ಬಿಬಿಎಂಪಿಯಿಂದ ವೈಟ್ ಟಾಪಿಂಗ್: ಟೆಂಡರ್ ಶ್ಯೂರ್ ರಸ್ತೆಗಳಾಯ್ತು, ಇದೀಗ ಬೆಂಗಳೂರಲ್ಲಿ "ರ‍್ಯಾಪಿಡ್ ರಸ್ತೆ”

author img

By

Published : Nov 23, 2022, 5:58 PM IST

Updated : Nov 24, 2022, 12:44 PM IST

Rapid Road in bengaluru

ನಗರದಲ್ಲಿ ರಸ್ತೆಗಳಲ್ಲಿ ರಸ್ತೆ ಕಾಮಗಾರಿ ನಡೆಸುವ ಸಮಯದಲ್ಲಿ ವಾಹನಗಳ ಸಂಚಾರ ದಟ್ಟಣೆ ಹೆಚ್ಚಾಗುತ್ತದೆ. ಇದನ್ನು ತಪ್ಪಿಸುವ ಸಲುವಾಗಿ ಪಾಲಿಕೆಯು ಪ್ರಾಯೋಗಿಕವಾಗಿ ರ‍್ಯಾಪಿಡ್ ರಸ್ತೆಯೆಂಬ ವಿನೂತನ ತಂತ್ರಾಜ್ಞಾನವನ್ನು ಅನುಷ್ಠಾನಗೊಳಿಸುತ್ತಿದೆ.

ಬೆಂಗಳೂರು: ನಗರದ ಹಳೆ ಮದ್ರಾಸ್ ರಸ್ತೆಯ ಹೊಸ ಬಿನ್ನಮಂಗಲ ವೃತ್ತದ ಬಳಿ ವಿನೂತನ ತಂತ್ರಾಜ್ಞಾನದೊಂದಿಗೆ 500 ಮೀಟರ್ ಉದ್ದದ ರಸ್ತೆಯಲ್ಲಿ ಪ್ರಾಯೋಗಿಕವಾಗಿ ರ‍್ಯಾಪಿಡ್ ರಸ್ತೆ (ಪ್ರಿಕಾಸ್ಟ್ ಪೋಸ್ಟ್ ಟೆನ್ಷನಿಂಗ್ ಕಾಂಕ್ರೀಟ್ ಪೇವ್‌ಮೆಂಟ್) ಅನ್ನು ನಿರ್ಮಾಣ ಮಾಡಲಾಗುತ್ತಿದ್ದು, ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ನಗರದಲ್ಲಿ ರಸ್ತೆಗಳಲ್ಲಿ ವೈಟ್ ಟಾಪಿಂಗ್ ಅಥವಾ ಟೆಂಡರ್ ಶ್ಯೂರ್ ಕಾಮಗಾರಿ ನಡೆಸುವ ಸಮಯದಲ್ಲಿ ವಾಹನಗಳ ಸಂಚಾರ ನಿಷೇಧಿಸುವುದರಿಂದ ದಟ್ಟಣೆ ಹೆಚ್ಚಾಗುತ್ತದೆ. ಇದನ್ನು ತಪ್ಪಿಸುವ ಸಲುವಾಗಿ ಪಾಲಿಕೆಯು ಪ್ರಾಯೋಗಿಕವಾಗಿ ರ‍್ಯಾಪಿಡ್ ರಸ್ತೆಯೆಂಬ ವಿನೂತನ ತಂತ್ರಾಜ್ಞಾನವನ್ನು ಅನುಷ್ಠಾನಗೊಳಿಸುತ್ತಿದೆ. ಇದರಿಂದ ರಸ್ತೆ ಕ್ಯೂರಿಂಗ್ ಮಾಡುವ ಅವಶ್ಯಕತೆಯಿರುವುದಿಲ್ಲ. ಪ್ರಿಕಾಸ್ಟ್ ಪ್ಯಾನಲ್ ಅಳವಡಿಸಿದ ಕೂಡಲೆ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಬಹುದಾಗಿದೆ.

