ಶಿಕ್ಷಕ ಸಮುದಾಯಕ್ಕೆ ಆದ್ಯತೆ ಮೇರೆಗೆ ಲಸಿಕೆ ನೀಡಿ : ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

author img

By

Published : Aug 3, 2021, 5:29 AM IST

give-vaccine-teachers-on-priority-high-court

ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಬೋಧಕ-ಬೋಧಕೇತರ ಸಿಬ್ಬಂದಿಗೆ ಈವರೆಗೆ ಲಸಿಕೆ ನೀಡಿರುವ ಬಗ್ಗೆ ಜಿಲ್ಲಾವಾರು ಅಂಕಿ ಅಂಶ ಸಲ್ಲಿಸುವಂತೆ ಹೈಕೋರ್ಟ್ ಸೂಚಿಸಿದೆ.

ಬೆಂಗಳೂರು : ಶಿಕ್ಷಕ ಸಮುದಾಯವನ್ನು ಫ್ರಂಟ್‌ ಲೈನ್ ವಾರಿಯರ್​​ನಂತೆ ಪರಿಗಣಿಸಿ ಅವರಿಗೆ ಆದ್ಯತೆ ಮೇಲೆ ಲಸಿಕೆ ನೀಡಲು ಸರ್ಕಾರಕ್ಕೆ ಸೂಚಿಸಿರುವ ಹೈಕೋರ್ಟ್, ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಬೋಧಕ-ಬೋಧಕೇತರ ಸಿಬ್ಬಂದಿಗೆ ನೀಡಿರುವ ಲಸಿಕೆ ಕುರಿತು ಜಿಲ್ಲಾವಾರು ಅಂಕಿ ಅಂಶ ಸಲ್ಲಿಸುವಂತೆ ನಿರ್ದೇಶಿಸಿದೆ.

ರಾಜ್ಯದಲ್ಲಿ ಶಾಲೆಗಳನ್ನು ಪುನಾರಂಭಿಸಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಎಂ. ರಾಧಾ ಹಾಗೂ ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆ ನಡೆಸಿದ ಹಿರಿಯ ನ್ಯಾಯಮೂರ್ತಿ ಬಿ.ವಿ. ನಾಗರತ್ನ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲೆ ಜಯ್ನಾ ಕೊಠಾರಿ ವಾದಿಸಿ, ರಾಜ್ಯದಲ್ಲಿ ಬಹುತೇಕ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ. ಆದರೆ, ಶಾಲೆಗಳ ಆರಂಭಕ್ಕೆ ಅನುಮತಿಸಿಲ್ಲ. ಹಂತ-ಹಂತವಾಗಿಯಾದರೂ ಶಾಲೆ ಆರಂಭಿಸಲು ಕ್ರಮ ಕೈಗೊಳ್ಳಬಹುದು. ಮೊದಲು 9 ಮತ್ತು 10ನೇ ತರಗತಿಗಳನ್ನು ಪ್ರಾರಂಭಿಸಿ, ನಂತರ ಉಳಿದ ತರಗತಿಗಳ ಬಗ್ಗೆ ಯೋಚಿಸಬಹುದು. ಈ ನಿಟ್ಟಿನಲ್ಲಿ ಸರ್ಕಾರ ಒಂದು ಖಚಿತ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವ ಅಗತ್ಯವಿದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಕೊರೊನಾ ಪ್ರಕರಣಗಳ ಸಂಖ್ಯೆ ಮತ್ತೆ ಹೆಚ್ಚುತ್ತಿದೆ. ಗಡಿ ಜಿಲ್ಲೆಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಸರ್ಕಾರ ಕೈಗೊಳ್ಳುತ್ತಿದೆ. ಮೇಲಾಗಿ, ಸದ್ಯ ಸಚಿವ ಸಂಪುಟ ಸಹ ಅಸ್ತಿತ್ವದಲ್ಲಿಲ್ಲ. ಶಿಕ್ಷಣ ಇಲಾಖೆಗೆ ಮುಖ್ಯಸ್ಥರಿಲ್ಲದಿರುವ ವೇಳೆ ಖಚಿತವಾಗಿ ನಿರ್ಧರಿಸುವುದು ಕಷ್ಟವಾಗಬಹುದು ಎಂದಿತು. ಹಾಗೆಯೇ, ಕೊರೊನಾ 3ನೇ ಅಲೆ ಮಕ್ಕಳನ್ನು ಹೆಚ್ಚಾಗಿ ಬಾಧಿಸುತ್ತದೆ ಎಂದು ಹೇಳಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಶಾಲೆಗಳನ್ನು ಪುನಾರಂಭಿಸುವ ತೀರ್ಮಾನ ತೆಗೆದುಕೊಳ್ಳುವುದು ಅಪಾಯ ತಂದೊಡ್ಡಬಹುದು. ಏನೇ ಇರಲಿ, ಶಿಕ್ಷಕ ಸಮುದಾಯವನ್ನು ಫ್ರಂಟ್‌ಲೈನ್ ಕೊರೊನಾ ವಾರಿಯರ್ ಎಂಬಂತೆ ಪರಿಗಣಿಸಿ ಅವರಿಗೆ ಆದ್ಯತೆ ಮೇಲೆ ಲಸಿಕೆ ನೀಡಿದರೆ ಶಾಲೆಗಳನ್ನು ಪುನಾರಂಭಿಸುವ ನೆರವಾಗಬಹುದು ಎಂದು ಅಭಿಪ್ರಾಯಪಟ್ಟಿತು.

ಅಲ್ಲದೇ, ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಬೋಧಕ-ಬೋಧಕೇತರ ಸಿಬ್ಬಂದಿಗೆ ಈವರೆಗೆ ಲಸಿಕೆ ನೀಡಿರುವ ಬಗ್ಗೆ ಜಿಲ್ಲಾವಾರು ಅಂಕಿ ಅಂಶ ಸಲ್ಲಿಸುವಂತೆ ನಿರ್ದೇಶಿಸಿ ವಿಚಾರಣೆಯನ್ನು ಆಗಸ್ಟ್ 12ಕ್ಕೆ ಮುಂದೂಡಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.