ಕೋವಿಡ್​ನಿಂದ ಮೃತರಾದ ಕುಟುಂಬದಿಂದ ಪರಿಹಾರ ಕೋರಿ ಸಾವಿರಾರು ಅರ್ಜಿ; ಯಾರೊಬ್ಬರಿಗೂ ಕೈಸೇರದ ಪರಿಹಾರ

author img

By

Published : Sep 19, 2021, 8:22 PM IST

covid-relief-fund-did-not-reach-the-dead-family

ಕೋವಿಡ್​ನಿಂದ ಮನೆಯ ಯಜಮಾನರನ್ನು ಕಳೆದುಕೊಂಡು ಅತಂತ್ರರಾದ ಕುಟುಂಬಕ್ಕೆ ರಾಜ್ಯ ಸರ್ಕಾರ 1 ಲಕ್ಷ ರೂ. ಪರಿಹಾರ ಘೋಷಿಸಿದೆ. ಆ ಮೂಲಕ ಕುಟುಂಬಗಳಿಗೆ ಆಸರೆಯಾಗಿ ನಿಲ್ಲಲು ಮುಂದಾಗಿದೆ. ಆದ್ರೆ ಈ ಪರಿಹಾರದ ಮೊತ್ತ ಫಲಾನುಭವಿಗಳಿಗೆ ಸಿಕ್ಕಿದೆಯೇ?.

ಬೆಂಗಳೂರು: ಕೋವಿಡ್​ನಿಂದ ದುಡಿಯುವ ವ್ಯಕ್ತಿಯನ್ನು ಕಳೆದುಕೊಂಡ ಬಿಪಿಎಲ್ ಕುಟುಂಬಕ್ಕೆ ಸರ್ಕಾರ ಒಂದು ಲಕ್ಷ ರೂ. ಪರಿಹಾರ ಘೋಷಿಸಿತ್ತು. ಜುಲೈನಲ್ಲಿ ಈ ಸಂಬಂಧ ಆದೇಶ ಹೊರಡಿಸಲಾಗಿದೆ.‌ ಈವರೆಗೆ ಪರಿಹಾರ ಕೋರಿ ಸಾವಿರಾರು ಅರ್ಜಿ ಸಲ್ಲಿಕೆಯಾಗಿದ್ದು, ಈವರೆಗೆ ಯಾವೊಬ್ಬರಿಗೂ ಪರಿಹಾರ ಪಾವತಿಯಾಗಿಲ್ಲ.

ಕೋವಿಡ್​ನಿಂದ ಮನೆಯ ಯಜಮಾನರನ್ನು ಕಳೆದುಕೊಂಡು ಅತಂತ್ರರಾದ ಕುಟುಂಬಕ್ಕೆ ರಾಜ್ಯ ಸರ್ಕಾರ 1 ಲಕ್ಷ ರೂ. ಪರಿಹಾರ ಘೋಷಿಸಿದೆ. ಆ ಮೂಲಕ ಅನಾಥವಾದ ಕುಟುಂಬಕ್ಕೆ ಆಸರೆಯಾಗಿ ನಿಲ್ಲಲು ಮುಂದಾಗಿದೆ. ಜುಲೈ 8ಕ್ಕೆ ಸರ್ಕಾರ ಈ ಸಂಬಂಧ ಆದೇಶ ಹೊರಡಿಸಿತ್ತು. ಬಿಪಿಎಲ್ ಕುಟುಂಬಕ್ಕೆ ಮಾತ್ರ ಈ ಪರಿಹಾರ ಅನ್ವಯವಾಗಲಿದೆ.

ಪರಿಹಾರ ಪಡೆಯಲಿರುವ ಷರತ್ತು ಏನು?

ಪರಿಹಾರ ಪಡೆಯಬೇಕಾದರೆ ಮಾನ್ಯತೆ ಪಡೆದ ಲ್ಯಾಬ್‌ ಕೋವಿಡ್ ಪಾಸಿಟಿವ್ ವರದಿ ನೀಡಿರಬೇಕು. ಅದು ಐಸಿಎಂಆರ್ ಪೋರ್ಟಲ್‌ನಲ್ಲಿ ಅಪ್​ಲೋಡ್ ಆಗಿರಬೇಕು. ಮೃತ ಸೋಂಕಿತನ ನಂ‌ಬರ್​ ಇರಬೇಕು. ಅದನ್ನು ಅರ್ಹ ವೈದ್ಯರಿಂದ ದೃಢೀಕರಿಸಿರಬೇಕು.

