ಪ್ರತ್ಯಕ್ಷ ಸಾಕ್ಷ್ಯ ಇಲ್ಲದಿದ್ದರೂ ಸಾಂದರ್ಭಿಕ ಪುರಾವೆ ಆಧಾರದಲ್ಲಿ ಜೀವಾವಧಿ ಶಿಕ್ಷೆ ಖಾಯಂಗೊಳಿಸಿದ ಹೈಕೋರ್ಟ್​

author img

By

Published : Oct 5, 2022, 7:55 PM IST

high-court-upheld-life-sentence-on-basis-of-circumstantial-evidence

ಮಹಿಳೆ ಹತ್ಯೆ ಪ್ರಕರಣದಲ್ಲಿ ಯಾವುದೇ ಪ್ರತ್ಯಕ್ಷ ಸಾಕ್ಷ್ಯ ಇಲ್ಲದಿದ್ದರೂ ಮೃತಳ ಪುತ್ರಿಯ ಸಾಕ್ಷ್ಯ ಮತ್ತು ಸಾಂದರ್ಭಿಕ ಪುರಾವೆಗಳ ಆಧಾರದ ಮೇಲೆ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.

ಬೆಂಗಳೂರು: ಮಹಿಳೆಯೊಬ್ಬರು ಅನೈತಿಕ ಸಂಬಂಧ ಮುಂದುವರೆಸಲು ನಿರಾಕರಿಸಿದ್ದರಿಂದ ಹತ್ಯೆ ಮಾಡಿದ್ದ ಪ್ರಕರಣದಲ್ಲಿ ಯಾವುದೇ ಪ್ರತ್ಯಕ್ಷ ಸಾಕ್ಷ್ಯ ಇಲ್ಲದಿದ್ದರೂ ಮೃತಳ ಪುತ್ರಿ ತನ್ನ ತಾಯಿ ಹೊಂದಿದ್ದ ಅಕ್ರಮ ಸಂಬಂಧದ ಬಗ್ಗೆ ನುಡಿದ ಸಾಕ್ಷ್ಯ ಮತ್ತು ಸಾಂದರ್ಭಿಕ ಪುರಾವೆಗಳ ಆಧಾರದ ಮೇಲೆ ಅಪರಾಧಿಯೊಬ್ಬನಿಗೆ ಹೈಕೋರ್ಟ್ ಜೀವಾವಧಿ ಶಿಕ್ಷೆ ಖಾಯಂಗೊಳಿಸಿದೆ.

ಕೋಲಾರದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ಪ್ರಶ್ನಿಸಿ ಬಂಗಾರಪೇಟೆ ತಾಲೂಕಿನ ಕನ್ನೂರು ಗ್ರಾಮದ ಮಹಿಳೆಯೊಬ್ಬರ ಹತ್ಯೆ ಪ್ರಕರಣದಲ್ಲಿ ಅದೇ ಗ್ರಾಮದ ನಿವಾಸಿಯಾದ ರಂಗಪ್ಪನನ್ನು (52) ಸಲ್ಲಿಸಿದ್ದ ಕ್ರಿಮಿನಲ್​ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಸೋಮಶೇಖರ್ ಅವರ ನ್ಯಾಯಪೀಠ ಈ ಆದೇಶ ಮಾಡಿದೆ.

ಪ್ರಕರಣದಲ್ಲಿ ಯಾರೊಬ್ಬರೂ ಪ್ರತ್ಯಕ್ಷ ಸಾಕ್ಷಿ ಇಲ್ಲದಿದ್ದರೂ ತನಿಖಾ ವರದಿ, ಶವ ಪರೀಕ್ಷೆ ನಡೆಸಿದ ವೈದ್ಯಾಧಿಕಾರಿ ಹೇಳಿಕೆ, ಪಂಚನಾಮೆ ಮತ್ತದರ ಸಾಕ್ಷ್ಯ, ವಿಧಿ ವಿಜ್ಞಾನ ಪ್ರಯೋಗಾಲಯ ವರದಿ, ಮೃತಳ ಪುತ್ರಿ ಮತ್ತು ಗ್ರಾಮದ ಮುಖಂಡ ಜಯಪ್ಪ ನಾಯ್ಡು ಅವರ ಸಾಕ್ಷ್ಯ, ಮಹಿಳೆಯೊಂದಿಗೆ ಹೊಂದಿದ್ದ ಅನೈತಿಕ ಸಂಬಂಧ ಸೇರಿದಂತೆ ಇನ್ನಿತರ ಸಾಂದರ್ಭಿಕ ಸಾಕ್ಷ್ಯಗಳಿಂದ ರಂಗಪ್ಪ ಮಹಿಳೆಯನ್ನು ಕೊಲೆ ಮಾಡಿರುವುದನ್ನು ದೃಢಪಡಿಸಿಕೊಂಡ ಹೈಕೋರ್ಟ್, ಅಪರಾಧಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಪುರಸ್ಕರಿಸಿದೆ.

