ಪರಿಷತ್ ಚುನಾವಣೆ ಕಣಕ್ಕಿಳಿಯದ ಕಾಂಗ್ರೆಸ್​​ ಹಾಲಿ ಸದಸ್ಯರ ಮುಂದಿನ ಭವಿಷ್ಯವೇನು?!

author img

By

Published : Dec 8, 2021, 1:34 AM IST

council election

ಕಾಂಗ್ರೆಸ್ ಪಕ್ಷದ ಕೆಲವರು ವಯಸ್ಸಿನ ಕಾರಣ ನೀಡಿ ವಿಧಾನ ಪರಿಷತ್​ ಚುನಾವಣೆ ಕಣದಿಂದ ಹಿಂದೆ ಸರಿದರೆ, ಮತ್ತೆ ಕೆಲವರನ್ನು ಪಕ್ಷದವವರೇ ದೂರ ಇಟ್ಟಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕಿಳಿಯುವ ಆಸಕ್ತಿಯನ್ನು ಕೆಲವರು ಹೊಂದಿದ್ದು, ಮತ್ತೆ ಕೆಲವರಿಗೆ ರಾಜಕೀಯ ಬದುಕು ಸಾಕೆನಿಸಿದೆ ಎಂಬ ಮಾತಿದೆ.

ಬೆಂಗಳೂರು: ರಾಜ್ಯ ವಿಧಾನ ಪರಿಷತ್ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಕಾಂಗ್ರೆಸ್ ಪಕ್ಷದ 13 ಸದಸ್ಯರ ಪೈಕಿ ಕೇವಲ 3 ಮಂದಿ ಮಾತ್ರ ಮತ್ತೆ ಕಣದಲ್ಲಿದ್ದು, ಕಣಕ್ಕಿಳಿಯದ ಸದಸ್ಯರ ಮುಂದಿನ ಭವಿಷ್ಯ ಏನು ಎನ್ನುವ ಚರ್ಚೆ ಆರಂಭವಾಗಿದೆ.

ಕೆಲವರು ವಯಸ್ಸಿನ ಕಾರಣ ನೀಡಿ ಕಣದಿಂದ ಹಿಂದೆ ಸರಿದರೆ, ಮತ್ತೆ ಕೆಲವರನ್ನು ಪಕ್ಷದವವರೇ ದೂರ ಇಟ್ಟಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕಿಳಿಯುವ ಆಸಕ್ತಿಯನ್ನು ಕೆಲವರು ಹೊಂದಿದ್ದು, ಮತ್ತೆ ಕೆಲವರಿಗೆ ರಾಜಕೀಯ ಬದುಕು ಸಾಕೆನಿಸಿದೆ ಎಂಬ ಮಾತಿದೆ. ಆದರೆ ಕಣಕ್ಕಿಳಿಯದ ಹೆಚ್ಚಿನವರಿಗೆ ಪಕ್ಷ ತಮಗೆ ಯಾವುದಾದರೂ ಜವಾಬ್ದಾರಿ ನೀಡುವ ಮೂಲಕ ಪಕ್ಷದ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲಿದೆ ಎನ್ನುವ ಆಶಯ ಇದೆ. ಇದಕ್ಕೆ ಪಕ್ಷ ಎಷ್ಟರ ಮಟ್ಟಿಗೆ ಸ್ಪಂದಿಸಲಿದೆ ಎನ್ನುವುದನ್ನು ಮುಂದಿನ ದಿನಗಳಲ್ಲಿ ಕಾದುನೋಡಬೇಕಿದೆ.

ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗಿರುವ ರಾಜ್ಯ ವಿಧಾನಪರಿಷತ್​ನ 25 ಸದಸ್ಯರ ಸ್ಥಾನ 2022ರ ಜನವರಿ ಮೊದಲ ವಾರ ತೆರವಾಗಲಿದ್ದು, ಇದಕ್ಕಾಗಿ ಡಿ.10ರಂದು ಚುನಾವಣೆ ನಡೆದು 14ರಂದು ಫಲಿತಾಂಶ ಪ್ರಕಟವಾಗಲಿದೆ. 25 ಸ್ಥಾನಗಳ ಪೈಕಿ 5 ಜಿಲ್ಲೆಗಳು ದ್ವೀಸದಸ್ಯತ್ವ ಹೊಂದಿವೆ. ಹೀಗಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ತಲಾ 20 ಅಧಿಕೃತ ಸದಸ್ಯರನ್ನು ಮಾತ್ರ ಕಣಕ್ಕಿಳಿಸಿವೆ. ಉಳಿದಂತೆ ಮತ್ತೊಬ್ಬ ಪಕ್ಷೇತರ ಸದಸ್ಯರಿಗೆ ಬೆಂಬಲ ನೀಡಿವೆ. ಒಂದೊಮ್ಮೆ ಅವರು ಗೆದ್ದರೆ ಅವರನ್ನು ತಮ್ಮತ್ತ ಸೆಳೆಯುವುದು ಉದ್ದೇಶ. ಕಾಂಗ್ರೆಸ್​​ನ ಹಾಲಿ 13 ಸದಸ್ಯರ ಪೈಕಿ ಮೂವರು ಮಾತ್ರ ಕಣದಲ್ಲಿದ್ದಾರೆ. ಉಳಿದವರು ಪರ್ಯಾಯದ ನಿರೀಕ್ಷೆಯಲ್ಲಿದ್ದಾರೆ.

