ಬಿಎಂಎಸ್ ಟ್ರಸ್ಟ್ ಅಕ್ರಮ: ತನಿಖೆಗೆ ಆಗ್ರಹಿಸಿ ಜೆಡಿಎಸ್ ಧರಣಿ, ಸ್ಪೀಕರ್ ನೇತೃತ್ವದಲ್ಲಿ ಸಂಧಾನ ಸಭೆ

author img

By

Published : Sep 23, 2022, 12:01 PM IST

jds-protest-to-demanding-probe-on-bms-trust-scam

ಬಿಎಂಎಸ್ ಟ್ರಸ್ಟ್ ಅಕ್ರಮ ಗಂಭೀರವಾದ ಪ್ರಕರಣ, ಸರ್ಕಾರದ ಅಧಿಕಾರಿಗಳು ಟ್ರಸ್ಟ್​ನಲ್ಲಿ ನಡೆಯುತ್ತಿರುವ ಲೋಪದೋಷಗಳ ಬಗ್ಗೆ ಗಮನಕ್ಕೆ ತಂದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆರೋಪ ಮಾಡಿದರು.

ಬೆಂಗಳೂರು: ಬಿಎಂಎಸ್ ಟ್ರಸ್ಟ್ ಅಕ್ರಮ ಆರೋಪ ಸಂಬಂಧ ಇಂದು ಸದನ ಆರಂಭವಾಗುತ್ತಿದ್ದಂತೆ ಜೆಡಿಎಸ್ ಧರಣಿ ಮುಂದುವರೆಸಿತು. ಬಿಎಂಎಸ್ ಸಾರ್ವಜನಿಕ ಟ್ರಸ್ಟ್​ನ್ನು ಖಾಸಗಿ ಟ್ರಸ್ಟ್ ಆಗಿ ಪರಿವರ್ತಿಸಿದ ಸಂಬಂಧ ನಿನ್ನೆ ದಾಖಲೆ ಬಿಡುಗಡೆ ಮಾಡಿದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ತನಿಖೆಗೆ ಆಗ್ರಹಿಸಿದ್ದರು.

ಶುಕ್ರವಾರ ಸದನದ ಆರಂಭವಾಗುತ್ತಿದ್ದಂತೆ ಬಾವಿಗಿಳಿದು ಧರಣಿ ನಡೆಸಿದ ಜೆಡಿಎಸ್ ಸದಸ್ಯರು ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ವಿರುದ್ಧ ಧಿಕ್ಕಾರ ಕೂಗಿದರು. ಈ ಸಂದರ್ಭದಲ್ಲಿ ಮಾತನಾಡಿದ ಕುಮಾರಸ್ವಾಮಿ, ಇದು ಗಂಭೀರವಾದ ಪ್ರಕರಣ, ಸರ್ಕಾರದ ಅಧಿಕಾರಿಗಳು ಟ್ರಸ್ಟ್​ನಲ್ಲಿ ನಡೆಯುತ್ತಿರುವ ಲೋಪದೋಷಗಳ ಬಗ್ಗೆ ಗಮನಕ್ಕೆ ತಂದಿಲ್ಲ ಎಂದು ಆರೋಪಿಸಿದರು.

ಅಲ್ಲದೇ, ಈ ಬಗ್ಗೆ ಸಚಿವರು ಉತ್ತರ ನೀಡಿಲ್ಲ ಹಾಗೂ ಸರ್ಕಾರವೂ ಉತ್ತರ ನೀಡಿಲ್ಲ. ಸರ್ಕಾರದ ಜವಾಬ್ದಾರಿಗೆ ಧಕ್ಕೆ ಉಂಟಾಗುವ ರೀತಿಯಲ್ಲಿ ಆಗಿದೆ. ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ತೀರ್ಪುನಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯ ಜಾರಿಗೆ ತರುವಲ್ಲಿಯೂ ಸರ್ಕಾರ ಉಲ್ಲಂಘನೆ ಮಾಡಿದೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಧ್ಯಪ್ರವೇಶಿಸಿ,‌ ಇದು ಗಂಭೀರವಾದ ವಿಚಾರ. ಹಾಗಾಗಿ ಸರ್ಕಾರ ತನಿಖೆ ನಡೆಸಬೇಕು ಎಂಬ ಒತ್ತಾಯ ಇದೆ.‌ ಹೀಗೆ ಧರಣಿ ನಡೆಸಿದರೆ ಇತರ ಕಾರ್ಯಕಲಾಪ ನಡೆಯಲು ಸಾಧ್ಯವಿಲ್ಲ. ಹೀಗಾಗಿ, ಕಾನೂನು‌ ಸಚಿವರು ಸಭಾನಾಯಕರುಗಳನ್ನು ಕರೆದು ಮಾತನಾಡಿ ಎಂದು ಸಲಹೆ ನೀಡಿದರು.

ಹತ್ತು ನಿಮಿಷ ಸದನ ಮುಂದೂಡಿಕೆ : ಈ ವೇಳೆ ಗದ್ದಲದ ವಾತಾವರಣ ನಿರ್ಮಾಣವಾದಾಗ ಸದನವನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹತ್ತು ನಿಮಿಷಗಳ ಕಾಲ ಮುಂದೂಡಿದರು.

ಸಿದ್ದರಾಮಯ್ಯ ಅವರ ಸಲಹೆ ಮೇರೆಗೆ ಸ್ಪೀಕರ್ ಕಾಗೇರಿ ಕಚೇರಿಯಲ್ಲಿ ಸಂಧಾನ ಸಭೆ ನಡೆಯಿತು. ಸಿಎಂ ಬಸವರಾಜ ಬೊಮ್ಮಾಯಿ, ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ, ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಹೆಚ್.ಡಿ. ರೇವಣ್ಣ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಉಪನಾಯಕ ಯು.ಟಿ ಖಾದರ್‌ ಸಭೆಯಲ್ಲಿ ಹಾಜರಿದ್ದಾರೆ.

ಇದನ್ನೂ ಓದಿ: ಸಚಿವ ಅಶ್ವತ್ಥನಾರಾಯಣ ರಾಜೀನಾಮೆಗೆ ಮಾಜಿ ಸಿಎಂ ಕುಮಾರಸ್ವಾಮಿ ಆಗ್ರಹ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.