ಜಿ ಟಿ ದೇವೇಗೌಡ ಆಸಕ್ತಿ ತೋರಿದರೆ ನಾವು ಕಾಂಗ್ರೆಸ್ಗೆ ಕರೆಯುತ್ತೇವೆ: ಸಚಿವ ಡಾ ಜಿ ಪರಮೇಶ್ವರ್

ಜಿ ಟಿ ದೇವೇಗೌಡ ಆಸಕ್ತಿ ತೋರಿದರೆ ನಾವು ಕಾಂಗ್ರೆಸ್ಗೆ ಕರೆಯುತ್ತೇವೆ: ಸಚಿವ ಡಾ ಜಿ ಪರಮೇಶ್ವರ್
ಜಿಟಿ ದೇವೇಗೌಡ ಅವರು ನಮ್ಮ ಪಕ್ಷಕ್ಕೆ ಸೇರಲು ಆಸಕ್ತಿ ತೋರಿದರೆ ನಾವು ಅವರನ್ನು ಬರಮಾಡಿಕೊಳ್ಳುತ್ತೇವೆ ಎಂದು ಸಚಿವ ಡಾ ಜಿ ಪರಮೇಶ್ವರ್ ಅವರು ಹೇಳಿದ್ದಾರೆ.
ಬೆಂಗಳೂರು: ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ ಟಿ ದೇವೇಗೌಡರು ಕಾಂಗ್ರೆಸ್ಗೆ ಸೇರಲು ಆಸಕ್ತಿ ತೋರಿದರೆ ನಾವು ಖಂಡಿತವಾಗಿಯೂ ಬರಮಾಡಿಕೊಳ್ಳುತ್ತೇವೆ ಎಂದು ಗೃಹ ಸಚಿವ ಡಾ ಜಿ. ಪರಮೇಶ್ವರ್ ತಿಳಿಸಿದ್ದಾರೆ. ಬೆಂಗಳೂರಲ್ಲಿ ಡಿಕೆಶಿ-ಜಿಟಿ ದೇವೇಗೌಡ ಭೇಟಿ ವಿಚಾರವಾಗಿ ಮಾತನಾಡಿದ ಅವರು, ಅವರು ಆಸಕ್ತಿ ತೋರಿಸಿದ್ರೆ ನಾವು ಕರೆಯುತ್ತೇವೆ. ಸೌಜನ್ಯದ ಭೇಟಿ ವೇಳೆ ಮಾತನಾಡಿರುತ್ತೇವೆ. ಅಲ್ಲಿ ಏನು ಮಾತನಾಡಿರ್ತೇವೆ ಅಂತ ನಿಮಗೆ ಗೊತ್ತಿರಲ್ಲ. ಸೋಮಣ್ಣ ಕಾರ್ಯಕ್ರಮಕ್ಕೆ ಕರೆಯಲು ಬಂದಿದ್ರು. ಇದನ್ನೇ ಪಕ್ಷ ಸೇರಲು ಮಾತುಕತೆಗೆ ಬಂದಿದ್ದಾರೆ ಅಂದ್ರೆ ಹೇಗೆ ಎಂದು ಪ್ರಶ್ನಿಸಿದರು.
ಬಿಜೆಪಿ ವಿಪಕ್ಷ ನಾಯಕನ ಆಯ್ಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತ, ಆರ್ ಅಶೋಕ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ದೊಡ್ಡ ಜವಾಬ್ದಾರಿ ಬಿಜೆಪಿ ನೀಡಿದೆ. ಸರ್ಕಾರಕ್ಕೆ ಸಲಹೆ ಕೊಟ್ಟು, ಎಚ್ಚರಿಸುವ ಕೆಲಸ ಮಾಡಲಿ. ಸರ್ಕಾರದ ತಪ್ಪು ಹೇಳುವುದು ಸ್ವಾಭಾವಿಕ. ಸತ್ಯಾಸತ್ಯತೆ ಅರಿತು ಹೇಳಿಕೆ ನೀಡಲಿ. ಸರ್ಕಾರ ಬಿಳಿಸುತ್ತೇನೆ ಅಂತ ಹೇಳುತ್ತಿದ್ದಾರೆ. 135 ಜನರನ್ನು ಆರಿಸಿ ಕಳಿಸಿದ್ದಾರೆ. ಜನರು ನಮಗೆ ಅಧಿಕಾರ ಕೊಟ್ಟಿದ್ದಾರೆ. ಸರ್ಕಾರ ಬೀಳಿಸಲು ಇವರು ಯಾರು?. ಬೇರೆ ರೀತಿಯಲ್ಲಿ ಹೇಳಿಕೆ ಕೊಟ್ರೆ ಅದಕ್ಕೆ ಅರ್ಥ ಇರಲ್ಲ ಎಂದು ತಿರುಗೇಟು ನೀಡಿದರು.
