ವಿಮಾನ ಘಟನೆ ಬಗ್ಗೆ ಸಷ್ಟನೆ ಕೊಡಲಾಗಿದೆ.. ಕಾಂಗ್ರೆಸ್ ಟೀಕೆಯನ್ನು ವೈಭವೀಕರಿಸಲ್ಲ: ತೇಜಸ್ವಿ ಸೂರ್ಯ

author img

By

Published : Jan 21, 2023, 5:06 PM IST

i-did-not-glorify-congress-criticism-says-mp-tejaswi-surya

ಇಂಡಿಗೋ ವಿಮಾನ ತುರ್ತು ನಿರ್ಗಮನ ಬಾಗಿಲು ತೆರೆದ ಘಟನೆ - ಕಾಂಗ್ರೆಸ್​ ಟೀಕೆ ವೈಭವೀಕರಿಸಲ್ಲ - ಸಂಸದ ತೇಜಸ್ವಿ ಸೂರ್ಯ ಸ್ಪಷ್ಟನೆ

ವಿಮಾನ ಘಟನೆ ಬಗ್ಗೆ ಸಷ್ಟನೆ ಕೊಡಲಾಗಿದೆ..ಕಾಂಗ್ರೆಸ್ ಟೀಕೆಯನ್ನು ವೈಭವೀಕರಿಸಲ್ಲ: ತೇಜಸ್ವಿ ಸೂರ್ಯ

ಬೆಂಗಳೂರು : ವಿಮಾನ ತುರ್ತು ನಿರ್ಗಮನ ದ್ವಾರ ತೆರೆದ ವಿಚಾರವಾಗಿ ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಸಂಸದ ತೇಜಸ್ವಿ ಸೂರ್ಯ, ಈಗಾಗಲೇ ಈ ವಿಚಾರವಾಗಿ ಸ್ಪಷ್ಟೀಕರಣ ನೀಡಲಾಗಿದೆ. ಕಾಂಗ್ರೆಸ್ ಟೀಕೆಯನ್ನು ಮತ್ತಷ್ಟು ವೈಭವೀಕರಿಸುವುದಿಲ್ಲ ಎಂದು ಹೇಳಿದ್ದಾರೆ. ವಿಜಯನಗರದಲ್ಲಿ ನಮೋ ಚಾರಿಟಿ ರನ್ ಗೆ ಚಾಲನೆ ನೀಡಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ವಿಷಯದ ಬಗ್ಗೆ ಈಗಾಗಲೇ ಏರ್​ಲೈನ್ಸ್​​, ಡಿಜಿಸಿಎ ಸ್ಪಷ್ಟನೆ ನೀಡಿದೆ. ಇನ್ನು ವಿಮಾನಯಾನ ಸಚಿವರು ಇದು ಆಕಸ್ಮಿಕವಾಗಿ ನಡೆದ ಘಟನೆ ಎಂದು ಸ್ಪಷ್ಟಪಡಿಸಿದ್ದಾರೆ. ಜೊತೆಗೆ ನನ್ನ ಜೊತೆ ಪ್ರಯಾಣ ಬೆಳೆಸಿದ್ದ ಅಣ್ಣಾಮಲೈ ಅವರು ಘಟನೆಯ ಸತ್ಯ ಸಂಗತಿಗಳನ್ನು ತಿಳಿಸಿದ್ದಾರೆ. ಅಲ್ಲದೆ, ಇನ್ನಿಬ್ಬರು ಪ್ರಯಾಣಿಕರು ನಡೆದ ಸತ್ಯ ಸಂಗತಿ ತಿಳಿಸಿದ್ದಾರೆ ಎಂದರು.