ಪ್ರಕರಣದ ಹಿನ್ನಲೆ ಏನು?: ಕಾರಣಾಂತರಗಳಿಂದ ಪತಿಯನ್ನು ಕಳೆದುಕೊಂಡಿದ್ದ ಮಹಿಳೆಗೆ ಒಬ್ಬ ಪುತ್ರಿ ಇದ್ದರು. ಅಪರಾಧಿ ರಂಗಪ್ಪ ಜೊತೆಗೆ ಮಹಿಳೆಯು ಹಲವು ವರ್ಷಗಳ ಕಾಲ ಅನೈತಿಕ ಸಂಬಂಧ ಹೊಂದಿದ್ದರು. 2014ರಲ್ಲಿ ಅನೈತಿಕ ಸಂಬಂಧ ಮುಂದುವರೆಸುವುದು ಬೇಡ ಎಂದು ರಂಗಪ್ಪಗೆ ಮಹಿಳೆ ವಿವರಿಸಿದ್ದರು. ಇದರಿಂದ ಅಸಮಾಧಾನಗೊಂಡ ರಂಗಪ್ಪ ತಾನು ನೀಡಿದ್ದ 25 ಸಾವಿರ ರೂ. ಸಾಲವನ್ನು ವಾಪಸ್ ನೀಡುವಂತೆ ಒತ್ತಾಯಿಸಿದ್ದಲ್ಲದೇ ಈ ವಿಚಾರವನ್ನು ಪಂಚಾಯಿತಿ ಕಟ್ಟೆಗೆ ಕೊಂಡೊಯ್ದಿದ್ದ.

ಗ್ರಾಮದ ಮುಖಂಡರು ನೀಡಿದ ಸೂಚನೆ ಮೇರೆಗೆ ಮಹಿಳೆ ಮನೆಯಲ್ಲಿದ್ದ ಎರಡು ಹಸು ಮಾರಿ ರಂಗಪ್ಪನ ಸಾಲ ತೀರಿಸಿದ್ದರು. ಗ್ರಾಮದ ಮುಖಂಡರು ಮಹಿಳೆಯ ಮನೆಗೆ ಹೋಗದಂತೆ ರಂಗಪ್ಪಗೆ ಸಲಹೆ ನೀಡಿದ್ದರು. ಇಷ್ಟಾದರೂ ಅಕ್ರಮ ಸಂಬಂಧ ಮುಂದುವರಿಸುವಂತೆ ಮಹಿಳೆಗೆ ರಂಗಪ್ಪ ಪೀಡಿಸುತ್ತಿದ್ದನಲ್ಲದೆ, ಪದೇ ಪದೆ ಜಗಳ ಸಹ ಮಾಡುತ್ತಿದ್ದ. ಆದರೆ, ಮಹಿಳೆ ಮಾತ್ರ ಸಂಬಂಧ ಮುಂದುವರೆಸುವುದಕ್ಕೆ ಅವಕಾಶ ನೀಡಿರಲಿಲ್ಲ.

ಇದರಿಂದ ಸಿಟ್ಟಿಗೆದ್ದ ರಂಗಪ್ಪ 2014ರ ಡಿ.26ರಂದು ಮಹಿಳೆಯ ಮನೆಗೆ ನುಗ್ಗಿ ಗಲಾಟೆ ಮಾಡಿ ಕಬ್ಬಿಣದ ರಾಡಿನಿಂದ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದ. ವಿಷಯ ತಿಳಿದು ಮನೆಗೆ ಧಾವಿಸಿದ್ದ ಪುತ್ರಿ ಮತ್ತು ಜಯಪ್ಪ ನಾಯ್ಡು ಆಕೆಯನ್ನು ಆಸ್ಪತ್ರೆಗೆ ಸೇರಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಅಸುನೀಗಿದ್ದರು.

ಪುತ್ರಿ ನೀಡಿದ್ದ ದೂರು ಆಧರಿಸಿ ಎಫ್‌ಐಆರ್ ದಾಖಲಿಸಿದ್ದ ಬೇತಮಂಗಲ ಠಾಣಾ ಪೊಲೀಸರು, ತನಿಖೆ ಪೂರ್ಣಗೊಳಿಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ರಂಗಪ್ಪಗೆ ಜೀವಾವಧಿ ಶಿಕ್ಷೆ ವಿಧಿಸಿ 2016ರ ಡಿ.8ರಂದು ಕೋಲಾರದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿತ್ತು. ಅದನ್ನು ರದ್ದುಪಡಿಸುವಂತೆ ಕೋರಿ ಅಪರಾಧಿ ಹೈಕೋರ್ಟ್‌ಗೆ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿದ್ದ.

ವಿಚಾರಣೆ ನಡೆಸಿದ ಹೈಕೋರ್ಟ್, ಎಲ್ಲ ದಾಖಲೆ, ಪುರಾವೆ ಪರಿಗಣಿಸಿಯೇ ವಿಚಾರಣಾ ನ್ಯಾಯಾಲಯ ರಂಗಪ್ಪನ್ನು ದೋಷಿಯಾಗಿ ನಿರ್ಧರಿಸಿ ಶಿಕ್ಷೆ ವಿಧಿಸಿದೆ. ಅದರಲ್ಲಿ ಮಧ್ಯಪ್ರವೇಶ ಮಾಡುವ ಅಗತ್ಯವಿಲ್ಲ ಎಂದು ತಿಳಿಸಿದ್ದು, ವಿಚಾರಣಾ ನ್ಯಾಯಾಲಯದ ಆದೇಶ ಎತ್ತಿ ಹಿಡಿದಿದೆ.

ಇದನ್ನೂ ಓದಿ: ಹೊರ ರಾಜ್ಯದ ಆರೋಪಿಗಳಿಗೆ ಜಾಮೀನು ನೀಡಿದಲ್ಲಿ ವಿಚಾರಣೆಗೆ ಅಡ್ಡಿ ಸಾಧ್ಯತೆ.. ಹೈಕೋರ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.