ಜಿಎಸ್​ಟಿ ಸೇರಿ ಐದು ತಿದ್ದುಪಡಿ ವಿಧೇಯಕಗಳಿಗೆ ಪರಿಷತ್​ನಲ್ಲಿ ಅಂಗೀಕಾರ

author img

By

Published : Sep 21, 2022, 7:37 PM IST

Efive-amendment-bills-including-gst-passed-in-council

ವಿಧಾನ ಪರಿಷತ್​ನ್ಲಲಿ ಬಿಬಿಎಂಪಿ ತಿದ್ದುಪಡಿ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕ ಮತ್ತು ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ತಿದ್ದುಪಡಿ ವಿಧೇಯಕ ಸೇರಿದಂತೆ ಐದು ವಿಧೇಯಕಗಳಿಗೆ ಅಂಗೀಕಾರ ದೊರೆತಿದೆ.

ಬೆಂಗಳೂರು: ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತಿದ್ದುಪಡಿ ವಿಧೇಯಕ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕ, ಕರ್ನಾಟಕ ಮುನಿಸಿಪಾಲಿಟಿಗಳ ತಿದ್ದುಪಡಿ ವಿಧೇಯಕ, ಕರ್ನಾಟಕ ರೇಷ್ಮೆಹುಳು ಬಿತ್ತನೆ, ರೇಷ್ಮೆ ಗೂಡು ಮತ್ತು ರೇಷ್ಮೆ ನೂಲು ತಿದ್ದುಪಡಿ ವಿಧೇಯಕ ಮತ್ತು ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ತಿದ್ದುಪಡಿ ವಿಧೇಯಕಗಳನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಯಿತು.

ಬಿಬಿಎಂಪಿ ತಿದ್ದುಪಡಿ ವಿದೇಯಕ : ವಿಧಾನ ಪರಿಷತ್ ಶಾಸನ ರಚನೆ ಕಲಾಪದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತಿದ್ದುಪಡಿ ವಿಧೇಯಕ-2022 ಮಂಡಿಸಿ ಮಾತನಾಡಿದ ಜೆ ಸಿ ಮಾಧುಸ್ವಾಮಿ, ಒಬಿಸಿಗೆ 33 ಪರ್ಸೆಂಟ್ ಮೀಸಲಾತಿ ಇಡಲಾಗಿತ್ತು. ಈಗ ಎಸ್​ಸಿ, ಎಸ್​ಟಿ, ಒಬಿಸಿ ಎಲ್ಲ ಸೇರಿ ಶೇ. 50 ಮೀರದಂತೆ ಎಂದು ತಿದ್ದುಪಡಿ ಮಾಡಲಾಗಿದೆ ಇದಕ್ಕೆ ಅನುಮತಿ ನೀಡುವಂತೆ ಮನವಿ ಮಾಡಿದರು.

ಈ ವೇಳೆ ಮಾತನಾಡಿದ ಪ್ರತಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್, ಎಲ್ಲೆಲ್ಲಿ ಕಾಂಗ್ರೆಸ್ ಶಾಸಕರು ಇದ್ದಾರೋ ಆ ಕಡೆ ಹೆಚ್ಚಿನ ವಾರ್ಡ್ ಮಹಿಳಾ ಮೀಸಲು ಅಥವಾ ಎಸ್​ಟಿ ಮೀಸಲು ಮಾಡಲಾಗಿದೆ. ರಾಜಕೀಯಕೋಸ್ಕರ ಕ್ಷೇತ್ರ ಪುನರ್ ವಿಂಗಡಣೆ ವೇಳೆ ಮೀಸಲಾತಿ ಆಗಿದೆ. ಇದರಿಂದ ಬೆಂಗಳೂರಿಗೆ ಒಳ್ಳೆಯದಾಗಲ್ಲ ಎಂದು ಆರೋಪಿಸಿದರು.

