ಮಾಜಿ ಸಚಿವ, ನಿವೃತ್ತ ಐಎಎಸ್‌ ಅಧಿಕಾರಿ ಅಲೆಕ್ಸಾಂಡರ್ ನಿಧನ: ಸಿಎಂ ಬೊಮ್ಮಾಯಿ ಸಂತಾಪ

author img

By

Published : Jan 15, 2022, 6:42 AM IST

Dr. J Alexander

ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಸಚಿವ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಡಾ. ಜೆ. ಅಲೆಕ್ಸಾಂಡರ್ ಅವರು ಶುಕ್ರವಾರ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.

ಬೆಂಗಳೂರು: ಮಾಜಿ ಸಚಿವ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಡಾ.ಜೆ. ಅಲೆಗ್ಸಾಂಡರ್ (83) ನಿನ್ನೆ (ಶುಕ್ರವಾರ) ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಅನಾರೋಗ್ಯದಿಂದಾಗಿ ಕೆಲ ದಿನಗಳ ಹಿಂದೆ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಮೃತರು ಇಬ್ಬರು ಮಕ್ಕಳು ಹಾಗೂ 4 ಮೊಮ್ಮಕ್ಕಳನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು (ಶನಿವಾರ) ಬೆಂಗಳೂರಿನಲ್ಲಿ ನೆರವೇರಲಿದೆ. ಮೂಲತಃ ಕೇರಳದವರಾದ ಅಲೆಗ್ಸಾಂಡರ್ ಅವರು ಐಎಎಸ್ ಅಧಿಕಾರಿಯಾಗಿ ರಾಜ್ಯ ಪ್ರವೇಶ ಮಾಡಿದ್ದರು. ನಂತರ ರಾಜ್ಯದಲ್ಲಿ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು. ಬಳಿಕ ರಾಜ್ಯ ರಾಜಕಾರಣ ಪ್ರವೇಶ ಮಾಡಿ ಕಾಂಗ್ರೆಸ್‌ನಲ್ಲಿ ಅಂದಿನ ಬೆಂಗಳೂರು ಭಾರತಿ ನಗರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು.

ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಪ್ರವಾಸೋದ್ಯಮ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಹಿಂದುಳಿದ, ದಲಿತ ಹಾಗೂ ಅಲ್ಪಸಂಖ್ಯಾತರ ಸಮಸ್ಯೆಗಳಿಗೆ ಸ್ಪಂದಿಸುವ ಅಂದಿನ ಪ್ರಮುಖ ರಾಜಕಾರಣಿಯಾಗಿದ್ದರು.

ಅಲೆಗ್ಸಾಂಡರ್ ಬೆಂಗಳೂರು ಭಾಗದಲ್ಲಿ ದೀನದಲಿತರ ನಾಯಕ ಎಂದು ಹೆಸರು ಪಡೆದಿದ್ದರು. ಇವರು ಮುಖ್ಯಕಾರ್ಯದರ್ಶಿ ಆಗುವ ಮೊದಲೇ ರಾಜ್ಯ ಸರ್ಕಾರದ ಎಲ್ಲ ಇಲಾಖೆಯಲ್ಲಿ ಕೆಲಸ ಮಾಡಿದ ಏಕೈಕ ಅಧಿಕಾರಿ ಎನ್ನುವ ಖ್ಯಾತಿ ಪಡೆದಿದ್ದರು.

ಸಿಎಂ ಬೊಮ್ಮಾಯಿ ಸಂತಾಪ:

ಮಾಜಿ ಸಚಿವ ಡಾ.ಜೆ. ಅಲೆಗ್ಸಾಂಡರ್ ನಿಧನಕ್ಕೆ ಸಿಎಂ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ. ಈ ಬಗ್ಗೆ ಟ್ವೀಟ್​​ ಮಾಡಿರುವ ಅವರು, ಮಾಜಿ ಸಚಿವರು, ರಾಜ್ಯ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ ಜೆ. ಅಲೆಕ್ಸಾಂಡರ್ ಅವರು ನಿಧನರಾದ ವಿಷಯ ತುಂಬಾ ದುಃಖ ತಂದಿದೆ. ಅಲೆಕ್ಸಾಂಡರ್ ಅವರು ಐಎಎಸ್ ಅಧಿಕಾರಿಯಾಗಿ ಹಲವಾರು ಹುದ್ದೆಗಳನ್ನು ನಿರ್ವಹಿಸಿ ಸೈ ಎನಿಸಿಕೊಂಡವರು. ನಂತರ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಸೇವೆಯನ್ನು ಸಲ್ಲಿಸಿದ್ದಾರೆ.

ನಂತರ ಅವರು ರಾಜಕೀಯ ಕ್ಷೇತ್ರಕ್ಕೆ ಧುಮುಕಿ, ಚುನಾವಣೆಯಲ್ಲಿ ಗೆದ್ದು ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಅವರ ನಿಧನದ ಸುದ್ದಿ ನನಗೆ ಬೇಸರ ತರಿಸಿದೆ. ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ. ಅವರ ನಿಧನದ ಆಘಾತ ಸಹಿಸಿಕೊಳ್ಳುವ ಶಕ್ತಿಯನ್ನು ಆ ಭಗವಂತ ಅವರ ಕುಟುಂಬದ ಸದಸ್ಯರಿಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: ಬಿಪಿನ್‌ ರಾವತ್‌ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನಕ್ಕೆ ಸಿಕ್ತು ಕಾರಣ!: ತನಿಖಾ ವರದಿಯಿಂದ ಬಹಿರಂಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.