ಶುಲ್ಕ ಪಾವತಿ ಮಾಡದೆ ಖಾಲಿ ಉಳಿದ ಮೆಡಿಕಲ್ ಸೀಟ್ಗಳು: ಮಾಪ್ ಅಪ್ ಸುತ್ತಿಗೆ ಮುಂದಾದ ಪರೀಕ್ಷಾ ಪ್ರಾಧಿಕಾರ

ಶುಲ್ಕ ಪಾವತಿ ಮಾಡದೆ ಖಾಲಿ ಉಳಿದ ಮೆಡಿಕಲ್ ಸೀಟ್ಗಳು: ಮಾಪ್ ಅಪ್ ಸುತ್ತಿಗೆ ಮುಂದಾದ ಪರೀಕ್ಷಾ ಪ್ರಾಧಿಕಾರ
Examination authority: ಶುಲ್ಕ ಪಾವತಿ ಮಾಡದ ಹಿನ್ನೆಲೆ ಮೆಡಿಕಲ್ ಸೀಟ್ಗಳು ಖಾಲಿ ಉಳಿದಿವೆ. ಪರೀಕ್ಷಾ ಪ್ರಾಧಿಕಾರವು ಮಾಪ್ ಅಪ್ ಸುತ್ತು ನಡೆಸಲು ಮುಂದಾಗಿದೆ.
ಬೆಂಗಳೂರು: ವೈದ್ಯಕೀಯ ಸೀಟುಗಳು ಹಂಚಿಕೆಯಾಗಿ ಶುಲ್ಕ ಪಾವತಿ ಮಾಡದ ಕಾರಣದಿಂದ ಭರ್ತಿಯಾಗದೇ ಉಳಿದಿರುವ 37 ಸರ್ಕಾರಿ ಕೋಟಾ ಹಾಗೂ 482 ಖಾಸಗಿ ಕೋಟಾ ಸೀಟುಗಳ ಭರ್ತಿ ಮಾಡಲು ಮಾಪ್ ಅಪ್ ಸುತ್ತು ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಿರ್ಧರಿಸಿದ್ದು, ವೈದ್ಯಕೀಯ ಪದವಿಗೆ ಈಗಾಗಲೇ ಸೀಟು ಪಡೆದುಕೊಂಡವರೂ ಮಾಪ್ ಅಪ್ ಸುತ್ತಿನಲ್ಲಿ ಭಾಗವಹಿಸಲು ಅವಕಾಶ ನೀಡಿದೆ.
ಯುಜಿನೀಟ್- 2023ರ ಎರಡನೇ ಸುತ್ತಿನಲ್ಲಿ ವೈದ್ಯಕೀಯ ಸೀಟುಗಳು ಹಂಚಿಕೆಯಾಗಿ ಶುಲ್ಕ ಪಾವತಿಸದ ಕಾರಣ ಸುಮಾರು 37 ಸರ್ಕಾರಿ ಕೋಟಾದ ವೈದ್ಯಕೀಯ ಸೀಟುಗಳು ಹಾಗೂ 482 ಖಾಸಗಿ ಕೋಟಾದ ಸೀಟುಗಳು ಭರ್ತಿಯಾಗದೆ ಉಳಿದಿರುವ ಹಿನ್ನಲೆಯಲ್ಲಿ ಮಾಪ್ ಅಪ್ ಸುತ್ತು ನಡೆಸಲಾಗುತ್ತಿದೆ. ಈಗಾಗಲೆ ಯುಜಿನೀಟ್ 2023ರ ಎರಡು ಸುತ್ತುಗಳಲ್ಲಿ ವೈದ್ಯಕೀಯ ಸೀಟುಗಳು ಹಂಚಿಕೆಯಾಗಿ, ಕಾಲೇಜುಗಳಲ್ಲಿ ವರದಿ ಮಾಡಿಕೊಂಡಿರುವ ಅಭ್ಯರ್ಥಿಗಳು ಹಾಗೂ ಈಗಾಗಲೇ ಯುಜಿನೀಟ್ 2023ರ ಎರಡು ಸುತ್ತುಗಳಲ್ಲಿ ವೈದ್ಯಕೀಯ ಸೀಟುಗಳು ಹಂಚಿಕೆಯಾಗಿದೆ. ಆದರೆ, ಶುಲ್ಕ ಪಾವತಿ ಮಾಡದೇ ಮತ್ತು ಕಾಲೇಜಿಗೆ ವರದಿ ಮಾಡಿಕೊಳ್ಳದೇ ಇರುವ ಅಭ್ಯರ್ಥಿಗಳು ವೈದ್ಯಕೀಯ ಮಾಪ್ ಅಪ್ ಸುತ್ತಿನಲ್ಲಿ ಭಾಗವಹಿಸಲು ಅರ್ಹರಿರುತ್ತಾರೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.
''ಮಾಪ್ ಅಪ್ ಸುತ್ತಿನಲ್ಲಿ ಭಾಗವಹಿಸಲು ಇಚ್ಚಿಸುವ ಎಲ್ಲಾ ಅಭ್ಯರ್ಥಿಗಳು CAUTION DEPOSIT ಅನ್ನು ಪಾವತಿಸಬೇಕು. ಎಲ್ಲಾ ಅಭ್ಯರ್ಥಿಗಳು ಹೊಸದಾಗಿ OPTIONS ಗಳನ್ನು ದಾಖಲಿಸಬೇಕು. ಈ ಮೊದಲು ದಾಖಲಿಸಿದ್ದ OPTIONS ಗಳನ್ನು ಪರಿಗಣಿಸುವುದಿಲ್ಲ. ಒಂದು ವೇಳೆ ಈ ಮಾಪ್ ಅಪ್ ಸುತ್ತಿನಲ್ಲಿ ಸೀಟು ಹಂಚಿಕೆಯಾದಲ್ಲಿ, ಹಿಂದಿನ ಸುತ್ತುಗಳಲ್ಲಿ ಹಂಚಿಕೆಯಾಗಿದ್ದ ಸೀಟು ತನ್ನಷ್ಟಕ್ಕೆ ರದ್ದುಗೊಳ್ಳುತ್ತದೆ. ಯಾವುದೇ ಕಾರಣಕ್ಕೂ ಆ ಸೀಟುಗಳನ್ನು ಹಿಂಪಡೆಯಲು ಸಾಧ್ಯವಾಗುವುದಿಲ್ಲ. ಈ ಸುತ್ತಿನಲ್ಲಿ ಹಂಚಿಕೆಯಾಗುವ ಕಾಲೇಜಿಗೆ ಕಡ್ಡಾಯವಾಗಿ ಪ್ರವೇಶವನ್ನು ಪಡೆಯಬೇಕು ಎನ್ನುವ ಷರತ್ತುಗಳನ್ನು ವಿಧಿಸಿದೆ.