ಚುನಾವಣೆ ಮುಂದೂಡುವ ಹುನ್ನಾರ : ಚುನಾವಣೆ ಮುಂದೂಡುವ ಹುನ್ನಾರದ ಅನುಮಾನ ಕಾಣುತ್ತಿದೆ. ಹಾಗಾಗಿ ಪೂರ್ವಾಗ್ರಹ ಪೀಡಿತವಿಲ್ಲದೆ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ದನಿಗೂಡಿಸಿದ ಜೆಡಿಎಸ್ ಸದಸ್ಯ ಬೋಜೇಗೌಡ, ಗೆಲ್ಲುವ ಅಭ್ಯರ್ಥಿ ಸೋಲಿಸಲು ಮೀಸಲಾತಿ ದುರ್ಬಳಕೆ ಹಿಂದೆಯೂ ನಡೆದಿದೆ. ಈ ರೀತಿ ಆಗಬಾರದು, ವಿಧಾನಸಭೆ ಚುನಾವಣೆವರೆಗೂ ಪಾಲಿಕೆ ಚುನಾವಣೆ ಮುಂದೂಡುವ ಪ್ರಯತ್ನ ನಡೆದಂತಿದೆ. ಹಾಗಾಗಿ ಚುನಾವಣೆ ಯಾವಾಗ ಎನ್ನುವುದನ್ನು ತಿಳಿಸಿ ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಸದಸ್ಯ ತಿಪ್ಪೇಸ್ವಾಮಿ, ಯಾವಾಗ ಚುನಾವಣೆ ನಡೆಸಲಾಗುತ್ತದೆ ಎಂಬುದನ್ನು ಪ್ರಕಟಿಸುವಂತೆ ಆಗ್ರಹಿಸಿದರು. ಕಾಂಗ್ರೆಸ್ ಸದಸ್ಯ ನಾಗರಾಜ್ ಯಾದವ್ ಮಾತನಾಡಿ, ಕಾಂತರಾಜ್ ಆಯೋಗದ ವರದಿ ಮಂಡನೆಯಾಗಿಲ್ಲ, ಯಾವ ಡೇಟಾ ಇರಿಸಿ ಭಕ್ತವತ್ಸಲ ಸಮಿತಿ ಮೀಸಲಾತಿ ನೀಡುತ್ತಿದೆ ಎಂದು ಪ್ರಶ್ನಿಸಿದರು.

ಕಾಂತರಾಜ್ ಆಯೋಗವನ್ನೂ ಪರಿಗಣನೆ : ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವ ಮಾಧುಸ್ವಾಮಿ,‌ ಕಾಂತರಾಜ್ ವರದಿ ಒಪ್ಪುವುದಾಗಿ ನಾವು ಹೇಳಿಲ್ಲ, ಮೀಸಲಾತಿ ವಿಚಾರದಲ್ಲಿ ಟೆಕ್ನಿಕಲ್ ಇಶ್ಯೂ ಇದೆ. ಕೋರ್ಟ್ ಹಿಂದುಳಿದ ವರ್ಗದ ಯೂನಿಟ್ ವೈಸ್ ರಿಸರ್ವೇಷನ್ ಮಾಡಿ ಎಂದಿದೆ. ಹಾಗಾಗಿ ಕಾಂತರಾಜ್ ಆಯೋಗ ಸೇರಿದಂತೆ ಹಿಂದಿನ ವರದಿ ಪರಿಶೀಲನೆ ಮಾಡಲಾಗುತ್ತದೆ. ಈಗಾಗಲೇ ಎರಡು ಸಭೆ ಮಾಡಲಾಗಿದೆ, ಸಿದ್ದರಾಮಯ್ಯ ಸಮಯ ನೀಡಿದರೆ ಮತ್ತೊಂದು ಸಭೆ ಮಾಡಲು ಸಿದ್ಧರಿದ್ದೇವೆ. ಬಿಬಿಎಂಪಿ ಚುನಾವಣೆ ಕುರಿತ ಅವಧಿ ಮತ್ತು ಮೀಸಲಾತಿ ಎರಡೂ ಸರ್ಕಾರದ ಪರಿಶೀಲನೆಯಲ್ಲಿದೆ ಎನ್ನುವ ಭರವಸೆ ನೀಡಿ ವಿಧೇಯಕ ಅಂಗೀಕರಿಸುವಂತೆ ಸದನವನ್ನು ಕೋರಿದರು. ನಂತರ ಧ್ವನಿ ಮತದ ಮೂಲಕ ವಿಧೇಯಕವನ್ನು ವಿಧಾನ ಪರಿಷತ್ ಅಂಗೀಕರಿಸಿತು.

ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕ : ನಂತರ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕ-2022 ಮಂಡಿಸಿ ಮಾತನಾಡಿದ ಕಾನೂನು ಸಚಿವ ಜೆ‌ ಸಿ ಮಾಧುಸ್ವಾಮಿ, 2 ಲಕ್ಷ ಜನಸಂಖ್ಯೆ ಒಳಗೆ ಬಂದರೆ 10 ಸಾವಿರಕ್ಕೆ ಒಬ್ಬ ಸದಸ್ಯ ನೇಮಕ ಇತ್ತು ಈಗ ಅದನ್ನು 2.3 ಲಕ್ಷಕ್ಕೆ ಮಿತಿ ಹೆಚ್ಚಿಸಿದ್ದೇವೆ. 7-9 ಲಕ್ಷ ಇರುವ ಕಡೆ ಜಿಲ್ಲಾ ಪಂಚಾಯತ್ 25 ಸದಸ್ಯರು ಇರಬೇಕು ಎನ್ನುವುದನ್ನು 28 ಮಾಡಿದ್ದೇವೆ. ಸಣ್ಣ ತಿದ್ದುಪಡಿ ಅಂಗೀಕಾರ ಮಾಡಿ ಎಂದು ಮನವಿ ಮಾಡಿದರು. ಪ್ರತಿಪಕ್ಷ ಸದಸ್ಯರು ಕೆಲವೊಂದು ಸಲಹೆ ನೀಡಿ ಬಿಲ್​ಗೆ ಸಮ್ಮತಿಸಿದರು. ನಂತರ ಧ್ವನಿ ಮತದ ಮೂಲಕ ವಿಧೇಯಕವನ್ನು ಅಂಗೀಕರಿಸಲಾಯಿತು.

ಕರ್ನಾಟಕ ಮುನಿಸಿಪಾಲಿಟಿಗಳ ತಿದ್ದುಪಡಿ ವಿಧೇಯಕ-2022 ಮಂಡಿಸಿ ಮಾತನಾಡಿದ ಕಾನೂನು ಸಚಿವ ಮಾಧುಸ್ವಾಮಿ, ಸೆಕ್ಷನ್ 3 ರನ್ನು ರಿಪೀಲ್ ಮಾಡಲು ತಿದ್ದುಪಡಿ ಮಾಡಲಾಗಿದೆ.ಜನರಿಗಾಗುತ್ತಿರುವ ಸಮಸ್ಯೆ ತಪ್ಪಿಸಲು ಈ ತಿದ್ದುಪಡಿ ತರಲಾಗುತ್ತಿದೆ ಇದು ಜನಸ್ನೇಹಿ ತಿದ್ದುಪಡಿಯಾಗಿದೆ ಎಂದರು.

ಪ್ರತಿಪಕ್ಷ ನಾಯಕ ಬಿಕೆ ಹರಿಪ್ರಸಾದ್ ಮಾತನಾಡಿ ರಿಯಲ್ ಎಸ್ಟೇಟ್​ಗೆ ಅನುಕೂಲವಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಸಚಿವ ಮಾಧುಸ್ವಾಮಿ- ಕಾನೂನು ಹೇಗಿದೆ ಎಂದರೆ ಟೌನ್ ಪ್ಲಾನಿಂಗ್ ಯಾರೇ ತೋಟದಲ್ಲಿ ಮನೆ ಕಟ್ಟಿದರೆ ಮುಖ್ಯರಸ್ತೆಯಿಂದ ಮನೆವರೆಗೂ 30 ಅಡಿ ರಸ್ತೆ ಗ್ರಾಮ ಪಂಚಾಯತ್​ಗೆ ಬರೆದುಕೊಬಡಬೇಕು. ನನಗೂ ಈ ಅನುಭವ ಆಯಿತು, ಬ್ರಿಕ್ಸ್​​ ಫ್ಯಾಕ್ಟರಿ ಕಟ್ಟಲು ಹೋದಾಗ ರಸ್ತೆ ಪಕ್ಕ ಜನರಿಗೆ ತೊಂದರೆ ಆಗಲಿದೆ ಎಂದು ಒಂದು ಎಕರೆ ಒಳಗೆ ನಿರ್ಮಾಣಕ್ಕೆ ಮುಂದಾದೆ. ಆದರೆ 30 ಅಡಿ ರಸ್ತೆಗೆ ಬೇಕಾದ ಜಾಗ ಗ್ರಾಮ ಪಂಚಾಯತಿಗೆ ಬರೆದುಕೊಡಲು ಹೇಳಿದರು. ಕಡೆಗೆ ನಾನು ರಸ್ತೆ ಪಕ್ಕದಲ್ಲೇ ಮಾಡಿದೆ. ಕಾನೂನು ಈ ರೀತಿ ಇದೆ ಎಂದು ಉದಾಹರಣೆ ಕೊಟ್ಟರು.

ಈಗ ಇರುವ ಸ್ವತ್ತುಗಳಿಗೆ ಮಾತ್ರ ಅನ್ವಯ, ಇನ್ಮುಂದೆ ಸೆಕ್ಷನ್ 4 ಇರಲಿದೆ ಎಂದು ಸ್ಪಷ್ಟನೆ ನೀಡಿದರು. ನಂತರ ಧ್ವನಿಮತದ ಮೂಲಕ ವಿಧೇಯಕವನ್ನು ಅಂಗೀಕರಿಸಲಾಯಿತು.