ಇನ್ನು, ಈ ವಿಚಾರವಾಗಿ ಕಾಂಗ್ರೆಸ್‌ನವರು, ಇನ್ಯಾರೋ ಕೇಳುತ್ತಿದ್ದಾರೆ ಎಂಬ ಕಾರಣಕ್ಕೆ ಅದಕ್ಕೆ ಮತ್ತೆ ಪ್ರತಿಕ್ರಿಯೆ ಕೊಟ್ಟು, ಕಾಂಗ್ರೆಸ್ ನವರ ಟೀಕೆಯನ್ನು ವೈಭವೀಕರಿಸುವ ಕೆಲಸವನ್ನು ನಾನು ಮಾಡುವುದಿಲ್ಲ. ಈಗಾಗಲೇ ಈ ವಿಚಾರವಾಗಿ ಸ್ಪಷ್ಟೀಕರಣ ನೀಡಬೇಕಿತ್ತು. ಕೊಡಲಾಗಿದೆ ಎಂದು ಹೇಳಿ ಹೆಚ್ಚಿನ ಸ್ಪಷ್ಟನೆ ನೀಡಲು ನಿರಾಕರಿಸಿದರು.

ಘಟನೆ ಹಿನ್ನೆಲೆ : ಕಳೆದ ಡಿಸೆಂಬರ್ 10, 2022 ರಂದು ಚೆನ್ನೈ ವಿಮಾನ ನಿಲ್ದಾಣದಲ್ಲಿ ಚೆನ್ನೈ-ತಿರುಚ್ಚಿ ಇಂಡಿಗೋ ವಿಮಾನವೊಂದರ ತುರ್ತು ನಿರ್ಗಮನ ದ್ವಾರವನ್ನು ತೆರೆದಿದ್ದ ಘಟನೆ ನಡೆದಿತ್ತು. ಈ ಸಂಬಂಧ ಬಿಜೆಪಿ ಸಂಸದರ ಹೆಸರು ಕೇಳಿಬಂದಿತ್ತು. ವಿಮಾನದ ಸಿಬ್ಬಂದಿ ಪ್ರಯಾಣಿಕರಿಗೆ ಸುರಕ್ಷತೆಗೆ ಸಂಬಂಧಿಸಿದ ಶಿಷ್ಟಾಚಾರ ಕುರಿತು ಮಾಹಿತಿ ನೀಡುತ್ತಿರುವಾಗ ಘಟನೆ ಸಂಭವಿಸಿತ್ತು. ವಿಮಾನದಲ್ಲಿ ಅನುಸರಿಸಬೇಕಾದ ಸುರಕ್ಷತಾ ಪ್ರೋಟೋಕಾಲ್ ಬಗ್ಗೆ ಕ್ಯಾಬಿನ್ ಸಿಬ್ಬಂದಿ ಪ್ರಯಾಣಿಕರಿಗೆ ತಿಳಿಸುತ್ತಿದ್ದರು. ಈ ವೇಳೆ ತುರ್ತು ನಿರ್ಗಮನ ಬಾಗಿಲ ಬಳಿ ಕುಳಿತಿದ್ದ ಪ್ರಯಾಣಿಕರೋರ್ವರು ಇದ್ದಕ್ಕಿದ್ದಂತೆ ಲಿವರ್ ಅನ್ನು ಎಳೆದು ಬಾಗಿಲನ್ನು ತೆರೆದಿದ್ದರು.

ತಕ್ಷಣ ಎಲ್ಲ ಪ್ರಯಾಣಿಕರನ್ನು ಕೆಳಗಿಳಿಸಿ ಬಸ್ಸಿನಲ್ಲಿ ಕುಳಿತುಕೊಳ್ಳುವಂತೆ ಆದೇಶಿಸಲಾಗಿತ್ತು. ಏರ್‌ಲೈನ್ ಅಧಿಕಾರಿಗಳು ಮತ್ತು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ ಬಳಿಕ ಮತ್ತೆ ವಿಮಾನ ಹಾರಾಟ ಆರಂಭಿಸಲಾಗಿತ್ತು. ವಿಮಾನವು ಎರಡು ಗಂಟೆಗಳ ಟೇಕ್​ ಆಫ್​ ಆಗಿತ್ತು. ಇನ್ನು, ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ಕ್ಷಮೆಯಾಚಿಸಲು ಪ್ರಯಾಣಿಕನನ್ನು ಕೋರಲಾಗಿದ್ದು, ಕೂಡಲೇ ಅವರು ಕ್ಷಮೆಯಾಚಿಸಿದ್ದರು ಎಂದು ಹೇಳಲಾಗಿತ್ತು. ಪ್ರಯಾಣಿಕರೊಬ್ಬರು ವಿಮಾನದ ತುರ್ತು ನಿರ್ಗಮನ ದ್ವಾರವನ್ನು ತೆರೆದಿದ್ದರೆಂಬ ಅಂಶವನ್ನು ಚೆನ್ನೈ ವಿಮಾನ ನಿಲ್ದಾಣದ ಅಧಿಕಾರಿಗಳು ಹಾಗೂ ಡಿಜಿಸಿಎ ಅಧಿಕಾರಿಗಳು ದೃಢೀಕರಿಸಿದ್ದರೂ ಆ ಪ್ರಯಾಣಿಕ ಯಾರು ಎಂಬುದನ್ನು ದೃಢೀಕರಿಸಲು ನಿರಾಕರಿಸಿದ್ದರು. ಈ ಸಂಬಂಧ ಸಹ ಪ್ರಯಾಣಿಕ ಅಣ್ಣಾಮಲೈ ಅವರು ಸ್ಪಷ್ಟೀಕರಣ ನೀಡಿದ್ದರು.

