15 ವರ್ಷಗಳಲ್ಲಿ ಬೆಂಗಳೂರಿಗೆ ಕೊಟ್ಟ ಅನುದಾನ :  ಸಮಗ್ರ ತನಿಖೆಗೆ ಹೆಚ್​ಡಿಕೆ ಒತ್ತಾಯ

author img

By

Published : May 20, 2022, 4:13 PM IST

Kumaraswamy barrage against Congress BJP

ಹಿಟಾಚಿಯಲ್ಲಿ ಹಣವನ್ನು ಬಗೆಯೋದನ್ನು ಸಚಿವರು ನಿಲ್ಲಿಸಲಿ. ಸಚಿವರಾದ ಬೈರತಿ ಬಸವರಾಜ, ಮುನಿರತ್ನ, ಗೋಪಾಲಯ್ಯ, ಸೋಮಶೇಖರ್ ಮಳೆಯಿಂದ ಸಂಕಷ್ಟಕ್ಕೆ ಒಳಗಾದ ಜನರ ಕೆಲಸ ಮಾಡಲಿ. ಈ ಸಚಿವರುಗಳ ಕ್ಷೇತ್ರಗಳಿಗೆ ಎಷ್ಟು ಹಣ ಬಿಡುಗಡೆಯಾಗಿದೆ. ಅದನ್ನು ತಿಳಿದುಕೊಳ್ಳುವ ಹಕ್ಕು ಜನರಿಗೆ ಇದೆ. ಯಾವುದಕ್ಕೆ ಎಷ್ಟು ಹಣ ಖರ್ಚಾಗಿದೆ ಎಂಬ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಹೆಚ್​ಡಿಕೆ ಆಗ್ರಹಿಸಿದರು..

ಬೆಂಗಳೂರು : ಕಳೆದ 15 ವರ್ಷಗಳಿಂದ ಬೆಂಗಳೂರಿನ ಅಭಿವೃದ್ಧಿಗೆ ಬಿಡುಗಡೆಯಾಗಿರುವ ಅನುದಾನದ ಬಗ್ಗೆ ಉನ್ನತ ಮಟ್ಟದ ಸಮಗ್ರ ತನಿಖೆಯಾಗಬೇಕು. ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ನೆಲಗದರನಹಳ್ಳಿ ರಸ್ತೆಯ ರುಕ್ಮಿಣಿನಗರ, ಸಿದ್ಧಾರ್ಥ್‌ನಗರ ಕೊಳಗೇರಿ, ಬಸಪ್ಪನ ಕಟ್ಟೆ, ಚಿಕ್ಕಬಾಣಾವರ ಮುಂತಾದ ಮಳೆ ಹಾನಿ ಪ್ರದೇಶಗಳಲ್ಲಿ ಪರಿಶೀಲಿಸಿದ ನಂತರ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಈ ರೀತಿ ಆಗ್ರಹಿಸಿದ್ದಾರೆ.

ತನಿಖೆಗೆ ಹೆಚ್​ಡಿಕೆ ಒತ್ತಾಯ : ಕೆ.ಆರ್.ಪುರ, ಮಹಾಲಕ್ಷ್ಮಿಲೇಔಟ್, ರಾಜರಾಜೇಶ್ವರಿ, ಯಶವಂತಪುರ ಸೇರಿದಂತೆ ನಗರದಲ್ಲಿ ಎಷ್ಟು ಹಣ ಲೂಟಿ ಆಗಿದೆ ಎನ್ನುವುದು ನನಗೆ ಗೊತ್ತಿದೆ. ಹಿಟಾಚಿಯಲ್ಲಿ ಹಣ ಬಗೆಯೋದನ್ನು ಸಚಿವರು ನಿಲ್ಲಿಸಲಿ. ಸಚಿವರಾದ ಬೈರತಿ ಬಸವರಾಜ, ಮುನಿರತ್ನ, ಗೋಪಾಲಯ್ಯ, ಸೋಮಶೇಖರ್ ಮಳೆಯಿಂದ ಸಂಕಷ್ಟಕ್ಕೆ ಒಳಗಾದ ಜನರ ಕೆಲಸ ಮಾಡಲಿ. ಈ ಸಚಿವರುಗಳ ಕ್ಷೇತ್ರಗಳಿಗೆ ಎಷ್ಟು ಹಣ ಬಿಡುಗಡೆಯಾಗಿದೆ. ಅದನ್ನು ತಿಳಿದುಕೊಳ್ಳುವ ಹಕ್ಕು ಜನರಿಗೆ ಇದೆ. ಯಾವುದಕ್ಕೆ ಎಷ್ಟು ಹಣ ಖರ್ಚಾಗಿದೆ ಎಂಬ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.

