ಬೆಂಗಳೂರಲ್ಲಿ ಕೊರೆಯುವ ಚಳಿ ಜೊತೆ ತುಂತುರು ಮಳೆ

ಬೆಂಗಳೂರಲ್ಲಿ ಕೊರೆಯುವ ಚಳಿ ಜೊತೆ ತುಂತುರು ಮಳೆ
ಇಂದು ಮತ್ತು ನಾಳೆ, ದಕ್ಷಿಣ ಕರ್ನಾಟಕದ ಒಳನಾಡಿನ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಹಾಗೆಯೇ ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಒಣ ಹವೆ ಇರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಬೆಂಗಳೂರು: ಮುಂಜಾನೆಯಿಂದಲೇ ರಾಜಧಾನಿ ಬೆಂಗಳೂರಿನ ಆಗಸದಲ್ಲಿ ಸೂರ್ಯ ಮಾಯವಾಗಿದ್ದ. ದಟ್ಟ ಮೋಡ ಕವಿದ ವಾತಾವರಣ ಕಂಡುಬಂತು. ಕೊರೆಯುವ ಚಳಿಯೊಡನೆ ತುಂತುರು ಮಳೆಯೂ ಜೊತೆಯಾಯಿತು. ಬೆಳ್ಳಂಬೆಳಗ್ಗೆಯೇ ನಗರದ ವಾತಾವರಣ ಮಂಜಿನಿಂದ ಆವೃತವಾಗಿತ್ತು. ನಗರದಲ್ಲಿ ಸೋಮವಾರ ಕನಿಷ್ಠ ತಾಪಮಾನ 13.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ನವೆಂಬರ್ ತಿಂಗಳಿನಲ್ಲಿ ದಾಖಲಾದ ಕನಿಷ್ಠ ತಾಪಮಾನ ಇದಾಗಿದೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದು ತಮಿಳುನಾಡು ಕರಾವಳಿ ಸೇರಿದಂತೆ ಹಲವೆಡೆ ಮಳೆಯಾಗುತ್ತಿದೆ ಎಂದು ತಿಳಿದು ಬಂದಿದೆ.
ಇನ್ನು ರಾಜ್ಯದಲ್ಲಿ ಇಂದು ಮತ್ತು ನಾಳೆ, ದಕ್ಷಿಣ ಕರ್ನಾಟಕದ ಒಳನಾಡಿನ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಒಣಹವೆ ಇರಲಿದೆ ಇದರ ಜೊತೆಗೆ ಮುಂದಿನ 5 ದಿನ ಕರಾವಳಿ ಹಾಗೂ ಉತ್ತರ ಒಳನಾಡಿನದಲ್ಲಿ ಹಗುರ ಮಳೆ, ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಕೆಲವೆಡೆ ಗುಡುಗು, ಮಿಂಚು ಸಹಿತ ಸಾಧಾರಣ ಮಳೆಯಾಗಲಿದೆ. ಮುಂದಿನ 24 ಘಂಟೆಗಳಲ್ಲಿ ರಾಜ್ಯದಾದ್ಯಂತ ಕೆಲವು ಕಡೆಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಅತಿ ಗಮನಾರ್ಹವಾಗಿ ಕಡಿಮೆ ಇರಲಿದೆ.
ಮುಂದಿನ 24 ಗಂಟೆಗಳಲ್ಲಿ, ಉತ್ತರ ಒಳನಾಡಿನಲ್ಲಿ ಇರುವ ತಾಪಮಾನವು 5 ರಿಂದ 8 ಡಿಗ್ರಿಗೆ ಇಳಿದು ಕಡಿಮೆ ಉಷ್ಣಾಂಶ ಕಂಡುಬರಲಿದೆ. ಬೀದರ್, ಕಲಬುರ್ಗಿ, ರಾಯಚೂರಿನಲ್ಲಿ ಕೂಡ ಇದೇ ರೀತಿ ಸಾಮಾನ್ಯ ತಾಪಮಾನವು 3 ರಿಂದ 5 ಡಿಗ್ರಿ ಕಡಿಮೆ ಹಾಗೂ ದಕ್ಷಿಣ ಒಳನಾಡಿನ ಚಿತ್ರದುರ್ಗ, ಮಂಡ್ಯ, ಮೈಸೂರು, ಬಳ್ಳಾರಿಯಲ್ಲಿ ಹಾಗೂ ಕರಾವಳಿಯ ಹೊನ್ನಾವರ, ಕಾರವಾರದಲ್ಲಿ ಸಾಮಾನ್ಯಕ್ಕಿಂತ 3 ರಿಂದ 4 ಡಿಗ್ರಿ ಕಡಿಮೆ ಉಷ್ಣಾಂಶವಿರುವ ಸಾಧ್ಯತೆ ಇದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.
ಇದನ್ನೂ ಓದಿ: ಸೊಲೊಮನ್ ದ್ವೀಪಗಳಲ್ಲಿ ಪ್ರಬಲ ಭೂಕಂಪ: ರಿಕ್ಟರ್ ಮಾಪಕದಲ್ಲಿ 7.0 ತೀವ್ರತೆ ದಾಖಲು
