ಎಸ್​ಡಿಪಿ​ಐ ಕಚೇರಿಗಳಿಗೆ ಬೀಗಮುದ್ರೆ: ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ಹೈಕೋರ್ಟ್​ ನೋಟಿಸ್​

author img

By

Published : Nov 23, 2022, 8:15 PM IST

high-court-notice-to-dakshina-kannada-district-administration-on-sdpi-offices-sealed

ಪಿಎಫ್ಐಗೆ ಮಾತ್ರ ಕೇಂದ್ರ ಸರ್ಕಾರ ನಿಷೇಧ ಹೇರಿದೆ. ಎಸ್​ಡಿಪಿಐಗೆ ಯಾವುದೇ ನಿರ್ಬಂಧ ಹೇರಿಲ್ಲ. ಆದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಸ್​ಡಿಪಿಐ ಕಚೇರಿಗಳ ಮೇಲೆ ದಾಳಿ ನಡೆಸಿ ಆಸ್ತಿಗಳನ್ನು ವಶಪಡಿಸಿಕೊಂಡು ಬೀಗ ಮುದ್ರೆ ಹಾಕಲಾಗಿದೆ ಎಂದು ಹೈಕೋರ್ಟ್​ಗೆ ಅರ್ಜಿ ಸಲ್ಲಿಕೆಯಾಗಿದೆ.

ಬೆಂಗಳೂರು: ಸೋಷಿಯಲ್​ ಡೆಮಾಕ್ರಟಿಕ್​ ಪಾರ್ಟಿ ಆಫ್​ ಇಂಡಿಯಾ (ಎಸ್​ಡಿಪಿ​ಐ) ಕಚೇರಿಗಳ ಮೇಲೆ ದಾಳಿ ನಡೆಸಿ ಮುದ್ರೆ ಹಾಕಿರುವುದನ್ನು ತೆರವು ಮಾಡುವಂತೆ ಸೂಚನೆ ನೀಡಲು ಕೋರಿ ಸಲ್ಲಿಕೆಯಾಗಿರುವ ಅರ್ಜಿಗೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ಹೈಕೋರ್ಟ್ ನೋಟಿಸ್​ ಜಾರಿ ಮಾಡಿದೆ.

ದಕ್ಷಿಣ ಕನ್ನಡದ ಎಸ್​ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್​ ಸಾದತ್​ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಪ್ರತಿವಾದಿಗಳಾದ ನೋಟಿಸ್​ ಜಾರಿ ಮಾಡಿ ವಿಚಾರಣೆ ಮುಂದೂಡಿದೆ. ಅಲ್ಲದೆ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು, ಮಂಗಳೂರು ತಹಶೀಲ್ದಾರ್​ ಹಾಗೂ ಪೊಲೀಸ್​ ವರಿಷ್ಠಾಧಿಕಾರಿಗಳಿಗೆ ನೋಟಿಸ್​ ಜಾರಿ ಮಾಡಿ ವಿಚಾರಣೆಯನ್ನು 6ಕ್ಕೆ ಮುಂದೂಡಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಕಾನೂನು ಬಾಹಿರ ಚಟುವಟಿಕೆಗಳ ನಡೆಸಿದ ಆರೋಪದಲ್ಲಿ ಪಾಪ್ಯುಲರ್​ ಫ್ರೆಂಟ್ ಆಫ್​ ಇಂಡಿಯಾ (ಪಿಎಫ್ಐ) ವನ್ನು ಕೇಂದ್ರ ಗೃಹ ಮಂತ್ರಾಲಯ ಐದು ವರ್ಷಗಳ ಅವಧಿಗೆ ನಿಷೇಧ ಹೇರಿದೆ. ಎಸ್​ಡಿಪಿಐಗೆ ಯಾವುದೇ ನಿರ್ಬಂಧ ಹೇರಿಲ್ಲ.