ರ‍್ಯಾಪಿಡ್ ರಸ್ತೆಯನ್ನು ಪ್ರಿಕಾಸ್ಟ್ ಪೋಸ್ಟ್ ಟೆನ್ಷನಿಂಗ್ ಕಾಂಕ್ರೀಟ್ ಪೇವ್‌ಮೆಂಟ್(ಪ್ರಿಕಾಸ್ಟ್ ಪ್ಯಾನಲ್) ನಿಂದ ನಿರ್ಮಿಸಲಾಗುತ್ತಿದೆ. ಮೊದಲಿಗೆ ರಸ್ತೆಯನ್ನು ಸಮತಟ್ಟಾಗಿ ಮಾಡಿಕೊಂಡು ಅದರ ಮೇಲೆ ಪ್ರಿಕಾಸ್ಟ್ ಪ್ಯಾನಲ್ ಗಳನ್ನು ಅಳವಡಿಸಲಾಗುತ್ತದೆ. ಪ್ರತಿ ಪ್ರಿಕಾಸ್ಟ್ ಪ್ಯಾನಲ್ ಗಳಲ್ಲಿ 4 ರಂಧ್ರಗಳಿರಲಿದ್ದು, ವಾಹನಗಳು ಇದರ ಮೇಲೆ ಸಂಚರಿಸುವಾಗ ವಾಹನಗಳ ಭಾರದಿಂದ ಪ್ಯಾನಲ್ ಗಳು ಅಲುಗಾಡದಂತೆ ಒಂದು ಪ್ಯಾನಲ್ ನಿಂದ ಮತ್ತೊಂದು ಪ್ಯಾನಲ್​ಗೆ ಪೋಸ್ಟ್ ಟೆನ್ಷನಿಂಗ್(ಸ್ಟೀಲ್ ತಂತಿಗಳು - High Tensile Steel Cable) ಮಾಡಲಾಗುತ್ತದೆ. ಇದರಿಂದ ಎಷ್ಟೇ ಭಾರದ ವಾಹನಗಳು ಸಂಚರಿಸಿದರು ಯಾವುದೇ ಸಮಸ್ಯೆಯಾಗುವುದಿಲ್ಲ.

ರ‍್ಯಾಪಿಡ್ ರಸ್ತೆ ನಿರ್ಮಾಣ

ಒಂದು ಪ್ರಿಕಾಸ್ಟ್ ಪ್ಯಾನಲ್ 5 ಅಡಿ ಅಗಲ, 20 ಅಡಿ ಉದ್ದ ಹಾಗೂ 7 ಇಂಚು ದಪ್ಪವಿರುತ್ತದೆ. ಪ್ರತಿ 45 ಮೀಟರ್ ಗೂ ರ‍್ಯಾರ್ಪಿಡ್ ಹಾರ್ಡನಿಂಗ್ ಕಾಂಕ್ರೀಟ್ ಹಾಕಲಾಗುತ್ತದೆ. ಪ್ರಿಕಾಸ್ಟ್ ಪ್ಯಾನಲ್‌ಗಳನ್ನು ಬೇರೆಡೆ ತಯಾರಿಸಿ ಕ್ಯೂರಿಂಗ್ ಮಾಡಿಕೊಂಡು ತರಲಾಗುತ್ತದೆ. ರಸ್ತೆಗಳ ವಿನ್ಯಾಸಕ್ಕೆ ತಂಕ್ಕಂತೆ ಪ್ಯಾನಲ್ ಗಳನ್ನು ಸಿದ್ಧಪಡಿಸಲಾಗುತ್ತದೆ.

ದೇಶದಲ್ಲೇ ಇದೇ ಮೊದಲು: ಬಿಬಿಎಂಪಿಯು ಆದಿತ್ಯ ಬಿರ್ಲಾ ಅಲ್ಟ್ರಾ ಟೆಕ್ ಸಂಸ್ಥೆಯ ಸಹಯೋಗದೊಂದಿಗೆ ರ‍್ಯಾಪಿಡ್ ರಸ್ತೆ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಸದರಿ ರಸ್ತೆಯು ದೀರ್ಘಕಾಲ ಬಾಳಿಕೆ ಬರಲಿದ್ದು, ದೇಶದಲ್ಲಿ ಇದೇ ಮೊದಲ ಬಾರಿಗೆ ರ‍್ಯಾಪಿಡ್ ರಸ್ತೆಯೆಂಬ ವಿನೂತನ ತಂತ್ರಜ್ಞಾನವನ್ನು ಅನುಷ್ಠಾನಗೊಳಿಸಲಾಗಿದೆ.

