ವೇತನ ಪರಿಷ್ಕರಿಸುವಂತೆ ಆಗ್ರಹಿಸಿ ರಸ್ತೆ ಸಾರಿಗೆ ನೌಕರರ ಧರಣಿ ಸತ್ಯಾಗ್ರಹ: ಬಸ್ ಸಂಚಾರದಲ್ಲಿಲ್ಲ ವ್ಯತ್ಯಯ

author img

By

Published : Jan 24, 2023, 4:33 PM IST

ರಸ್ತೆ ಸಾರಿಗೆ ನೌಕರರ ಧರಣಿ ಸತ್ಯಾಗ್ರಹ

ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಧರಣಿ ಸತ್ಯಾಗ್ರಹ ನಡೆಸಲು ಕರೆ-ವೇತನ ಪರಿಷ್ಕರಣೆ ಸೇರಿದಂತೆ ಒಟ್ಟು 16 ಬೇಡಿಕೆಗಳ ಈಡೇರಿಕೆಗೆ ಒತ್ತಾಯ - ಪ್ರಯಾಣಿಕರಿಗಿಲ್ಲ ಸಂಚಾರದ ವ್ಯತ್ಯಯ

ಬೆಂಗಳೂರು : ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮತ್ತೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ನೌಕರರು ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ. ಆದರೆ ಬಸ್​ಗಳ ಓಡಾಟದಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ. ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಧರಣಿ ಸತ್ಯಾಗ್ರಹ ನಡೆಸಲು ಕರೆ ನೀಡಿದೆ. ಇಂದು ಬೆಳಗ್ಗೆ 11ರಿಂದ ಸಂಜೆ 5.30 ರವರೆಗೆ ನಾಲ್ಕೂ ರಸ್ತೆ ಸಾರಿಗೆ ಸಂಸ್ಥೆಗಳ ವ್ಯಾಪ್ತಿಯ ವಿಭಾಗೀಯ ಕಚೇರಿಗಳ ಮುಂದೆ ಧರಣಿ ಸತ್ಯಾಗ್ರಹ ನಡೆಸಲಿದ್ದಾರೆ. ವೇತನ ಪರಿಷ್ಕರಣೆ ಸೇರಿದಂತೆ ಒಟ್ಟು 16 ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿವೆ.

ಸರ್ಕಾರ 6 ವರ್ಷಗಳಿಂದ ವೇತನ ಹೆಚ್ಚಳ ಮಾಡದಿರುವುದು ಸಾರಿಗೆ ನೌಕರರ ಆಕ್ರೋಶಕ್ಕೆ ಕಾರಣವಾಗಿದೆ. ರಾಜ್ಯ ಸಾರಿಗೆ ನೌಕರರ ಮುಖಂಡ ಅನಂತಸುಬ್ಬರಾವ್ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ನಡೆಯುತ್ತಿದೆ. ಎಲ್ಲ ನಿಗಮಗಳ ವಿಭಾಗೀಯ ಕಚೇರಿಗಳ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ.

ಬಸ್ ಸಂಚಾರದಲ್ಲಿ ವ್ಯತ್ಯಯ ಇಲ್ಲ: ನೌಕರರ ಧರಣಿ ಸತ್ಯಾಗ್ರಹದ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಅಧಿಕಾರಿಗಳು, ಬಸ್‌ಗಳ ಕಾರ್ಯಾಚರಣೆಯಲ್ಲಿ ಯಾವುದೇ ರೀತಿಯ ವ್ಯತ್ಯಯವಾಗುವುದಿಲ್ಲ. ಬಸ್‌ಗಳು ಎಂದಿನಂತೆ ಸಂಚರಿಸಲಿವೆ ಎಂದು ತಿಳಿಸಿದ್ದಾರೆ. ಇಂದು ಬೆಳಗ್ಗೆ ಕೆಎಸ್​ಆರ್​ಟಿಸಿ ಸಂಚಾರದಲ್ಲಿ ಹೆಚ್ಚಿನ ವ್ಯತ್ಯಯವಾಗಿಲ್ಲ. 96.66% ಬಸ್​ಗಳ ಓಡಾಟ ನಡೆದಿದೆ ಎಂದು ಕೆಎಸ್​ಆರ್​ಟಿಸಿ ಸ್ಪಷ್ಟಪಡಿಸಿದೆ.

