ಲೋಕಾಯುಕ್ತ ಮರುಸ್ಥಾಪನೆ ಎಫೆಕ್ಟ್: ಕೆಲಸವಿಲ್ಲದೆ ಖಾಲಿ ಕುಳಿತಿದ್ದಾರೆ ಎಸಿಬಿ ಅಧಿಕಾರಿಗಳು

author img

By

Published : Oct 3, 2022, 10:40 AM IST

Representative Image

ಎಸಿಬಿ ರದ್ದುಗೊಂಡರೂ‌ ಅಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿ ಹಾಗೂ ಸಿಬ್ಬಂದಿ ಬೇರೆ ಕಡೆ ನಿಯೋಜಿಸುವ ಗೋಜಿಗೆ ಇಲಾಖೆ ಮುಂದಾಗಿಲ್ಲ. ಈ ಬಗ್ಗೆ ಗಮನಹರಿಸಬೇಕಾದ ಸರ್ಕಾರ ಒಮ್ಮೆಯೂ ಮುಖ್ಯಮಂತ್ರಿ, ಗೃಹ ಸಚಿವರು ಹಾಗೂ ಸಂಬಂಧಿಸಿದ ರಾಜ್ಯ ಮುಖ್ಯಕಾರ್ಯದರ್ಶಿಗಳು ಅಧಿಕಾರಿಗಳ ಜೊತೆಯಲ್ಲಿ ಒಮ್ಮೆಯೂ ಸಭೆ ನಡೆಸಿಲ್ಲ.

ಬೆಂಗಳೂರು: ಲೋಕಾಯುಕ್ತ ಮರುಸ್ಥಾಪನೆಯಾಗಿ ತಿಂಗಳಾದರೂ ರದ್ದುಗೊಂಡಿರುವ ಎಸಿಬಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಿರಿಯ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ ಮಾತ್ರ ಅತಂತ್ರ ಸ್ಥಿತಿಯಲ್ಲಿದ್ದಾರೆ.

ಸದಾ ತನಿಖೆ, ವಿಚಾರಣೆ ಎಂದು ಕರ್ತವ್ಯದಲ್ಲಿ ತಲ್ಲೀನರಾಗಿದ್ದ ಅಧಿಕಾರಿಗಳಿಗೆ ಕೆಲಸವೇ ಇಲ್ಲದಂತಾಗಿದೆ. ಸಿಬ್ಬಂದಿ ಕೊರತೆ ಎದುರಿಸುತ್ತಿರುವ ಲೋಕಾಯುಕ್ತಕ್ಕೂ ವರ್ಗಾಯಿಸದೆ ಬೇರೆ ಕಡೆಗೂ ನಿಯೋಜಿಸದೆ ರಾಜ್ಯ ಸರ್ಕಾರದ ವಿಳಂಬ ಧೋರಣೆ ಅನುಸರಿಸುತ್ತಿದೆ.

ದಲಾಯತ್, ಲಿಪಿಕ ಸಿಬ್ಬಂದಿ‌ ಹುದ್ದೆಗಳು ಹೊರತು ಪಡಿಸಿದರೆ ಒಟ್ಟು ಎಸಿಬಿಯಲ್ಲಿ 452 ಕಾರ್ಯಕಾರಿ ಅಧಿಕಾರಿ ಹಾಗೂ ಸಿಬ್ಬಂದಿಯಿದ್ದಾರೆ. ಕಳೆದ ಆ.26 ರಂದು ಎಲ್ಲಾ‌ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ಹಸ್ತಾಂತರಿಸುವಂತೆ‌ ಎಸಿಬಿಗೆ ಸರ್ಕಾರ ಆದೇಶಿಸಿತ್ತು. ಇದರಂತೆ ರಾಜ್ಯದ ಎಲ್ಲಾ ಎಸಿಬಿ ಜಿಲ್ಲಾ ವಿಭಾಗಗಳಲ್ಲಿ ದಾಖಲಾಗಿದ್ದ ಪ್ರಕರಣಗಳು ಲೋಕಾಯುಕ್ತಕ್ಕೆ ವರ್ಗಾವಣೆಯಾಗಿವೆ.