Kumaraswamy barrage against Congress BJP
ಮಳೆ ಹಾನಿ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿದ ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ

ದಾಸರಹಳ್ಳಿ ಕ್ಷೇತ್ರದಲ್ಲಿ ಸಂಚಾರ ಮಾಡಿದ ಮಾಜಿ ಮುಖ್ಯಮಂತ್ರಿಗಳು, 28 ಕ್ಷೇತ್ರಗಳಿಗೆ ಎಷ್ಟು ಹಣವನ್ನು 15 ವರ್ಷಗಳಲ್ಲಿ ಬಿಡುಗಡೆ ಮಾಡಿದ್ದಾರೆ ಎಂಬ ಮಾಹಿತಿ ಪಡೆಯುತ್ತೇನೆ. ಇದು ಜನರ ಬದುಕಿನ ಪ್ರಶ್ನೆ. ಇದರಲ್ಲಿ ರಾಜಕಾರಣ ನಾನು ಮಾಡ್ತಿಲ್ಲ ಎಂದು ಹೇಳಿದರು.

ಶೇ.75ರಷ್ಟು ಪರಿಹಾರ ಕೊಡಲು ಆಗ್ರಹ : ಮಳೆಯಿಂದ ನಷ್ಟ ಆಗಿರುವವರಿಗೆ ಸರ್ಕಾರ ಸರಿಯಾದ ಪರಿಹಾರ ಕೊಡಬೇಕು. ತೋರಿಕೆಗೆ ಅಷ್ಟೋ ಇಷ್ಟೋ ಕೊಟ್ಟು ಸುಮ್ಮನಾಗಬಾರದು. ನಷ್ಟ ಆಗಿರುವ ಶೇ. 75ರಷ್ಟು ಪರಿಹಾರ ಕೊಡಬೇಕು. ಅದರಲ್ಲೂ ಅಧಿಕಾರಿಗಳು ಮತ್ತೆ ದುಡ್ಡು ಹೊಡೆಯಲು ನೋಡುತ್ತಾರೆ. ಹಾಗಾಗದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.

Kumaraswamy barrage against Congress BJP
ಮಳೆ ಹಾನಿ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿದ ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ

ನನ್ನ ಕಾಲದಲ್ಲಿ ದಾಸರಹಳ್ಳಿ ಕ್ಷೇತ್ರದ ಅಭಿವೃದ್ಧಿಗೆ 750 ಕೋಟಿ ರೂ. ನೀಡಿದ್ದೆ. ಆಮೇಲೆ ರಾಜಕೀಯ ಮಾಡಿ ಹಣ ವಾಪಸ್​ ಪಡೆದರು. ನಾನು ಕೂಡ ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಭೇಟಿ ಮಾಡಿದ್ದೆ. ದಾಸರಹಳ್ಳಿ ಕ್ಷೇತ್ರಕ್ಕೆ ಹಣ ಬಿಡುಗಡೆ ಮಾಡಿ ಅಂತಾ ಹತ್ತು ಸಾರಿ‌ ಮನವಿ ಮಾಡಿದೆ. ನಂತರ ಶಾಸಕರು‌ ಕೂಡ ಪ್ರತಿಭಟಿಸಿದರು. ಆದರೂ ಕೂಡ ಅನುದಾನ ಬಿಡುಗಡೆ ಆಗಿಲ್ಲ ಎಂದು ಅವರು ದೂರಿದರು.

ದಾಸರಹಳ್ಳಿಯಲ್ಲಿ ರಾಜಕೀಯ ಕಾರಣಕ್ಕೆ ಹಣ ಬಿಡುಗಡೆ ಮಾಡಿಲ್ಲ. ಇಲ್ಲಿ ಯಾದಗಿರಿ ಮತ್ತು‌ ಬೀದರ್ ಭಾಗದ ಜನರು ವಾಸ ಮಾಡುತ್ತಿದ್ದಾರೆ. ಪಾಪ ಅವರು ಮುಗ್ಧ ಜನರು. ಅವರಿಗೆ ಸರಿಯಾಗಿ ರಸ್ತೆ, ಚರಂಡಿ ಇಲ್ಲ. ಈಗ ಮೂವತ್ತು ಕೋಟಿ‌ ಬಿಡುಗಡೆ ಮಾಡಿದ್ದಾರೆ. ಇಷ್ಟು ದೊಡ್ಡ ಕ್ಷೇತ್ರಕ್ಕೆ ಮೂವತ್ತು ಕೋಟಿ ಎಲ್ಲಿ ಸಾಲುತ್ತದೆ ಎಂದು ಪ್ರಶ್ನಿಸಿದರು.

ಕಾಂಗ್ರೆಸ್, ಬಿಜೆಪಿ ವಿರುದ್ಧ ವಾಗ್ದಾಳಿ : ರಾಜಕಾಲುವೆಗೆ 1600 ಕೋಟಿ ರೂ. ಹಣ ಬಿಡುಗಡೆ ಮಾಡಿದ್ದೀರಾ.. ಆದರೆ, ಕಾಮಗಾರಿ ನಡೆಯುತ್ತಿಲ್ಲ. ವಿಳಂಬ ಆಗಲು ಕಾರಣ ಏನು ಎಂದು ಪ್ರಶ್ನಿಸಿದರು. ಮೈತ್ರಿ ಸರ್ಕಾರದ ಅವಧಿಯಲ್ಲಿ ಬೆಂಗಳೂರು ಸಭೆ ಮಾಡಲು ಕಾಂಗ್ರೆಸ್ ‌ನಾಯಕರು ಬಿಡಲಿಲ್ಲ. ಕಾಂಗ್ರೆಸ್ ಸರ್ಕಾರ ಐದು ವರ್ಷ ಇತ್ತು. ಏನು ಅಭಿವೃದ್ಧಿ ಮಾಡಿದೆ ಎಂದೂ ಪ್ರಶ್ನಿಸಿದರು.

