ವಿಧಾನಸಭೆಯಲ್ಲಿ ಕಮಿಷನ್ ಆರೋಪದ ಬಗ್ಗೆ ಸಿದ್ದರಾಮಯ್ಯ ಪ್ರಸ್ತಾಪ: ಚರ್ಚೆಗೆ ಸರ್ಕಾರ ಸಿದ್ಧ ಎಂದ ಸಿಎಂ ಬೊಮ್ಮಾಯಿ

author img

By

Published : Sep 21, 2022, 5:31 PM IST

speaker-agree-to-allow-debate-on-commission-charges-against-government

ಭ್ರಷ್ಟಾಚಾರ ಇವತ್ತು, ನಿನ್ನೆಯದಲ್ಲ, ಬೇರೆ ಬೇರೆ ರೂಪದಲ್ಲಿ ಭ್ರಷ್ಟಾಚಾರ ಇದೆ. ಕಮಿಷನ್ ಆರೋಪ ವಿಚಾರದಲ್ಲಿ ಸರ್ಕಾರ ಚರ್ಚೆಗೆ ಸಿದ್ಧವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಬೆಂಗಳೂರು: ರಾಜ್ಯದಲ್ಲಿ ಕಾಮಗಾರಿಗಳ ಗುತ್ತಿಗೆ ಪಡೆಯಲು 40 ಪರ್ಸೆಂಟ್ ಕಮಿಷನ್ ಪಡೆಯಲಾಗುತ್ತಿದೆ ಎಂಬ ವಿಚಾರಕ್ಕೆ ಸಂಬಂಧಪಟ್ಟಂತೆ ವಿಧಾನಸಭೆಯಲ್ಲಿ ಚರ್ಚೆಗೆ ಅವಕಾಶ ನೀಡಬೇಕು ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ನಿಲುವಳಿ ಸೂಚನೆ ಮಂಡಿಸಿದರು. ಈ ವೇಳೆ ಪರ, ವಿರೋಧದ ಚರ್ಚೆ ನಡೆದು ನಿಯಮ 69ರಡಿಯಲ್ಲಿ ಚರ್ಚೆಗೆ ಅವಕಾಶ ನೀಡುವುದಾಗಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಶೂನ್ಯ ವೇಳೆ ಕಲಾಪ ಮುಗಿಯುತ್ತಿದ್ದಂತೆ ಸ್ಪೀಕರ್ ಕಾಗೇರಿ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ನಿಲುವಳಿ ಸೂಚನೆಯಡಿ ಕಳುಹಿಸಿರುವ ಪ್ರಸ್ತಾಪ ನಿಲುವಳಿ ಸೂಚನೆಯಡಿ ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ. ಇದನ್ನು ತಿರಸ್ಕರಿಸಿದ್ದೇನೆ ಎಂದರು. ಆಗ ಸಿದ್ದರಾಮಯ್ಯ ಈ ವಿಚಾರ ಬಹಳ ಗಂಭೀರವಾಗಿದೆ ಎಂದರು.

ವಿಧಾನಸಭೆಯಲ್ಲಿ ಕಮಿಷನ್ ಆರೋಪದ ಬಗ್ಗೆ ಸಿದ್ದರಾಮಯ್ಯ ಪ್ರಸ್ತಾಪ: ಚರ್ಚೆಗೆ ಸರ್ಕಾರ ಸಿದ್ಧ ಎಂದ ಸಿಎಂ ಬೊಮ್ಮಾಯಿ