ಇನ್ನೆರಡು ದಿನದಲ್ಲಿ ಕಾಮಗಾರಿ ಪೂರ್ಣ: ಹಳೆ ಮದ್ರಾಸ್ ರಸ್ತೆಯ ಹೊಸ ಬಿನ್ನಮಂಗಲ ವೃತ್ತದ ಬಳಿ ರ‍್ಯಾಪಿಡ್ ರಸ್ತೆ ನಿರ್ಮಾಣ ಮಾಡುತ್ತಿದ್ದು, ನಿನ್ನೆಯಿಂದ ಕಾಮಗಾರಿಯನ್ನು ಪ್ರಾರಂಭಿಸಲಾಗಿದೆ. ಈ ಪೈಕಿ 500 ಮೀಟರ್ ಉದ್ದದ ರಸ್ತೆಯಲ್ಲಿ ಈವರೆಗೆ ಸುಮಾರು ಸುಮಾರು 100 ಮೀಟರ್ ಗಳಿಗೆ ಪ್ರಿಕಾಸ್ಟ್ ಪ್ಯಾನಲ್‌ಗಳನ್ನು ಅಳವಡಿಸಲಾಗಿದ್ದು, ಇನ್ನು 2 ದಿನದೊಳಗಾಗಿ ರ‍್ಯಾಪಿಡ್ ರಸ್ತೆ ನಿರ್ಮಾಣವಾಗಲಿದೆ.

ವಿಂಡ್​ಟನಲ್ ರಸ್ತೆ ಜಂಕ್ಷನ್, ಸುರಂಜನ್ ದಾಸ್ ಜಂಕ್ಷನ್ ಪರಿಶೀಲನೆ: ವಿಂಡ್‌ಟನಲ್ ಜಂಕ್ಷನ್ ಬಳಿ ನಿರ್ಮಿಸುತ್ತಿರುವ ಕೆಳಸೇತುವೆ ಕಾಮಗಾರಿಯು ಪ್ರಗತಿಯಲ್ಲಿದ್ದು, ಎನ್.ಎ.ಎಲ್ ಮತ್ತು ಇಸ್ರೋ ಸಂಸ್ಥೆಗೆ ಸೇರಿದ ಜಾಗವನ್ನು ಭೂಸ್ವಾಧೀನ ಪಡಿಸಿಕೊಳ್ಳಲಾಗಿರುತ್ತದೆ. ಒಂದು ಭಾಗದಲ್ಲಿ ಕೆಳಸೇತುವೆಯ ರಿಟೈನಿಂಗ್ ವಾಲ್ ಕಾಮಗಾರಿ ಪೂರ್ಣಗೊಳಿಸಲಾಗಿರುತ್ತದೆ. ರಸ್ತೆಯ ಇನ್ನೊಂದು ಭಾಗದಲ್ಲಿ ಬದಲಿ ವಾಹನ ಸಂಚಾರಕ್ಕೆ ಅನುಮತಿ ಪಡೆದು ಸಂಚಾರಿ ಮಾರ್ಗ ಬದಲಾವಣೆಯಾದ ಕೂಡಲೆ ರಿಟೈನಿಂಗ್ ವಾಲ್ ಕಾಮಗಾರಿ ಮತ್ತು ಪ್ರಿಕಾಸ್ಟ್ ಬಾಕ್ಸ್ ಎಲಿಮೆಂಟ್ಸ್ ಅಳವಡಿಸಿ ಕಾಮಗಾರಿಯನ್ನು ಪರಿಶೀಲಿಸಿ ಮುಂದಿನ ಜೂನ್ 2023ರೊಳಗಾಗಿ ಪೂರ್ಣಗೊಳಿಸಲು ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ಸೂಚಿಸಿದರು.

