ಪಂಚಮಸಾಲಿ 2ಎ ಮೀಸಲಾತಿ ವಿವಾದ: ಸಿಎಂ ಸಂಧಾನ ಸಫಲ, ಹೋರಾಟ ಕೈಬಿಡಲು ನಿರ್ಧಾರ

author img

By

Published : Jun 22, 2022, 5:39 PM IST

ಹೋರಾಟ ಕೈಬಿಡಲು ನಿರ್ಧಾರ

ಪಂಚಮಸಾಲಿ ಮೀಸಲಾತಿ ವಿಚಾರವಾಗಿ ರಾಜ್ಯ ಸರ್ಕಾರ ಕೇಳಿದ ಎರಡು ತಿಂಗಳ ಸಮಯಾವಕಾಶಕ್ಕೆ ಸಮುದಾಯದ ಪ್ರಮುಖರು ಸಮ್ಮತಿಸಿ, ಹೋರಾಟ ಮುಂದೂಡುವ ನಿರ್ಧಾರ ಮಾಡಿದ್ದಾರೆ.

ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿಗಳ ಗೃಹ ಕಚೇರಿ ಮುಂದೆ ಧರಣಿ ನಡೆಸಲು ಮುಂದಾಗಿದ್ದ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಶ್ರೀ ಮನವೊಲಿಸುವಲ್ಲಿ ಸಚಿವ ಸಿ.ಸಿ.ಪಾಟೀಲ್ ಸಫಲವಾಗಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿರ್ದೇಶನದಂತೆ ಸಚಿವರು ಸಂಧಾನ ಸಭೆ ನಡೆಸಿದ್ದಾರೆ. ಸರ್ಕಾರ ಕೇಳಿದ ಎರಡು ತಿಂಗಳ ಸಮಯಾವಕಾಶಕ್ಕೆ ಸಮುದಾಯದ ಪ್ರಮುಖರು ಸಮ್ಮತಿಸಿ, ಹೋರಾಟ ಮುಂದೂಡುವ ನಿರ್ಧಾರ ಪ್ರಕಟಿಸಿದ್ದಾರೆ.

ಮೀಸಲಾತಿ ಬಿಕ್ಕಟ್ಟು ರಾಜ್ಯ ಬಿಜೆಪಿ ಸರ್ಕಾರಕ್ಕೆ ನುಂಗಲಾರದ ತುತ್ತಾಗುತ್ತಿದೆ. ಹೀಗಾಗಿ ಇಂದು ಬೆಳಗ್ಗೆ 10 ಗಂಟೆಗೆ ಸಚಿವ ಸಿ.ಸಿ.ಪಾಟೀಲ್ ಮನೆಯಲ್ಲಿ ಸಮುದಾಯದ ಮುಖಂಡರ ಸಭೆ ನಡೆಸಲಾಯಿತು. ಸಭೆಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಬಸವ ಜಯ ಮೃತ್ಯುಂಜಯ ಶ್ರೀ ಪರ ಇರುವ ಸಮುದಾಯದ ಪ್ರಮುಖರು ಪಾಲ್ಗೊಂಡಿದ್ದರು. ಸಭೆಯಲ್ಲಿ 2 ಎ ಮೀಸಲಾತಿಗೆ ಸೇರಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ನಡೆಯುತ್ತಿರುವ ವಿಷಯಗಳ ಕುರಿತು ಸಮಾಲೋಚನೆ ನಡೆಸಲಾಯಿತು.


