ಸಾಧನೆ ವಿವರಿಸುವ ಬದಲು ಕಾಂಗ್ರೆಸ್ ವಿರುದ್ಧ ಟೀಕೆ ಹೆಚ್ಚಾಗಿ ಕೇಳಿ ಬಂತು: ಪ್ರಿಯಾಂಕ್​ ಖರ್ಗೆ

author img

By

Published : Sep 11, 2022, 3:50 PM IST

ಮಾಜಿ ಸಚಿವ ಪ್ರಿಯಾಂಕ್​ ಖರ್ಗೆ

ಬೆಲೆ ಏರಿಕೆಯಿಂದ ಜನಸಾಮಾನ್ಯರ ಬೇಬು ಸುಡುತ್ತಿದೆ ಎಂದು ಮಾಜಿ ಸಚಿವ ಪ್ರಿಯಾಂಕ್​​ ಖರ್ಗೆ ಅವರು ಹೇಳಿದ್ದಾರೆ.

ಬೆಂಗಳೂರು: ರಾಜ್ಯ ಸರ್ಕಾರ ಜನಸ್ಪಂದನ ಸಮಾವೇಶದಲ್ಲಿ ಸಾಧನೆ ವಿವರಿಸುವ ಬದಲು ಕಾಂಗ್ರೆಸ್ ವಿರುದ್ಧ ಟೀಕೆ ಹೆಚ್ಚಾಗಿ ಕೇಳಿ ಬಂತು ಎಂದು ಮಾಜಿ ಸಚಿವ ಪ್ರಿಯಾಂಕ್​​ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿ, ನಿನ್ನೆ ಬಿಜೆಪಿಯವರ ಜನಸ್ಪಂದನ ಸಮಾವೇಶ ದೊಡ್ಡಬಳ್ಳಾಪುರದಲ್ಲಿ ನಡೆಯಿತು. ಹಲವು ಬಾರಿ ಮುಂದೂಡಿ ಜನಾಕ್ರೋಶದ ನಡುವೆ ಸಂಭ್ರಮಾಚರಣೆ ಮಾಡಿರುವ ಬಿಜೆಪಿ ಸ್ನೇಹಿತರಿಗೆ ಮೊದಲು ಅಭಿನಂದನೆ ಸಲ್ಲಿಸುತ್ತೇನೆ. ನನಗೆ ಇದು ಸರ್ಕಾರದ ಸಾಧನೆಯ ಉತ್ಸವಕ್ಕಿಂತ ಕೇವಲ ಮುಖ್ಯಮಂತ್ರಿ ಹಾಗೂ ಮೂರ್ನಾಲ್ಕು ಮಂತ್ರಿಗಳ ಉತ್ಸವವಾಗಿ ಕಂಡಿತು. ಬೆಲೆ ಏರಿಕೆಯಿಂದ ಜನಸಾಮಾನ್ಯರ ಬೇಬು ಸುಡುತ್ತಿದೆ ಎಂದರು.

ಜನ ಸಾಮಾನ್ಯರು, ಮಹಿಳೆಯರು ಸಂಕಷ್ಟಕ್ಕೆ ಸಿಲುಕಿದ್ದರು. ಬೆಂಗಳೂರು ಮುಳುಗುತ್ತಿದ್ದರೂ, ನಿರುದ್ಯೋಗದಿಂದ ಯುವಕರು ಆಕ್ರೋಶದಲ್ಲಿದ್ದರೂ ನಾವು ಈ ಉತ್ಸವ ಮಾಡಲೇಬೇಕು ಎಂದು ಬಿಜೆಪಿಯವರು ಈ ಕಾರ್ಯಕ್ರಮ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಸರ್ಕಾರದ ಸಾಧನೆ ಹೇಳುವುದಕ್ಕಿಂತ ಕಾಂಗ್ರೆಸ್ ಟೀಕೆ ಮಾಡಿರುವುದೇ ಹೆಚ್ಚಾಗಿ ಕಂಡಿತು ಎಂದು ಹೇಳಿದರು.