ಇದನ್ನೂ ಓದಿ: ಎಸಿಬಿ ರದ್ಧತಿ ಬಗ್ಗೆ ಅಧ್ಯಯನ ವರದಿ ನೀಡಲು ಕಾನೂನು ಇಲಾಖೆಗೆ ಸೂಚನೆ: ಸಿಎಂ

ಬೆಂಗಳೂರು ನಗರದಲ್ಲಿ ದಾಖಲಾಗಿರುವ ಕೇಸ್​​ಗಳನ್ನ ಇನ್ನಷ್ಟೇ ಹಸ್ತಾಂತರ ಪ್ರಕ್ರಿಯೆ ಪೂರ್ಣವಾಗಬೇಕಿದೆ. ಲೋಕಾಯುಕ್ತಕ್ಕೆ ಬರುವ ದೂರುಗಳು ದಿನೇ‌ ದಿನೇ ಏರಿಕೆಯಾಗುತ್ತಿವೆ. ಜೊತೆಗೆ ವರ್ಗವಾದ ಪ್ರಕರಣಗಳನ್ನು ತನಿಖೆ ನಡೆಸಬೇಕಿದೆ. ಈ ನಡುವೆ ಎಸಿಬಿಯಲ್ಲಿ ದಾಖಲಾಗಿದ್ದ ಪ್ರಕರಣಗಳನ್ನು‌ ಲೋಕಾಯುಕಕ್ಕೆ ವರ್ಗವಾದಾಗಿನಿಂದ ಎಸಿಬಿ ಅಧಿಕಾರಿ ಹಾಗೂ ಸಿಬ್ಬಂದಿಗೆ ಅಕ್ಷರಶಃ ಕೆಲಸವೇ ಇಲ್ಲದಂತಾಗಿದೆ.

ಎಸಿಬಿ ಅಧಿಕಾರಿ-ಸಿಬ್ಬಂದಿ ವರ್ಗ ವಿಳಂಬ ಯಾಕೆ?: ಎಸಿಬಿಯಲ್ಲಿರುವ ಅಧಿಕಾರಿ, ಸಿಬ್ಬಂದಿ ಹಾಗೂ ಕಚೇರಿ ಸೇರಿ ವಿವಿಧ ಸೌಕರ್ಯಗಳನ್ನ ಯಥಾವತ್ ನೀಡುವಂತೆ ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ಪತ್ರ ಬರೆದು ತಿಂಗಳಾದರೂ ಸರ್ಕಾರ ಗಮನಹರಿಸಿಲ್ಲ. ಲೋಕಾಯುಕ್ತ ಹಾಗೂ ರದ್ದುಗೊಂಡಿರುವ ಎಸಿಬಿ ಸಿಬ್ಬಂದಿ ಹಾಗೂ ಆಡಳಿತ ಸೇವಾ ಸುಧಾರಣೆ ಇಲಾಖೆ ವ್ಯಾಪ್ತಿಗೆ ಬರಲಿದೆ.

ಎಸಿಬಿ ರದ್ದುಗೊಂಡರೂ‌ ಅಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿ ಹಾಗೂ ಸಿಬ್ಬಂದಿ ಬೇರೆ ಕಡೆ ನಿಯೋಜಿಸುವ ಗೋಜಿಗೆ ಇಲಾಖೆ ಮುಂದಾಗಿಲ್ಲ. ಈ ಬಗ್ಗೆ ಗಮನಹರಿಸಬೇಕಾದ ಸರ್ಕಾರ ಒಮ್ಮೆಯೂ ಮುಖ್ಯಮಂತ್ರಿ, ಗೃಹ ಸಚಿವರು ಹಾಗೂ ಸಂಬಂಧಿಸಿದ ರಾಜ್ಯ ಮುಖ್ಯಕಾರ್ಯದರ್ಶಿಗಳು ಅಧಿಕಾರಿಗಳ ಜೊತೆಯಲ್ಲಿ ಒಮ್ಮೆಯೂ ಸಭೆ ನಡೆಸಿಲ್ಲ.