ಯಾರ್ಯಾರು ಸದಸ್ಯರು:

ಸದ್ಯ ವಿಧಾನ ಪರಿಷತ್​ನಲ್ಲಿ ಕಾಂಗ್ರೆಸ್ ಪ್ರತಿಪಕ್ಷವಾಗಿದೆ. ಎಸ್.ಆರ್. ಪಾಟೀಲ್ (ಪ್ರತಿಪಕ್ಷ ನಾಯಕ), ಪ್ರತಾಪ್ ಚಂದ್ರ ಶೆಟ್ಟಿ (ಮಾಜಿ ಸಭಾಪತಿ), ಶ್ರೀಕಾಂತ್ ಲಕ್ಷ್ಮಣ್ ಘೋಟ್ನೇಕರ್, ಶ್ರೀನಿವಾಸ್ ಮಾನೆ (ಹಾಲಿ ಶಾಸಕರು- ಹಾನಗಲ್), ಆರ್. ಧರ್ಮಸೇನ, ವಿಜಯ್ ಸಿಂಗ್, ಬಸವರಾಜ್ ಪಾಟೀಲ್ ಇಟಗಿ, ಎಂ.ಎ. ಗೋಪಾಲಸ್ವಾಮಿ, ಎಂ. ನಾರಾಯಣಸ್ವಾಮಿ (ಪ್ರತಿಪಕ್ಷ ಸಚೇತಕ), ರಘು ಆಚಾರ್ ಈ ಸಲ ಕಣಕ್ಕಿಳಿದಿಲ್ಲ. ಕೆ.ಸಿ. ಕೊಂಡಯ್ಯ, ಆರ್. ಪ್ರಸನ್ನ ಕುಮಾರ್, ಎಸ್. ರವಿ ತಮ್ಮ ಕ್ಷೇತ್ರಗಳಲ್ಲಿ ಕಣಕ್ಕಿಳಿದಿದ್ದಾರೆ.

ಕಣಕ್ಕಿಳಿಯದವರ ಪೈಕಿ ಎಸ್.ಆರ್. ಪಾಟೀಲ್ ಪಕ್ಷ ಯಾವುದಾದರೂ ಜವಾಬ್ದಾರಿ ನೀಡುವುದೇ ಎಂಬ ನಿರೀಕ್ಷೆಯಲ್ಲಿದ್ದಾರೆ. ಇವರಿಗೆ ಕಣಕ್ಕಿಳಿಯುವ ಆಸಕ್ತಿ ಇದ್ದರೂ, ಪಕ್ಷ ಉತ್ಸುಕತೆ ತೋರಿಸಿಲ್ಲ. ಪ್ರತಾಪ್ ಚಂದ್ರ ಶೆಟ್ಟಿ, ಆರ್. ಧರ್ಮಸೇನ, ವಿಜಯ್ ಸಿಂಗ್, ಬಸವರಾಜ್ ಪಾಟೀಲ್ ಇಟಗಿ ಸ್ಪರ್ಧಿಸುವ ಆಸಕ್ತಿ ತೋರಿಸಿಲ್ಲ. ಶ್ರೀನಿವಾಸ ಮಾನೆ ವಿಧಾನಸಭೆ ಪ್ರವೇಶಿಸಿದ್ದಾರೆ. ಶ್ರೀಕಾಂತ್ ಲಕ್ಷ್ಮಣ್ ಘೋಟ್ನೇಕರ್, ಎಂ.ಎ. ಗೋಪಾಲಸ್ವಾಮಿ ಯಾಕೆ ಕಣಕ್ಕಿಳಿದಿಲ್ಲ ಅನ್ನುವ ಬಗ್ಗೆ ಸ್ಪಷ್ಟತೆ ಯಾವ ಕಡೆಯಿಂದಲೂ ಇಲ್ಲ.

ವಿಜಯ್ ಸಿಂಗ್ ಬೀದರ್ ಜಿಲ್ಲೆಯ ಬಸವಕಲ್ಯಾಣ ಕ್ಷೇತ್ರದಿಂದ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕಿಳಿಯುವ ಆಶಯ ಹೊಂದಿದ್ದಾರೆ. ಅದೇ ರೀತಿ ರಘು ಆಚಾರ್ ಅವರು ಚಿತ್ರದುರ್ಗ ನಗರ, ಎಂ. ನಾರಾಯಣಸ್ವಾಮಿ ಅವರು ಕೆ.ಆರ್. ಪುರ ವಿಧಾನಸಭೆಯಿಂದ ಅದೃಷ್ಟ ಪರೀಕ್ಷೆಗೆ ಒಳಗಾಗಲು ತೀರ್ಮಾನಿಸಿದ್ದಾರೆ.

ಒಟ್ಟಾರೆ ಮೇಲ್ಮನೆಯಿಂದ ಕೆಳಮನೆಯತ್ತ ಸಹ ಕೆಲವರು ಆಸಕ್ತಿ ತೋರಿಸುತ್ತಿದ್ದಾರೆ. ಮೇಲಿನ ಎಲ್ಲರ ಭವಿಷ್ಯ ಸದ್ಯ ಅಸ್ಪಷ್ಟವಾಗಿದ್ದು, ಪಕ್ಷ ಯಾರಿಗೆ ಯಾವ ರೀತಿಯ ಅವಕಾಶ ನೀಡಲಿದೆ ಎನ್ನುವುದರ ಮೇಲೆ ಅವರು ಮುಂದಿನ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.

ಇದನ್ನೂ ಓದಿ: ಸ್ನೇಹಿತರ ಮಧ್ಯೆ ಬೈಕ್ ಓಡಿಸುವ ಸಲುವಾಗಿ ಗಲಾಟೆ : ಗೆಳೆಯನ ಕೊಂದು ನದಿಗೆ ಎಸೆದ ಕಿರಾತಕರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.