ರಾಜ್ಯದ ಕಾಮಗಾರಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಗುತ್ತಿಗೆದಾರರ ಸಂಘದವರು ಇತ್ತೀಚೆಗೆ ಪ್ರಧಾನಿಗಳಿಗೂ ಪತ್ರ ಬರೆದಿದ್ದಾರೆ. ಕಾಮಗಾರಿಗಳನ್ನು ಪಡೆಯಲು ಶೇ.40ರಷ್ಟು ಕಮಿಷನ್ ನೀಡಬೇಕು ಎಂದು ಗುತ್ತಿಗೆದಾರರೇ ಗಂಭೀರ ಆರೋಪ ಮಾಡಿದ್ದಾರೆ. ಹಾಗಾಗಿ ಇದನ್ನು ನಿಲುವಳಿ ಸೂಚನೆಯಡಿ ಚರ್ಚೆಗೆ ಅವಕಾಶ ಮಾಡಿಕೊಡಿ. ನಿಮ್ಮ ತೀರ್ಮಾನವನ್ನು ಪುನರ್ ಪರಿಶೀಲಿಸಿ ಎಂದು ಸ್ಪೀಕರ್ ಅವರಿಗೆ ಮನವಿ ಮಾಡಿದರು.

ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಜೆಸಿ ಮಾಧುಸ್ವಾಮಿ ಮಾತನಾಡಿ, ಪ್ರತಿಪಕ್ಷದ ನಾಯಕರ ಮನವಿ ಸರಿಯಲ್ಲ. ಈ ಬಗ್ಗೆ ಅವರು ದಾಖಲೆಯನ್ನು ಒದಗಿಸಿಲ್ಲ. ಇದು ಇತ್ತೀಚೆಗೆ ನಡೆದ ಘಟನೆಯೂ ಆಗಿಲ್ಲ. ಆದ್ದರಿಂದ ನಿಲುವಳಿ ಸೂಚನೆಯಡಿ ಇದಕ್ಕೆ ಅವಕಾಶ ಕೊಡಬೇಡಿ ಎಂದು ಸ್ಪೀಕರ್ ಅವರಿಗೆ ಕೋರಿದರು.

ಈ ಹಂತದಲ್ಲಿ ಎದ್ದುನಿಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಈ ವಿಚಾರ ಅತ್ಯಂತ ಗಂಭೀರವಾಗಿದೆ. ಭ್ರಷ್ಟಾಚಾರ ಇವತ್ತು, ನಿನ್ನೆಯದಲ್ಲ, ಬೇರೆ ಬೇರೆ ರೂಪದಲ್ಲಿ ಭ್ರಷ್ಟಾಚಾರ ಇದೆ. ಕಮಿಷನ್ ಆರೋಪ ವಿಚಾರದಲ್ಲಿ ಸರ್ಕಾರ ಚರ್ಚೆಗೆ ಸಿದ್ಧವಿದೆ. ಸಮಯ ನಿಗದಿ ಮಾಡಿ. ನಾವು ಚರ್ಚೆಗೆ ಸಿದ್ಧರಿದ್ದೇವೆ. ಯಾವುದೇ ಅಭ್ಯಂತರವಿಲ್ಲ ಎಂದು ಹೇಳಿದರು.

ಆಗ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ನಿಯಮ 69ರಡಿ ಚರ್ಚೆಗೆ ಅವಕಾಶ ನೀಡುವುದಾಗಿ ಹೇಳಿ, ಇದೇ ಸಂಬಂಧ ಬಿಜೆಪಿ ಸದಸ್ಯ ಪಿ. ರಾಜೀವ್ ಅವರೂ ಒಂದು ಪತ್ರ ನೀಡಿದ್ದಾರೆ. ಎರಡನ್ನೂ ಸೇರಿಸಿ ನಿಯಮ 69ರಡಿಯಲ್ಲಿ ಚರ್ಚೆಗೆ ಅವಕಾಶ ಮಾಡಿಕೊಡುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ: ಕಾಂಗ್ರೆಸ್ ಸದಸ್ಯರ ಸಭಾತ್ಯಾಗದ ನಡುವೆ ಮತಾಂತರ ನಿಷೇಧ ಕಾಯ್ದೆಗೆ ವಿಧಾನಸಭೆ ಅಂಗೀಕಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.