ಸಿಎಂ ಸಮ್ಮುಖದಲ್ಲಿ ಚರ್ಚಿಸಲು ನಿರ್ಧಾರ: ಮೀಸಲಾತಿ ಕುರಿತು ಸಮಿತಿ ಮಾಹಿತಿ ಕಲೆ ಹಾಕಿದ್ದು ವರದಿಗಾಗಿ ಕಾಯುತ್ತಿರುವ ಕುರಿತು ಸಚಿವರು ಸಮುದಾಯದ ಮುಖಂಡರ ಗಮನಕ್ಕೆ ತಂದರು. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸಮುದಾಯದ ಮುಖಂಡರು, ನೀಡಿದ ವಾಗ್ದಾನದಂತೆ ಕೂಡಲೇ ಮೀಸಲಾತಿ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು. ಸುದೀರ್ಘವಾಗಿ ನಡೆದ ಸಭೆಯಲ್ಲಿ ಯಾವುದೇ ತಾರ್ಕಿಕ ಅಂತ್ಯ ಕಾಣುವ ನಿಲುವು ವ್ಯಕ್ತವಾಗಲಿಲ್ಲ. ಸಿಎಂ ಸಮ್ಮುಖದಲ್ಲಿ ಚರ್ಚಿಸೋಣ ಎನ್ನುವ ನಿರ್ಧಾರದೊಂದಿಗೆ ಸಭೆಯನ್ನು ಮೊಟಕು ಮಾಡಲಾಯಿತು.

ಸಿಎಂ ಜೊತೆ ಚರ್ಚಿಸಿದ ಸಿ.ಸಿ.ಪಾಟೀಲ್: ಸಭೆ ನಂತರ ಶಕ್ತಿಭವನಕ್ಕೆ ಆಗಮಿಸಿದ ಸಚಿವ ಸಿ.ಸಿ.ಪಾಟೀಲ್​​ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಸಂಬಂಧ ನಡೆದ ಸಂಧಾನ ಸಭೆ ಬಗ್ಗೆ ಸಿಎಂಗೆ ಮಾಹಿತಿ ನೀಡಿದರು. ನಂತರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೂಡ ಆಗಮಿಸಿ ಮಾತುಕತೆ ನಡೆಸಿದರು. ಸಮುದಾಯದ ಬೇಡಿಕೆ ಕುರಿತು ನಿರ್ಲಕ್ಷ್ಯ ಮಾಡಲಾಗುತ್ತಿದೆ. ಇದರಿಂದ ಸಮುದಾಯದ ಜನರು ಆಕ್ರೋಶಗೊಳ್ಳುತ್ತಿದ್ದಾರೆ ಎಂದು ಸಿಎಂ ಗಮನಕ್ಕೆ ತಂದರು ಎನ್ನಲಾಗಿದೆ.

ಸಿಎಂ ಮನವಿ: ಸಚಿವರು ಮತ್ತು ಸಮುದಾಯದ ನಾಯಕರ ಅಭಿಪ್ರಾಯ ಆಲಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಮುದಾಯದ ಬೇಡಿಕೆಗೆ ಸರ್ಕಾರ ಸಕಾರಾತ್ಮಕ ನಿಲುವು ಹೊಂದಿದೆ. ಕಾನೂನು ಸಮಸ್ಯೆ ಕಾರಣದಿಂದ ಮೀಸಲಾತಿ ನಿರ್ಧಾರದ ತೀರ್ಮಾನ ವಿಳಂಬವಾಗುತ್ತಿದೆ. ಹಾಗಾಗಿ ಸಮಯಾವಕಾಶ ಬೇಕು,ಇನ್ನೇರಡು ತಿಂಗಳು ಸಮಯಾವಕಾಶ ಕೊಡಿ. ಮೀಸಲಾತಿ ಕುರಿತು ನಿರ್ಧಾರ ಕೈಗೊಳ್ಳುತ್ತೇವೆ ಎಂದು ಮನವಿ ಮಾಡಿದರು.

ಸಿಎಂ ಜೊತೆಗಿನ ಮಾತುಕತೆ ಸಫಲ: ಮುಖ್ಯಮಂತ್ರಿ ಬೊಮ್ಮಾಯಿ ಜೊತೆ ಸಚಿವ ಸಿ.ಸಿ. ಪಾಟೀಲ್ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಮಾತುಕತೆ ಸಫಲವಾಗಿದೆ. ಎರಡು ತಿಂಗಳಿನಲ್ಲಿ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ. ಸಿಎಂ ಮಾತಿಗೆ ಒಪ್ಪಿಗೆ ಸೂಚಿಸಿ ಮುಖ್ಯಮಂತ್ರಿ ನಿವಾಸದ ಮುಂದೆ ಧರಣಿ ನಡೆಸುವುದನ್ನು ಪಂಚಮ‌ಸಾಲಿ ಪೀಠದ ಜಯಮೃತ್ಯುಂಜಯ ಶ್ರೀ ವಾಪಸ್ ಪಡೆದಿದ್ದು, ಹೋರಾಟವನ್ನು ತಾತ್ಕಾಲಿಕವಾಗಿ ಮುಂದೂಡಿಕೆ ಮಾಡಲು ನಿರ್ಧರಿಸಿದರು.