13 ಎಸ್​ಡಿಪಿಐ ಕಚೇರಿಗಳಿಗೆ ಬೀಗ: ಆದರೆ, ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳು, ಮಂಗಳೂರು ತಹಶೀಲ್ದಾರ್​ ಮತ್ತು ಜಿಲ್ಲಾ ಪೊಲೀಸ್​ ಅಧಿಕಾರಿಗಳು ಜಿಲ್ಲೆಯ 13 ಭಾಗಗಳಲ್ಲಿನ ಎಸ್​ಡಿಪಿಐ ಕಚೇರಿಗಳ ಮೇಲೆ ದಾಳಿ ನಡೆಸಿ ಆಸ್ತಿಗಳನ್ನು ವಶಪಡಿಸಿಕೊಂಡು ಬೀಗ ಮುದ್ರೆ ಹಾಕಿದ್ದಾರೆ. ಆದ್ದರಿಂದ ಬೀಗಮುದ್ರೆ ಹಾಕಿರುವ ಕಚೇರಿಗಳ ತೆರವು ಕೋರಿ ಪಕ್ಷದ ಸದಸ್ಯರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು. ಆದರೆ, ಪ್ರತಿವಾದಿಗಳು ಯಾವುದೇ ಕ್ರಮಕ್ಕೆ ಮುಂದಾಗಿರಲಿಲ್ಲ.

ಅರ್ಜಿದಾರರು ರಾಜಕೀಯ ಪಕ್ಷವಾಗಿದ್ದು, ಪ್ರಜಾಪ್ರತಿನಿಧಿಗಳ ಕಾಯಿದೆಯಡಿ ನೋಂದಣಿಯಾಗಿದೆ. ಸಮಾಜದಲ್ಲಿ ಸೌಲಭ್ಯ ವಂಚಿತ ವರ್ಗದವರ ಪರ ಶ್ರಮಿಸುತ್ತಿದೆ. ಅರ್ಜಿದಾರ ಸಂಸ್ಥೆಯನ್ನು ನಿಷೇಧ ಹೇರಿಲ್ಲ. ಇದೊಂದು ಸ್ವತಂತ್ರ್ಯವಾದ ಸಂಸ್ಥೆಯಾಗಿದ್ದು, ನಿಷೇಧಿತ ಪಿಎಫ್​ಐನೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ. ಆದರೂ, ಪ್ರತಿವಾದಿಗಳು ಕಾನೂನು ಬಾಹಿರವಾಗಿ ಅರ್ಜಿದಾರರ ಸಂಸ್ಥೆಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಅಧಿಕಾರಿಗಳು ವಶ ಪಡಿಸಿಕೊಂಡಿರುವ ಆಸ್ತಿಗಳು ಬಾಡಿಗೆ ಕಟ್ಟಡಗಳಾಗಿವೆ. ದುರುದ್ದೇಶದ ತೊಂದರೆ ನೀಡಲಾಗುತ್ತಿದೆ. ಇದರಿಂದ ಬಡ ಮತ್ತು ಮಧ್ಯಮ ವರ್ಗದವರಿಗೆ ತೊಂದರೆಯಾಗುತ್ತಿದೆ. ಹೀಗಾಗಿ ವಶಪಡಿಸಿಕೊಂಡಿರುವ ವಸ್ತುಗಳಿಗೆ ಹಾಕಿರುವ ಬೀಗಮುದ್ರೆ ತೆರವುಗೊಳಿಸುವ ಬಗ್ಗೆ ಸೂಚನೆ ನೀಡಬೇಕು ಎಂದು ಹೈಕೋರ್ಟ್​ಗೆ ಮನವಿ ಸಲ್ಲಿಸಲಾಗಿದೆ.

ಇದನ್ನೂ ಓದಿ: ಪಿಎಫ್ಐ ನಿಷೇಧ: ಮಂಗಳೂರು ಜಿಲ್ಲಾ ಕಚೇರಿಗೆ ಬೀಗಮುದ್ರೆ ಹಾಕಿದ ಪೊಲೀಸರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.