ಮುಖ್ಯಮಂತ್ರಿಗಳು ಹೇಳಿರುವ ಅಲ್ಪ ಸಾಧನೆ ಪಟ್ಟಿ ಕೂಡ ಸುಳ್ಳಿನ ಕಂತೆ. ವಿದ್ಯಾನಿಧಿ ಯೋಜನೆ ಅಡಿಯಲ್ಲಿ 20 ಲಕ್ಷ ಫಲಾನುಭವಿಗಳಿದ್ದಾರೆ ಎಂದು ಹೇಳಿದ್ದಾರೆ. ಆದರೆ ಕಳೆದ ತಿಂಗಳು ಘೋಷಣೆಯಾದ ಯೋಜನೆ. ಸರ್ಕಾರದ ಮಾಹಿತಿ ಪ್ರಕಾರ, 10 ಲಕ್ಷಕ್ಕಿಂತ ಹೆಚ್ಚು ಜನ ಅರ್ಜಿ ಹಾಕಿಲ್ಲ. ಆದರೆ 20 ಲಕ್ಷ ಫಲಾನುಭವಿಗಳು ಎಂದು ಹೇಳುತ್ತಾರೆ. 150 ಪರಿಶಿಷ್ಟರು ಹಾಗೂ ಅಲ್ಪಸಂಖ್ಯಾತರಿಗೆ ಹಾಸ್ಟೆಲ್ ನಿರ್ಮಾಣ ಎಂದು ಹೇಳಿದ್ದಾರೆ.

ಹೊಸ ಹಾಸ್ಟೆಲ್ ಕಟ್ಟಿಸಿದ್ದಾರೆ: ಇನ್ನು, ಮುಂದೆ ಅವರು ಭಾಷಣ ಮಾಡುವ ಮುನ್ನ ಬಜೆಟ್ ಪುಸ್ತಕ ನೋಡಿ ಮಾತನಾಡಬೇಕು. ಅವರು ಹಾಸ್ಟೆಲ್ ನಿರ್ಮಾಣಕ್ಕೆ ಅನುದಾನ ಘೋಷಿಸಿರುವುದೇ 259 ಕೋಟಿ. ಇದರಲ್ಲಿ 159 ಹಾಸ್ಟೆಲ್ ನಿರ್ಮಾಣ ಮಾಡಲು ಸಾಧ್ಯವೇ? ನಾನು ಸಮಾಜ ಕಲ್ಯಾಣ ಸಚಿವನಾಗಿದ್ದಾಗ ಕಟ್ಟಿದ ಹಾಸ್ಟೆಲ್​ಗಳನ್ನು ಇನ್ನು ಉದ್ಘಾಟನೆ ಮಾಡುತ್ತಿದ್ದಾರೆ. ಕಳೆದ 3 ವರ್ಷಗಳಲ್ಲಿ ಎಷ್ಟು ಹೊಸ ಹಾಸ್ಟೆಲ್ ಕಟ್ಟಿಸಿದ್ದಾರೆ ತೋರಿಸಲಿ. ಬಿಪಿಎಲ್ ಕಾರ್ಡುದಾರರಿಗೆ ಹಾಗೂ ಪರಿಶಿಷ್ಟರಿಗೆ 75 ಯುನಿಟ್ ವಿದ್ಯುತ್ ಉಚಿತವಾಗಿ ನೀಡುವುದಾಗಿ ಹೇಳಿದ್ದೀರಿ. ಇದೇ ಆ. 24ರಂದು ಇದನ್ನು ರದ್ದು ಆದೇಶ ಮಾಡಿದಿರಿ. ಕಾಂಗ್ರೆಸ್ ಪ್ರಶ್ನಿಸಿದಾಗ ಆದೇಶಕ್ಕೆ ತಡೆ ನೀಡಿದಿರಿ. ಇದರಲ್ಲಿ ಫಲಾನುಭವಿಗಳೆಷ್ಟು? ಎಂದು ಹೇಳಲಿಲ್ಲ ಎಂದು ವಿವರಿಸಿದರು.