ಕೆಲವೇ ದಿನಗಳಲ್ಲಿ ಸಿಹಿ ಸುದ್ದಿ: ಸಿಎಂ ಸಮ್ಮುಖದಲ್ಲಿ ನಡೆದ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸಿ.ಸಿ ಪಾಟೀಲ್, ಮೀಸಲಾತಿಗಾಗಿ ಸ್ವಾಮೀಜಿ ಪಾದಯಾತ್ರೆ ಮಾಡಿದ್ದಾರೆ. ಬೆಂಗಳೂರಲ್ಲಿ ಬೃಹತ್ ಸಮಾವೇಶ ಮಾಡಿದ್ದರು. ಅಭೂತಪೂರ್ವವಾದ ಪಾದಯಾತ್ರೆ ಮಾಡಿದ್ದಾರೆ. ಇದು ಸಾಧ್ಯನಾ ಎಂಬ ಭಾವನೆ ನಮ್ಮಲ್ಲೂ ಕಾಡುತ್ತದೆ. ಹೋರಾಟದ ಫಲವಾಗಿ ಸ್ವಲ್ಪ ದಿನಗಳಲ್ಲಿ ಸಿಹಿ ಸುದ್ದಿ ಬರುತ್ತದೆ.

ಅಂದು ಹೋರಾಟಕ್ಕೆ ಗೃಹ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ‌ ಸಾಕಷ್ಟು ಅವಕಾಶ ಮಾಡಿದ್ದರು. ಹೀಗಾಗಿ ಬಸವರಾಜ ಬೊಮ್ಮಾಯಿ‌ ಅವರಿಗೆ ಅಭಿನಂದನೆ ಸಲ್ಲಿಸಬೇಕು. ನಾವು ಹಾವು ಮುಂಗಿಸಿ ಜೊತೆಗೆ ಎದುರಾಳಿಗಳ ತರ ಕಿತ್ತಾಡಿದರು. ಇಂದು ಸಮುದಾಯ ಒಂದಾಗಬೇಕಾಗಿದೆ, ಕೂಡಲಸಂಗಮ ಪೀಠ ನಮ್ಮನ್ನು ಒಗ್ಗೂಡಿಸಿದೆ ಎಂದರು.

ಮುಂದುವರಿದ ಸಮುದಾಯದಕ್ಕೆ ಮೀಸಲಾತಿ ಕೊಡಬೇಕು ಅಂದರೆ ಯಾವುದೇ ಸರ್ಕಾರಕ್ಕೆ ಕಷ್ಟ ಆಗುತ್ತದೆ. ನಾನು ಯತ್ನಾಳ್ ಸಿಎಂ ಜೊತೆಗೆ ಮಾತನಾಡಿ ಬಂದಿದ್ದೇವೆ. ಸಿಎಂ ಸಕಾರಾತ್ಮಕವಾಗಿ ಸ್ಪಂದನೆ ನೀಡಿದ್ದಾರೆ. ವಿಳಂಬವಾದರೂ ಉತ್ತಮ ರಿಸಲ್ಟ್ ಬರುತ್ತದೆ ಎಂಬ ನಂಬಿಕೆ ಇದೆ. ಕಾನೂನಿನ ತೊಡಕುಗಳು ಇರುವುದರಿಂದ ಎಲ್ಲವೂ ಈಗಲೇ ಕೊಡಲು ಆಗಲ್ಲ. ಹೀಗಾಗಿ ಸರ್ಕಾರದ ಭಾಗವಾಗಿ ನಾನು ಹೇಳುತ್ತಿದ್ದೇನೆ. ನಾವು ಎಷ್ಟೇ ಹೋರಾಟ ಮಾಡಿದರೂ ಕೆಲವೊಮ್ಮೆ ನಮಗೆ ಯಾವುದೂ ಕೈಗೆ ಸಿಗಲ್ಲ. ಹಾಗಾಗಿ ಪ್ರತಿಭಟನೆ ಬೇಡ, ಇನ್ನೇರಡು ತಿಂಗಳಲ್ಲಿ ಸಿಹಿ ಸುದ್ದಿ ಸಿಗುತ್ತದೆ ಎಂದು ಸಿ.ಸಿ ಪಾಟೀಲ್ ಮನವಿ ಮಾಡಿದರು.