ವರ್ಗಾವಣೆ ದಂಧೆ ಆರೋಪ ವಿಚಾರವಾಗಿ ಪ್ರತಿಕ್ರಿಯಿಸುತ್ತ, ಬರುವ ಡಿ.4ರಂದು ಅಧಿವೇಶನ ಇದೆ. ಸದನದಲ್ಲಿ ಇದರ ಬಗ್ಗೆ ಚರ್ಚೆ ಮಾಡಲಿ. ಹಣ ತೆಗೆದುಕೊಂಡ ಬಗ್ಗೆ ಮಾತನಾಡಲಿ. ನಾವು ಸಮರ್ಥವಾಗಿ ಉತ್ತರ ನೀಡುತ್ತೇವೆ ಎಂದು ತಿಳಿಸಿದರು. ಇನ್ಸ್ಪೆಕ್ಟರ್ ವರ್ಗಾವಣೆ ವಿಚಾರವಾಗಿ ಪ್ರತಿಕ್ರಿಯಿಸುತ್ತ, ಯತೀಂದ್ರ ಆಡಿಯೋ ವಿಚಾರ ಇದಕ್ಕೆ ಸಂಬಂಧ ಇಲ್ಲ. ಅನೇಕ ಕಾರಣದಿಂದ ಬದಲಾವಣೆ ನಾವು ಮಾಡುತ್ತೇವೆ. ಹೆಚ್ಚು ಸಮಯ ಖಾಲಿ ಇಡದೆ ವರ್ಗಾವಣೆ ಮಾಡುತ್ತೇವೆ. ಠಾಣೆಯಲ್ಲಿ ಇನ್ಸ್ಪೆಕ್ಟರ್ ಇಲ್ಲ ಅಂದ್ರೆ ಕಾಯಲು ಆಗಲ್ಲ. ಅದಕ್ಕೆ ವರ್ಗಾವಣೆ ಮಾಡ್ತಾನೆ ಇರುತ್ತೇವೆ. ವಿವೇಕಾನಂದ ಹೆಸರು ಕಾಕತಾಳೀಯ ಇರಬಹುದು. ಕುಮಾರಸ್ವಾಮಿ ಸದನದಲ್ಲಿ ಪ್ರಶ್ನೆ ಮಾಡಲಿ. ನಾವು ಉತ್ತರ ಕೊಡಲು ತಯಾರು ಇದ್ದೇವೆ. ಅವರಿಗೆ ಸಮಾಧಾನ ಆಗುವ ರೀತಿಯಲ್ಲಿ ಉತ್ತರ ನೀಡುತ್ತೇವೆ ಎಂದು ತಿಳಿಸಿದರು.
545 ಪಿಎಸ್ಐ ಹುದ್ದೆಗೆ ಮರು ಪರೀಕ್ಷೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ನಮಗೆ ಹುದ್ದೆ ಭರ್ತಿ ಮಾಡಿಕೊಳ್ಳಬೇಕಾದ ತುರ್ತಿದೆ. ಖಾಲಿ ಇರುವ ಹುದ್ದೆ ಹಾಗೇ ಇಡಲು ಸಾಧ್ಯವಿಲ್ಲ. ವಿದ್ಯಾರ್ಥಿಗಳ ಹಿತದೃಷ್ಟಿಯನ್ನೂ ಗಮನದಲ್ಲಿಟ್ಟುಕೊಂಡು ಪರೀಕ್ಷೆ ಮಾಡುತ್ತೇವೆ. ಇವತ್ತೂ ಕೂಡ ಸಭೆ ಇದೆ. ಪರೀಕ್ಷೆಯನ್ನು ಕೆಇಎ ಮಾಡಬೇಕಾ? ಅಥವಾ ಬೇರೆ ಯಾವುದಾದರೂ ಸಂಸ್ಥೆಗೆ ನೀಡಬೇಕಾ ಎಂದು ನೋಡ್ತೇವೆ ಅ ಸ್ಪಷ್ಟಪಡಿಸಿದರು.