ಈಗ ಬಿಜೆಪಿ ಸರ್ಕಾರ ಇದೆ. ಮೂರು ವರ್ಷ ಆಗುತ್ತಾ ಬಂತು ಇವರು ಕೂಡ ಯಾವುದೇ ಅಭಿವೃದ್ಧಿ ‌ಮಾಡುತ್ತಿಲ್ಲ. ಅಲ್ಪಸ್ವಲ್ಪ ಮಾನ, ಮರ್ಯಾದೆ ಇದ್ದರೆ ಬೆಂಗಳೂರು ಅಭಿವೃದ್ಧಿ ಮಾಡಿ ಎಂದು ಕಾಂಗ್ರೆಸ್ ಹಾಗೂ ಬಿಜೆಪಿ ವಿರುದ್ಧ ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ದೊಡ್ಡಬಳ್ಳಾಪುರ: ಭಾರಿ ಮಳೆಗೆ ಕೊಚ್ಚಿ ಹೋದ ತಾತ್ಕಾಲಿಕ ಸೇತುವೆ, 3 ಗ್ರಾಮಗಳ ಸಂಪರ್ಕ ಕಡಿತ

ನಗರ ಪ್ರದಕ್ಷಿಣೆ ಪೋಟೋ ಸೆಷನ್ ಆಗಬಾರದು. ಎಲ್ಲಿ ಹಣ ಪೋಲು ಆಗುತ್ತಿದೆ ಅದನ್ನು ಸರಿ ಮಾಡಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಸಲಹೆ ನೀಡಿದ ಹೆಚ್‌ಡಿಕೆ, ಸರ್ಕಾರಕ್ಕೆ ಮನುಷ್ಯತ್ವ ಇದ್ದರೆ ಜನರ ಜೊತೆ ಚೆಲ್ಲಾಟ ಆಡಬೇಡಿ. ಹಣ ಮಾಡುವುದಕ್ಕೆ ಬೇರೆ ದಾರಿ ಇದೆ. ಹಣ ಲೂಟಿ ಮಾಡುವುದು ನಿಲ್ಲಿಸಿ ಎಂದು ಸರ್ಕಾರಕ್ಕೆ ಆಗ್ರಹಿಸಿದರು. ಚಂಬಲ್ ಕಣಿವೆಗೆ ದರೋಡೆ ಮಾಡುವವರನ್ನು ನೋಡುವುದಕ್ಕೆ ಹೋಗುವುದು ಬೇಡ. ಇಲ್ಲೇ ಚಂಬಲ್ ಕಣಿವೆ ದರೋಡೆಕೋರರು ಇದ್ದಾರೆ. ಜನರ ಹಣ ಲೂಟಿ ಮಾಡಬೇಡಿ ಎಂದರು.

ಕುಮಾರಸ್ವಾಮಿ ಅವರು ಸಿಎಂ ಆಗಿದ್ದಿದ್ದರೆ ಹೀಗೆ ಆಗುತ್ತಿರಲಿಲ್ಲ: ಹೆಚ್.ಡಿ.ಕುಮಾರಸ್ವಾಮಿ ಅವರು ಈಗ ಮುಖ್ಯಮಂತ್ರಿ ಆಗಿದ್ದಿದ್ದರೆ ದಾಸರಹಳ್ಳಿ ಕ್ಷೇತ್ರಕ್ಕೆ ಇಂಥ ಕಷ್ಟದ ಸ್ಥಿತಿ ಬರುತ್ತಿರಲಿಲ್ಲ ಎಂದು ದಾಸರಹಳ್ಳಿ ಶಾಸಕ ಮಂಜುನಾಥ್ ಅವರು ನೋವು ವ್ಯಕ್ತಪಡಿಸಿದರು. ಕುಮಾರಸ್ವಾಮಿ ಅವರು ತಮ್ಮ ಕ್ಷೇತ್ರದ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ಕ್ಷೇತ್ರದ ಪ್ರಗತಿಗೆ 700 ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಿ ಆದೇಶ ಹೊರಡಿಸಿದ್ದರು. ಅವರ ಸರ್ಕಾರವನ್ನು ತೆಗೆದು ಅಧಿಕಾರಕ್ಕೆ ಬಂದ ಬಿಜೆಪಿ ಆ ಅನುದಾನವನ್ನು ವಾಪಸ್ ಪಡುಕೊಂಡಿತು ಎಂದು ದೂರಿದರು.

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.