ಇದನ್ನೂ ಓದಿ: ಸ್ತ್ರೀಶಕ್ತಿ ಸಂಘಟನೆಗಳಿಂದ ತಯಾರಾಗುವ ವಸ್ತುಗಳು ವಿದೇಶದಲ್ಲಿ ಮಾರಾಟವಾಗಬೇಕು: ಸಿಎಂ

ಸಮುದಾಯದ ಮುಖಂಡ ವಿಜಯಾನಂದ ಕಾಶಪ್ಪನವರ್ ಮಾತನಾಡಿ, ಇಂದು ಅಂತಿಮ ಘಟಕದಲ್ಲಿ ನಾವು ತಲುಪಿದ್ದೇವೆ. ನಮ್ಮವರೇ ಆದ ಹೆಬ್ಬುಲಿ ಸಿ.ಸಿ.ಪಾಟೀಲ್, ನಮ್ಮ ಹೋರಾಟದ ದಿವ್ಯ ಶಕ್ತಿಯಾದ ಯತ್ನಾಳ್ ಹಾಗೂ ಅರವಿಂದ್ ಬೆಲ್ಲದ್ ಅವರ ಪ್ರಯತ್ನದಿಂದಾಗಿ ಎರಡೇ ತಿಂಗಳ ಅವಧಿಯಲ್ಲಿ ಹಿಂದುಳಿದ ವರ್ಗಗಳ ವರದಿ ಪಡೆದು ಮೀಸಲಾತಿ ಕೊಡ್ತಾರಂತೆ. ಸಿಎಂ ಬೊಮ್ಮಾಯಿ‌ ಅನೇಕ ಬಾರಿ ಭರವಸೆ ಕೊಟ್ಟಿದ್ದರು. ಕಾನೂನು ತೊಡಕು ಇರುವುದರಿಂದ ಸ್ವಲ್ಪ ತಡವಾಗಿದೆ.

ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಯತ್ನಾಳ್​: ಶಾಸಕ ಬಸವಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ಆಗಸ್ಟ್ 22ಕ್ಕೆ ಡೆಡ್ ಲೈನ್ ನೀಡುತ್ತೇವೆ. ಈ ಗಡುವಿನಲ್ಲಿ ಆಗಿಲ್ಲ ಅಂದರೆ ನಾನೇ ಸಿಎಂ ಬೊಮ್ಮಾಯಿ‌ ಮನೆ ಮುಂದೆ ಪ್ರತಿಭಟನೆಗೆ ಕೂರುತ್ತೇನೆ. ಸದ್ಯ ಬೊಮ್ಮಾಯಿ‌ ಸಕಾರಾತ್ಮಕವಾಗಿ ಇದ್ದಾರೆ, ಹಾಗಾಗಿಯೇ ಆಗಸ್ಟ್ 22ಕ್ಕೆ ಪ್ರತಿಭಟನೆ ಮುಂದೂಡಿದ್ದೇವೆ. ಬೆಂಗಳೂರಲ್ಲಿ ಆಗಸ್ಟ್ 23ಕ್ಕೆ‌ ಅಭಿನಂದನೆ ಸಮಾರಂಭ ಆಗಿರಬೇಕು. ಇಲ್ಲ ಬೇರೆ ಏನಾದರೂ ಆಗಿರುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.