹೇಳಿದ್ದಾರೆ. ಜಲ್ದಿ ಕ್ಲಿಯರ್ ಮಾಡ್ಕೋ ಎಂದು ಹೇಳಿದ್ದಾರೆ. ವ್ಯವಹಾರ ಇಟ್ಟುಕೊಂಡರೆ 25 ಕೋಟಿ ಕಾಮಗಾರಿ ಪಡೆದುಕೋ ಎಂದಿದ್ದಾರೆ‘‘ ಎಂದು ಸುದ್ದಿಗೋಷ್ಠಿಯಲ್ಲಿ ಮಂಜುನಾಥ ಆರೋಪಿಸಿದರು.

ಸಾಲ ಮಾಡಿ ಕಮೀಷನ್ ಕೊಡುವ ಸ್ಥಿತಿ ಬಂದಿದೆ: ಎರಡೂವರೆ ಕೋಟಿ ಕಾಮಗಾರಿಗೆ ಎರಡೂವರೆ ಲಕ್ಷ ಲಂಚ ಕೊಟ್ಟಿದ್ದೀನಿ. ಸಾಲ ಮಾಡಿ ಕಮೀಷನ್ ಕೊಡುವ ಸ್ಥಿತಿ ಬಂದಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.

ಓದಿ: ಕಮಿಷನ್​ ಇಲ್ಲದೆ ಯಾವುದೇ ಇಲಾಖೆಗಳು ನಡೆಯುತ್ತಿಲ್ಲ: ಬಿಜೆಪಿ ವಿರುದ್ಧ ಉಗ್ರಪ್ಪ ವಾಗ್ದಾಳಿ

Last Updated :Jan 16, 2023, 6:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.