ಸುರಂಜನ್ ದಾಸ್ ಜಂಕ್ಷನ್ ಬಳಿ ಮಾರತಹಳ್ಳಿ ಕಡೆಯಿಂದ ಬೆಂಗಳೂರಿಗೆ ಬರುವ ರಿಟೈನಿಂಗ್ ವಾಲ್ ಕಾಮಗಾರಿ ಪೂರ್ಣಗೊಂಡಿರುತ್ತದೆ. ಮತ್ತೊಂದು ಭಾಗದಲ್ಲಿ ಕೆಲವು ಮರಗಳ ಸ್ಥಳಾಂತರ ಕೂಡಾ ಮಾಡಲಾಗಿರುತ್ತದೆ. ಎರಡೂ ಬದಿಯ ರಿಟೈನಿಂಗ್ ವಾಲ್ ಕಾಮಗಾರಿ ಪೂರ್ಣಗೊಂಡಿದ್ದು, ಪ್ರಿಕಾಸ್ಟ್ ಬಾಕ್ಸ್ ಎಲಿಮೆಂಟ್ಸ್ ಅಳವಡಿಕೆಯು ಶೇ. 60 ರಷ್ಟು ಪೂರ್ಣಗೊಳಿಸಲಾಗಿದೆ. ಕೆಳಸೇತುವೆಯ ಬಲಭಾಗದ ಸರ್ವೀಸ್ ರಸ್ತೆಯನ್ನು ನವೆಂಬರ್ 30 ರೊಳಗಾಗಿ ಪೂರ್ಣಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಜೊತೆಗೆ ಕೆಳಸೇತುವೆ ಕಾಮಗಾರಿಯನ್ನು 15 ಜನವರಿ 2023ರೊಳಗಾಗಿ ಪೂರ್ಣಗೊಳಿಸಲು ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ಸೂಚಿಸಿದರು.

ಭೂಸ್ವಾಧೀನ ಪ್ರಕ್ರಿಯೆ ಪರಿಶೀಲನೆ: ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಒಟ್ಟು 90 ಕೋಟಿ ರೂ. ವೆಚ್ಚದಲ್ಲಿ ಗ್ರೇಡ್ ಸೆಪರೇಟರ್ ಕಾಮಗಾರಿ ಕೈಗೆತ್ತಿಕೊಂಡಿದ್ದು, ಹೂಡಿ ಜಂಕ್ಷನ್ ನಲ್ಲಿ ಮೇಲುಸೇತುವೆ, ಬಿಗ್ ಬಜಾರ್ ಜಂಕ್ಷನ್ ಹಾಗೂ ಓ-ಫಾರ್ಮ್ಂ ಜಂಕ್ಷನ್ ಬಳಿ ಕೆಳಸೇತುವೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಸಂಬಂಧ ಸದರಿ ಕಾಮಗಾರಿಗಳಿಗೆ ಟೆಂಡರ್ ನೀಡಿ ಕಾಮಗಾರಿ ನಡೆಸಲು ಕಾರ್ಯಾದೇಶವನ್ನು ನೀಡಲಾಗಿದೆ. ಗ್ರೇಡ್ ಸೆಪರೇಟರ್ ನಿರ್ಮಾಣಕ್ಕೆ ಅಗತ್ಯವಿರುವ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಮುಖ್ಯ ಆಯುಕ್ತರು ಕಂದಾಯ ನಕ್ಷೆಗಳನ್ನು ಪರಿಶೀಲಿಸಿ ಕಾಮಗಾರಿಗೆ ಅವಶ್ಯಕವಿರುವ ವಿಸ್ತೀರ್ಣವನ್ನು ಮರು ಪರಿಶೀಲಿಸಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದನ್ನೂ ಓದಿ:ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಪ್ರಯಾಣಿಸಿ: ಬಿಎಂಟಿಸಿ ಬಸ್​ಗಳಲ್ಲಿ ಡಿಜಿಟಲ್ ಟಿಕೆಟಿಂಗ್ ವ್ಯವಸ್ಥೆ

Last Updated :Nov 24, 2022, 12:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.