ಜಿಲ್ಲಾಧಿಕಾರಿಗಳು ಕೋವಿಡ್-19 ಸೋಂಕಿನಿಂದ ಮೃತಪಟ್ಟಂತಹ ವ್ಯಕ್ತಿಗಳ ಸಂಪೂರ್ಣ ವಿವರಗಳನ್ನು ಜಿಲ್ಲಾ ವೈದ್ಯಾಧಿಕಾರಿಗಳಿಂದ ಪಡೆಯಬೇಕು. ಜಿಲ್ಲಾ ವೈದ್ಯಾಧಿಕಾರಿಗಳು ಕೋವಿಡ್​ನಿಂದ ಮೃತಪಟ್ಟ ವ್ಯಕ್ತಿಗಳ ವಿವರ ನೀಡುವ ಮೊದಲು ಕೋವಿಡ್-19 ತಾಂತ್ರಿಕ ಸಲಹಾ ಸಮಿತಿಯು ನಿಗದಿಪಡಿಸಿದ ಮಾನದಂಡಗಳನ್ನು ಹಾಗೂ ದಾಖಲೆಗಳನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು.

ಜಿಲ್ಲಾ ವೈದ್ಯಾಧಿಕಾರಿಗಳು ನೀಡಿರುವ ಮೃತ ವ್ಯಕ್ತಿಗಳ ಮಾಹಿತಿಯ ಆಧಾರದ ಮೇಲೆ ಮೃತರ ಕಾನೂನುಬದ್ಧ ವಾರಸುದಾರರನ್ನು ಹಾಗೂ ಕುಟುಂಬದ ಸದಸ್ಯರನ್ನು ನಿಯಮಾನುಸಾರ ಗುರುತಿಸಿಕೊಳ್ಳಬೇಕು. ನಂತರ ಮೃತರ ಕಾನೂನುಸಮ್ಮತ ವಾರಸುದಾರರಿಂದ ಅಧಿಕೃತ ಗುರುತು ಪತ್ತೆ ಮತ್ತು ಬ್ಯಾಂಕ್ ವಿವರಗಳನ್ನು ಜಿಲ್ಲಾಧಿಕಾರಿಗಳು ಪಡೆದುಕೊಳ್ಳಬೇಕು. ಅನಂತರ ನಿರ್ದೇಶಕರು, ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯ ಹಾಗೂ ಕಂದಾಯ ಇಲಾಖೆಗೆ ಸಲ್ಲಿಸಬೇಕು.

ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯದಿಂದ 1 ಲಕ್ಷ ರೂ. RTGS/NEFT ಮೂಲಕ ನೇರವಾಗಿ ಕೋವಿಡ್ -19 ಸೋಂಕಿನಿಂದ ಮೃತಪಟ್ಟ ಬಿಪಿಎಲ್ ಕುಟುಂಬದ ವ್ಯಕ್ತಿಯ ವಾರಸುದಾರರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.

ಈವರೆಗೆ ಪರಿಹಾರ ಕೋರಿ ಸಲ್ಲಿಕೆಯಾದ ಅರ್ಜಿ ಎಷ್ಟು?

ಸೆಪ್ಟೆಂಬರ್ ಮೊದಲ ವಾರದವರೆಗೆ ರಾಜ್ಯದಲ್ಲಿ ಕೋವಿಡ್​ನಿಂದ 37,409 ಮಂದಿ ಮೃತರಾಗಿದ್ದಾರೆ. ಈ ಪೈಕಿ ಒಂದು ಲಕ್ಷ ರೂ. ಪರಿಹಾರ ಕೋರಿ ಈವರೆಗೆ ಕೋವಿಡ್ ಮೃತ ಬಿಪಿಎಲ್ ಕುಟುಂಬದವರಿಂದ 7,711 ಅರ್ಜಿಗಳು ಸ್ವೀಕಾರವಾಗಿದೆ.

ಈ ಪೈಕಿ ಬಾಗಲಕೋಟೆಯಿಂದ 38, ಬಳ್ಳಾರಿ 254, ಬೆಂಗಳೂರು ಗ್ರಾಮಾಂತರ 950, ಬೆಳಗಾವಿ 84, ಬೆಂ. ನಗರ 445, ಬೀದರ್ 212, ಚಾಮರಾಜನಗರ 235, ಚಿಕ್ಕಬಳ್ಳಾಪುರ 85, ಚಿಕ್ಕಮಗಳೂರು 18, ಚಿತ್ರದುರ್ಗ 181, ದ.ಕನ್ನಡ 137, ದಾವಣಗೆರೆ 240, ಧಾರವಾಡ 434, ಗದಗ 192, ಹಾಸನ 443, ಹಾವೇರಿ 196, ಕಲಬುರ್ಗಿ 67 ಮಂದಿ ಅರ್ಜಿ ಸಲ್ಲಿಸಿದ್ದಾರೆ.