ಧರಣಿ ಸತ್ಯಾಗ್ರಹದಲ್ಲಿ ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ (ವಾಯವ್ಯ), ಕೆಕೆಆರ್‌ಟಿಸಿ (ಕಲ್ಯಾಣ) ನೌಕರರು ಸಾಂಕೇತಿಕವಾಗಿ ಸೀಮಿತ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ. ರಜೆ ಇರುವ ಸಿಬ್ಬಂದಿಗಳು, ಸಂಘದ ಪ್ರಮುಖರು ಮಾತ್ರ ಭಾಗವಹಿಸಲಿದ್ದಾರೆ ಎಂದು ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಒಕ್ಕೂಟ ಮುಖಂಡ ಅನಂತ ಸುಬ್ಬರಾವ್‌ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಬೆಳಗ್ಗೆ 11 ರಿಂದ ಸಂಜೆ 5.30ರವರೆಗೆ ಮಾತ್ರ ಧರಣಿ ನಡೆಯಲಿದೆ. ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಕ್ರಮ ವಹಿಸದಿದ್ದರೆ, ಮುಷ್ಕರ ನಡೆಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಏನಿದು ವೇತನ ಪರಿಷ್ಕರಣೆಯ ಬೇಡಿಕೆ?: ಕಳೆದ ಹಲವು ವರ್ಷಗಳಿಂದ ವೇತನ ಹೆಚ್ಚಳ ಮಾಡಿಲ್ಲ. ಆದರೆ, ಶಾಸಕರು, ಸಚಿವರ ವೇತನವನ್ನು ಜಾಸ್ತಿ ಮಾಡಿಕೊಂಡಿದ್ದಾರೆ. ಬೆವರು ಸುರಿಸಿ ದುಡಿಯುವವರಿಗೆ ಸಂಬಳ ಜಾಸ್ತಿ ಮಾಡದೆ, ದೌರ್ಜನ್ಯವೆಸಗಲಾಗುತ್ತಿದೆ ಎಂದು ಸಾರಿಗೆ ನೌಕರರು ಆರೋಪಿಸಿದ್ದಾರೆ.

ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ 2021ರ ಏಪ್ರಿಲ್‌ನಲ್ಲಿ ನೌಕರರು 15 ದಿನಗಳ ಕಾಲ ಮುಷ್ಕರ ನಡೆಸಿದ್ದರು. ಆದರೂ ಇಲ್ಲಿಯವರೆಗೆ ನೌಕರರ ಬೇಡಿಕೆ ಈಡೇರಿಲ್ಲ. ಪ್ರತಿ ನಾಲ್ಕು ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ಮಾಡಲಾಗುತ್ತಿತ್ತು. ಆದರೆ ನಿಗಮಗಳು 6 ವರ್ಷ ಕಳೆದರೂ ವೇತನ ಪರಿಷ್ಕರಣೆ ಮಾಡಿಲ್ಲ‌. ನಿಯಮದಂತೆ 2020 ಮಾರ್ಚ್‌ನಲ್ಲಿ ವೇತನ ಪರಿಷ್ಕರಣೆ ಆಗಬೇಕಿತ್ತು. ಈ ಹಿಂದೆ 2019ರಲ್ಲಿ ಶೇ. 12.5%ರಷ್ಟು ವೇತನ ಪರಿಷ್ಕರಣೆ ಆಗಿತ್ತು. ಅದಾದ ಬಳಿಕ ವೇತನ ಹೆಚ್ಚಳವಾಗಿಲ್ಲ. ಸರ್ಕಾರದ ಈ ನಡೆ ಆಕ್ರೋಶಕ್ಕೆ ಕಾರಣವಾಗಿದ್ದು, ಸತ್ಯಾಗ್ರಹ ನಡೆಸುತ್ತಿದ್ದಾರೆ.

ಇದರ ಜೊತೆಗೆ ಪ್ರಮುಖವಾಗಿ 16 ಸಾವಿರ ಹುದ್ದೆಗಳು ಖಾಲಿ ಇದ್ದು, ಭರ್ತಿ ಮಾಡದ ಕಾರಣ ಹಾಲಿ ಸಿಬ್ಬಂದಿ ಮೇಲೆ ಒತ್ತಡ ಜಾಸ್ತಿಯಾಗಿದೆ. ಹೀಗಾಗಿ ಖಾಲಿ ಹುದ್ದೆ ಭರ್ತಿ ಮಾಡಬೇಕು. ಕಳೆದ ಬಾರಿ ಮುಷ್ಕರದ ಸಂದರ್ಭದಲ್ಲಿ ವಜಾಗೊಳಿಸಲಾಗಿರುವ ಸಿಬ್ಬಂದಿಗಳನ್ನು ಮರು ನೇಮಕ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ.