ಒಂದು ಉದ್ಯೋಗವನ್ನು ಸೃಷ್ಟಿಸಿಲ್ಲ: 50 ಸಾವಿರ ಯುವಕರಿಗೆ ಉದ್ಯೋಗ ಸೃಷ್ಟಿ ಮಾಡಿದ್ದೀರಿ ಎಂದು ಹೇಳುತ್ತೀರಿ. 2021ರಲ್ಲಿ ಎಷ್ಟು ನಿರುದ್ಯೋಗಿ ಯುವಕರು ಆತ್ಮಹತ್ಯೆ ಮಾಡಿಕೊಂಡಿರುವ ಸಂಖ್ಯೆ ಗೊತ್ತಾ? 30,056 ಆತ್ಮಹತ್ಯೆ ಆಗಿದೆ ಎಂದು ಕೇಂದ್ರ ಸರ್ಕಾರದ ಅಂಕಿ-ಅಂಶ ಹೇಳುತ್ತದೆ. ನೀವು ಭಾಷಣ ಮಾಡುವ ಮುನ್ನ ನಿಮ್ಮ ಮಂತ್ರಿಗಳು ಸದನದಲ್ಲಿ ನೀಡಿರುವ ಉತ್ತರಗಳನ್ನು ಗಮನಿಸಿ. ನಿಮ್ಮ ಬೃಹತ್ ಕೈಗಾರಿಕೆ, ಸಣ್ಣ ಕೈಗಾರಿಕಾ ಹಾಗೂ ಕೌಶಲ್ಯ ಅಭಿವೃದ್ಧಿ ಮೂರು ಇಲಾಖೆ ಸಚಿವರು ಸದನದಲ್ಲಿ ನೀಡಿರುವ ಉತ್ತರದ ಪ್ರಕಾರ, ಕಳೆದ 2 ವರ್ಷಗಳಲ್ಲಿ ನಾವು ನಮ್ಮ ಇಲಾಖೆಯಿಂದ ಒಂದು ಉದ್ಯೋಗವನ್ನು ಸೃಷ್ಟಿಸಿಲ್ಲ ಎಂದು ಹೇಳಿದ್ದಾರೆ.

ಇವರ ಮೂರು ವರ್ಷಗಳ ಆಡಳಿತದಲ್ಲಿ ಉದ್ಯೋಗ ಮೇಳದಿಂದ 1600ಕ್ಕಿಂತ ಹೆಚ್ಚು ಉದ್ಯೋಗ ಕೊಡಿಸಿಲ್ಲ. ಇನ್ನು 1600 ರೈಲ್ವೇ ಮಾರ್ಗ ವಿದ್ಯುತೀಕರಣ ಮಾಡಿದ್ದೇವೆ ಎಂದು ಘಂಟಾಘೋಷವಾಗಿ ಹೇಳಿದ್ದಾರೆ. ಮೋದಿಯವರು ಇವರಿಗೆ ಸಾಧನೆ ಮಾಡುವುದು ಹೇಗೆ? ಎಂದು ಹೇಳಿಕೊಡದಿದ್ದರೂ ಸುಳ್ಳು ಹೇಳುವುದನ್ನು ಚೆನ್ನಾಗಿ ಹೇಳಿಕೊಟ್ಟಿದ್ದಾರೆ.

ಸುಳ್ಳು ಹೇಳಿದರೆ ಹೇಗೆ?: ದೇಶದಲ್ಲಿ ರೈಲ್ವೆ ಮಾರ್ಗ ವಿದ್ಯುತೀಕರಣದಲ್ಲಿ 23ನೇ ಸ್ಥಾನದಲ್ಲಿದೆ. ಕೇವಲ ಶೇ. 42.49 ಮಾರ್ಗಗಳು ಮಾತ್ರ ವಿದ್ಯುತೀಕರಣವಾಗಿದೆ. ದಕ್ಷಿಣ ಭಾರತದಲ್ಲಿ ಅತಿಹೆಚ್ಚು ಬಿಜೆಪಿ ಸಂಸದರನ್ನು ಕೊಟ್ಟಿರುವುದು ಕರ್ನಾಟಕದಲ್ಲಿ. ನಮ್ಮಲ್ಲಿ 25 ಸಂಸದರಿದ್ದಾರೆ. ದಕ್ಷಿಣ ಭಾರತದಲ್ಲಿ ರೈಲ್ವೆ ಮಾರ್ಗದ ವಿದ್ಯುತೀಕರಣದಲ್ಲೂ ನಮ್ಮ ರಾಜ್ಯ ಹಿಂದುಳಿದಿದೆ. ನಮ್ಮ ಸಿಎಂ ಸಾವಿರಾರು ಜನರ ಮುಂದೆ ಸುಳ್ಳು ಹೇಳಿದರೆ ಹೇಗೆ? ಇದನ್ನು ನೋಡಿ ನನಗೆ ಬೇಸರವಾಗಿದೆ ಎಂದರು.