ಇನ್ನು ಕೊಡಗು 160, ಕೋಲಾರ 396, ಕೊಪ್ಪಳ 633, ಮಂಡ್ಯ 399, ಮೈಸೂರು 783, ರಾಯಚೂರು 91, ರಾಮನಗರ 267, ಶಿವಮೊಗ್ಗ 146, ತುಮಕೂರು 317, ಉಡುಪಿ 20, ಉ.ಕನ್ನಡ 155, ವಿಜಯಪುರ 73, ಯಾದಗಿರಿ 60 ಮಂದಿ ಒಂದು ಲಕ್ಷ ರೂ. ಮೊತ್ತದ ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದಾರೆ.

ಇನ್ನೂ ಕೈಸೇರದ ಪರಿಹಾರ ಮೊತ್ತ:

ಪರಿಹಾರ ಸಂಬಂಧ ಆದೇಶ ಹೊರಡಿಸಿ ಎರಡೂವರೆ ತಿಂಗಳು ಕಳೆದಿದೆ. ಆದರೆ, ಯಾರೊಬ್ಬರಿಗೂ ಇನ್ನೂ ಒಂದು ಲಕ್ಷ ರೂ.ನ ಪರಿಹಾರ ಮೊತ್ತ ಕೈ ಸೇರಿಲ್ಲ.

ಪರಿಹಾರ ಕೋರಿ ರಾಜ್ಯದಲ್ಲಿ ಒಟ್ಟು 7711 ಅರ್ಜಿಗಳು ಸಲ್ಲಿಕೆಯಾಗಿವೆ. ಈ ಪೈಕಿ ಯಾರೊಬ್ಬರಿಗೂ ಪರಿಹಾರ ಮೊತ್ತ ಪಾವತಿಸಿಲ್ಲ. ಅಧಿಕಾರಿಗಳು ಇನ್ನೂ ಅರ್ಜಿಗಳ ಸಂಬಂಧ ಪರಿಶೀಲನಾ ಕಾರ್ಯ ನಡೆಸುತ್ತಿದ್ದಾರೆ. ಆ ವರದಿ ಆಧಾರದ ಮೇಲೆ ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯ ವತಿಯಿಂದ ಪರಿಹಾರ ವಿತರಿಸಲಾಗಿರುತ್ತದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಅರ್ಜಿ ಸಲ್ಲಿಸಿದವರು ಕೋವಿಡ್ ಮೃತ ವ್ಯಕ್ತಿಯ ನಿಜವಾದ ವಾರಸುದಾರರೇ ಎಂಬುದನ್ನು ಖಚಿತ ಪಡಿಸುವ ಪ್ರಕ್ರಿಯೆಗೆ ಸಮಯ ತೆಗೆದುಕೊಳ್ಳುತ್ತಿದೆ. ಜೊತೆಗೆ ಅವರ ಹೆಸರಲ್ಲಿ ಪರ್ಯಾಯ ಖಾತೆ ಇದೆಯೇ? ಎಂಬುದನ್ನೂ ಪರಿಶೀಲಿಸಲಾಗುತ್ತಿದೆ. ಇನ್ನು ಅರ್ಜಿ ಸಲ್ಲಿಸಿದವರಲ್ಲಿ ಹಲವರು ಪೇಶೆಂಟ್ ನಂ.(ಪಿ-ನಂಬರ್)ನ್ನು ಹೊಂದಿಲ್ಲ. ಇದನ್ನು ಪರಿಶೀಲಿಸಿ ಅಂತಿಮಗೊಳಿಸಲಾಗುತ್ತಿದ್ದು, ಇದು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಪ್ರೀತಿಸಿ ಬೆಂಗಳೂರೆಲ್ಲಾ ಸುತ್ತಾಡಿ ನಡತೆ ಸರಿ ಇಲ್ಲ ಎಂದ ಯುವಕ; ಕಲಬುರಗಿಗೆ ಹುಡುಕಿಕೊಂಡು ಬಂದು ಯುವತಿಯಿಂದ ಥಳಿತ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.