ಇದನ್ನೂ ಓದಿ: ಹೈಕೋರ್ಟ್ ಆದೇಶದನ್ವಯ ಎಸಿಬಿ ರದ್ದು ಮಾಡಿ ಸರ್ಕಾರ ಅಧಿಕೃತ ಆದೇಶ

ಅಧಿಕಾರಿಗಳಿಗೆ ಹುದ್ದೆ ತೋರಿಸುವುದೇ ಸರ್ಕಾರಕ್ಕೆ ಸವಾಲು: ಲೋಕಾಯುಕ್ತ ಮರುಸ್ಥಾಪನೆಯಿಂದ ಎಸಿಬಿ ನೇಪಥ್ಯಕ್ಕೆ ಸರಿದಿದೆ. ಎಸಿಬಿಯಲ್ಲಿರುವ ಐಪಿಎಸ್ ಅಧಿಕಾರಿಗಳು, ಡಿವೈಎಸ್​ಪಿ, ಇನ್ಸ್​ಪೆಕ್ಟರ್ ಗಳನ್ನ ಮರುನಿಯುಕ್ತಿಗೊಳಿಸುವುದೇ ಸರ್ಕಾರಕ್ಕೆ ಸವಾಲಾಗಿದೆ.

ಹಿರಿತನ ಅಥವಾ ಗ್ರೇಡ್ ಆಧಾರದ ಮೇಲೆ ಹುದ್ದೆ ತೋರಿಸಬೇಕು. ಬೆರಳಣಿಕೆ ಕಡೆ ಹೊರತುಪಡಿಸಿ ಬಹುತೇಕ ಕಡೆಗಳಲ್ಲಿ ಪೂರ್ಣ‌ ಪ್ರಮಾಣದಲ್ಲಿ ಅಧಿಕಾರಿಗಳಿದ್ದಾರೆ. ಲೋಕಾಯುಕ್ತಕ್ಕೆ ಕೆಲವು ಅಧಿಕಾರಿ ಸಿಬ್ಬಂದಿಯನ್ನು ವರ್ಗಾಯಿಸಬಹುದು. ಇನ್ನುಳಿದ ಸಿಬ್ಬಂದಿಯನ್ನು ಬೇರೆ ಕಡೆ ನಿಯೋಜಿಸಬೇಕಿದೆ.

ಈ ಬಗ್ಗೆ 'ಈಟಿವಿ ಭಾರತ'ಕ್ಕೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಆರಗ ಜ್ಞಾನೇಂದ್ರ 'ಲೋಕಾಯುಕ್ತ ಹಾಗೂ ರದ್ದುಗೊಂಡಿರುವ ಎಸಿಬಿ ಗೃಹ ಇಲಾಖೆ ಅಧೀನಕ್ಕೆ ಬರುವುದಿಲ್ಲ. ಅಧಿಕಾರಿ ಹಾಗೂ‌ ಸಿಬ್ಬಂದಿಯನ್ನು ಮರುನಿಯೋಜನೆ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಸಂಬಂಧಿಸಿದ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದೆ‌. ಆದಷ್ಟು ಬೇಗ ಎಸಿಬಿಯಲ್ಲಿರುವ ಅಧಿಕಾರಿ ಹಾಗೂ ಅಧಿಕಾರಿಯೇತರರನ್ನು ಮರುನಿಯುಕ್ತಿಗೊಳಿಸಲಾಗುವುದು' ಎಂದು ಹೇಳಿದ್ದಾರೆ.

ಇದನ್ನೂ ಓದಿ: ಎಸಿಬಿ ಕೇಸ್​ಗಳು ಲೋಕಾಯುಕ್ತಕ್ಕೆ.. ಮಹತ್ವದ ಸಭೆ ಕರೆದ ಲೋಕಾಯುಕ್ತ ನ್ಯಾ. ಬಿ.ಎಸ್. ಪಾಟೀಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.