ಕಾಂಗ್ರೆಸ್ ನಾಯಕರಿಗೆ ಬೆದರಿಕೆ ಹಾಕುತ್ತಾರೆ: ಮುಖ್ಯಮಂತ್ರಿಗಳು ನಿನ್ನೆ ಭಾಷಣದಲ್ಲಿ ಅನುರಾಗ್ ತಿವಾರಿ ಅವರ ಸಾವಿಗೆ ಕಾಂಗ್ರೆಸ್ ಕಾರಣ ಎಂದು ಸುಳ್ಳು ಆರೋಪ ಮಾಡಿದ್ದಾರೆ. ಅವರು ವಾಟ್ಸಪ್ ಬಿಟ್ಟು ಪತ್ರಿಕೆ ಓದಲಿ. ನಿಮ್ಮ ನಿಯಂತ್ರಣದಲ್ಲಿರುವ ಸಿಬಿಐ ಈ ಸಾವು ಆಕ್ಸಿಜನ್ ಕೊರತೆಯಿಂದ ಆಗಿದೆ ಎಂದು ವರದಿ ನೀಡಿದೆ. ಇನ್ನು ನಿನ್ನೆ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರು ಕಾಂಗ್ರೆಸ್ ನಾಯಕರಿಗೆ ಬೆದರಿಕೆ ಹಾಕುತ್ತಾರೆ.

ಕಾಂಗ್ರೆಸ್ ಸರ್ಕಾರದಲ್ಲಿ ಆಗಿರುವ ಮರಳು, ದಿಂಬು, ಪ್ರಶ್ನೆಪತ್ರಿಕೆ ಸೋರಿಕೆ, ಸೋಲಾರ್ ಅಕ್ರಮ ತನಿಖೆ ಮಾಡುತ್ತೇವೆ ಎಂದಿದ್ದಾರೆ. ತನಿಖೆ ಮಾಡಿ ಸ್ವಾಮಿ, ಯಾರು ಬೇಡ ಎಂದಿದ್ದಾರೆ? ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಅಥವಾ ಪಕ್ಷದಿಂದ ಅಧಿಕೃತವಾಗಿ ಯಾರಾದರೂ ತಡೆದಿದ್ದಾರಾ? ಯಾರಿಗೆ ಈ ಬೆದರಿಕೆ? ಇಡಿ, ಸಿಬಿಐ, ಐಟಿ ಸೇರಿದಂತೆ ಇಐಐಎ ಸಂಸ್ಥೆ ನಿಮ್ಮ ನಿಯಂತ್ರಣದಲ್ಲಿದೆ.

ತನಿಖೆ ಮಾಡಿ ತಪ್ಪಿತಸ್ಥರು ಶಿಕ್ಷೆ ಅನುಭವಿಸಲಿ. ಪ್ರತಿ ಹಗರಣ ವಿಚಾರ ಬಂದಾಗ ನಮ್ಮ ಬಳಿ ಸಾಕ್ಷಿ ಕೇಳುತ್ತೀರಾ? ಈಗ ನೀವು ಕೂಡ ಸಾಕ್ಷಿ ಇಟ್ಟು ಮಾತನಾಡಿ. ನಾಳೆಯಿಂದ ಸದನ ಆರಂಭವಾಗುತ್ತಿದ್ದು ಎಲ್ಲವನ್ನೂ ಇಡಿ ಚರ್ಚೆಗೆ ನಾವು ಸಿದ್ಧ. ಪ್ರತಿ ಹಗರಣದ ಚರ್ಚೆ ಆಗಲಿ. ನಿನ್ನೆ ಸಿಎಂ ರೌದ್ರಾವತಾರದಿಂದ ಕಾಂಗ್ರೆಸ್​ಗೆ ಧಮ್ಮು, ತಾಕತ್ತು ಇದ್ದರೆ ಬಿಜೆಪಿ ಸಾಧನೆ, ಪ್ರಗತಿ ತಡೆಯಲಿ ಎಂದಿದ್ದಾರೆ.