ರೇಷ್ಮೆ ವಿದೇಯಕ : ಕರ್ನಾಟಕ ರೇಷ್ಮೆಹುಳು ಬಿತ್ತನೆ, ರೇಷ್ಮೆಗೂಡು ಮತ್ತು ರೇಷ್ಮೆ ನೂಲು( ಉತ್ಪಾದನೆ, ಸರಬರಾಜು, ಮಾರಾಟ ವಿನಿಮಯ) ತಿದ್ದುಪಡಿ ವಿಧೇಯಕ 2022 ಮಂಡನೆ. ನಾರಾಯಣಸ್ವಾಮಿ- ಮಧ್ಯವರ್ತಿ ಹಾವಳಿ ಹೆಚ್ಚಾಗಿತ್ತು ಹಾಗಾಗಿ ರೇಷ್ಮ ಹರಾಜು ಇ ಟೆಂಡರ್ ಜಾರಿಗೆ ತರಲಾಗಿದೆ. ಎಂಟು ಮಾರುಕಟ್ಟೆಯಲ್ಲಿ ಪ್ರಾಯೋಗಿಕವಾಗಿ ಮಾಡಲಾಯಿತು. ಇ ಬ್ಯಾಂಕಿಂಗ್ ಮತ್ತು ಆರ್‌ಟಿಜಿಎಸ್ ಜಾರಿ ಮಾಡಿದ್ದೇವೆ.

ಇದರಿಂದ ನಮಗೆ 18 ಕೋಟಿ ಹಣ ನಮಗೆ ಬಂದಿದೆ, ಕೊಳ್ಳುವ ಮತ್ತು ಮಾರುವವರಿಂದ ಶೇ. 1 ರಷ್ಟು ಹಣ ನಾವು ಪಡೆಯುತ್ತಿದ್ದೇವೆ. 41 ಮಾರುಕಟ್ಟೆಯಲ್ಲಿ ಸರ್ವೇ ಮಾಡಿದ್ದೇವೆ. ಸದಸ್ಯ ರವಿ ಹೇಳಿದಂತೆ ಸರ್ವರ್ ಸಮಸ್ಯೆ ಇತ್ತು. ಈಗ ಅದು ಶೇ.85 ರಷ್ಟು ಪರಿಹರಿಸಲಾಗಿದೆ. ಬಹಿರಂಗ ಹರಾಜು ಬದಲು ಇ ಹರಾಜು ಮಾಡಿದ್ದೇವೆ ಎಂದರು.

ರಾಮನಗರ ಮಾರುಕಟ್ಟೆಗೆ ವಾರಕ್ಕೊಮ್ಮೆ ಗೌಪ್ಯ ಭೇಟಿ ಕೊಟ್ಟು ಪರಿಶೀಲನೆ ನಡೆಸುತ್ತಿದ್ದೇನೆ. ಪ್ರತಿದಿನ ಪ್ರತಿ ಮಾರುಕಟ್ಟೆಯ ಮಾಹಿತಿ ತರಿಸಿಕೊಳ್ಳುತ್ತಿದ್ದೇನೆ. ರೈತರ ಕಷ್ಟ ಗೊತ್ತು,‌ ಅದಕ್ಕಾಗಿ ಹೆಚ್ಚಿನ ಕಾಳಜಿ ವಹಿಸಿದ್ದೇನೆ. ರಾಮನಗರದಲ್ಲಿ 75 ಕೋಟಿ ಹೈಟೆಕ್ ಮಾರುಕಟ್ಟೆಗೆ ನಾಳೆ ಟೆಂಡರ್ ಆಗಲಿದೆ. ಶೆಡ್ಲಘಟ್ಟ 30 ಕೋಟಿ, ಕಲಬುರಗಿ, ಹಾವೇರಿಗೂ ಹೈಟೆಕ್ ಮಾರುಕಟ್ಟೆ ಮಾಡಲಿದ್ದೇವೆ. ಡೀಲರ್​ಗೆ ಕಷ್ಟವಾದಾಗ ನಾವೇ ಖರೀದಿ ಮಾಡಿದ್ದೇವೆ. ನಮ್ಮ ಬಳಿ ಗೂಡು ಇಟ್ಟು ನಂತರ ಕೊಟ್ಟು ತೆಗೆದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಕಳ್ಳತನ ಶೇ. 85 ಪರ್ಸೆಂಟ್ ನಿಲ್ಲಿಸಿದ್ದೇವೆ ಎಂದರು. ನಂತರ ಧ್ವನಿಮತದ ಮೂಲಕ ವಿಧೇಯಕವನ್ನು ಅಂಗೀಕರಿಸಲಾಯಿತು.

ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ತಿದ್ದುಪಡಿ ವಿಧೇಯಕ : ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ತಿದ್ದುಪಡಿ ವಿಧೇಯಕ -2022 ಮಂಡಿಸಿ ಮಾತನಾಡಿದ ಕಾನೂನು ಸಚಿವ ಜೆಸಿ ಮಾಧುಸ್ವಾಮಿ, ಇದರಲ್ಲಿ ತುಂಬಾ ಸೆಕ್ಷನ್ ತಿದ್ದುಪಡಿ ಮಾಡಿದ್ದೇವೆ, ಟ್ರೇಡರ್ ಪರ ತಿದ್ದುಪಡಿ ಮಾಡಲಾಗಿದೆ. ಸೆಪ್ಟೆಂಬರ್ ಬದಲು ನವೆಂಬರ್ ಅಂತ್ಯಕ್ಕೆ ಟೈಂ ಲಿಮಿಟ್ ವಿಸ್ತರಣೆ ಮಾಡಲಾಗಿದೆ. ಈ ವೇಳೆ ಕಾಂಗ್ರೆಸ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ ನಮ್ಮಿಂದ ತಡವಾದ ಪಾವತಿಗೆ ದಂಡ ಮತ್ತು ಬಡ್ಡಿ ಸಂಗ್ರಹ ಮಾಡುತ್ತಿದ್ದೀರ, ಅದೇ ರೀತಿ ಹಣ ಪಾವತಿ ತಕರಾರು ಕುರಿತು ಕೋರ್ಟ್ ಹೇಳಿದಾಗ ನಮಗೆ ವಾಪಸ್ ಕೊಡುವಾಗ ಬಡ್ಡಿ ಕೊಡಬೇಕಲ್ಲವೇ ಎಂದರು.

ಇದಕ್ಕೆ ಉತ್ತರಿಸಿದ ಸಚಿವ ಮಾಧುಸ್ವಾಮಿ, ಅಂತಹ ಸ್ಥಿತಿ ಇಲ್ಲ, ಸರ್ಕಾರ ಆ ರೀತಿ ಬಡ್ಡಿ ಸೇರಿಸಿ ಹಣ ವಾಪಸ್ ಕೊಟ್ಟ ಉದಾಹರಣೆ ಇಲ್ಲ, ಸರ್ಕಾರ ಹಣ ವಾಪಸ್ ಕೊಡುವುದೇ ದೊಡ್ಡದು ಅದರಲ್ಲಿ ಬಡ್ಡಿ ಎಲ್ಲ ನಿರೀಕ್ಷೆ ಮಾಡುತ್ತಿದ್ದೀರಾ ಎಂದು ಹಾಸ್ಯ ಚಟಾಕಿ ಹಾರಿಸಿದರು. ಇದು ಕೇಂದ್ರ ಸರ್ಕಾರ ಮಾಡಿರುವ ತಿದ್ದುಪಡಿ ನಾವು ಅದನ್ನು ಮಾಡಲೇಬೇಕು. ಸ್ವಂತವಾಗಿ ಮಾಡಲು ನಮಗೆ ಏನೂ ಉಳಿಸಿಲ್ಲ ಆದರೂ ಜಿಎಸ್​ಟಿ ಕೌನ್ಸಿಲ್​ನಲ್ಲಿ ನಮ್ಮ ಮುಖ್ಯಮಂತ್ರಿಗಳು ಇರುವುದರಿಂದ ಅವರ ಗಮನಕ್ಕೆ ತರುತ್ತೇನೆ ಎಂದರು. ನಂತರ ಧ್ವನಿಮತದ ಮೂಲಕ ವಿಧೇಯಕಕ್ಕೆ ಅಂಗೀಕಾರ ನೀಡಲಾಯಿತು.

ಇದನ್ನೂ ಓದಿ : ವಿಧಾನಸಭೆಯಲ್ಲಿ ಕಮಿಷನ್ ಆರೋಪದ ಬಗ್ಗೆ ಸಿದ್ದರಾಮಯ್ಯ ಪ್ರಸ್ತಾಪ: ಚರ್ಚೆಗೆ ಸರ್ಕಾರ ಸಿದ್ಧ ಎಂದ ಸಿಎಂ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.