ಈ ರಾಜ್ಯದ ಸಿಎಂ ದೊಡ್ಡ ವಿಲನ್: ಇದು ಮೂರು ವರ್ಷದಿಂದ ಮಾಡ್ತಿರೋ ಚಳವಳಿ. 16 ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು ಹೋರಾಟ ಮಾಡುತ್ತಲೇ ಇದ್ದೇವೆ. ಈ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೊಡ್ಡ ವಿಲನ್ ಆಗಿದ್ದಾರೆ ಎಂದು ಸಾರಿಗೆ ಕಾರ್ಮಿಕ ಒಕ್ಕೂಟ ಮುಖಂಡ ಸುಬ್ಬರಾವ್ ಕಿಡಿಕಾರಿದರು. 2020ರಿಂದ ಸಂಬಳ ಹೆಚ್ಚಳ ಮಾಡಬೇಕು. ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ 2000 ಸಿಬ್ಬಂದಿಗಳನ್ನ ವಜಾ ಮಾಡಿದ್ದೀರಿ. ಅದನ್ನು ಹಿಂಪಡೆಯಬೇಕು. ಕೋಟ್ಯಂತರ ರೂಪಾಯಿ ಗ್ರಾಚ್ಯುಟಿ ಫಂಡ್ ಮತ್ತು ಕೋವಿಡ್ ನಿಂದ ಮೃತಪಟ್ಟವರಿಗೆ ಕೊಡಬೇಕಾದ ಹಣ ಬಿಡುಗಡೆ ಮಾಡಿ. ಇದು ನಮ್ಮ ಕೊನೆಯ ಹೋರಾಟ ಎಂದು ಎಚ್ಚರಿಕೆ ರವಾನಿಸಿದರು.

ಸಾರಿಗೆ ಸಚಿವರು ಸಕಲಾರಾತ್ಮಕವಾಗಿ ಸ್ಪಂದಿಸುತ್ತಾರೆ. ಆದರೆ ಸಿಎಂ ಬೊಮ್ಮಾಯಿ ಮಾತ್ರ ನಮಗೆ ಸಮಯ ನೀಡ್ತಿಲ್ಲ. ಸರ್ಕಾರ ನಮ್ಮ‌ ಸಮಸ್ಯೆ ಬಗೆಹರಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಡಿಪ್ಪೋಗಳಿಗೆ ಬೀಗ ಹಾಕ್ತಿವಿ. ಸಿಬ್ಬಂದಿಗಳು ಬೀದಿಗೆ ಬಂದು ಹೋರಾಟ ಮಾಡ್ತಿವಿ. ಅದಕ್ಕೆ ಅವಕಾಶ ಮಾಡಿಕೊಡಬೇಡಿ. ನಾವೂ ದರ್ಮಕ್ಕೆ ಕೇಳ್ತಿಲ್ಲ, ಕೆಲಸ ಮಾಡ್ತಿದ್ದೇವೆ. ಸರಿಯಾದ ವೇತನ ನೀಡಿ. ಎಂಎಲ್​ಎಗಳ ವೇತನವನ್ನು 5 ವರ್ಷಕ್ಕೊಮ್ಮೆ ಏರಿಕೆ ಮಾಡಿಕೊಳ್ಳುತ್ತೀರಾ. ನಮ್ಮ ವೇತನ ಏರಿಕೆ ಮಾಡಲು ಏನು ಕಷ್ಟ ಎಂದು ಆಕ್ರೋಶ ಹೊರಹಾಕಿದರು.

ಓದಿ : ಆರ್.ಡಿ.ಪಾಟೀಲ್​ ಆಡಿಯೋ: ತನಿಖಾಧಿಕಾರಿಯ ತಪ್ಪಿದ್ದರೆ ನಿರ್ದಾಕ್ಷಿಣ್ಯ ಕ್ರಮ- ಸಿಎಂ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.