ಗೂಬೆ ಕೂರಿಸುವುದು ಯಾಕೆ?: ಕಾಂಗ್ರೆಸ್ ನಿಮ್ಮನ್ನು ಯಾವಾಗ ತಡೆಹಿಡಿದಿದೆ? ಮೂರು ಬಾರಿ ಜನೋತ್ಸವ ಕಾರ್ಯಕ್ರಮ ಮುಂದೂಡಿ, ಹೆಸರು ಬದಲಿಸಿದ್ದು ಕಾಂಗ್ರೆಸ್ ನವರಾ? ಸಾಧನಾ ಸಮಾವೇಶ, ಜನೋತ್ಸವ ಹಾಗೂ ಜನಸ್ಪಂದನ ಎಂದು ಹೆಸರು ಬದಲಿಸಿದವರು ಯಾರು? ಜನೋತ್ಸವ ಮುಂದೂಡಿ, ಹೆಸರು ಬದಲಿಸಿ ಎಂದು ಸಿದ್ದರಾಮಯ್ಯ ಹಾಗೂ ಶಿವಕುಮಾರ್ ತಡೆದಿದ್ದರೆ? ನಿಮ್ಮಲ್ಲೇ ಸ್ಪಷ್ಟತೆ ಗಟ್ಟಿತನವಿಲ್ಲದಿದ್ದರೂ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವುದು ಯಾಕೆ? ಎಂದು ಪ್ರಶ್ನಿಸಿದರು.

ಸದನದಲ್ಲಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಮಾಡಿರುವ ಆರೋಪಗಳನ್ನು ಸದನದಲ್ಲಿ ಚರ್ಚೆ ಮಾಡುತ್ತೀರಾ ಎಂದು ಕೇಳಿದಾಗ, ‘ಸದನದಲ್ಲಿ ಚರ್ಚಿಸಲು ಅನೇಕ ವಿಷಯಗಳಿವೆ. ಶಾಸಕಾಂಗ ಪಕ್ಷದ ನಾಯಕರು 40% ಕಮಿಷನ್ ವಿಚಾರ ಚರ್ಚಿಸಲು ಸ್ಪೀಕರ್ ಗೆ ಪತ್ರ ಬರೆದಿದ್ದರು. ನಾನು ಎರಡು ಬಾರಿ ಪತ್ರ ರವಾನಿಸಿ ಮನವಿ ಮಾಡಿದರು ಸ್ಪೀಕರ್ ಅವರು ಅವಕಾಶ ನೀಡಲಿಲ್ಲ. ಸದನ ನಡೆಸುವ ಜವಾಬ್ದಾರಿ ಕೇವಲ ವಿರೋಧ ಪಕ್ಷಗಳದ್ದು ಮಾತ್ರವೇ? ಸಂಸದೀಯ ವ್ಯವಹಾರಗಳ ಸಲಹಾ ಸಮಿತಿ ಸಭೆಯಲ್ಲಿ ಅವರು ಯಾವುದೇ ಮಸೂದೆಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿ ನಂತರ ಏಕಾಏಕಿ ತರುತ್ತಾರೆ. ಗೋಹತ್ಯೆ ನಿಷೇಧ ಮಸೂದೆ ಪ್ರತಿ ಸಚಿವರ ಬಳಿಯೇ ಇರಲಿಲ್ಲ. ಇದು ಸದನ ನಡೆಸುವ ರೀತಿಯೇ?' ಎಂದು ಪ್ರಿಯಾಂಕ್​ ಖರ್ಗೆ ಕೇಳಿದರು.

ಓದಿ: ಹುತಾತ್ಮ ಅರಣ್ಯ ರಕ್ಷಕರ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ: ಸಿಎಂ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.