ನಮೋ ಚಾರಿಟಿ ರನ್ : ಇದೇ ವೇಳೆ ಆರ್ಥಿಕವಾಗಿ ಹಿಂದುಳಿದ, ಬಡ ಕುಟುಂಬಗಳ ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲಕ್ಕಾಗಿ ಆರಂಭಿಸಲಾಗಿರುವ 'ನಮೋ ವಿದ್ಯಾನಿಧಿ ಸ್ಕಾಲರ್ ಶಿಪ್ ' ನ ಸಹಾಯಾರ್ಥವಾಗಿ ವಿಜಯನಗರದ ಬಾಲ ಗಂಗಾಧರನಾಥ ಸ್ವಾಮಿ ಮೈದಾನ (ಬಿ.ಜಿ.ಎಸ್ )ದಲ್ಲಿ ಆಯೋಜನೆಗೊಂಡಿದ್ದ 'ನಮೋ 5k ಚಾರಿಟಿ ರನ್ ' ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, ಸದೃಢ ಆರೋಗ್ಯ, ಫಿಟ್ನೆಸ್ ಕುರಿತಾಗಿ ಮಾನ್ಯ ಪ್ರಧಾನಿ ನರೇಂದ್ರ ಮೋದಿ ರವರ ಫಿಟ್ ಇಂಡಿಯಾ ಅಭಿಯಾನದ ಕರೆಗೆ ಬೆಂಗಳೂರಿನ ಜನತೆಯಿಂದ ಸಕಾರಾತ್ಮಕ ಪೂರಕ ಸ್ಪಂದನೆ ವ್ಯಕ್ತವಾಗಿದೆ. ಇಲ್ಲಿನ ರನ್ನಿಂಗ್ ಕಮ್ಯುನಿಟಿಯು ಚಾರಿಟಿ ಕಾರಣಗಳಿಗಾಗಿ ನಡೆಯುವ ಪ್ರತಿಯೊಂದು ಕಾರ್ಯಗಳಲ್ಲಿಯೂ ಸಕಾರಾತ್ಮಕವಾಗಿ ಸ್ಪಂದಿಸುತ್ತಿರುವುದು ಅನುಕರಣೀಯ. ಇದುವರೆಗೆ 500ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ವಿತರಿಸಲಾಗಿದೆ. ಇದು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಕೈಗೊಳ್ಳುವಲ್ಲಿ ಸಹಕಾರಿಯಾಗಲಿದೆ. ಇಲ್ಲಿ ಪಾಲ್ಗೊಂಡಿರುವ ಅಪಾರ ಪ್ರಮಾಣದ ರನ್ನಿಂಗ್ ಕಮ್ಯುನಿಟಿಯ ಸಹಾಯದಿಂದ ಇನ್ನೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವುದು ನಮ್ಮ ಉದ್ದೇಶ ಎಂದು ವಿವರಿಸಿದರು.

ಇದನ್ನೂ ಓದಿ : ಬಿಜೆಪಿ ವಿಜಯ ಸಂಕಲ್ಪ ಅಭಿಯಾನ : ಮನೆ ಮನೆಗೆ ತೆರಳಿ ಕರಪತ್ರ ಹಂಚಿದ ಸಿಎಂ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.